1. ಯಶೋಗಾಥೆ

ಕೊಳ್ಳುವವರಿಲ್ಲದೆ ಉಳಿದ ಕಲ್ಲಂಗಡಿಯಲ್ಲಿ ಬೆಲ್ಲ ತಯಾರಿಸಿದ ಜಯರಾಮ ಶೆಟ್ಟರು

KJ Staff
KJ Staff
ಕಲ್ಲಂಗಡಿ ಜೋನೆ ಬೆಲ್ಲ ತಯಾರಿಸಿದ ಜಯರಾಮ ಶೆಟ್ಟಿ ಹಾಗೂ ತಂಡ.

ಕೆಲವೊಮ್ಮೆ ಪರಿಸ್ಥಿತಿ ನಮಗೆ ಬಹುದೊಡ್ಡ ಪಾಠ ಕಲಿಸುತ್ತದೆ. ಹಾಗೆಯೇ ಅದೇ ಪರಿಸ್ಥಿತಿಗಳು ನಾವು ಹೊಸತೊಂದನ್ನು ಆವಿಷ್ಕರಿಸಲು ಕೂಡ ಪ್ರೇರಣೆಯಾಗುತ್ತವೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದ ಜಯರಾಮ ಶೆಟ್ಟಿ ಸಂಪದಮನೆ ಅವರು ತಮಗೆ ಎದುರಾಗಿದ್ದ ಸಂದಿಗ್ಧ ಪರಿಸ್ಥಿತಿಯಲ್ಲೂ ಹೊಸ ಉತ್ಪನ್ನವೊಂದನ್ನು ಆವಿಷ್ಕರಿಸಿ ಬಹಳಷ್ಟು ರೈತರಿಗೆ ಮಾದರಿಯಾಗಿದ್ದಾರೆ.

ಜಯರಾಮ ಶೆಟ್ಟರು ಮೂಲತಃ ಒಬ್ಬ ಹೋಟೆಲ್ ಉದ್ಯಮಿ. ನಿಟ್ಟೂರಿನ ‘ನವರತ್ನ’ ಹೋಟೆಲ್ ಎಂದರೆ ಹೊಸನಗರ ತಾಲೂಕಿನಲ್ಲಿ ಚಿರಪರಿಚಿತ. ಆ ಹೋಟೆಲ್ ಮಾಲೀಕರೇ ಜಯರಾಮ ಶೆಟ್ಟಿ. ಹೋಟೆಲ್ ನಿರ್ವಹಣೆ ಜೊತೆಗೆ ಪೂರ್ಣ ಪ್ರಮಾಣದ ಕೃಷಿಯಲ್ಲೂ ತೊಡಗಿಕೊಂಡಿರುವ ಅವರು, ಕಬ್ಬು, ಭತ್ತ, ಶುಂಠಿ ಬೆಳೆಯುತ್ತಾರೆ. ಈಗ್ಗೆ ಎರಡು ವರ್ಷಗಳ ಹಿಂದೆ ಶೆಟ್ಟರು ಕಲ್ಲಂಗಡಿ ಬೆಳೆಯಲು ಶುರು ಮಾಡಿದರು. ಕಳೆದ ಬಾರಿ ಕಲ್ಲಂಗಡಿಯಿAದ ಅಷ್ಟೇನೂ ಲಾಭವಾಗಲಿಲ್ಲ. ಆದರೂ ಒಂದೇ ಬಾರಿ ಬೆಳೆದು ಸುಮ್ಮನಾಗುವುದೇಕೆ ಎಂದು ಈ ಬಾರಿಯೂ 4 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದರು. ಆದರೆ, ದುರಾದೃಷ್ಟವೆಂಬAತೆ ಕಲ್ಲಂಗಡಿ ಬೆಳೆ ಕಟಾವಿಗೆ ಬರುವುದಕ್ಕೂ ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ಜಾರಿಯಾಗುವುದಕ್ಕೂ ಸರಿ ಹೋಯಿತು!

