1. ಯಶೋಗಾಥೆ

ಪರಿಸರ ರಕ್ಷಣೆಗೆ ಟೊಂಕಕಟ್ಟಿ ನಿಂತ ಭದ್ರಾ ತೀರದ ಆರಕ್ಷಕ

KJ Staff
KJ Staff

ಮಾಡುವುದು ಕೆಟ್ಟದ್ದನ್ನು ತಡೆಯುವ, ಕೆಟ್ಟವರನ್ನು ಕಟ್ಟಿಹಾಕುವ ಪೊಲೀಸ್ ವೃತ್ತಿ. ಅಲ್ಲೋ ಸಮಯದ ಮಿತಿಯಿಲ್ಲ. ದಿನದ 24 ಗಂಟೆಯೂ ಹೈ ಅಲರ್ಟ್ ಆಗಿರಬೇಕು. ಸಂದರ್ಭ ಬಂದರೆ ತನ್ನ ಡ್ಯೂಟಿ ಅವಧಿ ಮೀರಿ ಓವರ್ ಟೈಮ್ ಕೆಲಸವನ್ನೂ ಮಾಡಬೇಕು. ಒಮ್ಮೊಮ್ಮೆ ಮನೆಗೆ ಬರುವುದು ರಾತ್ರಿ ಹತ್ತಾದರೂ ಆಯಿತು, 12 ಆದರೂ ಆಯಿತು. ಕೆಲವೊಮ್ಮ ತಡರಾತ್ರಿ 2 ಗಂಟೆಯಾದರೂ ಠಾಣೆಯಲ್ಲೇ ಠಿಕಾಣಿ ಹೂಡಬೇಕಾದ ಅನಿವಾರ್ಯತೆ ಕೂಡ.

ಪೊಲೀಸ್ ವೃತ್ತಿಯೇ ಹಾಗೆ. ಅದು ಎಲ್ಲರೂ ಮಾಡುವಂತೆ ಬೆಳಗ್ಗೆ 9 ಗಂಟೆಗೆ ಲಾಗ್ ಇನ್ ಆಗಿ, ಸಂಜೆ 5 ಗಂಟೆಗೆ ಲಗೌಟ್ ಆಗಿ ಮನೆಗೆ ಮರಳುವ ಆಫೀಸ್ ಚಾಕರಿಯಲ್ಲ. ದಿನದ ಯಾವುದೇ ಸಂದರ್ಭದಲ್ಲೂ ಕರ್ತವ್ಯದ ಕರೆ ಬರಬಹುದು. ಅದಕ್ಕಾಗಿ ಸದಾ ಸಿದ್ಧವಿರಬೇಕು. ಇಂತಹ ಒಂದು ನಿಗದಿತ ಸಮಯದ ಗಡಿಯಿಲ್ಲದ ಸೇವೆಯಲ್ಲಿರುವ ಪೊಲೀಸರು ಅನ್ಯ ಕೆಲಸಗಳಲ್ಲಿ ತೊಡಗುವುದು ತೀರಾ ಅಪರೂಪ. ಅದರಲ್ಲೂ ಸಾಮಾಜಿಕ ಕಾರ್ಯದಲ್ಲಿ ತೊಡಗುವುದನ್ನಂತೂ ಕೇಳಲೇಬೇಡಿ. ಆದರೆ ಇಲ್ಲೊಬ್ಬ ಪೊಲೀಸಪ್ಪ ಸ್ವಲ್ಪ ವಿಭಿನ್ನವಾಗಿದ್ದಾರೆ. ಹಾಗೇ, ಅವರು ಮಾಡಿರುವ, ಮಾಡುತ್ತಿರುವ ಹಾಗೂ ಮುಂದೆ ಮಾಡುತ್ತಲೇ ಇರಬೇಕೆಂದಿರುವ ಕಾರ್ಯವೂ ಯಾರೂ ನಿರೀಕ್ಷೆ ಮಾಡದಂಥದ್ದು.

