1. ತೋಟಗಾರಿಕೆ

ಆಧುನಿಕ ಬೇಸಾಯ ಪದ್ಧತಿಯಲ್ಲಿ ಪಪ್ಪಯಾ ಬೆಳೆಯಿರಿ

ಕ್ಯಾರಿಕಾ ಪಪಾಯ ಲಿ. ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಪಪ್ಪಾಯಕ್ಕೆ ಪಾಪಾವ, ಪಪಿತಾ ಎಂದು ಕರೆಯುತ್ತಾರೆ. ಪಪಾಯ ಮಧ್ಯ ಅಮೇರಿಕಾದಲ್ಲಿ ಹುಟ್ಟಿದ ಹಣ್ಣಿನ ಜಾತಿಗೆ ಸೇರಿದೆ. ಇದರಲ್ಲಿ ವಿಟಮಿನ್ ‘ಎ’ ವಿಟಮಿನ್ ‘ಸಿ’ ಕ್ಯಾಲ್ಸಿಯಂ, ಪ್ರೋಟಿನ್ ಮತ್ತು ಪೊಟ್ಯಾಸಿಯಂ ಹೇರಳವಾಗಿದೆ.

ವರ್ಷ ಪೂರ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪಪಾಯ ಉಳಿದ ಹಣ್ಣುಗಳಿಗೆ ಹೋಲಿಸಿದರೆ, ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಇದು ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಕರುಳಿನ ಆರೋಗ್ಯದವರೆಗೆ ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ.

ಪರಂಗಿ ಹಣ್ಣು ಮಾತ್ರವಲ್ಲದೇ ಎಲೆ, ಕಾಯಿ ಮತ್ತು ಹೂವುಗಳನ್ನು ಸಹ ವಿವಿಧ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಪುರಾತನ ಕಾಲದಿಂದಲೂ ಈ ಹಣ್ಣನ್ನು ಯಥೇಚ್ಚವಾಗಿ ನಾಟಿ ಔಷಧಿಯಲ್ಲಿ ಬಳಸುತ್ತಿದ್ದಾರೆ. ಪಪಾಯವನ್ನು ತರಕಾರಿಯಾಗಿ, ಹಣ್ಣಾಗಿ ಹಾಗೂ ಸಂಸ್ಕರಣೆಗಾಗಿ ಬಳಸಲಾಗುತ್ತದೆ. ಪೆಪೇನ್ ಎಂಬ ವಸ್ತುವನ್ನು ಈ ಹಣ್ಣಿನಿಂದ ತೆಗೆದು ಪುಡಿ ಮಾಡಿದರೆ ಇದೊಂದು ಅತ್ಯಂತ ಲಾಭದಾಯಕ ಉತ್ಪಾದನೆ. ಅದಕ್ಕಾಗಿಯೇ ಪಪಾಯ ಒಂದು ವಾಣಿಜ್ಯ ಬೆಳೆಯಾಗಿದ್ದು, ತುಂಬ ಲಾಭದಾಯಕವಾಗಿದೆ.

ಪಪಾಯ ಬೆಳೆ ಗಂಡು, ಹೆಣ್ಣು ಮತ್ತು ದ್ವಿಲಿಂಗ ಜಾತಿಯ ಹೂಗಳನ್ನು ಮತ್ತು ಸಂಯುಕ್ತ ಜಾತಿಯ ಗಿಡಗಳನ್ನು ಹೊಂದಿದೆ. ಗಂಡು ಜಾತಿಯ ಗಿಡಗಳು ಹೂ ಬಿಡಲಾರವು, ಹೆಣ್ಣು ಜಾತಿಯಿಂದ ಬಿಡುವ ಹಣ್ಣುಗಳು ಸಣ್ಣದಾಗಿರುತ್ತವೆ ಮತ್ತು ದ್ವಿಲಿಂಗ ಜಾತಿಯಿಂದ ಉತ್ಪತ್ತಿಯಾದ ಹಣ್ಣುಗಳು ಉದ್ದವಾಗಿರುತ್ತದೆ. 