ಕಲ್ಲಂಗಡಿ ಕೇಳುವವರಿಲ್ಲ

2020ರಲ್ಲಿ ಕಲ್ಲಂಗಡಿ ಬೆಳೆದಾಗ ಕೇರಳ ಹಾಗೂ ಶಿವಮೊಗ್ಗದ ವ್ಯಾಪಾರಿಗಳು ಬಂದು ಹಣ್ಣು ಖರೀದಿಸಿದ್ದರು. ಹಾಗಾಗಿ ಹಣ್ಣು ಮಾರುವುದರಲ್ಲಿ ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ಈ ಬಾರಿ ದೇಶದೆಲ್ಲೆಡೆ ಕೊರೊನಾ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವ ರಾಜ್ಯದ ವ್ಯಾಪಾರಿಗಳೂ ಕಲ್ಲಂಗಡಿ ಖರೀದಿಗೆ ಬರಲಿಲ್ಲ. ವ್ಯಾಪಾರಿ ಜಮೀನಿಗೆ ಬಂದು ಖರೀದಿಸುವುದಿರಲಿ, ರೈತರೇ ಸ್ವತಃ ದಲ್ಲಾಳಿಗಳ ಮನೆ ಬಾಗಿಲಿಗೆ ಹೋಗಿ ಕೊಡುತ್ತೇವೆಂದರೂ ಖರೀದಿಸಲು ಯಾರೊಬ್ಬರೂ ಮುಂದೆ ಬರಲಿಲ್ಲ. ಹೀಗಿರುವಾಗ ಶೆಟ್ಟರ ಹೋಟೆಲ್ ಅನುಭವ ಕೆಲಸಕ್ಕೆ ಬಂತು.

ಕುಪ್ಪರಿಗೆಯಲ್ಲಿ ಕುದಿಯುತ್ತಿರುವ ಕಲ್ಲಂಗಡಿ ರಸ.

ಕೆಲಸಕ್ಕೆ ಬಂದ ಹೋಟೆಲ್ ಅನುಭವ

ಒಂದೆಡೆ ಕಲ್ಲಂಗಡಿ ಮಾರಾಟವಾಗಲಿಲ್ಲ. ಮತ್ತೊಂದೆಡೆ ಮಳೆ ಬಂದು ಹಣ್ಣುಗಳೆಲ್ಲಾ ಕೊಳೆಯಲಾರಂಭಿಸಿದ್ದವು. ಇನ್ನೂ ತಡ ಮಾಡಿದರೆ ಎಲ್ಲಾ ಹಣ್ಣುಗಳು ಕೊಳತೇ ಹೋಗುತ್ತಿದ್ದವು. ಪರಿಸ್ಥಿತಿ ಹೀಗಿರುವಾಗ ಜಯರಾಮ ಶೆಟ್ಟರು ಪರ್ಯಾಯ ಮಾರ್ಗ ಹುಡುಕಲಾರಂಭಿಸಿದರು. ಹಿಂದೆ ಇದೇ ಕಲ್ಲಂಗಡಿಯಿAದ ಸಣ್ಣ ಪ್ರಮಾಣದಲ್ಲಿ ಜಾಮ್ ತಯಾರಿಸಿದ್ದು ಶೆಟ್ಟರಿಗೆ ನೆನಪಾಯಿತು. ಆದರೆ ಈ ಬಾರಿ ಇದ್ದದ್ದು 4 ಎಕರೆಯಲ್ಲಿ ಬೆಳೆದ 6 ಟನ್ ಕಲ್ಲಂಗಡಿ. ಇಷ್ಟೊಂದು ಹಣ್ಣಿನಿಂದ ಜಾಮ್ ತಯಾರಿಸಿ ಖರ್ಚು ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿತು. ಆಗ ಹೊಳೆದದ್ದೇ ಜೋನೆ ಬೆಲ್ಲದ ಐಡಿಯಾ!

ಕಲ್ಲಂಗಡಿ ಕರಗಿ ಬೆಲ್ಲವಾಯ್ತು!

ಬೆಲ್ಲ ತಯಾರಿಸುವ ಸಿಹಿಯಾದ ಐಡಿಯಾ ಹೊಳೆದದ್ದೇ ಜಯರಾಮ ಶೆಟ್ಟರು ತಡ ಮಾಡಲಿಲ್ಲ. ತಮ್ಮ ಹೋಟೆಲ್ ಸಿಬ್ಬಂದಿಯನ್ನು ಸೇರಿಸಿಕೊಂಡು ದೊಡ್ಡ ಕುಪ್ಪರಿಗೆ (ದೊಡ್ಡ ಪಾತ್ರ) ಯೊಂದನ್ನು ಜಮೀನಿಗೇ ತೆಗೆದುಕೊಂಡು ಹೋದರು. ಕಲ್ಲಂಗಡಿ ಹಣ್ಣುಗಳನ್ನೆಲ್ಲಾ ಒಂದೆಡೆ ಹಾಕಿಕೊಂಡು ಅವುಗಳ ತಿರುಳು ತೆಗೆದು, ರಸ (ಜ್ಯೂಸ್) ಮಾಡಿದರು. ಬಳಿಕ ಸೋಸಿದ ಕಲ್ಲಂಗಡಿ ರಸವನ್ನು ಕುಪ್ಪರಿಗೆಗೆ ಹಾಕಿ ಸತತ 4 ತಾಸು ಕುದಿಸಿದರು. ಕುದಿಸುವಾಗ ಮೇಲೆ ಬರುವ ಕೆನೆ (ಮಡ್) ತೆಗೆಯುತ್ತಾ ಹೋದಂತೆ ಕಲ್ಲಂಗಡಿಯ ಕೆಂಪು ರಸವು ಜೋನೆ ಬೆಲ್ಲದಂತೆಯೇ ತಿಳಿ ಚಾಕೊಲೇಟ್ ಬಣ್ಣಕ್ಕೆ ತಿರುಗಲಾರಂಭಿಸಿತು. ನಾಲ್ಕು ಗಂಟೆ ಕುದಿಸಿ, ಕೆನೆ ತೆಗೆದ ಬಳಿಕ ಕಲ್ಲಂಗಡಿಯ ರಸ ಕರಗಿ ಜೋನೆ ಬೆಲ್ಲವಾಗಿತ್ತು.

