ಸದ್ಯ ರಾಜ್ಯದಲ್ಲಿ ಉಚಿತ ಭಾಗ್ಯಗಳ ಸರಣಿ ಆರಂಭವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಮುಂದಾಗುತ್ತಿದ್ದರೆ, ಇತ್ತ ಇತರೆ ರಾಜ್ಯಗಳು ಕಾಂಗ್ರೆಸ್ ಮಾದರಿಯನ್ನು ಅನುಸರಿಸಿ ಆಡಳಿತದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿವೆ. ಹೌದು ಇದೇ ರಕ್ಷಾ ಬಂಧನದಂದು ಮಹಿಳೆಯರಿಗೆ ಸ್ಮಾರ್ಟ್ ಫೋನ್ ಖರೀದಿಸಲು ಹಣ ನೀಡುವುದಾಗಿ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಹಿಳೆಯರಿಗೆ ಅವರ ಆಯ್ಕೆಯ ಸ್ಮಾರ್ಟ್‌ಫೋನ್ ಖರೀದಿಸಲು ನಿರ್ದಿಷ್ಟ ಮೊತ್ತವನ್ನು ನೀಡಲು ರಾಜ್ಯ ಸರ್ಕಾರವು ಚಿಂತನೆ ನಡೆಸುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಫಲಾನುಭವಿಯ ಬ್ಯಾಂಕ್ ಖಾತೆಗೆ ಎಷ್ಟು ಮೊತ್ತವನ್ನು ವರ್ಗಾಯಿಸಬೇಕು ಎಂಬುದರ ಕುರಿತು ಚರ್ಚಿಸಲಾಗುತ್ತಿದೆ.
ಈ ಹಿಂದೆ ರಾಜ್ಯ ಬಜೆಟ್‌ನಲ್ಲಿ ರಾಜ್ಯದ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ಘೋಷಿಸಿದ್ದೇವೆ. ಆದ್ದರಿಂದ ಈ ವರ್ಷದ ರಕ್ಷಾ ಬಂಧನದಿಂದ ಸರ್ಕಾರವು ಹಂತ ಹಂತವಾಗಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಹಣವನ್ನು ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಸ್ಮಾರ್ಟ್ ಫೋನ್ ಖರೀದಿಗೆ ಹೋದರೆ ನಿಮ್ಮ ಬಳಿ ಸಾಕಷ್ಟು ಆಯ್ಕೆಗಳಿರುತ್ತವೆ. ಉದಾಹರಣೆಗೆ ಎಷ್ಟು ರ್ಯಾಮ್, ಎಷ್ಟು ಸ್ಟೋರೇಜ್ ಇರಬೇಕು ಎಂಬ ನಾನಾ ರೀತಿಯ ಆಯ್ಕೆಗಳಿರುವಾಗ ನೀವು ಯಾವ ಬ್ರಾಂಡ್ ಅನ್ನು ಖರೀದಿಸಲು ಬಯಸುತ್ತೀರಿ? ಯಾವ ಮಾದರಿಯನ್ನು ಖರೀದಿಸಬೇಕು? ನಾವು ಈ ಬಗ್ಗೆ ಕಂಪನಿಗಳೊಂದಿಗೆ ಮಾತನಾಡುತ್ತಿದ್ದೇವೆ.
ಮಹಿಳೆಯರಿಗೆ ಮೊಬೈಲ್ ಖರೀದಿಸಲು ನಿರ್ದಿಷ್ಟ ಮೊತ್ತವನ್ನು (ಅವರ ಬ್ಯಾಂಕ್ ಖಾತೆಯಲ್ಲಿ) ನೀಡಲು ಸರ್ಕಾರ ಪರಿಗಣಿಸುತ್ತಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಎಷ್ಟು ಮೊತ್ತ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸ್ಮಾರ್ಟ್ ಫೋನ್ ನೀಡುವ ಉದ್ದೇಶ ಮಹಿಳಾ ಸಬಲೀಕರಣ ಎಂದು ಅವರು ಈ ವೇಳೆ ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 1.33 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್‌ಗಳಿಗೆ ಬದಲಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ನಿಗದಿತ ಮೊತ್ತವನ್ನು ಜಮಾ ಮಾಡಲು ಸೂಚಿಸಿದ್ದಾರೆ. ಇದೀಗ ಅನ್ನಪೂರ್ಣ ಆಹಾರ ಕಿಟ್, ಟ್ಯಾಬ್ಲೆಟ್ ಯೋಜನೆ ಮುಂತಾದ ಹಲವು ಯೋಜನೆಗಳಿಗೆ ಬದಲಾಗಿ ಫಲಾನುಭವಿಗಳಿಗೆ ನಗದು ನೀಡಲು ಕಾಂಗ್ರೆಸ್ ಸರಕಾರ ಚಿಂತನೆ ನಡೆಸಿದೆ. ಅಕ್ಟೋಬರ್ ಮಧ್ಯಭಾಗದಲ್ಲಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು, ಇನ್ನೂ ಹಲವು ಟೆಂಡರ್‌ಗಳು ಜಾರಿಯಾಗಬೇಕಿರುವುದರಿಂದ ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸರ್ಕಾರ ಹರಸಾಹಸ ಪಡುತ್ತಿದೆ ಎಂದು ಚರ್ಚೆಗಳು ನಡೆಯುತ್ತಿವೆ.
Share your comments