ಹಸಿರು ಪ್ರೇಮಿ ಹಾಲೇಶಪ್ಪ

ಅವರ ಹೆಸರು ಹಾಲೇಶಪ್ಪ. ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ನಮ್ಮ ಆಡುಭಾಷೆಯಲ್ಲೇ ಸ್ನಾತಕೋತ್ತರ ಪದವಿ (ಎಂ.ಎ ಕನ್ನಡ) ಪಡೆದಿರುವ ಕನ್ನಡ ಪ್ರೇಮಿ. ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲೂಕು ಢಣಾಯಕಪುರದ ದಿ. ಶಿವಪ್ಪ ಅವರ ಪುತ್ರ ಹಾಲೇಶಪ್ಪ, ವಿವಾಹಿತರು. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮನಗಿರುವ ಚಿಕ್ಕ ಚೊಕ್ಕ ಸುಖ ಸಂಸಾರ ಅವರದ್ದು. ಈಗ ಅಸಲಿ ವಿಷಯಕ್ಕೆ ಬರುವುದಾದರೆ, ಹಾಲೇಶಪ್ಪ ಅವರೊಬ್ಬ ಅಸಾಮಾನ್ಯ ಪರಿಸರ ಪ್ರೇಮಿ. ಅದಕ್ಕಿಂತ ಹೆಚ್ಚಾಗಿ ತನ್ನೂರಿಗೆ ಅನುಕೂಲವಾಗುವ ಕೆಲಸ ಮಾಡಬೇಕು, ಅಲ್ಲಿನ ಪರಿಸರವನ್ನು ಕಾಪಾಡಬೇಕು ಎಂಬ ಮಹದಾಸೆ ಉಳ್ಳವರು. 2008ರಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡ ಇವರು, 2011ರಿಂದ 2016ರವರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿದ್ದರು. ಬಳಿಕ 2016ರ ಜುಲೈನಲ್ಲಿ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ವರ್ಗವಾಗಿ ಬಂದರು. ಅಲ್ಲಿಂದ ಶುರುವಾಗುವುದು ಹಾಲೇಶಪ್ಪ ಅವರ ಪರಿಸರ ಪ್ರೇಮದ ಪಯಣ.

ಕಾನ್ಸ್ಟೆಬಲ್ ಹಾಲೇಶಪ್ಪ

ಗುಡ್ಡವ ಕಾಡಾಗಿಸುವಾಸೆ

ಇವರ ಹುಟ್ಟೂರು ಢಣಾಯಕಪುರಕ್ಕೆ (ಢಣನಾಯಕಪುರ) ಕೂಗಳತೆ ದೂರದಲ್ಲಿ ಕಾಲಭೈರವ ಹಾಗೂ ಕಾಗೆ ಬೆಟ್ಟಗಳಿವೆ. ಕಂಡಕAಡವರು ಮರ ಕಡಿದು, ಮಣ್ಣು (ಗ್ರಾವೆಲ್) ತುಂಬಿ ಸಾಗಿಸುತ್ತಿದ್ದ ಕಾರಣ, ಮಲೆನಾಡಿನ ಸೆರಗಲ್ಲಿದ್ದರೂ ಈ ಬೆಟ್ಟಗಳೆರಡೂ ಬೆಂಗಾಡುಗಳAತೆ ಬರಿದಾಗಿದ್ದವು. ಆಗ ಹಾಲೇಶಪ್ಪ ಅವರ ದೃಷ್ಟಿ ಈ ಬೆಟ್ಟಗಳ ಮೇಲೆ ಬಿತ್ತು. ನನ್ನ ಹುಟ್ಟೂರಲ್ಲೇ ಇರುವ ಬೆಟ್ಟಗಳು ನನ್ನ ಕಣ್ಣೆದುರೇ ನಾಶವಾಗುತ್ತಿವೆಯಲ್ಲಾ ಎಂದು ಮರುಗಿದ ಅವರು, ಬೆಟ್ಟಗಳನ್ನು ಕಾಡುಗಳನ್ನಾಗಿ ಪರಿವರ್ತಿಸುವ ಪುನಶ್ಚೇತನದ ಕೆಲಸಕ್ಕೆ ಸಿದ್ಧರಾದರು. ಮೊದಲು ಬೆಟ್ಟಗಳಲ್ಲಿದ್ದ ಪೊದೆ, ಮುಳ್ಳು-ಪೆಳೆಗಳನ್ನು ಸ್ವಚ್ಛಗೊಳಿಸಿದರು. ಬಳಿಕ ತಮ್ಮ ಸಹೋದರನ ನೆರವಿನಿಂದ ಗುಡ್ಡಗಳಲ್ಲಿ ಗಿಡ ನೆಡುವ ಕಾರ್ಯ ಆರಂಭಿಸಿದರು.

ಈ ಕೆಲಸ ಆರಂಭವಾಗಿದ್ದು 2016ರ ಮಳೆಗಾಲದಲ್ಲಿ. ಬೆಟ್ಟಗಳನ್ನು ಹಸಿರಾಗಿಸುವ ನಿರ್ಧಾರ ಮಾಡಿದಾಗಿನಿಂದ ಬಿಡುವಿನ ಸಮಯವನ್ನೆಲ್ಲಾ ಬೆಟ್ಟದ ಮಡಿಲಲ್ಲೇ ಕಳೆಯುತ್ತಿರುವ ಹಾಲೇಶಪ್ಪ, ಪ್ರತಿ ವರ್ಷ ನೂರಾರು ಗಿಡಗಳನ್ನು ನೆಡಲಾರಂಭಿಸಿದರು. ಬೆಳಗಾದರೆ ಸಾಕು ಸಹೋದರರಿಬ್ಬರೂ ಗುದ್ದಲಿ, ಸಲಿಕೆ ಹಿಡಿದು ಬೆಟ್ಟಕ್ಕೆ ಹೋಗುವುದನ್ನು ಪ್ರತಿನಿತ್ಯ ನೋಡುತ್ತಿದ್ದ ಗ್ರಾಮದ ಕೆಲ ಯುವಕರೂ ದಿನಕಳೆದಂತೆ ಇವರೊಂದಿಗೆ ಕೈ ಜೋಡಿಸಿದವು. ಅಲ್ಲಿಗೆ ಗಿಡಬೆಳೆಸುವ ಪೊಲೀಸಪ್ಪನ ಕನಸಿಗೆ ಮತ್ತಷ್ಟು ಬಲ ಬಂತು.

