ಮಾವಿನ ಹಣ್ಣುಗಳು ಪಕ್ವವಾಗುವ 45 ರಿಂದ 60 ದಿನಗಳ ಮುಂಚೆ ಮಾವಿನ ಹಣ್ಣುಗಳು ನಿಂಬೆ ಹಣ್ಣು ಗಾತ್ರ ಹೊಂದಿದಾಗ ನೊಣಗಳು ಹಣ್ಣುಗಳಿಗೆ ಚುಚ್ಚಿ ಮೊಟ್ಟೆಗಳಿಡುತ್ತವೆ. ಕೆಳಗೆ ಬಿದ್ದ ಹಣ್ಣುಗಳಿಂದ ಈ ನೊಣಗಳು ವೃದ್ಧಿಯಾಗಿ ಮತ್ತೆ ಹೊಸ ಹಣ್ಣುಗಳನ್ನು ಚುಚ್ಚಿ ನಷ್ಟ ಮಾಡುತ್ತವೆ.
ಹೀಗಾಗಿ ಕೆಳಗೆ ಬಿದ್ದ ಹಣ್ಣುಗಳನ್ನು ವಾರಕ್ಕೊಮ್ಮೆ ಆಯ್ದು ತೋಟದ ಅಂಚಿನಲ್ಲಿ ಗುಂಡಿ ತೆಗೆದು 4 ಅಡಿ ಆಳಕ್ಕೆ ಹೂತು ಮಣ್ಣು ಮುಚ್ಚಬೇಕು ಇಲ್ಲವೇ ಬೆಂಕಿಯಲ್ಲಿ ಸುಡಬೇಕು ಎಂದು ಕಲಬುರಗಿಯ ಹಿರಿಯ ಸಹಾಯಕ ತೋಟಗಾರಿಕೆಯ ನಿರ್ದೇಶಕರು ಸಲಹೆ ನೀಡಿದ್ದಾರೆ.
ಒಂದು ಎಕರೆಗೆ 8 ರಿಂದ 10 ಲಿಂಗಾಕರ್ಷಕ ಮೋಹಕ ಬಲೆಗಳನ್ನು ಮರಗಳಿಗೆ ಕಟ್ಟಬೇಕು. ಬಲೆಗಳನ್ನು ತೋಟದಲ್ಲಿ ಕಟ್ಟುವ ಮುನ್ನ ಲಿಂಗಾಕರ್ಷಕ ಮೋಹಕವನ್ನು ಹೊಂದಿರುವ ಮರದ ತುಂಡಿನ ಮೇಲೆ 5 ರಿಂದ 6 ಹನಿ ಮ್ಯಾಲಿಥಿಯಾನ್ ಅಥವಾ ಡೈಕ್ಲೊರೊವಾಸ್‍ನಿಂದ ನೆನೆಸಿ ಮರಗಳಿಗೆ ಕಟ್ಟುವಾಗ ಭೂಮಿಯಿಂದ 3 ರಿಂದ 6 ಅಡಿ ಎತ್ತರದಲ್ಲಿ ಕಟ್ಟಬೇಕು. ಗಾಳಿಗೆ ಅಲುಗಾಡದಂತೆ ನೇರವಾದ ಬಿಸಿಲು ಬೀಳದಂತೆ ಎಲೆಗಳ ಮರೆಯಲ್ಲಿ ಕಟ್ಟಬೇಕು.
ಮೋಹಕ ಬಲೆಗಳನ್ನು ಕಟ್ಟಿದ 12 ರಿಂದ 15 ದಿನಗಳ ನಂತರ, ಮೋಹಕ ಮರದ ತುಂಡಿನ ಮೇಲೆ 5 ತಟ್ಟು ಮ್ಯೌಲಾಥಿಯಾನ್ ಅಥವಾ ಡೈಕ್ಲೊರೊವಾಸ್‍ನಿಂದ ನೆನೆಸಬೇಕು. ಹಾಗೆ ಮಾಡುವುದರಿಂದ ಮೋಹಕದ ಕಾರ್ಯದಕ್ಷತೆ ಹೆಚ್ಚಿ ನೊಣದ ಆಕರ್ಷಣೆ ಅಧಿಕವಾಗುವುದು. 3 ರಿಂದ 4 ವಾರಗಳ ನಂತರ ಹಳೆಯ ಮೋಹಕದ ಜೊತೆಗೆ ಒಂದು ಹೊಸ ಮೋಹಕವನ್ನು ಹಾಕಬೇಕು. ಒಂದು ವೇಳೆ ತೋಟದ ಎಲ್ಲಾ ಹಣ್ಣುಗಳ ಕೊಯಿಲು ಆಗದೆ ಇನ್ನೂ ಮುಂದುವರಿದಲ್ಲಿ ಎಲ್ಲ ಹಣ್ಣುಗಳ ಕೊಯಿಲಾಗುವರೆಗೂ ಮೋಹಕಗಳನ್ನು ಇರಿಸಿ ಹಣ್ಣುಗಳನ್ನು ನೊಣಗಳಿಂದ ರಕ್ಷಿಸಿಕೊಳ್ಳಬೇಕು. ನೀಲಂ ತಳಿ ಸಾಮಾನ್ಯವಾಗಿ ತಡವಾಗಿ ಕಾಯಿ ಕಚ್ಚಿ ಕೊಯಿಲಿಗೆ ಬರುವುದರಿಂದ ನೊಣಗಳಿಂದ ರಕ್ಷಿಸುವುದು ಅಗತ್ಯ. ಮೋಹಕ ಬಲೆಯಲ್ಲಿ ಬಿದ್ದಿರುವ ಸತ್ತ ನೊಣಗಳನ್ನು ಆಗಿಂದಾಗ್ಗೆ ತಗೆದು ಡಬ್ಬಿಯನ್ನು ಸ್ವಚ್ಛಿಗೊಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ತೋಟಗಾರಿಕೆ ಇಲಾಖೆಯ ವಿಷಯತಜ್ಞ (ಹಾರ್ಟಿಕ್ಲಿನಿಕ್) ಮಂಜುನಾಥ ಪಾಟೀಲ 7090832016 ಇವರನ್ನು ಸಂಪರ್ಕಿಸಬಹುದು.
Share your comments