ಕೃಷಿ ಜಾಗರಣ ಅಗ್ರಿ ನ್ಯೂಸ್‌ಗೆ ಸ್ವಾಗತ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
ಲಂಡನ್ ವಿ.ವಿ ಪದವಿ ಪ್ರದಾನ ಸಮಾರಂಭದಲ್ಲಿ ಹಾರಿತು ಕನ್ನಡದ ಬಾವುಟ
ರೈತರಿಗೆ ಸಿಹಿಸುದ್ದಿ: ಪಿ.ಎಂ ಕಿಸಾನ್ ಸಮ್ಮಾನ್ ನಿಧಿ 6 ಸಾವಿರದಿಂದ 8 ಸಾವಿರಕ್ಕೆ!
ನೆಟೆ ರೋಗದಿಂದ ತೊಗರಿ ಬೆಳೆ ನಷ್ಟ: ಹೆಕ್ಟೇರ್‌ಗೆ 10 ಸಾವಿರ ಪರಿಹಾರ
ರಾಜ್ಯದ ವಿವಿಧೆಡೆ ಇನ್ನು ಎರಡು ದಿನಗಳ ಕಾಲ ಮಳೆ ಸಾಧ್ಯತೆ
ರಾಜ್ಯದ ಪ್ರಮುಖ ನದಿ ನೀರು ನೇರ ಬಳಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ
ಬೆಂಗಳೂರಿನಲ್ಲಿ ಕೋಟಿ ವೃಕ್ಷ ಅಭಿಯಾನ- 2023ಕ್ಕೆ ಚಾಲನೆ
ತಿ. ನರಸೀಪುರದಲ್ಲಿ ಚಿರತೆ ಸೆರೆ ಹಿಡಿಯಲು ಟಾಸ್ಕ್ ಫೋರ್ಸ್ ರಚನೆ
ಬೆಂಗಳೂರಿನಲ್ಲಿ ಗರಿಗರಿ ನೋಟು ಎಸೆದ ವ್ಯಕ್ತಿ ವಿರುದ್ಧ ದೂರು ದಾಖಲು
ಮೀನುಗಾರರಿಗೆ ಶಾರ್ಟ್ ಹ್ಯಾಂಡ್ ನೆಟ್ ಬಳಸಲು ಸುಪ್ರೀಂ ಕೋರ್ಟ್ ಅನುಮತಿ
ಹುಬ್ಬಳ್ಳಿಯ ಭೋಂಗಾ ಟವರ್ ಇನ್ನು ನೆನಪು ಮಾತ್ರ!
ಎರಡು ದಿನಗಳ ಕೃಷಿ ಉತ್ಸವ ಮತ್ತು ವಸ್ತುಪ್ರದರ್ಶನಕ್ಕೆ ಕೇಂದ್ರ ರಾಜ್ಯ ಕೃಷಿ ಸಚಿವ ಕೈಲಾಶ್ ಚೌಧರಿ ಚಾಲನೆ
ಮಹದಾಯಿ ಯೋಜನೆಗೆ ವಿರೋಧ: ಗೋವಾದಲ್ಲಿ ನಿರ್ಣಯ
ಸುದ್ದಿಗಳ ವಿವರ ಈ ರೀತಿ ಇದೆ.
