1. ಯಶೋಗಾಥೆ

ಸಮಗ್ರ ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಶಂಕರೇಗೌಡ

ಕೃಷಿ ಎಂಬುದು ಕೆಲವರಿಗೆ ಸಂಸ್ಕೃತಿ, ಹಲವರಿಗೆ ಬದುಕು. ಇನ್ನು ಕೆಲವರಿಗೆ ಬಂಡವಾಳ, ಮತ್ತೆ ಹಲವರಿಗೆ ಖುಷಿ... ಹೀಗೆ ಕೃಷಿಯನ್ನು ಒಂದೊಂದು ರೀತಿಯಲ್ಲಿ ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ರೈತ ಕೃಷಿಗೆ ಕಷ್ಟ, ನಷ್ಟಕ್ಕೆ ಹೋಲಿಸದೆ ಖುಷಿಯಿಂದ ಕೃಷಿ ಮಾಡಿದರೆ ಕೈತುಂಬಾ ಸಂಪಾದನೆ ಮಾಡಬಹುದೆನ್ನುತ್ತಾರೆ ಮೈಸೂರು ತಾಲೂಕಿನ ದೇವಗಹಳ್ಳಿಯ ಸಾಧಕ ಶಂಕರೇಗೌಡ.

ಬದುಕನ್ನೇ ಬೇಸಾಯ ಮಾಡಿಕೊಂಡು ಬದುಕಿನ ಬಂಡಿಯನ್ನು ಸಾಗಿಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆದರ್ಶವಾಗಿದ್ದಾರೆ ಶಂಕರೇಗೌಡ. ಶಾಲೆ ಕಲಿಸುವ ಶಿಕ್ಷಣಕ್ಕಿಂತ ಬದುಕು, ಹಸಿವು ಕಲಿಸುವ ಶಿಕ್ಷ ಣವೇ ಮಹತ್ವ. ಕೃಷಿಯನ್ನು ಖುಷಿಯಿಂದ ಮಾಡಿದರೆ  ಡಾಕ್ಟರ್, ಇಂಜಿನೀಯರಗಿಂತಲೂ ಹೆಚ್ಚು ಗಳಿಸಬಹುದು ಎಂಬುದು ಇವರ ಅಭಿಪ್ರಾಯ

ಹೌದು,  ಮೈಸೂರು ತಾಲೂಕಿನ ದೇವಗಹಳ್ಳಿಯಲ್ಲಿ 40 ವರ್ಷಗಳಿಂದ ಕೃಷಿಯನ್ನೇ ಜೀವನಾಧಾರವಾಗಿ ಆರಂಭಿಸಿರುವ ಸಮಗ್ರ ಕೃಷಿಯಲ್ಲಿ ಅಚಲವಾದ ಸಾಧನೆ ಮಾಡುತ್ತಿದ್ದಾರೆ. ಓದಿರುವುದು ಕೇವಲ 10ನೇ ತರಗತಿಯಾದರೂ ಸಮಗ್ರ ಕೃಷಿಯಲ್ಲಿ ಹೆಸರುವಾಸಿ.

ಜಮೀನು ತುಂಬಾ ಕಣ್ಣು ಕುಕ್ಕುವ ಸಮೃದ್ಧವಾದ ಬೆಳೆ. ಇರುವ ಐದು ಎಕರೆಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಅತ್ತ ಸಮೃದ್ಧ ಬೆಳೆ ಕಾಣುತ್ತವೆ. ವರ್ಷಕ್ಕೆ ಒಂದೆರಡು ಬೆಳೆ ಬೆಳೆಯುವುದು ಇವರ ಪದ್ಧತಿ ಅಲ್ಲವೇ ಅಲ್ಲ, ಸರ್ಕಾರಿ ನೌಕರ ಪ್ರತಿ ತಿಂಗಳು ಸಂಬಳ ಹೇಗೆ ಪಡೆಯುತ್ತಾನೆಯೋ ಹಾಗೆಯೆ ತಿಂಗಳ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಸಂಪಾದನೆ ಮಾಡುತ್ತಿರಬೇಕು. ಇದರೊಂದಿಗೆ ಪೆನ್ಶನ್ ಸಹ ಸಿಗುವಂತೆ ಗಿಡಮರಗಳನ್ನು ಬೆಳೆಸಿದ್ದಾರೆ. 

