1. ಯಶೋಗಾಥೆ

ಮೊಜೆಂಟಿ ಜೇನು ಸಾಕಾಣಿಕೆ ಮಾಡಿ ಇಳುವರಿಯೂ ಹೆಚ್ಚಿಸಿಕೊಂಡಿದ್ದಾರೆ ವೆಂಕಟಕೃಷ್ಣ ಭಟ್

ಜೇನುಹುಳುಗಳು ಎಂದೊಡನೆ ಜನಸಾಮಾನ್ಯರಿಗೆ ಹೊಳೆಯುವುದು ಅವು ಉತ್ಪಾದಿಸುವ ರುಚಿಕರ ಜೇನುತುಪ್ಪ ಮತ್ತು ಅವು ಆಗಾಗ ನಮ್ಮನ್ನು ಕಚ್ಚಿ ನೋವನ್ನುಂಟುಮಾಡುವ ವಿಷಯವೂ ನೆನಪಿಗೆ ಬಂದೇ ಬರುತ್ತದೆ. ಬಹುತೇಕ ಜನರು ದೊಡ್ಡ ಆಲದ ಮರ, ಅಪಾರ್ಟಮೆಂಟ್,ಮಸೀದಿ ಮಂದಿರಗಳಲ್ಲಿ, ಸೇತುವೆಗಳು ಸೇರಿದಂತೆ  ವಿವಿಧೆಡೆ ಹೆಜ್ಜೇನು ಗೂಡು ನೋಡಿರುತ್ತಾರೆ. ಹೇಜ್ಜೇನು ಗೂಡು ನೋಡಿದರೆ ಸಾಕು, ಮೈಜುಮ್ಮೆನ್ನುತ್ತದೆ. ಇಂತಹ  ಹೆಜ್ಜೇನು ಸಾಕುವುದೇ? ಇದರಿಂದ ಕೃಷಿಯಲ್ಲಿ ಇಳುವರಿ ಹೆಚ್ಚಾಗುವುದೇ?.. ಎಂಬೆಲ್ಲಾ ವಿಚಾರ ನಿಮ್ಮನ್ನು ಕಾಡುತ್ತಿದೆಯೇ....ಹೌದು ಜೇನು ಸಾಕಾಣಿಕೆಯಿಂದ ಬದುಕು ಸಿಹಿಯಾಗಿಸಿಕೊಂಡಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ವೆಂಕಟಕೃಷ್ಣ ಭಟ್. ಆದರೆ ನೀವಂದುಕೊಂಡಂತೆ ಹೆಜ್ಜೇನು ಅಲ್ಲ, ಅದು ಮೊಜೆಂಟಿ (Stingless be) ಅಥವಾ ಕಿರುಜೇನು.

 ವೆಂಕಟಕೃಷ್ಣ ಭಟ್ ಮನೆಯತ್ತ ಗಮನಹರಿಸಿದರೆ ಸಾಕು. ಹಳೆಯ ಕಾಲದಲ್ಲಿ ಹಾಲು,ಮೊಸರು ಬೆಣ್ಣೆಗಾಗಿ ನೇತಾಡಿಸಿರುವಂತಹ ಸಿಕ್ಕಗಳೇ ಕಾಣುತ್ತವೆ. ಒಂದೇ ಎರಡೆ ನೂರಾರು ಸಿಕ್ಕಗಳೊಂದಿಗೆ ಹಲವಾರು ಪೆಟ್ಟೆಗಳು ನೇತಾಡುತ್ತಿರುತ್ತವೆ. ಅದರಲ್ಲಿ  ಟೆಂಗಿನಕಾಯಿ ಗೆರೆಟೆ ಒಂದರ ಮೇಲೆ ಒಂದು ಜೋಡಿಸಿರುತ್ತಾರೆ. ಈ ಗೆರೆಟೆಗಳೆಲ್ಲ ಹಾಲುತುಪ್ಪದಿಂದ ತುಂಬಿದಲ್ಲ, ಮೊಜೆಂಟಿ ಜೇನುತುಪ್ಪದಿಂದ (Honey) ತುಂಬಿರುತ್ತವೆ.