ಒತ್ತುವರಿ ವಿರುದ್ಧ ಹೋರಾಟ

ಹಾಲೇಶಪ್ಪ ಅವರ ಹಸಿರು ಸೇವೆ ಸುಸೂತ್ರವಾಗಿ ಮುಂದುವರಿದಿತ್ತು. ಒಂದೆಡೆ ಬೆಟ್ಟಗಳ ಮೇಲೆ ಮೆಲ್ಲಗೆ ಹಸಿರು ಹೊದಿಕೆ ಚಿಗುರೊಡೆಯುತ್ತಿದ್ದರೆ, ಮತ್ತೊಂದೆಡೆ ಬೆಟ್ಟವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಸಾಗುವಳಿ ಮಾಡುವವರ ಕಾಟ. ಇವರನ್ನು ಹೀಗೇ ಬಿಟ್ಟರೆ ಮುಂದೊAದು ದಿನ ಸರ್ಕಾರದಿಂದ ಅಕ್ರಮವಾಗಿ ಸಾಗುವಳಿ ಚೀಟಿ ಪಡೆಯುತ್ತಾರೆ ಎಂದರಿತ ಹಾಲೇಶಪ್ಪ, ಗ್ರಾಮಸ್ಥರ ನೆರವಿನಿಂದ ಒತ್ತುವರಿದಾರರ ವಿರುದ್ಧ ದೂರು ನೀಡಿದರು. ಈ ದೂರಿಗೆ ಸ್ಪಂದಿಸಿದ ತಹಶೀಲ್ದಾರರು, ಸ್ವತಃ ಮುಂದೆನಿAತು ಒತ್ತುವರಿ ಆಗಿದ್ದ ಸ್ಥಳದ ಸರ್ವೇ ಮಾಡಿಸಿ, 15 ಎಕರೆ ಒತ್ತುವರಿ ಗುರುತಿಸಿ, ಈ ಅಕ್ರಮದ ಕುರಿತು ಉಪವಿಭಾಗಾಧಿಕಾರಿ (ಎಸಿ) ಯವರಿಗೆ ವರದಿ ನೀಡಿದ್ದಾರೆ. ಪ್ರಸ್ತುತ ಕೊರೊನಾ ಕಾರಣದಿಂದಾಗಿ ಪ್ರಕರಣದ ವಿಚಾರಣೆ ನಡೆಯುತ್ತಿಲ್ಲ. ಆದರೆ ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದವರು. ಈಗ ಗುಡ್ಡಗಳ ಸುದ್ದಿಗೆ ಹೋಗುತ್ತಿಲ್ಲ. ಮುಂದೆ ಈ ಎರಡೂ ಬೆಟ್ಟಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಿ ಸಂರಕ್ಷಿತ ಅರಣ್ಯದ ಪಟ್ಟಿಗೆ ಸೇರಿಸಬೇಕೆಂಬುದು ಹಾಲೇಶಪ್ಪ ಅವರ ಆಸೆ. ಇದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂಬುದು ಅವರ ಮನವಿ.

