ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್ ಪರಿಚಯಿಸಿದೆ.
ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
1. ರಾಜ್ಯದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ
2. ಕಾವೇರಿ ನೀರು ಹಂಚಿಕೆ ಕರ್ನಾಟಕಕ್ಕೆ ಮತ್ತೆ ಆಘಾತ!
3. ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಎರಡನೇ ಸ್ಥಾನ
4. ಆಧಾರ್ ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಅಪ್ಡೇಟ್ಸ್
5. ಮೋದಿ ಕೇವಲ ತಮಿಳುನಾಡು – ಕರ್ನಾಟಕದ ಪ್ರಧಾನಿಯಲ್ಲ: ಶೋಭಾ ಕರಂದ್ಲಾಜೆ
ಸುದ್ದಿಗಳ ವಿವರ ಈ ರೀತಿ ಇದೆ.
1. ರಾಜ್ಯದ ವಿವಿಧ ಭಾಗದಲ್ಲಿ ಮಳೆ ಮುಂದುವರಿದಿದೆ. ಮಂಗಳವಾರ ಕರಾವಳಿಯ ಬಹುತೇಕ ಭಾಗದಲ್ಲಿ ಮಳೆಯಾಗಿದೆ.
ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ದಕ್ಷಿಣದ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಇನ್ನು ಬುಧವಾರ ಹಾಗೂ ಗುರುವಾರ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ,
ಗದಗ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ
ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು,
ಮಿಂಚು ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು
21 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
2. ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತವಾಗಿದೆ.
ತಮಿಳುನಾಡಿಗೆ ಮುಂದಿನ 18 ದಿನಗಳ ಕಾಲ ನಿತ್ಯವೂ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ
ಆದೇಶ ಮಾಡಿದೆ. ಈಗಾಗಲೇ ಕಾವೇರಿ ನೀರನ್ನು ಯಾವುದೇ ಕಾರಣಕ್ಕೆ ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ,
ರಾಜ್ಯದ ವಿವಿಧ ಭಾಗದಲ್ಲಿ ತೀವ್ರ ಹೋರಾಟ ನಡೆದಿದೆ. ಇದರ ನಡುವೆಯೇ ಈ ಆದೇಶ ಬಂದಿರುವುದು ಜನರನ್ನು ಕಂಗೆಡಿಸಿದೆ.
ಸೆಪ್ಟೆಂಬರ್ 28ರಿಂದ ಮುಂದಿನ ತಿಂಗಳ 15ರವರೆಗೆ ಪ್ರತಿನಿತ್ಯವೂ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಮಿತಿಯು ನಿರ್ದೇಶನ ನೀಡಿದೆ.
ರಾಜ್ಯದ 161 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಸೃಷ್ಟಿಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ
ಕೊರತೆ ತೀವ್ರವಾಗಿದೆ ಎನ್ನುವ ವಾಸ್ತವ ಸ್ಥಿತಿಯನ್ನು ತಜ್ಞರ ಸಮಿತಿ ಪರಿಶೀಲಿಸಬೇಕು ಎಂದು ಕರ್ನಾಟಕ ಸರ್ಕಾರ ಮನವಿ ಮಾಡಿದೆ.
----------------------
3. ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ 2ನೇಯ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರೈತರ ಬದುಕು ಹಸನಗೊಳಿಸುವಲ್ಲಿ ಪಶುಸಂಗೋಪನಾಯ ಇಲಾಖೆಯ ಪಾತ್ರ ಪ್ರಮುಖವಾಗಿದೆ.
ರಾಜ್ಯದಲ್ಲಿ ಪ್ರತಿನಿತ್ಯ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.
ಇದನ್ನು ಒಂದು ಕೋಟಿ ಲೀಟರ್‌ಗೆ ಹೆಚ್ಚಿಸುವ ಅವಕಾಶವಿದೆ ಎಂದಿದ್ದಾರೆ.
4.ಆಧಾರ್ ಕಾರ್ಡ್ ಬಳಸಿ ಡಿಜಿಟಲ್ ಅಕ್ರಮಗಳನ್ನು ನಡೆಸುವುದು ಹೆಚ್ಚಾಗುತ್ತಿದೆ ಎನ್ನುವ ಆತಂಕ ಹೆಚ್ಚಾಗುತ್ತಿರುವ
ಬೆನ್ನಲ್ಲೇ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್‌ನ ಕುರಿತು ಮಹತ್ವದ ಅಪ್ಡೇಟ್ಸ್‌ವೊಂದನ್ನು ನೀಡಿದೆ.
ಜಗತ್ತಿನಲ್ಲಿ ಆಧಾರ್ ಅತ್ಯಂತ ಹೆಚ್ಚು ನಂಬಿಕಾರ್ಹ ಡಿಜಿಟಲ್ ಐಡಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಳೆದ ದಶಕಗಳಿಂದ ಒಂದು ಕೋಟಿಗಿಂತಲೂ ಹೆಚ್ಚು ಭಾರತೀಯರು ಬಹುತೇಕ
ಎಲ್ಲ ಸೇವೆಗಳಿಗೆ ಆಧಾರ್ ಬಳಸಿದ್ದಾರೆ. ಇದು ಅತ್ಯಂತ ವಿಶ್ವಾಸಾರ್ಹ ಗುರುತಿನ ಚೀಟಿಯಾಗಿದೆ ಎಂದು ಹೇಳಿದೆ.
----------------------
5. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಕರ್ನಾಟಕ ಹಾಗೂ ತಮಿಳುನಾಡಿಗೆ ಮಾತ್ರ ಪ್ರಧಾನಿಯಲ್ಲ
ಅವರು ಬೇರೆ ರಾಜ್ಯಗಳ ಜಲ ವಿವಾದಗಳನ್ನೂ ಬಗೆಹರಿಸಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಕಾವೇರಿ ಸಮಸ್ಯೆ ಸೃಷ್ಟಿಯಾಗಿದೆ.
ಈ ವಿಚಾರದಲ್ಲಿ ಮೋದಿ ಮಧ್ಯೆ ಪ್ರವೇಶಿಸುವುದಕ್ಕೆ ಅವರು ಈ ಎರಡು ರಾಜ್ಯಗಳ ಪ್ರಧಾನಿಯಷ್ಟೇ ಅಲ್ಲ ಎಂದಿದ್ದಾರೆ.
Share your comments