ಕಚ್ಚದೇ ಇರುವಂಥ ಜೇನ್ನೊಣ ನಮ್ಮ ಪರಿಸರದಲ್ಲಿದೆ ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ಇಂತಹ ಜೇನ್ನೊಣಗಳೂ ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಔಷಧೀಯ ಗುಣಗಳನ್ನು ಒಳಗೊಂಡ ಜೇನುತುಪ್ಪ ಉತ್ಪಾದಿಸುತ್ತವೆ. ನಿಸರ್ಗದಲ್ಲಿ ವ್ಯರ್ಥವಾಗಬಹುದಾದ ಸಂಪನ್ಮೂಲ ಬಳಸಿ, ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಪಡೆಯುವ ಕಸಬುಗಳಲ್ಲಿ ಜೇನು ಕೃಷಿ ಮುಂಚೂಣಿಯಲ್ಲಿದೆ. ಇದನ್ನೇ ಉಪಕಸುಬಾಗಿಸಿಕೊಂಡ ಪ್ರಗತಿಪರ ರೈತ ವೆಂಕಟಕೃಷ್ಣ ಭಟ್, ಕೃಷಿ ಜಾಗರಣ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡ ಸಂಪೂರ್ಣ ಮಾಹಿತಿ ಇಲ್ಲಿದೆ.

ಚುಚ್ಚದ ಜೇನು ಎಲ್ಲರಿಗೂ ಅಚ್ಚು ಮೆಚ್ಚು:

ಮಿಸ್ರಿ, ನಸ್ರಿ, ರಾಳಜೇನು, ಮೂಲಿಜೇನು, ಕಿರುಜೇನು, ನುಸಿಜೇನು ಎಂಬಿತ್ಯಾದಿ ಹೆಸರುಗಳಿಂದ ಕರೆಯುವ ಮೊಜೆಂಟಿ ಜೇನು ಸಾಕಿ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿರುವ ಜೇನುತುಪ್ಪವನ್ನು ಉತ್ಪಾದಿಸುವ ಕ್ರಮ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿದೆ. ಈ ಮೊಜೆಂಟಿ ಜೇನು ಗಾತ್ರದಲ್ಲಿ ಸೊಳ್ಳೆಯಷ್ಟೇ ಇರುತ್ತದೆ. ಆದರೆ ಸೊಳ್ಳೆಯಂತೆ ಸಣಕಲು ಅಲ್ಲ. ತುಸು ಗುಂಡಗೆ ಇರುತ್ತದೆ.ಮುಟ್ಟಲು ಹೋದವರಿಗೆ ಇವು ಕಚ್ಚುವುದಿಲ್ಲ. ಕಚ್ಚಿದರೂ ಸೊಳ್ಳೆ ಕಚ್ಚಿದ ಹಾಗೆ ಆಗುತ್ತದೆ. ಆದರೆ ನೋವು ಆಗುವುದಿಲ್ಲ. ಇವುಗಳಿಗೆ ಚುಚ್ಚುವ ಕೊಂಡಿಗಳಿಲ್ಲ. ಅದಕ್ಕೆ ಇದನ್ನು ಸ್ಟಿಂಗ್ ಲೆಸ್ ಬೀ ಎಂದೂ ಕರೆಯುತ್ತಾರೆ. ಮಹಿಳೆಯರು, ಮಕ್ಕಳು ಸಹ ಇದರ ಸಾಕಾಣಿಕೆ ಮಾಡಬಹುದು ಎನ್ನುತ್ತಾರೆ ವೆಂಕಟಕೃಷ್ಠ ಭಟ್.