ಹವಾಗುಣ ಮತ್ತು ಮಣ್ಣು: ಉಷ್ಣವಲಯದ ಬೆಳೆಯಾಗಿದ್ದು, ಚಳಿ ಮತ್ತು ಹಿಮ ಪ್ರದೇಶಕ್ಕೇ ಸೂಕ್ತವಲ್ಲ. 25-300 ಸೆ. ಉಷ್ಣಾಂಶ ಇದಕ್ಕೆ ಸೂಕ್ತ. ವಾರ್ಷಿಕವಾಗಿ 1600 ರಿಂದ 2000 ಮಿ.ಮೀ. ಮಳೆ ಬೀಳುವ ಪ್ರದೇಶಗಳಿಗೆ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಚೆನ್ನಾಗಿ ನೀರು ಬಸಿದು ಹೋಗುವ 6.5 ರಿಂದ 7.0 ರವರೆಗೆ ರಸಸಾರ ಅಂಶ ಹೊಂದಿರುವ ಮಧ್ಯಮ ಕಪ್ಪಿನಿಂದ ಹಿಡಿದು ಕೆಂಪು ಮೆಕ್ಕಲು ಮಣ್ಣು ಈ ಹಣ್ಣಿನ ಬೇಸಾಯಕ್ಕೆ ಉತ್ತಮ. ನೀರು ನಿಲುಗಡೆಯಾಗುವ ಮತ್ತು ಜೋರು ಗಾಳಿ ಬಿಸುವ ಪ್ರದೇಶಗಳು ಹೊಂದಿಕೆಯಾಗುವುದಿಲ್ಲ ಮತ್ತು ಅತೀ ಆಳದ ಕಪ್ಪು ಭೂಮಿ ಈ ಬೆಳೆಗೆ ಯೋಗ್ಯವಲ್ಲ. 

ತಳಿಗಳು: ಕೂರ್ಗ್ ಹನಿಡ್ಯೂ, ಸನ್ ರೈಸ್ ಸೋಲೋ, ಸಿಒ-3, ಸಿಒ-4 ಅರ್ಕಾ ಸೂರ್ಯ, ಅರ್ಕಾ ಪ್ರಭಾತ್, ಥೈವಾನ್-786 ಅಥವಾ ರೆಡ್ ಲೇಡಿ

ಸಸ್ಯಾಭಿವೃದ್ಧಿ: ಸಸಿ ಬೆಳೆಯಲು 8 ಮೀ. ಉದ್ದ 1.25 ಮೀ. ಅಗಲ ಮತ್ತು 10 ಸೆಂ.ಮೀ ಎತ್ತರದ 2 ರಿಂದ 3 ಏರು ಸಸಿ ಮಡಿಗಳನ್ನು ತಯಾರಿಸಬೇಕು. ಪ್ರತಿ ಮಡಿಗೆ 10 ರಿಂದ 15 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು ಅರ್ಧ ಕಿ. ಗ್ರಾಂ. 15:15:15 ಕಾಂಪ್ಲೆಕ್ಸ್ ಗೊಬ್ಬರ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ಸೆರೆಸಾನ್ ದ್ರಾವಣದಿಂದ (2 ಗ್ರಾಂ ಪ್ರತಿ ಲೀಟರ್‌ಗೆ) ಸಸಿ ಮಡಿಗಳನ್ನು ನೆನೆಸಬೇಕು. ತಾಜಾ ಬೀಜಗಳನ್ನು 2.5 ಸೆಂ.ಮೀ. ಅಂತರದಲ್ಲಿ 2 ಸೆಂ. ಮೀ. ಆಳದಲ್ಲಿ 15 ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬೇಕು.

