Krishi Jagran Kannada
Menu Close Menu

ನೌಕರಿ ಬಿಟ್ಟು ನೈಸರ್ಗಿಕ ಕೃಷಿ ಮಾಡಿ ರೈತರಿಗೆ ಮಾಸ್ಟರ್ ಆಗಿದ್ದಾರೆ ಸಾತೇನಹಳ್ಳಿ ಕುಮಾರಸ್ವಾಮಿ

Saturday, 29 August 2020 06:54 PM

ಇಂದಿನ ಕಾಲದಲ್ಲಿ ಸರ್ಕಾರಿ ಕೆಲಸಕ್ಕೆ ಮುಗಿಬೀಳುವವರೇ ಹೆಚ್ಚು, ಸರ್ಕಾರಿ ಕೆಲಸ ಒಂದು ಆಫೀಸ್ ಬಾಯ್ ಕೆಲಸವಾದರೂ ಸರಿ ಅದನ್ನು ಮಾಡಲು ಸಾವಿರಾರು ಜನ ಅರ್ಜಿ ಹಾಕುತ್ತಾರೆ. ಇದ್ದ ಹೊಲ ಮನೆ ಮಾರಿ ಉದ್ಯೋಗ ಪಡೆಯುತ್ತಿರುವ ಇಂತಹ ಕಾಲದಲ್ಲಿ ಇಲ್ಲೊಬ್ಬ ಪೋಸ್ಟ್ ಮಾಸ್ಟರ್  ತನ್ನ ಸರ್ಕಾರಿ ನೌಕರಿ ಬಿಟ್ಟು ಕೃಷಿಯಲ್ಲಿ ತೊಡಗಿ ಈಗ ಸಾವಿರಾರು ರೈತರಿಗೆ ಮಾಸ್ಟರ್ ಆಗಿದ್ದಾರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದ ನೈಸರ್ಗಿಕ ಕೃಷಿಕ ಕುಮಾರಸ್ವಾಮಿ.

ಸೊಪ್ಪು ತರಕಾರಿ ಬೆಳೆಯುತ್ತಲೇ ಲಕ್ಷಗಟ್ಟಲೆ ಆದಾಯ ಗಳಿಸುತ್ತಿರುವ ಇವರು ಈಗ ಹಲವಾರು ರೈತರಿಗೆ ಮಾಡಲ್ ಆಗಿದ್ದಾರೆ. ಇವರ ಜೀವನ ಚರಿತ್ರೆಯ ಸಂಕಷ್ಟಗಳಿಂದ ಕೂಡಿತ್ತು. 13 ಲಕ್ಷ ಸಾಲ ಮಾಡಿ ನೆಮ್ಮದಿಯನ್ನೇ ಕಳೆದಕೊಂಡಿದ್ದ ಕುಮಾರಸ್ವಾಮಿಯವರ  ಬದುಕನ್ನೇ ಬದಲಿಸುತ್ತದೆ ಸ್ವಾಮಿ ಆನಂದರವರು ಬರೆದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ.

ಸಾಲ ಹೆಚ್ಚಾಗಿ ಊರು ಬಿಟ್ಟ

ಸಾಲ ಹೆಚ್ಚಾಗಿದ್ದರಿಂದ ಸಾಲಗಾರರ ಕಿರುಕುಳವೂ ಹೆಚ್ಚಾಗಿತ್ತು. ಇದರಿಂದ ಬೇಸತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮೂರಲ್ಲಿದ್ದ, ಊರು, ತೋಟ ಬಿಟ್ಟು ಯಾರಿಗೂ ಹೇಳದೆ ಬೆಂಗಳೂರಿಗೆ ಸೇರಿಕೊಳ್ಳುತ್ತಾರೆ. ಇಬ್ಬರೂ ಮಕ್ಕಳಿಗೆ ಎಂ.ಎಸ್. ಸಿ ಓದಿಸುತ್ತಾರೆ. ಅದೇ ಸಂದರ್ಭದಲ್ಲಿ 5 ಎಕರೆ ಜಮೀನನನ್ನು ಗುತ್ತಿಗೆ ಪಡೆದು  ನೈಸರ್ಗಿಕ ಕೃಷಿ ಮಾಡಲು ಮುಂದಾಗುತ್ತಾರೆ. ಒಂದೇ ವರ್ಷದಲ್ಲಿ 15 ತರಹದ ತರಕಾರಿ ಹಾಕಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆದರ್ಶವಾಗುತ್ತಾರೆ. ಇವರ ನೈಸರ್ಗಿಕ ಕೃಷಿಯ ಪ್ರಸಿದ್ಧಿ ಕೇವಲ ಸುತ್ತಮುತ್ತಲಿನ ಗ್ರಾಮಕಷ್ಟೇ ಅಲ್ಲ, ದೇಶ ವಿದೇಶಗಳಿಗೂ ಹಬ್ಬುತ್ತದೆ.