ಔಷಧೀಯ (Medicinal) ಗುಣ:

ಹಿಂದೆಲ್ಲ ಮೊಜಂಟಿ ಜೇನಿನ ತುಪ್ಪವನ್ನು ಯಾರೂ ತಿನ್ನಲು ಬಳಸುತ್ತಿರಲಿಲ್ಲ. ಅದರ ಬಳಕೆ ಔಷಧೀಯ ಉದ್ದೇಶಕ್ಕೆ ಸೀಮಿತವಾಗಿತ್ತು. ಇತ್ತೀಚೆಗೆ ಕೆಲವರು ಅದರ ವ್ಯಾಪಾರ ಆರಂಭಿಸಿದ್ದಾರೆ. ಒಮ್ಮೆ ತೆಗೆದ ಜೇನು ಬಾಟಲಿಯಲ್ಲಿ ಅನೇಕ ದಿನಗಲವರೆ ಉಳಿಯುತ್ತದೆ. ಹೆಚ್ಚಿನ ದಿನಗಳವರೆಗೆ ಇರುವ ಈ ಜೇನುತಪ್ಪು ಔಷಧೀಯಕ್ಕೆ ಉತ್ತಮ. ಆದರೆ ತಿನ್ನಲು ಹೆಚ್ಚು ದಿನ ಕಳೆದಂತೆ ಹುಳಿಯಾಗುತ್ತದೆ.  

ಮೊಜೆಂಟಿ ಜೇನಿಗೆ ಹೆಚ್ಚು ಬೆಲೆ (More value): 

ಮೊಜೆಂಟಿ ಜೇನಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಮುಖ್ಯವಾಗಿ ಆರೋಗ್ಯ ಮತ್ತು ಔಷಧೀಯ ಉದ್ದೇಶಕ್ಕಾಗಿ ಇದರ ಬಳಕೆ ಹೆಚ್ಚು. ಮೊಜೆಂಟಿ ಜೇನಿನ ಇಳುವರಿ ಕಡಿಮೆ ಆದರೆ ಔಷಧೀಯ ಗುಣ ಅತಿ ಹೆಚ್ಚು ಎಂಬ ಕಾರಣಕ್ಕೆ ಅದು ತೊಡುವೆ ಜೇನಿಗಿಂತ ಐದಾರು ಪಟ್ಟು ಹೆಚ್ಚು ಬೆಲೆಯುಳ್ಳದ್ದು. ಪ್ರತಿ ಕೆಜೆಗೆ 1500 ರೂಪಾಯಿಯಿಂದ 5000 ರೂಪಾಯಯಿರವಗೆ ಮಾರಾಟವಾಗುತ್ತದೆ.

ಮೊಜೆಂಟಿ ಜೇನಿಗೆ ಭಾರಿ ಬೇಡಿಕೆ (More demond)

 ಕ್ಯಾನ್ಸರ್ ಮತ್ತಿತರ ರೋಗಗಳ ಚಿಕಿತ್ಸೆಯಲ್ಲಿ ಮೊಜಂಟಿ ಜೇನು ಬಳಕೆ ವ್ಯಾಪಕವಾಗಿದೆ. ಔಷಧ ಕಂಪನಿಗಳೂ ಖರೀದಿಸುತ್ತವೆ. ಮೊಜೆಂಟಿ ಗೂಡುಗಳನ್ನೂ ಮಾರಾಟ ಮಾಡಬಹುದು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮೊಜಂಟಿ ಗೂಡುಗಳನ್ನು ಜೇನ್ನೊಣಗಳ ಸಮೇತ  ಸುರಕ್ಷಿತವಾಗಿ ಸಾಗಿಸಬಹುದು. ನಂತರ ತೋಟದಲ್ಲೋ, ಮನೆಯಲ್ಲೋ ಸ್ಥಾಪಿಸಬಹುದು.