ಬೆಲ್ಲದಿಂದ ಆದಾಯ ಹೆಚ್ಚು

ಪ್ರಸ್ತುತ ವ್ಯಾಪಾರಿಗಳು ಕೆ.ಜಿ.ಗೆ 4ರಿಂದ 5 ರೂ. ಕೊಟ್ಟು ಕಲ್ಲಂಗಡಿ ಖರೀದಿಸುತ್ತಾರೆ. ಇದರಿಂದ ಒಂದು ಟನ್ ಕಲ್ಲಂಡಿಗೆ ಗರಿಷ್ಠ 5000 ರೂ. ಸಿಗಬಹುದು. ಆದರೆ, ಅದೇ ಒಂದು ಟನ್ ಕಲ್ಲಂಗಡಿಯನ್ನು ಬೆಲ್ಲವಾಗಿ ಪರಿವರ್ತಿಸಿದರೆ ಅದರಿಂದ 65 ಕೆ.ಜಿ.ಯಷ್ಟು ಬೆಲ್ಲ ಸಿಗುತ್ತದೆ. ನಾನೀಗ ತಯಾರಿಸಿರುವ ಕಲ್ಲಂಗಡಿಯ ಜೋನೆ ಬೆಲ್ಲವನ್ನು ಒಂದು ಕೆ.ಜಿ.ಗೆ 250ರಿಂದ 300 ರೂ.ಗೆ ಮಾರಾಟ ಮಾಡುತ್ತಿದ್ದೇನೆ. ಬೆಲ್ಲ ಮಾಡಿ ಮಾರಾಟ ಮಾಡಿದ ಕಾರಣ, ಒಂದು ಟನ್ ಕಲ್ಲಂಗಡಿಯಿAದ 16,250 ರೂ. ಗಳಿಂದ 19,500 ರೂ. ಆದಾಯ ಬರುತ್ತಿದೆ. ಕಲ್ಲಂಗಡಿಯನ್ನು ಇಡಿಯಾಗಿ ಮಾರುವುದಕ್ಕೆ ಹೋಲಿಸಿದರೆ ಇಲ್ಲಿ 3 ಪಟ್ಟು ಹೆಚ್ಚು ಆದಾಯ ಬಂದAತಾಗುತ್ತದೆ. ಹೀಗಾಗಿ ಕಲ್ಲಂಗಡಿ ಬೆಳೆಗಾರರು ಕಂಗಾಲಾಗದೆ ಈ ಸುಲಭ ವಿಧಾನ ಅನುಸರಿಸಿ ಕಲ್ಲಂಗಡಿಯ ಜೋನೆ ಬೆಲ್ಲ ತಯಾರಿಸಿ ಹೆಚ್ಚು ಲಾಭ ಗಳಿಸಬಹುದು ಎಂದು ಜಯರಾಮ ಶೆಟ್ಟಿ ಅವರು ಸಲಹೆ ನೀಡುತ್ತಾರೆ.