ಯಾವುದೇ ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರವೂ ಬಳಸದೆ ಜೀವಾಮೃತ ಹಾಗೂ ಸುತ್ತಮುತ್ತಲಿನ ಕಸಕಡ್ಡಿ ಬಳಸಿ ಗೊಬ್ಬರವನ್ನಾಗಿ ಪರಿವರ್ತಿಸುತ್ತಾರೆ. ಇವರು ಬೆಳೆದ ತರಕಾರಿಯನ್ನು ನೋಡಿ ಶ್ರೀಲಂಕಾ, ಆಸ್ಟ್ರೇಲಿಯಾ, ಅಮೇರಿಕಾ ಸೇರಿದಂತೆ 13 ದೇಶಗಳಿಂದ ಬಂದ ಕೃಷಿ ತಜ್ಞರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಷ್ಟರಲ್ಲೆ ಜೀವನದಲ್ಲಿ ಮತ್ತೊಂದು ಅಘಾತ. ಜಮೀನು ಮಾಲಿಕ ತಾನೇ ವ್ಯವಸಾಯ ಮಾಡುತ್ತೇನೆಂದು ಬಿಡಿಸಿಬಿಟ್ಟ. ಆದರೂ ಸಹ ವ್ಯವಸಾಯ ಮಾಡಿ ಯಶಸ್ಸು ಗಳಿಸಿಯೇ ತೋರಿಸುತ್ತೇನೆಂದು ಛಲದಿಂದ ಬೇರೆ ಕಡೆ ಗುತ್ತಿಗೆ ತೆಗೆದುಕೊಂಡು ಕೃಷಿ ಮಾಡುತ್ತಾರೆ. ಅಲ್ಲೂ ಅದೇ ಸಮಸ್ಯೆಯಾಗಿದ್ದರಿಂದ ಕೊನೆಗೆ ತಮ್ಮೂರಿನ ಸ್ವಂತ ಭೂಮಿಯಲ್ಲಿ ವ್ಯವಸಾಯ ಮಾಡಲು ನಿರ್ಧರಿಸಿದ್ದೇ ತಡ ಊರಿಗೆ ಬಂದುಬಿಡುತ್ತಾರೆ.

 

ಗೇಲಿಗೆ ತಲೆಕೆಡಿಸಿಕೊಳ್ಳದೆ ಛಲಬಿಡದೆ ವ್ಯವಸಾಯದಲ್ಲಿ ತೊಡಗಿದ

ಅಂಚೆ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಅವರಿಗೆ ಪಿಂಚಣಿ, ಅರಿಯರ್ಸ್ ದಿಂದ ಬಂದ ಹಣದಿಂದ ತರಕಾರಿಯ ಹೊಸ ಮಾಡಲ್ ಮಾಡುತ್ತಾರೆ. ಆಗ ಸ್ನೇಹಿತರು, ಅಕ್ಕಪಕ್ಕದ ಊರಿನವರು ಸರ್ಕಾರಿ ನೌಕರಿ ಬಿಟ್ಟು ವ್ಯವಸಾಯ ಮಾಡುವುದು ಅಷ್ಟು  ಸುಲಭವಲ್ಲ. ನಿನ್ನಿಂದ ಇದು ಅಸಾಧ್ಯವೆಂದು ಗೇಲಿ ಮಾಡಿದರೂ ಸಹ ಛಲ ಬಿಡದೆ ಈಗ ಸಾವಿರಾರು ರೈತರಿಗೆ ಮಾಸ್ಟರ್ ಆಗಿದ್ದಾರೆ ಕುಮಾರಸ್ವಾಮಿ.