ಪಪಾಯ ಬೀಜಗಳನ್ನು ಬಿತ್ತುವ ಪೂರ್ವದಲ್ಲಿ ರಾತ್ರಿಯಿಡಿ ಬೀಜಗಳನ್ನು ಗೋಮೂತ್ರದಲ್ಲಿ ನೆನೆಸಿ ನಂತರ ಬಿತ್ತನೆ ಮಾಡುವುದರಿಂದ ಬೀಜಗಳು ಸಮನಾಗಿ ಹಾಗೂ ಉತ್ತಮವಾಗಿ ಮೊಳಕೆಯೊಡೆಯುತ್ತವೆ. ಮಾರ್ಚ-ಏಪ್ರೀಲ್ ತಿಂಗಳುಗಳಲ್ಲಿ ಬೀಜ ಬಿತ್ತನೆ ಮಾಡುವುದು ಒಳಿತು. ಇದರಿಂದ ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡಲು ಅನುಕೂಲವಾಗುತ್ತದೆ. ಸಸಿ ಮಡಿಗಳಿಗೆ ನಿಯಮಿತವಾಗಿ ನೀರು ಒದಗಿಸಿ. ಚಿಕ್ಕ ಸಸಿಗಳಿಗೆ ಬೇಸಿಗೆಯಲ್ಲಿ ನೆರಳು ಒದಗಿಸಬೇಕು. ನಾಟಿ ಮಾಡಿದಾಗ ಪಾಲಿಥಿನ್ ಚೀಲಗಳಲ್ಲಿ ಬೆಳೆಸಿದ ಸಸಿಗಳು ಸಸಿಮಡಿಗಳಲ್ಲಿ ಬೆಳೆಸಿದ ಸಸಿಗಳಿಗಿಂತ ಚೆನ್ನಾಗಿ ಬೆಳೆಯುತ್ತವೆ. ರಂಧ್ರ ಮಾಡಿದ 150 ಗೇಜ್ ದಪ್ಪ 22 ಸೆಂ.ಮೀ. ಉದ್ದ ಮತ್ತು 14 ಸೆಂ.ಮೀ. ಅಗಲವಿರುವ ಪಾಲಿಥಿನ್ ಚೀಲಗಳನ್ನು ಸಸಿ ಬೆಳೆಸಲು ಉಪಯೋಗಿಸಬಹುದು. ಚೀಲಗಳಲ್ಲಿ ಸಮ ಪ್ರಮಾಣದಲ್ಲಿ ಸಾವಯವ ಗೊಬ್ಬರ, ಮಣ್ಣು ಮತ್ತು ಮರಳು ಮಿಶ್ರಮಾಡಿ ತುಂಬಬೇಕು. ನಂತರ ಬೀಜವನ್ನು ನಾಟಿ ಮಾಡುವಾಗ ಪ್ರತಿ ಚೀಲಕ್ಕೆ 5 ಗ್ರಾಂ. ಗ್ಲೋಮೋಸ್ ಫ್ಲಾö್ಯಸಿಕ್ಯುಲೇಟಮ್ ಎಂಬ ವ್ಯಾಮ್ ಶೀಲಿಂಧ್ರದ ಕಲ್ಚರನ್ನು ಹಾಕುವುದರಿಂದ ಬೆಳೆಗೆ ಶಿಫಾರಸ್ಸು ಮಾಡಿದ ರಂಜಕದ ಪ್ರಮಾಣದಲ್ಲಿ ಶೇ. 25 ರಷ್ಟು ಕಡಿಮೆ ಮಾಡಬಹುದು. ಪ್ರತಿ ಚೀಲದಲ್ಲಿ ಎರಡು ಬೀಜ ಬಿತ್ತನೆ ಮಾಡಿ, ಮೊಳಕೆಯೊಡೆದ ನಂತರ ಒಂದೇ ಸಸಿಯನ್ನು ಉಳಿಸಿಕೊಳ್ಳಬೇಕು.

ಬೇಸಾಯ ಕ್ರಮಗಳು: ಒಂದು ಎಕರೆಗೆ ಸುಮಾರು 100 ಗ್ರಾಂ ಬೀಜ ಸಾಕಾಗುತ್ತದೆ.

ನಾಟಿ ಮಾಡುವುದು ಮತ್ತು ನಂತರದ ಬೇಸಾಯ ಕ್ರಮಗಳು

ಬೆಳೆ ಪ್ರದೇಶವನ್ನು ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಿ, ಶಿಫಾರಸ್ಸು ಮಾಡಿದ ಅಂತರದಲ್ಲಿ 45 x 45 x 45 ಸೆಂ.ಮೀ. ಗಾತ್ರದ ಗುಣಿಗಳನ್ನು ತಯಾರಿಸಿ ಅವುಗಳಲ್ಲಿ ಮೇಲ್ಮಣ್ಣು ಮತ್ತು ಕಾಂಪೋಸ್ಟ್ಗಳ ಮಿಶ್ರಣವನ್ನು ಹಾಕಿ ತುಂಬಬೇಕು. ಒಂದೂವರೆಯಿAದ ಎರಡು ತಿಂಗಳ ವಯಸ್ಸಿನ ಸಸಿಗಳನ್ನು 1.8 ಮೀ * 1.8 ಮೀ (3086 ಗಿಡಗಳು ಪ್ರತಿ ಹೆಕ್ಟರಿಗೆ) ಅಂತರದಲ್ಲಿ ನಾಟಿ ಮಾಡಿ ಅವುಗಳಿಗೆ ಕೋಲಿನ ಆಸರೆ ಕೊಟ್ಟು ನೀರು ಹಾಯಿಸಬೇಕು. 