ತರಕಾರಿ, ಹಣ್ಣುಹಂಪಲ, ವಿವಿಧ ಸಾವಯವ ಬೆಳೆಯೊಂದಿಗೆ ಸೊಪ್ಪು ಬೆಳೆದು ತಾನೇ ಮಾರಾಟ ಮಾಡುತ್ತಾರೆ. ಇವರ ವಿಶೇಷ ವೇನೆಂದರೆ ವರ್ಷ ಪೂರ್ತಿ ಬೆಲೆ ಹೆಚ್ಚುಕಡಿಮೆ ಮಾಡದೆ ಗ್ರಾಹಕರಿಗೆ ಒಂದೇ ಬೆಲೆಯಲ್ಲಿ ಗುಣಮಟ್ಟದ ತರಕಾರಿ ಮಾರಾಟ ಮಾಡುತ್ತಾರೆ. ಹಾಗಾಗಿಯೇ ಇವರನ್ನು ದೂರದ ಊರುಗಳಿಗೆ ಜನರು ಹುಡುಕಿಕೊಂಡು ಬರುತ್ತಾರೆ.  ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಉಪಯೋಗಿಸಲ್ಲ. ಕಡಿಮೆ ಪ್ರಮಾಣದ ನೀರು, ನೈಸರ್ಗಿಕ ಗೊಬ್ಬರವನ್ನೇ  ಬಳಸಿ ತೆಗೆದಿರುವ ಬೆಳೆ, ಅಂದರೆ ಸಮಗ್ರ ಕೃಷಿ ಪದ್ದತಿಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದರಿಂದಲೇ ಇವರು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹೆಸರುವಾಸಿ.

ಜಮೀನ ಸುತ್ತ ಗಿಡಮರಗಳು (field surround trees):

ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ದೃಷ್ಟಿಯಿಂದ ಜಮೀನಿನ ಸುತ್ತ ಮತ್ತು ಮಧ್ಯದಲ್ಲಿ  ಪೇರಲ, ಹೊಂಗೆ, ಬೇವು, ಬೆಟ್ಟದ ನೆಲ್ಲಿಕಾಯಿ, ಸೀತಾಫಲ ಸೇರಿದಂತೆ ಹಲವು ಬಗೆಯ ಉಪಯೋಗಕರ ಗಿಡಮರಗಳನ್ನು ಬೆಳೆಸಲಾಗಿದೆ. ಜತೆಗೆ ಹಲವು ಬಗೆಯ ಔಷಧೀಯ ಗುಣಧರ್ಮದ ಸಸಿಗಳನ್ನು ನೆಟ್ಟಿದ್ದಾರೆ.

ಸಾವಯವ ಪದ್ಧತಿಯೇ ಜೀವಾಳ (Organic):

 ಬೆಳೆಗಳ ಸಮೃದ್ಧ ಬೆಳವಣಿಗೆ ಮತ್ತು ರಕ್ಷಣೆಗೆ ಇವರು ಯಾವುದೇ ರೀತಿಯಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧಿಗಳಿಗೆ ಅಂಟಿಕೊಂಡಿಲ್ಲ. ಬದಲಿಗೆ ಗಣಜೀವಾಮೃತ ಹಾಗೂ ಗಿಡಮೂಲಿಕೆಗಳ ಸೊಪ್ಪಿನಿಂದ ತಯಾರಿಸಿದ ದ್ರಾವಣವನ್ನೇ ಬೆಳೆಗಳಿಗೆ ನೀಡುವ ಪರಿಪಾಠ ರೂಢಿಸಿಕೊಂಡಿದ್ದಾರೆ.

ಲೋಕಲ್ ಫಾರ್ ವೋಕಲ್ (Local for Vocal):

ಇತರ ರಾಜ್ಯಗಳಲ್ಲಿ ಹೆಸರು ಮಾಡಿದ ಬೆಳೆಯನ್ನು ಅಪ್ಪಿತಪ್ಪಿ ಬೆಳೆಯಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಸರಾದ ಬೆಳೆಗಳನ್ನೇ ಬೆಳೆಯುವುದು ಇವರ ವಿಶೇಷ. ಪಕ್ಕಾ ಲೋಕಲ್ ಪಾರ್ ವೋಕಲ್,  ಪ್ರತಿತಿಂಗಳ, ಮೂರು ತಿಂಗಳ, ಆರು ತಿಂಗಳು ಹಾಗೂ ವರ್ಷಕ್ಕೂ ಆದಾಯ ಕೊಡುತ್ತಿರುವ ತರಕಾರಿ ಸೊಪ್ಪು ಬೆಳೆದು ಮಾರಾಟ ಮಾಡುತ್ತಾರೆ.