ಕೇಂದ್ರ ಸರ್ಕಾರವು ರೈತರಿಗೆ ಸಿಹಿಸುದ್ದಿಯೊಂದನ್ನು ನೀಡುತ್ತಿದೆ. 2023-24ನೇ ಸಾಲಿನ ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ವರ್ಷಕ್ಕೆ 8,000 ರೂ.ಗೆ ಹೆಚ್ಚಿಸಲು ಚಿಂತನೆ ನಡೆದಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುವ ರೈತರಿಗೆ ಇದು ವರದಾನವಾಗಲಿದೆ. ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಬಜೆಟ್ 2023-24ರಲ್ಲಿ ಪಿ.ಎಂ ಕಿಸಾನ್ ಯೋಜನೆಯಡಿಯಲ್ಲಿ ಈ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಮುಂಬರುವ 2023ರ ಬಜೆಟ್‌ನಲ್ಲಿ ವರ್ಷಕ್ಕೆ 6000 ರಿಂದ 8000 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಪಿ.ಎಂ ಕಿಸಾನ್ ಮೊತ್ತದ ಹೆಚ್ಚಳವು ಆರಂಭದಲ್ಲಿ ಒಂದು ವರ್ಷದವರೆಗೆ ಇರುತ್ತದೆ ಮತ್ತು ನಂತರ ಪರಿಶೀಲಿಸಲಾಗುವುದು ಎನ್ನಲಾಗಿದೆ. ಪಿ.ಎಂ ಕಿಸಾನ್ ಹಣದ ಹೆಚ್ಚಳವು ಬಳಕೆ ಮತ್ತು ಗ್ರಾಮೀಣ ಬೇಡಿಕೆಯನ್ನು ಬೆಂಬಲಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊತ್ತವನ್ನು ದ್ವಿಗುಣಗೊಳಿಸುವ ಸಲಹೆಗಳಿದ್ದರೂ, ಆದಾಯದ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರದ ಗಮನಹರಿಸುತ್ತಿದೆ ಅಲ್ಲದೇ ಹಣದುಬ್ಬರದ ಒತ್ತಡವು ಹೆಚ್ಚಳವನ್ನು ಮಿತಿಗೊಳಿಸಬಹುದು ಎಂದು ಅವರು ಹೇಳಿದರು. ಪ್ರತಿ ರೈತರಿಗೆ 2 ಸಾವಿರ ರೂಪಾಯಿ ಹೆಚ್ಚಳ ಮಾಡುವುದರಿಂದಾಗಿ ಸರ್ಕಾರಕ್ಕೆ ವಾರ್ಷಿಕ 22 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ.
---------------
ರಾಜ್ಯ ಸರ್ಕಾರವು ನೆಟೆ ರೋಗದಿಂದ ತೊಗರಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪರಿಹಾರ ಘೋಷಿಸಿದೆ. ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ ಬೆಳೆಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರವು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಪರಿಹಾರ ಪ್ರಕಟಿಸಿದೆ. ಎನ್.ಡಿ.ಆರ್.ಎಫ್./ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಗರಿಷ್ಠ 2 ಹೇಕ್ಟರ್‌ಗೆ ಸೀಮಿತಗೊಳಿಸಿ ಬಾಧಿತ ರೈತರಿಗೆ ಪರಿಹಾರ ಘೋಷಿಸಿದೆ. ಒಟ್ಟು ಪರಿಹಾರ ಮೊತ್ತವು 223 ಕೋಟಿ ರೂಪಾಯಿಯೆಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ಜಿಲ್ಲಾ ಪ್ರವಾಸದಿಂದ ಹಿಂತಿರುಗಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದ್ದಾರೆ. ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ನವೆಂಬರ್ ತಿಂಗಳಿನಲ್ಲಿ ತಲೆದೋರಿದ ಒಣ/ ಶುಷ್ಕ ವಾತಾವರಣದಿಂದ ತೊಗರಿ ಬೆಳೆಯಲ್ಲಿ ಸಂಕೀರ್ಣ ನೆಟೆ ರೋಗವು ಮೂರು ಜಿಲ್ಲೆಗಳಲ್ಲಿ ಉಲ್ಬಣಗೊಂಡು ಬೆಳೆಹಾನಿಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 1.98 ಲಕ್ಷ ಹೆಕ್ಟೇರ್, ಬೀದರ ಜಿಲೆಯಲ್ಲಿ ಸುಮಾರು 0.145 ಲಕ್ಷ ಹೆಕ್ಟೇರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 0.1028 ಲಕ್ಷ ಹೆಕ್ಟೇರ್ ಒಟ್ಟಾರೆಯಾಗಿ 2.2278 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ತೊಗರಿ ಬೆಳೆ ಸಂಕೀರ್ಣ ನೆಟೆ ರೋಗಕ್ಕೆ ಹಾನಿಯಾಗಿರುವುದು ವರದಿಯಾಗಿದೆ. ಹಾನಿಗೊಳಗಾದ ರೈತರ ನೆರೆವಿಗೆ ಧಾವಿಸಿದ ಸರ್ಕಾರವು ವಿಶೇಷ ಪ್ರಕರಣವೆಂದು ರಾಜ್ಯ ಸರ್ಕಾರ ತೀರ್ಮಾನಿಸಿ ಪರಿಹಾರ ಘೋಷಿಸಿದೆ. ನೆಟೆ ರೋಗದಿಂದ ಬೆಳೆಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತೆ ಈ ಭಾಗದ ರೈತರು ಹಾಗೂ ರೈತ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸಿದ್ದವು.