ಒಂದು ಎಕರೆಯಲ್ಲಿ 30 ವಿಧದ ತರಕಾರಿ ಬೆಳೆದು ತಾನೇ ಸ್ವಂತ ಮಾರಾಟ ಮಾಡಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸೊಪ್ಪು ತರಕಾರಿಯಿಂದ ತಿಂಗಳಿಗೆ ಲಕ್ಷ ಸಂಪಾದನೆ ಮಾಡಬಹುದು ಎಂದರೆ ನಂಬುವುದು ಕಷ್ಟ. 'ಆತನಿಗೆ ತಲೆ ಕೆಟ್ಟಿದೆ' ಎಂದು ಜರಿದವರೇ ಹೆಚ್ಚು. ಕುಮಾರಸ್ವಾಮಿ ಅವರ ಜಮೀನಿಗೆ ಒಮ್ಮೆ ಭೇಟಿ ನೀಡಿದರೆ ಅವರ ಸಾಧನೆಯನ್ನು ಸಾಕ್ಷಿ ಸಮೇತ ಕಣ್ಣಾರೆ ಕಾಣಬಹುದು. ಇವರ ಕೃಷಿ ಸಾಧನೆ ಕಣ್ತುಂಬಿಕೊಳ್ಳಬೇಕಾದರೆ ಒಂದ್ಸಲ ಇವರ ತೋಟಕ್ಕೆ ಭೇಟಿ ಕೊಡಲೇಬೇಕು.

ಅರಣ್ಯ ಮಾದರಿಯ ಕೃಷಿ

ಕಾಡಿನಲ್ಲಿ ಮರಗಳು ಬೆಳೆಯುತ್ತವೆ. ಅದರ ಕೆಳಗೆ ಸಣ್ಣಗಿಡಗಳು, ಗೆಡ್ಡೆಗೆಣಸು, ಹುಲ್ಲು ಬೆಳೆಯುತ್ತವೆ. ಮರದ ಸುತ್ತ ಬಳ್ಳಿಗಳು ಹಬ್ಬುತ್ತವೆ. ಇದೇ ಮಾದರಿಯಲ್ಲಿ ವ್ಯವಸಾಯ ಮಾಡಬೇಕೆಂದು ನಿರ್ಧರಿಸಿ ನುಗ್ಗೆ, ಕರಿಬೇವು, ಗಿಡದ ತರಕಾರಿ, ಗೆಡ್ಡೆ ತರಕಾರಿ,  ಬಳ್ಳಿ ತರಕಾರಿ ಹಾಗೂ ಸೊಪ್ಪನ್ನು ಬೆಳೆಯುತ್ತಿದ್ದಾರೆ. 3 ಅಡಿ ಅಗಲದ ಬೆಡ್ ನಡುವೆ ಒಂದೂವರೆ ಅಡಿ ಕಾಲುವೆ ನಿರ್ವಿುಸಿ, ಒಂದು ದಿನ ಒಂದು ಬೆಡ್ನಲ್ಲಿ ಮಾತ್ರ ಕೃಷಿ ಮಾಡುತ್ತಾರೆ. ಒಂದು ಅಡಿಗೊಂದು ಸಾಲಿನಲ್ಲಿ ಸೊಪ್ಪು, ಖಾಲಿ ಜಾಗದಲ್ಲಿ 2 ಕಡೆ ಒಂದು ಗೆಡ್ಡೆ ತರಕಾರಿ, ಮಧ್ಯದಲ್ಲಿ 2 ಅಡಿಗೊಂದು ಗಿಡದ ತರಕಾರಿ, 25 ಅಡಿಗೆ ಬಳ್ಳಿ ತರಕಾರಿ ಜತೆಗೆ ನುಗ್ಗೆ/ಕರಿಬೇವು ಹಾಕಿದ್ದಾರೆ.. ಸೊಪ್ಪಿನಲ್ಲಿ ಮೆಂತ್ಯ, ಕಿಲ್ಕೀರೆ, 3 ವಿಧದ ದಂಟು,  ಪಾಲಕ್,  ಚಕ್ಕೋತ,  ಸಬ್ಬಸಿಗೆ,  ಕೊತ್ತಂಬರಿ, ಹೊನಗೊನೆ, ಒಂದೆಲಗ, 3 ಬಗೆಯ ಬಸಳೆ, ಬದುಗಳಲ್ಲಿ ಅರಿಶಿಣ, ಶುಂಠಿ, ಪುದೀನ, ಗೆಡ್ಡೆ ತರಕಾರಿಗಳಲ್ಲಿ  ಲಂಗಿ, ಗೆಡ್ಡೆಕೋಸು, ಕ್ಯಾರಟ್, ಬೀಟ್ರೂಟ್,  ಹೂಕೋಸು,  ಎಲೆಕೋಸು, ಆಲೂಗಡ್ಡೆ ಜತೆಗೆ ಈರುಳ್ಳಿ, ಬೆಳ್ಳುಳ್ಳಿ, ಗಿಡದ ತರಕಾರಿಗಳಲ್ಲಿ ಟೊಮೆಟೊ,  ಬೆಂಡೆಕಾಯಿ,  ಮೆಣಸಿನಕಾಯಿ,  ಗೋರಿಕಾಯಿ, ಬಳ್ಳಿ ತರಕಾರಿಗಳಲ್ಲಿ ಹೀರೆಕಾಯಿ, ಹಾಗಲ, ಪಡುವಲ, ಸೋರೆ, ಬೀನ್ಸ್ ಮೊದಲಾದವುಗಳನ್ನು ಬೆಳೆಯುತ್ತಿದ್ದಾರೆ. ಒಂದು ಕಂತೆ ಸೊಪ್ಪು 10 ರೂ., ಒಂದು ಕೆಜಿ ತರಕಾರಿ 20 ರೂ.ನಂತೆ ಮಾರಾಟವಾದರೆ, 3100 ಅಡಿ ಬೆಡ್ನಲ್ಲಿ 4 ತಿಂಗಳಿಗೆ  4000 ರೂ. ಸಿಗುತ್ತದೆ. 100 ಬೆಡ್ಗೆ 4 ಲಕ್ಷ, ವರ್ಷಕ್ಕೆ 3 ಬೆಳೆ ಆಗಲಿದ್ದು, 12 ಲಕ್ಷ ರೂ. ಸಿಗುತ್ತದೆ. ದರ ಅರ್ಧ ಸಿಕ್ಕರೂ 100 ಬೆಡ್ಗೆ 2 ಲಕ್ಷ, ವರ್ಷಕ್ಕೆ 6 ಲಕ್ಷ ಸಿಗುತ್ತದೆ. ಇದು ಸಾಧ್ಯವೆಂದು ಹೆಮ್ಮೆಯಿಂದ ಹೇಳುತ್ತಾರೆ ಕುಮಾರಸ್ವಾಮಿ.