ಪ್ರತಿ ವರ್ಷಕ್ಕೆ ಪ್ರತಿ ಗಿಡಕ್ಕೆ ಒಟ್ಟು 250 ಗ್ರಾಂ ಸಾರಜನಕ, 250 ಗ್ರಾಂ ರಂಜಕ ಮತ್ತು 500 ಗ್ರಾಂ ಪೊಟ್ಯಾಷ್ ಅವಶ್ಯಕವಾಗಿರುತ್ತದೆ. ರಸಗೊಬ್ಬರಕ್ಕೆ ಹೆಚ್ಚುವರಿಯಾಗಿ ಪ್ರತಿ 6 ತಿಂಗಳಿಗೊಮ್ಮೆ ಪ್ರತಿ ಗಿಡಕ್ಕೆ 7-10 ಕೆ.ಜಿ. ಹಸಿರೆಲೆ ಗೊಬ್ಬರ ಒದಗಿಸಲು ಶಿಫಾರಸ್ಸು ಮಾಡಲಾಗಿದೆ. ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರಗಳನ್ನು ನಾಟಿ ಮಾಡಿದ ಎರಡನೇ ತಿಂಗಳಿನಿAದ ಪ್ರತಿ ಎರಡು ತಿಂಗಳಿಗೊಮ್ಮೆ ಆರು ಸಮ ಕಂತುಗಳಲ್ಲಿ ಒದಗಿಸಬೇಕು. ಸೂಕ್ಷ್ಮ ಪೋಷಕಾಂಶಗಳಾದ ಸತುವಿನ ಸಲ್ಫೇಟ್ ಶೇ. 0.5 ಹಾಗೂ ಬೋರಾನ್ ಶೇ. 0.1 ಅನ್ನು 4ನೇ ಮತ್ತು 8ನೇ ತಿಂಗಳಿನಲ್ಲಿ ಸಿಂಪಡಿಸುವುದರಿAದ ಇಳುವರಿಯನ್ನು ಹೆಚ್ಚಿಸಬಹುದು.

ಅಂತರ ಬೇಸಾಯ: ಆಳವಾದ ಉಳುಮೆ ಮಾಡಿ ಗುಂಡಿಗಳನ್ನು ತೆಗೆಯಬೇಕು. ಗಿಡಗಳ ಸುತ್ತಲೂ ಕಸ ಇರದಂತೆ ಯಾವಾಗಲೂ ನಿಗಾ ವಹಿಸಬೇಕು. ನಾಟಿ ಮಾಡಿದ 2 ತಿಂಗಳ ನಂತರ 750 ಗ್ರಾಂ ನಷ್ಟು ಅಲಾಕ್ಲೋರ್ ಕಳೆನಾಶಕ ಉಪಯೋಗಿಸಬಹುದು. ಎರಡು ಮೂರು ಸಾರಿ ಹರಗುವುದರಿಂದ ಸಾಲುಗಳ ಮಧ್ಯದ ಕಸವನ್ನು ತೆಗೆಯಬಹುದಲ್ಲದೇ ಮಣ್ಣನ್ನು ಏರಿಸುವುದರಿಂದ ಬೇರುಗಳಿಗೆ ಚೆನ್ನಾಗಿ ಗಾಳಿ ಆಡಲು ಸಹಾಯಕ.

ಅಂತರ ಬೆಳೆ: ಗಿಡ ನೆಟ್ಟು ಹಣ್ಣು ಬಿಡುವ ಮೊದಲ ತಿಂಗಳಿಂದ ಹಿಡಿದು ಆರು ತಿಂಗಳ ತನಕ ತೋಟದಲ್ಲಿ ಅಂತರ್  ಬೆಳೆಯಾಗಿ ಅಲ್ಪಾವಧಿ ತರಕಾರಿ (ಕುಂಬಳ ಜಾತಿಗೆ ಸೇರಿದ ತರಕಾರಿ ಹೊರತುಪಡಿಸಿ) ಬೆಳೆಗಳನ್ನು ಬೆಳೆಯಬಹುದು. ಒಮ್ಮೆ ಪಪಾಯ ಫಸಲು ಕೊಡಲು ಪ್ರಾರಂಭಿಸಿದ ಬಳಿಕ ಗಿಡದ ನೆರಳಿನಿಂದಾಗಿ ಅಂತರ ಬೆಳೆಯನ್ನು ಬೆಳೆಯುವುದು ಕಷ್ಟವಾಗುತ್ತದೆ. ಪಪಾಯವನ್ನು ಮಾವು, ಚಿಕ್ಕು ಇತ್ಯಾದಿ ತೋಟಗಳಲ್ಲಿ ಅಂತರ ಬೆಳೆಯಾಗಿ ಕೂಡ ಬೆಳೆಯಬಹುದು.