ಗಿಡಗಳು ಒಣಗುವುದೇ ತಲೆನೋವು

2016ರಿಂದ ಇದುವರೆಗೆ ಹಾಲೇಶಪ್ಪ ಅವರು ಕಾಲಭೈರವ ಹಾಗೂ ಕಾಗೆ ಬೆಟ್ಟಗಳಲ್ಲಿ ಸುಮಾರು 1500ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಆದರೆ, ಅವುಗಳಲ್ಲಿ ಉಳಿದಿರುವುದು ಮಾತ್ರ 400-500 ಗಿಡಗಳು. ಪ್ರತಿ ವರ್ಷ ಮಳೆಗಾಲದಲ್ಲಿ ನೆಟ್ಟ ಗಿಡಗಳ ಪೈಕಿ ಶೇ.80ರಷ್ಟು ಗಿಡಗಳು ಒಣಗಿ ಹೋಗುತ್ತಿವೆ. ಸಮರ್ಪಕವಾಗಿ ನೀರುಣಿಸಿ, ಉಚಾರ ಮಾಡಿದರೂ ಗಿಡಗಳು ಬಾಡುವುದ ಕಂಡು ಕಂಗೆಟ್ಟ ಹಾಲೇಶಪ್ಪ, ಈ ಸಮಬಂಧ ಅರಣ್ಯಾಧಿಕಾರಿಗಳು, ಕೃಷಿ, ತೋಟಗಾರಿಕೆ ತಜ್ಞರ ನೆರವು ಪಡೆದು ಗಿಡಗಳ ಆಯ್ಕೆ, ನೆಡುವ ಹಾಗೂ ಬೆಳೆಸುವ ವಿಧಾನದಲ್ಲಿ ಕೊಂಚ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ತಜ್ಞರ ಸಲಹೆಯಂತೆ, ಗಿಡಗಳನ್ನು ನೆಡುವ ಮೊದಲು ಬೇರುಗಳಿಗೆ ಅಗತ್ಯ ದ್ರಾವಣಗಳನ್ನು ಲೇಪಿಸುತ್ತಿದ್ದಾರೆ. ಪರಿಣಾಮವಾಗಿ ಆರಂಭದ ವರ್ಷಗಳಿಗೆ ಹೋಲಿಸಿದರೆ, ಈಗ ಒಂದೆರಡು ವರ್ಷಗಳಿಂದ ಒಣಗುವ ಗಿಡಗಳ ಸಂಖ್ಯೆ ಕಡಿಮೆಯಾಗಿದೆ.

ಊರಿಗೊಬ್ಬ ಹಾಲೇಶಪ್ಪ ಬೇಕು

ಮೊದಲೆಲ್ಲಾ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟು ಅವುಗಳು ಒಣಗುವುದನ್ನು ಕಂಡ ಹಾಲೇಶ್, ಈಗ ಅಲ್ಲಿನ ಮಣ್ಣು ಹವಾಗುಣಕ್ಕೆ ಹೊಂದಿಕೊಳ್ಳುವ ಕಾಡು ಜಾತಿಯ ಮರಗಳನ್ನು ಬೆಳೆಸುತ್ತಿದ್ದಾರೆ. ಪ್ರಸ್ತುತ ಅತ್ತಿ, ಆಲ, ಅರಳಿ, ಮಾವು, ನೇರಳೆ, ತಾರೆ, ಹಲಸು, ಕಾಡು ನೆಲ್ಲಿ, ಸೀಮರೂಬ, ಹುಣಸೆ ಮತ್ತಿತರ ಮರಗಳು ಹತ್ತಾರು ಅಡಿ ಎತ್ತರಕ್ಕೆ ಬೆಳೆದು ನಿಂತಿವೆ. ಪ್ರಸಕ್ತ ವರ್ಷ ಮಳೆಗಾಲದಲ್ಲಿ 300 ಗಿಡಗಳನ್ನು ನೆಡುವ ಗುರಿ ಹೊಂದಿರುವ ಕಾನ್‌ಸ್ಟೆಬಲ್ ಹಾಲೇಶಪ್ಪ, ಈಗಾಗಲೇ ಸಸಿಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಇದರೊಂದಿಗೆ ರಕ್ತದಾನಿಯೂ ಆಗಿರುವ ಇವರು, ಈವರೆಗೆ 32 ಬಾರಿ ರಕ್ತದಾನ ಮಾಡಿದ್ದಾರೆ. ಹೀಗೆ ಬಿಡುವಿರದ ವೃತ್ತಿಯ ನಡುವೆಯೂ ಸಮಯ ಮಾಡಿಕೊಂಡು ತನ್ನೂರಿನ ಸುತ್ತಲ ಪರಿಸರವನ್ನು ಪ್ರೀತಿಸುತ್ತಾ, ಪೋಷಿಸುತ್ತಾ ಮುನ್ನಡೆದಿರುವ ಕಾನ್‌ಸ್ಟೆಬಲ್ ಹಾಲೇಶಪ್ಪ ಅವರಂತಹ ಯುವ ಉತ್ಸಾಹಿಗಳು ಊರಿಗೊಬ್ಬರಿದ್ದರೂ ಸಾಕು. ಈಗ ಮನುಕುಲವನ್ನು ಕಾಡುತ್ತಿರುವ ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದಂತಹ ಪ್ರಾಕೃತಿಕ ವಿಕೋಪಗಳು ಹೇಳ ಹೆಸರಿಲ್ಲದಂತೆ ಓಡುವುದರಲ್ಲಿ ಅನುಮಾನವೇ ಇಲ್ಲ!

Published On: 08 June 2021, 03:19 PM English Summary: An environmental lover in Khaki Wear

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.