---------------
ರಾಜ್ಯದಲ್ಲಿ ಹಾಲು ಸಂಗ್ರಹಣೆ ಕುಸಿತ: ಐದು ವರ್ಷಗಳಲ್ಲಿ ಇದೇ ಮೊದಲು
---------------
ರಾಜ್ಯದ ವಿವಿಧೆಡೆ ಬುಧವಾರ ಹಾಗೂ ಗುರುವಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಉಳಿದಂತೆ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಬಹಳಷ್ಟಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಕನಿಷ್ಠ ಉಷ್ಣಾಂಶವು ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗುವ ಸಾಧ್ಯತೆಗಳಿವೆ. ಉಳಿದಂತೆ ರಾಜ್ಯದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶವು 27 ಮತ್ತು ಕನಿಷ್ಠ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಗಳಿವೆ. ಮಂಗಳವಾರ ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆಯಾಗಿದ್ದು, ಸಮತಟ್ಟಾದ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ 10.4 ಡಿಗ್ರಿ ಸೆಲ್ಸಿಯಸ್ ಮೈಸೂರಿನಲ್ಲಿ ದಾಖಲಾಗಿದೆ. ಮಡಿಕೇರಿ ನಗರವೂ ಸೇರಿದಂತೆ ಕೊಡಗು ಜಿಲ್ಲೆಯ ಹಲವು ಭಾಗದಲ್ಲಿ ಮಳೆ ಆಗಿದೆ. ಇನ್ನು ಜ.27ರಿಂದ ಫೆ.2ರವರೆಗೆ ಸರಾಸರಿಗಿಂತ ಹೆಚ್ಚು ಮಳೆಯಾಗುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಪ್ರಕಟಣೆ ತಿಳಿಸಿದೆ.
--------------
ರಾಜ್ಯದ ಪ್ರಮುಖ ನದಿ ನೀರನ್ನು ನೇರ ಬಳಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿಯೂ ಅಧ್ಯಯನ ವರದಿ ಪ್ರಕಟಿಸಿದೆ. ರಾಜ್ಯದ ಜೀವನಾಡಿ ನದಿಗಳು ಎಂದೇ ಪರಿಗಣಿಸಿರುವ ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಶಿಂಷಾ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ನೇತ್ರಾವತಿ, ಯಗಚಿ, ಕಾರಂಜಾ ಸೇರಿದಂತೆ ಯಾವುದೇ ನದಿಗಳ ನೀರನ್ನು ಸಂಸ್ಕರಿಸದೇ ಕುಡಿಯಲು ಸಾಧ್ಯವಿರದಷ್ಟು ಕುಲುಷಿತವಾಗಿವೆ. ಕೆಲವು ನದಿಗಳ ನೀರು ಸ್ನಾನಕ್ಕೆ ಬಳಸುವುದಕ್ಕೂ ಯೋಗ್ಯವಾಗಿಲ್ಲ ಎಂದು ಹೇಳಲಾಗಿದೆ. ರಾಷ್ಟ್ರೀಯ ನೀರಿನ ಗುಣಮಟ್ಟ ಯೋಜನೆಯಡಿ ನದಿ ಮತ್ತು ಕೆರೆಗಳ ನೀರಿನ ಗುಣಮಟ್ಟದ 2022ರ ಏಪ್ರಿಲ್‌ನಿಂದ ನವೆಂಬರ್‌ವರೆಗಿನ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ರಾಜ್ಯದ 17 ನದಿಗಳ ಹರಿವಿನಲ್ಲಿ ವಿವಿಧ ಜಿಲ್ಲೆಗಳಲ್ಲಿ 103 ತಪಾಸಣೆ ಕೇಂದ್ರಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದ್ದು, ಈ ಮೂಲಕ ನೀರನ್ನು ಸಂಗ್ರಹಿಸಿ ನೀರಿನ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಈ ರೀತಿ ಪರಿಶೀಲನೆ ನಡೆಸಿ ನೀಡಿದ ವರದಿಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.
---------------
ಕನ್ನಡಿಗರಿಗೆ ಸಿಹಿಸುದ್ದಿ: ಇನ್ಮುಂದೆ 11,400 ಕೇಂದ್ರ ಸರ್ಕಾರಿ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಬಹುದು!