ಹೂಗಿಡಗಳೂ ಮುಖ್ಯ: 

ಹೂಗಿಡಗಳನ್ನು ನೆಟ್ಟು ಬೆಳೆಸುವುದೂ ಮೊಜೆಂಟಿ ಸಾಕಣೆ ಮಾಡಿದರೆ ಇನ್ನೂ ಉತ್ತಮ. ಆದರೆ ಆಸಕ್ತರಿಗೆ ಅಂತಹ ಗಿಡಗಳು ಒಂದೇ ಕಡೆ ಸಿಗುವುದು ಕಷ್ಟ. ಯಾರಾದರೂ ಇಂತಹ ಗಿಡಗಳದ್ದೇ ನರ್ಸರಿ ಸ್ಥಾಪಿಸಿದರೆ ಅಥವಾ ಈಗಿರುವ ಯಾವುದಾದರೂ ನರ್ಸರಿಯಲ್ಲಿ ಜೇನು ಗಿಡಗಳ ವಿಭಾಗವನ್ನು ತೆರೆದರೆ ಹಲವರಿಗೆ ಪ್ರಯೋಜನವಾಗುತ್ತದೆ.

 ನಗರ ಪ್ರದೇಶಗಳಲ್ಲಿಯೂ ಸಾಕಾಣಿಕೆ

 ಪ್ರತ್ಯೇಕ ಕೃಷಿ ಭೂಮಿ ಇಲ್ಲದಿದ್ದರೂ ಇದನ್ನು ನಗರ ಪ್ರದೇಶಗಳಲ್ಲಿಯೂ ಯಶಸ್ವಿಯಾಗಿ ಸಾಕಬಹುದು.ಇವುಗಳಿಗೆ ಗಾರ್ಡನ್ ಗಳಲ್ಲಿ ಲಬಿಸುವ ಹೂವುಗಳೇ ಸಾಕು. ಉತ್ತಮ ಔಷಧೀಯ ಗುಣ ಹೊಂದಿರುತ್ತವೆ. ಇದರ ನಿರ್ವಹಣೆ ಸುಲಭ. ಸಣ್ಣವರು ದೊಡ್ಡವರು ಎಂಬ ಮಿತಿ ಇಲ್ಲ, ಪೆಟ್ಟಿಗೆ ಜೇನುಗಿಂತಲೂ ಮೊಜೆಂಟಿ ಜೇನು ಸಾಕಾಣಿಕೆ ಸುಲಭ. ತುಳಸಿ ಗಿಡಗಳನ್ನು ಹೆಚ್ಚು ಬೆಳೆಸುವುದರಿಂದ ಅದರಿಂದ ಪರಾಗ ಸಂಗ್ರಹ ಮಾಡುತ್ತದೆ. ಔಷಧೀಯುಕ್ತ ಜೇನು ಸಂಗ್ರಹವಾಗುತ್ತದೆ.

ಪಾಲು ಮಾಡುವ ಸಮಯ:

ನವೆಂಬರ್ ನಂತರ ಜನವರಿ ಒಳಗೆ ಪಾಲು ಮಾಡುವುದು ಉತ್ತಮ. ನಂತರದ ದಿನಗಳಲ್ಲಿ ಹೆಚ್ಚು ಯಶಸ್ವಿಯಾಗುವುದಿಲ್ಲ. ಮೊಟ್ಟೆ ಬೆಳವಣಿಗೆ ನೋಡಿಕೊಂಡು ಪಾಲು ಮಾಡಬಹುದು. ಗೂಡಿನ ದ್ವಾರ ದೊಡ್ಡದಾಗಿದ್ದರೆ ಸಹಜವಾಗಿ ಪಾಲಾಗಿ ಹೋಗುತ್ತವೆ.