ಮಕ್ಕಳಿಗೂ ಕೃಷಿ ಸಂಬಂಧಿ ಶಿಕ್ಷಣ

ಕುಮಾರಸ್ವಾಮಿ ತಮ್ಮ ಇಬ್ಬರು ಮಕ್ಕಳಿಗೂ ಕೃಷಿ ಸಂಬಂಧಿ ಕ್ಷೇತ್ರದಲ್ಲಿ ಅಧ್ಯಯನ ಮಾಡಿಸಿದ್ದಾರೆ. ಪುತ್ರ ಎಂಎಸ್ಸಿ ಅಗ್ರಿಕಲ್ಚರ್, ಪುತ್ರಿ ಎಂಎಸ್ಸಿ ಹಾರ್ಟಿಕಲ್ಚರ್, ಇಬ್ಬರೂ ಪಿಎಚ್ಡಿ ಮಾಡಿದ್ದಾರೆ. ಅಳಿಯನನ್ನು ಕೂಡ ಅದೇ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ಹುಡುಕಿರುವುದು ವಿಶೇಷ.

 ತಾವು ನೌಕರಿ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ಹೇಗೆ

ಇಬ್ಬರು ಅಣ್ಣಂದಿರು ಸರ್ಕಾರಿ ನೌಕರಿ ಸೇರಿದರು. ಇವರು ಕೂಡ ಬಿಎಸ್ಸಿ ಮುಗಿಸಿ, ಎಂಎಸ್ಸಿ ಮಾಡಬೇಕೆಂದಿದ್ದರು. ಆದರೆ, ತಂದೆ ಜಮೀನಿನಲ್ಲಿ ವ್ಯವಸಾಯ ಮಾಡುವಂತೆ ಒತ್ತಾಯಿಸಿದ್ದರು ಅದಕ್ಕೆ ಮಣಿಯದೆ ಮೈಸೂರಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದೆ.. ಹಣದ ಸಮಸ್ಯೆಯಿಂದ 500 ರೂ. ಕಳಿಸುವಂತೆ ತಂದೆಗೆ ಪತ್ರ ಬರೆದೆ. ಆದರೆ, ಹಣ ಬರಲಿಲ್ಲ. ಊರಿಗೆ ಬಂದು ತಂದೆಯನ್ನು ವಿಚಾರಿಸಿದಾಗ ಹಣ ಕಳಿಸಿದ್ದೇನೆ. ಅಂಚೆ ಕಚೇರಿಯಲ್ಲಿ ವಿಚಾರಿಸು ಎಂದರು. ಅಂಚೆ ಕಚೇರಿಗೆ ಹೋದಾಗ ಅಲ್ಲಿ ಜನರ ಗುಂಪು ನಿಂತಿತ್ತು. ಅಲ್ಲಿನ ಕೆಲವು ನೌಕರರು ಹಣ ದುರ್ಬಳಕೆ ಮಾಡಿಕೊಂಡಿದ್ದರು. ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ತಾಲೂಕು ಅಂಚೆ ಕಚೇರಿಯಿಂದ ಬಂದಿದ್ದ ಅಧಿಕಾರಿ ನಿಮ್ಮೂರಿನಲ್ಲಿ ವಿದ್ಯಾವಂತರು ಇದ್ದರೆ ತಿಳಿಸಿ, ಅವರಿಗೆ ಕೆಲಸ ಕೊಡುತ್ತೇವೆ' ಎನ್ನುತ್ತಿದ್ದರು. ಆಗ ಗ್ರಾಮಸ್ಥರು 'ಕುಮಾರಸ್ವಾಮಿಗೆ ಕೆಲಸ ಕೊಡಿ ಎಂದಾಗ  ಕೆಲ ದಿನಗಳ ನಂತರ ಪೋಸ್ಟ್ ಮಾಸ್ಟರ್ ಹುದ್ದೆ ಸಿಕ್ಕಿತು.