---------------
ಬೆಂಗಳೂರಿನಲ್ಲಿ ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಕೋಟಿ ವೃಕ್ಷಗಳನ್ನು ಬೆಳೆಸಬೇಕು ಎನ್ನುವ ಪರಿಕಲ್ಪನೆ ಕಳೆದ ಕೆಲವು ವರ್ಷಗಳ ಹಿಂದೆ ರೂಪಿಸಿಕೊಳ್ಳಲಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಈ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ. ಬಿಬಿಎಂಪಿ ಸಹಯೋಗದೊಂದಿಗೆ ಕೋಟಿ ವೃಕ್ಷ ಸೈನ್ಯ ಈ ಯೋಜನೆಯನ್ನು ಹಾಕಿಕೊಂಡಿದೆ. ಸೋಮವಾರ ಬಿಬಿಎಂಪಿಯ ಪಾಲಿಕೆಯ ಕೇಂದ್ರ ಕಚೇರಿ ಡಾ.ರಾಜ್‌ಕುಮಾರ್ ಗಾಜಿನ ಮನೆಯ ಮುಂಭಾಗದಲ್ಲಿ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಅರಣ್ಯ ಇಲಾಖೆ, ಪಾಲಿಕೆಯ ಅರಣ್ಯ ವಿಭಾಗವು ಸಮನ್ವಯ ಮಾಡಿಕೊಂಡು ನಗರದಾದ್ಯಂತ ಹೆಚ್ಚು ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಅದರ ಜೊತೆಗೆ ಕೋಟಿ ವೃಕ್ಷ ಸೈನ್ಯದ ವತಿಯಿಂದಲೂ ನಗರದ ಕೆರೆಗಳು, ಉದ್ಯಾನವನಗಳು, ಮೀಸಲು ಅರಣ್ಯ ಹಾಗೂ ಇನ್ನಿತರೆ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು 3 ವರ್ಷಗಳ ಕಾಲ ಪೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
---------------
ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಚಿರತೆ ದಾಳಿ ಪ್ರಕರಣಗಳ ಕುರಿತಂತೆ ಅರಣ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದು, ಚಿರತೆ ಟಾಸ್ಕ್ ಫೋರ್ಸ್ ರಚಿಸಲು ನಿರ್ದೇಶನ ನೀಡಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು 158 ಮಂದಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಕೋಂಬಿಂಗ್ ಆಪರೇಷನ್ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಕರಣ ಸಂಭವಿಸಿದ 3-4 ಕಿ.ಮೀ. ಸುತ್ತಳತೆಯಲ್ಲಿ ಕೋಂಬಿಂಗ್ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. ಚಿರತೆ ದಾಳಿಯಿಂದಾಗಿ ತಿ. ನರಸೀಪುರ ತಾಲ್ಲೂಕಿನ 21 ಹಳ್ಳಿಗಳು ಬಾಧಿತವಾಗಿದೆ. ಈ ಹಳ್ಳಿಗಳಲ್ಲಿ ಚಿರತೆ ಸೆರೆ ಹಿಡಿಯಲು ಸ್ಥಳೀಯರ ನೆರವು ಪಡೆಯುವಂತೆ ಹಾಗೂ ಅಗತ್ಯವಿದ್ದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ನೆರವು ಪಡೆಯಲು ನಿರ್ದೇಶನ ನೀಡಲಾಗಿದೆ.
---------------
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಫ್ಲೈ ಓವರ್ ಮೇಲಿಂದ ಗರಿಗರಿ ನೋಟು ಎಸೆದ ಅರುಣ್ ಎಂಬ ವ್ಯಕ್ತಿಯ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ವ್ಯಕ್ತಿ ಕೆ.