ಇದನ್ನೂ ಓದಿ: ಸಮಗ್ರ ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಶಂಕರೇಗೌಡ

ಇರುವೆಗಳ ಬರದ ಹಾಗೆ ನೋಡಿಕೊಳ್ಳಬೇಕು:

ಜೇನಿಗೆ ಇರುವೆಗಳು ಮುತ್ತಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ . ಸಿಕ್ಕದ ಬಳ್ಳಿಗೆ ಇರುವೆ ಬರದ ಹಾಗೆ ನೋಡಿಕೊಂಡರೆ ಸಾಕು. ಮಳೆಯಿದ್ದರೆ ಹೊರಗೆ ಹೋಗುವುದು ಕಷ್ಟ. ಬೇಗ ಹೊರಗೆ ಹೋಗುವುದಿಲ್ಲ. ಬೆಳಕು ಹರಿದ ಮೇಲೆ ಹೋಗುತ್ತವೆ ಹಾಗೂ ಕತ್ತಲು ಆಗವ ಮೊದಲೆ ಬೇಗ ಗೂಡು ಸೇರುಕೊಳ್ಳುತ್ತವೆ.

---------------------------

ಕೇರಳದಲ್ಲಿ ಜೇನಿಗೆ ಸಿಗುವ ಪ್ರೋತ್ಸಾಹದಂತೆ ಕರ್ನಾಟಕದಲ್ಲಿಯೂ ಸರ್ಕಾರದಿಂದ ಸಿಗಬೇಕು

 ಕೇರಳದಲ್ಲಿ ಹೆಚ್ಚು ಜನರು ಮೊಜೆಂಟಿ ಜೇನು ಕೃಷಿ ಮಾಡುತ್ತಿದ್ದರಿಂದ ಅಲ್ಲಿ ಜೇನಿನ ಕ್ರಾಂತಿಯಾಗಿದೆ. ಅಲ್ಲಿನ ಸರ್ಕಾರದ ಕಡೆಯಿಂದ ಹೆಚ್ಚು ಪ್ರೋತ್ಸಾಹ ಸಿಗುತ್ತದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಈ ಗೂಡುಗಳನ್ನಿಟ್ಟು ವೈಜ್ಞಾನಿಕ ರೀತಿಯಲ್ಲಿ ಪೋಷಣೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮನೆಗೊಂದು ಮುಜಂಟಿ ಗೂಡು' ಆ ರಾಜ್ಯದಲ್ಲಿ ಒಂದು ಅಭಿಯಾನದ ರೂಪ ಪಡೆದಿದೆ. ಪ್ರತಿಯೊಂದು ಗ್ರಾಪಂನಲ್ಲಿ ಜೇನುಕೂಟ, ತರಕಾರಿ ತೋಟ ಇರಬೇಕೆಂದು ಅಲ್ಲಿನ ಜನರು ಒತ್ತಾಯ ಮಾಡಿದ್ದರಿಂದ ಸರ್ಕಾರದಿಂದ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಕರ್ನಾಟಕದಲ್ಲಿ ಪೆಟ್ಟಿಗೆ ಜೇನಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಾರೆ. ಆದರೆ ಮೊಜೆಂಟಿ ಜೇನಿಗೆ ಅಸಡ್ಡೆ ತೋರಿಸುತ್ತಾರೆ.ಮೊಜೆಂಟಿ ಜೇನಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕರೆ ಕೇರಳದಂತೆ ಇಲ್ಲಿಯೂ ಜೇನಿನಲ್ಲಿ ಕ್ರಾಂತಿ ಮಾಡಬಹದು.

ವೆಂಕಟಕೃಷ್ಣ ಭಟ್ ಬಿ.(Venkatakrishna Bhat)

ಪ್ರಗತಿಪರ ರೈತ

ದಕ್ಷಿಣ ಕನ್ನಡ

ಮೊ.9449209372

--------

ಇದನ್ನೂ ಓದಿ:  ನೈಸರ್ಗಿಕ ಬೆಲ್ಲ (Natural jagggery) ಮಾರಾಟ ಮಾಡಿ ದೊಡ್ಡವನಾದ ದ್ಯಾವೇಗೌಡ

Published On: 16 August 2020, 09:51 PM English Summary: stingless honey bee easy produces high medicinal value (Success story)

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.