ಕಲ್ಯಾಣ ಕರ್ನಾಟಕ ಬೀದರ್, ಕಲಬುರಗಿ ,ಯಾದಗಿರಿ, ರಾಯಚೂರು, ಬಳ್ಳಾರಿ ಸೇರಿದಂತೆ ಇತರ ಜಿಲ್ಲೆಯ ರೈತರ ಪಾಲಿಗೆ ವರವಾಗಬೇಕಿದ್ದ ಮಳೆರಾಯ ಈ ಬಾರಿ ಶಾಪವಾಗಿದ್ದಾನೆ.
ಆಗಸ್ಟ್ ತಿಂಗಳ ಅಂತ್ಯದಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಿನ ಆರಂಭದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಮುಂಗಾರು ಬೆಳೆಗಳಾದ ಹೆಸರು, ಉದ್ದು ಹೊಲದಲ್ಲಿಯೇ ಮೊಳಕೆ ಒಡೆದಿದ್ದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದರು. ಆದರೆ ಈಗ ಮತ್ತೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತೊಗರಿ ಹಾಳಾಗಿ ಹೋಗಿದ್ದು, ಕಟಾವಿಗೆ ಬಂದಿರುವ ಸೋಯಾಬಿನ್ ಬೆಳೆ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿವೆ.ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರತಿದಿನ ಹಗಲು, ರಾತ್ರಿ ಕನಿಷ್ಠ ಎರಡು ಗಂಟೆಗೂ ಅಧಿಕ ಕಾಲ ಮಳೆ ಸುರಿಯುತ್ತಿದೆ. ಹೆಸರು, ಉದ್ದು ಬೆಳೆಯಲ್ಲಿ ನಷ್ಟವಾಗಿದ್ದರೂ ಸೋಯಾಬಿನ್ ಬೆಳೆಯಿಂದ ಸ್ವಲ್ಪವಾದರೂ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
ಕಟಾವಿಗೆ ಬಂದಿದ್ದ ಹೆಸರು, ಉದ್ದು ಬೆಳೆ ನೀರಿನಲ್ಲಿ ನಿಂತು ರಾಶಿ ಮಾಡಲಾಗದೆ ಕೊಳೆತು ಹೋಗಿತ್ತು. ಈಗ ಮತ್ತೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೊಗರಿ ಬೆಳೆಯೂ ಸಂಪೂರ್ಣವಾಗಿ ಕೈಕೊಡುವ ಸಂಭವವಿದೆ. ಇದು ತೊಗರಿ ಹೂ ಬಿಡುವ ಕಾಲ. ಈ ಸಂದರ್ಭದಲ್ಲಿ ಮಳೆಯಾದರೆ ತೊಗರಿ ಬೆಳೆ ಬರುವುದೇ ಕಷ್ಟ. ಅಲ್ಲದೆ ಮಳೆಯಲ್ಲಿ ಬೇರುಗಳು ನೆನೆದು ಬೆಳೆ ನಿಂತಲ್ಲಿಯೇ ಬೆಳೆ ಬಾಡಿ ಹೋಗುವುದರಿಂದ ತೊಗರಿ ಬೆಳೆ ಬರುವುದೇ ದುಸ್ತರವಾಗಿದೆ.
ಯಾದಗಿರಿ ಜಿಲ್ಲೆಯ ತಿಂಥಣಿ, ದೇವಾಪುರ, ದೇವತ್ಕಲ್, ಆಲ್ದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಲ್ಲಿ ಕಳೆದ ವಾರ ಬಿತ್ತಿದ್ದ ಸಜ್ಜೆ, ಶೇಂಗಾ, ಹತ್ತಿ, ಸಜ್ಜೆ ಬೆಳೆಗಳು ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋದರೆ, ಹಲವು ಕಡೆಗಳಲ್ಲಿ ನೆಲಕ್ಕಚ್ಚಿವೆ.
ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದ ಸಮೀಪವಿರುವ ಬಸಾಪುರ ಗ್ರಾಮದಲ್ಲಿ ಭತ್ತದ ಗದ್ಧೆಗಳಿಗೆ ಹೆಚ್ಚಿನ ಪ್ರಮಾಣದ ನೀರು ನುಗ್ಗಿ ನಷ್ಟ ಸಂಭವಿಸಿದೆ. ಲಿಂಗಸೂಗುರ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ತೋಟಪಟ್ಟಿಗಳಲ್ಲಿ ಬೆಳೆದು ನಿಂತಿದ್ದ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಹೀರೇಕಾಯಿ, ಬೆಂಡೆ ಸೇರಿದಂತೆ ತರಕಾರಿ ಬೆಳೆಗಳು ನಷ್ಟವಾಗಿದೆ . ತೋಟಗಾರಿಕೆ ಬೆಳೆ ಕಟಾವು ಹಂತಕ್ಕೆ ಬಂದಿದ್ದವು. ಮಾರುಕಟ್ಟೆಗೆ ತರುವ ಹಂತದಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯು ಅಪಾರ ನಷ್ಟಕ್ಕೆ ದಾರಿ ಮಾಡಿಕೊಟ್ಟಿದೆ.
ಈರುಳ್ಳಿ ಕಟಾವು ಮಾಡಿ ಮಾರುಕಟ್ಟೆಗೆ ತರುವ ಹಂತದಲ್ಲಿರುವಾಗ ಹಾಕಿದಲ್ಲಿಯೆ ಸಸಿ ಒಡೆಯುತ್ತಿವೆ. ಭಾಗಶಃ ಈರುಳ್ಳಿ ಜಮೀನಲ್ಲಿ ಕಿತ್ತು ಹಾಕಿದ್ದು ಮಣ್ಣು ಪಾಲಾಗುತ್ತಿದೆ. ಮೆಣಸಿನಕಾಯಿ, ಹಾಗಲಕಾಯಿ, ಸೌತೆಕಾಯಿ, ಹೀರೇಕಾಯಿ ಗಿಡ, ಬಳ್ಳಿಗಳು ಅತಿಯಾದ ಮಳೆಗೆ ಮಣ್ಣುಸೇರುತ್ತಿವೆ.
ನಾರಾಯಣಪುರ ಬಲದಂಡೆ ಕಾಲುವೆ (ಎನ್ ಆರ್ ಬಿಸಿ) ಕೊನೆಯ ಭಾಗದಲ್ಲಿ ಯರಗುಂಟಾ ಸಮೀಪ ಒಡೆದಿದೆ. ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರಪ್ರಮಾಣದ ಬೆಳೆಹಾನಿ ಆಗಿದೆ. ಕಾಲುವೆ ಪಕ್ಕದ ಜಮೀನುಗಳ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಪ್ರಸಕ್ತ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತನ ನಗುವನ್ನು ಕಸಿದುಕೊಂಡಿರುವುದಲ್ಲದೆ ಬದುಕನ್ನು ಸಂಕಷ್ಟದಲ್ಲಿ ದೂಡಿದ್ದಾನೆ.
Share your comments