ಆರ್ ಮಾರುಕಟ್ಟೆಯ ಫ್ಲೈಓವರ್‌ನ ಮೇಲಿಂದ ಚೀಲದಿಂದ ಹಣ ತೆಗೆದು ಜನರ ಮೇಲೆ ಎಸೆದಿದ್ದಾನೆ. ಹಣ ಎಸೆಯುವ ದೃಶ್ಯವನ್ನು ಜನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೇ ಹಲವರು ಹಣ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಹತ್ತು ರೂಪಾಯಿ ನೋಟಗಳನ್ನು ಫ್ಲೈ ಓವರ್‌ನಿಂದ ಎಸೆದು ಹೋಗಿದ್ದಾನೆ. ಹಣ ಎಸೆಯುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕೆಲವರು ಹಣ ಎಸೆಯಬೇಡಿ ನಮಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣಾ ಸಿಬ್ಬಂದಿ ಅರುಣ್ ಮೇಲೆ ದೂರು ದಾಖಲಿಸಿದ್ದಾರೆ. ಅಲ್ಲದೇ ವಿಚಾರಣೆಗೂ ಒಳಪಡಿಸಲಾಗಿದೆ. ಸಂಚಾರಕ್ಕೆ ಅಡ್ಡಿಪಡಿಸಿ, ಜನರ ಜೀವಕ್ಕೆ ಅಪಾಯ ತಂದೊಡ್ಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಅವರು ಯೂಟ್ಯೂಬ್ ವೀವ್ಸ್‌ಗಾಗಿ ಈ ರೀತಿ ಮಾಡಿದ್ದಾರೆಯೇ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
---------------
ಮೀನುಗಾರರು ಶಾರ್ಟ್ ಹ್ಯಾಂಡ್ ನೆಟ್ ಬಳಸಲು ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. 2000ರಲ್ಲಿ ತಮಿಳುನಾಡು ಸರ್ಕಾರವು ಮೀನುಗಾರರನ್ನು ಮೀನು ಹಿಡಿಯಲು ಶಾರ್ಟ್ ನೆಟ್ ಬಳಸುವುದನ್ನು ನಿಷೇಧಿಸಿತು. ಕರ್ನಾಟಕದ ಕರಾವಳಿ ಭಾಗದಲ್ಲಿಯೂ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ಅಪರೂಪದ ಜಾತಿಯ ಮೀನುಗಳು, ಹವಳದ ಬಂಡೆಗಳು ಸಿಕ್ಕಿಹಾಕಿಕೊಂಡಿದ್ದರಿಂದ ಗಿಲ್ ಬಲೆಗಳನ್ನು ನಿಷೇಧಿಸಲಾಗಿತ್ತು. ಅಲ್ಲದೆ, ಈ ನಿಷೇಧಾಜ್ಞೆ ವಿರುದ್ಧ ಮೀನುಗಾರರ ಪರವಾಗಿ ಮದ್ರಾಸ್ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿತ್ತು. ತಮಿಳುನಾಡು ಸರ್ಕಾರದ ಆದೇಶ ಸರಿಯಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ನಂತರ, ಮೀನುಗಾರರಿಗೆ ವಾರದಲ್ಲಿ 2 ದಿನ ಮಾತ್ರ ಕಿರಿದಾದ ಬಲೆ ಬಳಸಲು ಅವಕಾಶ ನೀಡಲಾಗಿದೆ.
---------------
ಹುಬ್ಬಳ್ಳಿ ಕಾರವಾರ ರಸ್ತೆಯ ಭೋಂಗಾ ಟವರ್ ಇನ್ನು ನೆನಪು ಮಾತ್ರ. ಕಳೆದ ಹಲವು ದಶಕಗಳಿಂದ ಭೋಂಗಾ ಟವರ್ ಈ ಭಾಗದ ಪ್ರಮುಖ ಗುರುತುಗಳಲ್ಲಿ ಒಂದಾಗಿತ್ತು. ಇದೀಗ ಟವರ್ ಧರೆಗುರಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟವರ್ ಧರೆಗುರುಳಿದ ವಿಡಿಯೊ ವೈರಲ್ ಆಗಿದೆ.
---------------
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ರಾಜಸ್ಥಾನ ಸರ್ಕಾರದ ಸಹಯೋಗದೊಂದಿಗೆ ರಾಜಸ್ಥಾನದ ಕೋಟಾದ ದಸರಾ ಮೈದಾನದಲ್ಲಿ ಎರಡು ದಿನಗಳ ಕೃಷಿ ಉತ್ಸವ-ಪ್ರದರ್ಶನ ಮತ್ತು ತರಬೇತಿಯನ್ನು ಆಯೋಜಿಸಿದೆ. ಈ ತರಬೇತಿಯು ಪ್ರತಿವಾರ ಸೋಮವಾರ ಹಾಗೂ ಗುರುವಾರ ನಡೆಯಲಿದೆ. ಎರಡು ದಿನ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಭಾಗವಹಿಸಲಿದ್ದಾರೆ. ವಸ್ತು ಪ್ರದರ್ಶನವನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಕೈಲಾಶ್ ಚೌಧರಿ ಉದ್ಘಾಟಿಸಿದರು. ಸುಮಾರು 15 ಸಾವಿರ ರೈತರು, ಕೃಷಿ ಸ್ಟಾರ್ಟ್‌ಅಪ್ ಸದಸ್ಯರು ಹಾಗೂ ಕೃಷಿ ಸಂಸ್ಥೆಗಳ ಉದ್ಯೋಗಿ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
----------------
Share your comments