ಪೋಸ್ಟ್ ಮಾಸ್ಟರ್ ಕೆಲಸ ಮಾಡುತ್ತಲೇ ವ್ಯವಸಾಯದಲ್ಲಿ ತೊಡಗಿದ್ದೆ. ರಾಸಾಯನಿಕ ಕೃಷಿ ಮಾಡಿದ್ದರಿಂದ ಒಂದೆರಡು ವರ್ಷಗಳಲ್ಲಿ 3 ಲಕ್ಷ ರೂ. ಸಾಲ ಮೈಮೇಲೆ ಬಂತು. ಸಾಲ ಕರಗುವ ಬದಲಿಗೆ ದುಪ್ಪಟ್ಟಾಗಿ 13 ಲಕ್ಷವಾಯಿತು. ಸಾಲಗಾರರ ಕಾಟ ಹೆಚ್ಚಾಯಿತು. ಸಿಗುತ್ತಿದ್ದ ಸಂಬಳದಲ್ಲಿ ಬಡ್ಡಿ ಕಟ್ಟಲಾಗದ ಸ್ಥಿತಿ ನಿರ್ವಣವಾಯಿತು. ಹತಾಶೆಯಿಂದ ರೈತನಾಯಕ ಪುಟ್ಟಣ್ಣಯ್ಯನವರ ಮನೆಗೆ ಹೋಗಿ, ಬ್ಯಾಂಕಿನಲ್ಲಿ 10 ಲಕ್ಷ ಸಾಲ ಕೊಡಿಸುವಂತೆ ಕೋರಿದೆ. ಆದರೆ ಪುಟ್ಟಣ್ಣಯ್ಯನವರು ಸ್ವಾಮಿ ಆನಂದರವರು ಬರೆದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪುಸ್ತಕ ಕೊಟ್ಟು  'ಕೆಲಸಕ್ಕೆ ರಾಜೀನಾಮೆ ನೀಡಿ ಬೇಸಾಯ ಮಾಡಿ ಎಂದಾಗ ಆಶ್ಚರ್ಯವಾಯಿತು. 13 ಲಕ್ಷ ಸಾಲ, ಈಗ ಪುಸ್ತಕ ಓದಿ ವ್ಯವಸಾಯ ಮಾಡು ಅಂತಿದ್ದಾರೆ. ದಿಕ್ಕು ತೋಚದೆ ಮನೆಗೆ ಹೋಗಿ ಪುಸ್ತಕ ಓದಲು ಆರಂಭಿಸಿದೆ. ಆಗ ವ್ಯವಸಾಯದ ನಿಜಾಂಶ ತಿಳಿಯಿತು. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಮಾಡಲೇಬೇಕೆಂದು ನಿರ್ಧರಿಸಿಬಿಟ್ಟೆ. ಆ ಪುಸ್ತಕದ ಪ್ರಭಾವದಿಂದಾಗಿಯೇ ತಾವು ಇಂದು ಈ ಮಟ್ಟಕ್ಕೆ ಬೆಳೆದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು.

 

ಸಾತೇನಹಳ್ಳಿ ಕುಮಾರಸ್ವಾಮಿ

ಪ್ರಗತಿಪರ ರೈತ

ನಾಗಮಂಗಲ ತಾಲೂಕು, ಮಂಡ್ಯ ಜಿಲ್ಲೆ

ಮೊ. 9448073063

successful farmer resigned post master job ideal farmer kumaraswamy Agro forestry verity vegetable

Share your comments

Krishi Jagran Kannada Magazine Subscription Online SubscriptionKrishi Jagran Kannada Subscription

CopyRight - 2020 Krishi Jagran Media Group. All Rights Reserved.