ಗಿಡಮರಗಳೂ ಮೂರು ವಿಧದಲ್ಲಿ ಸಹಾಯ:

ಯಾವುದೇ ಗಿಡ ಮೂರು ವಿಧವಾಗಿ ಉಪಯೋಗಕ್ಕಾಗಿ ಬರಬೇಕು. ಹಣ್ಣು ಬರಬೇಕು. ಎಲೆಗಳು ಉದುರಿ ಗೊಬ್ಬರವೂ ಆಗಬೇಕು. ಸೌದೆ ಕೆಲಸಕ್ಕೂ ಬರಬೇಕೆಂದು ಪಕ್ಕಾ ಲೆಕ್ಕಾಚಾರ ಮಾಡಿಕೊಂಡು ವ್ಯವಸಾಯದಲ್ಲಿ ತೊಡಗಿದ್ದಾರೆ.ಒಂದು ಎಕರೆಗೆ ಒಂದು ಬೆಳೆ ಎಂದೂ ಹಾಕಿಲ್ಲ. ಇವರು  5 ರಿಂದ 10 ಗುಂಟೆಯಲ್ಲಿ ಮಿಶ್ರ ಬೆಳೆ ಹಾಕುತ್ತಾರೆ.

ಯಶಸ್ಸಿನ ಗುಟ್ಟು (success):

ಒಂದೇ ಕಡೆ ಒಂದೇ ಬೆಳೆಯನ್ನು ಬೆಳೆಯುವುದಿಲ್ಲ. ತಮ್ಮ ಬೆಳೆಯನ್ನು ತಾವೇ ಮಾರಾಟ ಮಾಡುತ್ತಾರೆ. ಬೆಳೆಗೆ ಕುರಿ, ಕೊಟ್ಟಿಗೆ ಗೊಬ್ಬರ ಮಾತ್ರ ಬಳಸುತ್ತಾರೆ. ಕ್ರೀಮಿನಾಶಕದ ಬದಲು ಬೇವಿನ ಕಷಾಯ ಮಜ್ಜಿಗೆ ಬಳಸುತ್ತಾರೆ.

ಭೂಮಿ ತಾಯಿ ನಂಬಿ ಕೆಟ್ಟವರಿಲ್ಲ. ಭೂಮಿ ತಾಯಿ ಪರಿಶ್ರಮ ವಹಿಸಿ ಬೆವರು ಸುರಿಸಿ ದುಡಿದರೆ ಪ್ರಯತ್ನಕ್ಕೆ ಫಲ ದೊರಕದೇ ಇರದು. ಮನಸ್ಸು ಮಾಡಿದರೆ ಭೂಮಿಯಲ್ಲಿ ಹೊನ್ನನ್ನು ಸಹ ಬೆಳೆಯಬಹುದು. ಏಕೆಂದರೆ ಭೂಮಿತಾಯಿಯು ಎಂದೂ ನಂಬಿದವರ ಕೈಬಿಡುವುದಿಲ್ಲ. ಹಾಗೆಂದು ಅಧಿಕ ಇಳುವರಿಯನ್ನು ಪಡೆಯುವ ಅತಿಯಾಸೆಯಿಂದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸಿದರೆ ಬೆಳೆಯುವ ಆಹಾರಧಾನ್ಯಗಳು ಕೂಡ ವಿಷವಾಗುತ್ತವೆ ಎನ್ನುತ್ತಾರೆ ಶಂಕರೇಗೌಡ.

 

ಶಂಕರೇಗೌಡ (Shankare gowda)

ಪ್ರಗತಿಪರ ರೈತ , ದೇವಗಹಳ್ಳಿ, ಮೈಸೂರು ತಾಲೂಕು

ಮೊ. 9480909359

Published On: 09 August 2020, 04:31 PM English Summary: Successful story of Shankaregowda

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.