ಮನೆಯಲ್ಲಿ ನಡೆದ ಬೆಲ್ಲ ತಯಾರಿ ಪ್ರಯೋಗ

ಹೆಮ್ಮೆ ಎನಿಸುತ್ತಿದೆ

‘ನಾನು ಕಲ್ಲಂಗಡಿ ಹಾಳಾಗಲು ಬಿಡುವುದು ಬೇಡ ಎಂದು ನಿರ್ಧರಿಸಿ ಜೋನೆ ಬೆಲ್ಲ ತಯಾರಿಸಲು ಮುಂದಾದಾಗ ನನ್ನ ಈ ಅನ್ವೇಷಣೆ ಇಷ್ಟೊಂದು ಜನರನ್ನು ತಲುಪುತ್ತದೆ, ಇಷ್ಟೆಲ್ಲಾ ಮೆಚ್ಚುಗೆ ಸಿಗುತ್ತದೆ ಎಂದು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಇದರಿಂದ ಪ್ರಚಾರ ಪಡೆಯುವ ಉದ್ದೇಶವೂ ನನಗೆ ಇರಲಿಲ್ಲ. ಈಗ ರಾಜ್ಯದ ವಿವಿಧ ಜಿಲ್ಲೆಗಳ ಕಲ್ಲಂಗಡಿ ಬೆಳೆಗಾರರು ನನಗೆ ಫೋನ್ ಮಾಡಿ, ತಮಗೂ ಬೆಲ್ಲ ತಯಾರಿಸುವ ವಿಧಾನ ಹೇಳಿಕೊಡಿ ಎಂದು ಕೇಳುತ್ತಾರೆ. ಕರೆ ಮಾಡಿದ ಎಲ್ಲರಿಗು ನನ್ನ ಕೈಲಾದಷ್ಟು ಮಾಹಿತಿ ನೀಡುತ್ತಿದ್ದೇನೆ. ಅಕ್ಕಪಕ್ಕದ ಊರುಗಳಲ್ಲಿರುವ ಕೃಷಿಕರ ಆಹ್ವಾನದ ಮೇರೆಗೆ ಅವರ ಗದ್ದೆಗಳಿಗೆ ಹೋಗಿ ಬೆಲ್ಲ ತಯಾರಿಸುವ ಕುರಿತು ಮಾರ್ಗದರ್ಶನ ನೀಡುತ್ತಿದ್ದೇನೆ. ಆದರೆ ಇದಾವುದಕ್ಕೂ ಹಣ ಪಡೆಯುತ್ತಿಲ್ಲ. ಓದುಗರು ಬೇಕಿದ್ದರೆ ಮನೆಯಲ್ಲಿಯೇ ಒಂದು ಅಥವಾ ಎರಡು ಕಲ್ಲಂಗಡಿ ಹಣ್ಣು ತಂದು ಈ ಪ್ರಯೋಗ ಮಾಡಬಹುದು. ನಾವು ಕೂಡ ಮೊದಲು ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಿ ಅದು ಯಶಸ್ವಿ ಆದ ಬಳಿಕವೇ ಕುಪ್ಪರಿಗೆಯಲ್ಲಿ ಬೆಲ್ಲ ತಯಾರಿಸಿದೆವು’ಎಂದು ಹೇಳುತ್ತಾರೆ ಜಯರಾಮ ಶೆಟ್ಟಿ ಸಂಪದಮನೆ ಅವರು.

ಬೆಲ್ಲದ ರುಚಿ ಹೇಗಿದೆ?

ಜಯರಾಮ ಶೆಟ್ಟರು ತಯಾರಿಸಿರುವ ಕಲ್ಲಂಗಡಿಯ ಜೋನೆ ಬೆಲ್ಲದ ರುಚಿ ಸಾಕ್ಷಾತ್ ಕಬ್ಬಿನಿಂದ ತಯಾರಿಸುವ ಜೋನೆ ಬೆಲ್ಲದ ರುಚಿಯನ್ನೇ ಹೋಲುತ್ತದೆ. ಇದರ ರುಚಿ ನೋಡಿದ ಬಹಳಷ್ಟು ಮಂದಿ ಇದು ಕಲ್ಲಂಗಡಿಯಿAದ ಮಾಡಿದ ಬೆಲ್ಲವಾ ಎಂದು ಅಚ್ಚರಿಯಿಂದ ಹುಬ್ಬೇರಿಸಿದ್ದಾರೆ. ಜೊತೆಗೆ ರುಚಿಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಯಾವುದೇ ರಾಸಾಯನಿಕ ಬೆರೆಸದ ಪರಿಶುದ್ಧ ಬೆಲ್ಲ ಇದಾಗಿರುವ ಕಾರಣ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಬೆಲ್ಲ ಖರೀದಿಸಿದವರ ಅಭಿಪ್ರಾಯ. ಶೆಟ್ಟರು ಬೆಳೆದ 6 ಟನ್ ಕಲ್ಲಂಗಡಿಯಿAದ ಸುಮಾರು 350 ಕೆ.ಜಿ ಬೆಲ್ಲ ತಯಾರಾಗಿದ್ದು, ಈಗಾಗಲೇ 150 ಕಿಲೋ ಬೆಲ್ಲ ಮಾರಾವಾಗಿದೆ (ಬಹುಪಾಲು ಜನರಿಗೆ ರುಚಿ ತೋರಿಸಲು ಖರ್ಚಾಗಿದೆ). ಬೇಡಿಕೆ ಹೆಚ್ಚಿರುವ ಕಾರಣ ಉಳಿದ ಬೆಲ್ಲ ಕೂಡ ಬಹು ಬೇಗ ಮಾರಾಟವಾಗುತ್ತಿದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.