ನೀರಾವರಿ: ವೇಗವಾಗಿ ಹಣ್ಣುಗಳ ಬೆಳವಣಿಗೆಗೆ ಮತ್ತು ಉತ್ತಮ ಫಸಲಿಗಾಗಿ ಪಪಾಯ ಗಿಡಕ್ಕೆ ನಿರಂತರ ನೀರು ಬೇಕಾಗುತ್ತದೆ. ಬೇಸಿಗೆಯಲ್ಲಿ ವಾರಕೊಮ್ಮೆ ಮತ್ತು ಚಳಿಗಾಲದಲ್ಲಿ 8-10 ದಿನಗಳಿಗೊಮ್ಮೆ ನೀರು ಒದಗಿಸಬೇಕಾಗಿರುವುದು ಅವಶ್ಯಕ. ರಿಂಗ್ ಮತ್ತು ಹನಿ ನೀರಾವರಿ ವಿಧಾನಗಳು ಇದರ ನೀರಾವರಿಗೆ ಅತೀ ಯೋಗ್ಯವೆಂದು ಪರಿಗಣಿಸಲ್ಪಟ್ಟಿವೆ. ಪ್ರತಿ ಗಿಡಕ್ಕೆ ಪ್ರತಿ ದಿನಕ್ಕೆ ಹನಿ ನೀರಾವರಿ ಮೂಲಕ 6-8 ಲೀಟರ್ ನೀಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.

ಕೋಯ್ಲು ಮತ್ತು ಇಳುವರಿ:

ಈ ಹಣ್ಣಿನ ಕಟಾವು ಸಾಮಾನ್ಯವಾಗಿ ಬೀಜ ಬಿತ್ತನೆಯ 9-10 ತಿಂಗಳಲ್ಲಿ ಆರಂಭವಾಗುತ್ತದೆ. ಪೂರ್ಣವಾಗಿ ಬೆಳೆದ ಕಡು ಹಸಿರಿನ ತುದಿಯಲ್ಲಿ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದಾಗ ಹಣ್ಣುಗಳನ್ನು ಕಟಾವು ಮಾಡಬೇಕು. ಒಂದು ಸಾರಿ ನಾಟಿ  ಮಾಡಿದ ಪಪಾಯ ಗಿಡದಿಂದ 3 ವರ್ಷಗಳ ವರೆಗೆ ಇಳುವರಿ ಪಡೆಯಬಹುದು. ಪ್ರತಿ ಹೆಕ್ಟೇರಿಗೆ 75-100 ಟನ್‌ಗಳಷ್ಟು ಹಣ್ಣಿನ ಇಳುವರಿ ಪಡೆಯಬಹುದು.

ಸಸ್ಯ ಸಂರಕ್ಷಣೆ : ಹಿಟ್ಟುತಿಗಣೆ, ಸಸ್ಯಹೇನು ಮತ್ತು ಬಿಳಿನೋಣ: ಬಿಳಿ ಹಿಟ್ಟಿನಂತಹ ತಿಗಣೆಗಳು ಗುಂಪಾಗಿದು,್ದ ಎಲೆಗಳಿಂದ ರಸ ಹೀರುತ್ತವೆ. ಎಲೆಗಳು ಹಳದಿಯಾಗಿ ಒಣಗುತ್ತವೆ. ಸಸ್ಯಹೇನು ಎಲೆಗಳಿಂದ ರಸಹೀರುವುದರ ಜೊತೆಗೆ ನಂಜಾಣುರೋಗ ಹರಡುತ್ತದೆ.

ನಿರ್ವಹಣಾ ಕ್ರಮಗಳು:

1) ನರ್ಸರಿಯಲ್ಲಿ ನೈಲಾನ್ ಜಾಳಿಗೆಯನ್ನು ಉಪಯೋಗಿಸಿ, ಸ್ವಲ್ಪಮಟ್ಟಿಗೆ ಕೀಟಗಳನ್ನು ಹತೋಟಿಯಲ್ಲಿಡಬಹುದು.

2) ಸಸಿಗಳಿಗೆ / ಗಿಡಗಳಿಗೆ ತಪ್ಪದೇ 10-12 ದಿನ ಅಂತರದಲ್ಲಿ ಅಂತರವ್ಯಾಪಿ ಕೀಟನಾಶಕಗಳನ್ನು ಬಳಸುವುದು. ಉದಾ: 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಅಥವಾ 0.3 ಮಿ.ಲೀ ಇಮಿಡಾಕ್ಲೊಪ್ರಿಡ್ 17.8 ಎಸ್.ಎಲ್. ಅಥವಾ 0.2 ಗ್ರಾಂ. ಆಸಿಟಮಪ್ರೈಡ್ 20 ಎಸ್.ಪಿ. ಅಥವಾ 0.5 ಮಿ.ಲೀ. ಫಾಸ್ಪಾಮಿಡಾನ್ 40 ಎಸ್. ಎಲ್. ಅಥವಾ 1.0 ಗ್ರಾಂ ಅಸಿಫೇಟ್ 75 ಎಸ್.ಪಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

3) ಆಗಾಗ್ಗೆ ಕೀಟನಾಶಕಗಳ ಬದಲಿ, ಶೇಕಡಾ 5 ರ ಬೇವಿನ ಬೀಜದ ಕಷಾಯ ಸಿಂಪಡಿಸುವದು. ಇದರ ಬದಲಾಗಿ 1500 ಪಿ.ಪಿ.ಎಮ್. ಅಜಾಡಿರಕ್ಟಿನ್ 2 ಮಿ.ಲೀ. ಬೇವು ಮೂಲದ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಶೇ. 1 ರ ಬೇವಿನ ಎಣ್ಣೆ ಅಥವಾ ಶೇಂಗಾ ಎಣ್ಣೆ (10 ಮಿ. ಲೀ. / ಲೀಟರ್ ನೀರಿಗೆ) ಸಿಂಪರಿಸುವದರಿAದ ನಂಜಾಣು ಪ್ರಸಾರ ತಡೆಗಟ್ಟಬಹುದು. ಶಿಫಾರಸ್ಸಿನ ಕೀಟನಾಶಕದ ಜೊತೆಗೆ ಎಣ್ಣೆ ಸಿಂಪರಿಸುವುದರಿAದ ಹೆಚ್ಚಿನ ಹತೋಟಿ ಸಾಧ್ಯ

4) ಪಪಾಯ ತೋಟದ ಸುತ್ತ ಹತ್ತಿ, ಬದನೆ ಮತ್ತು ಕುಂಬಳ ಜಾತಿಯ ಬೆಳೆಗಳನ್ನು ಬೆಳೆಯಕೂಡದು.

  1. ಬೂದಿ ರೋಗ: ಬಿಳಿ ಹುಡಿ ಉದುರಿದಂತೆ ಎಲೆ ಹಾಗೂ ಕಾಯಿಗಳ ಮೇಲೆ ಕಂಡು ಬರುತ್ತದೆ.
  • ಹತೋಟಿ: ಹೆಕ್ಸಾಕೋನಾಜೋಲ (ಕಾನ್ಟಾಫ್) 1 ಮಿ.ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
  1. ಎಲೆ ಚುಕ್ಕಿ ಹಾಗೂ ಚಿಬ್ಬು ರೋಗ: ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡು ಬಂದು ವೃದ್ಧಿ ಗೊಂಡು ತೀವ್ರವಾಗಿ ಎಲೆ ಸುಟ್ಟಂತೆ ಕಾಣುತ್ತದೆ. ಹಣ್ಣುಗಳ ಮೇಲೂ ಚುಕ್ಕೆ ಕಂಡು ಬಂದು ಮಾಗುವ ಹಂತದಲ್ಲಿ ತೀವ್ರವಾಗಿ ಹಬ್ಬಿ, ಹಣ್ಣು ಕೊಳೆಯುವಂತೆ ಮಾಡುತ್ತದೆ.
  • ಹತೋಟಿ: 2 ಗ್ರಾಂ ಮ್ಯಾಂಕೋಜೆಬ್ ಅಥವಾ 1 ಗ್ರಾಂ ಥಯೋಫಿನೈಟ್ ಮೀಥೈಲ ಅಥವಾ ಕವಚ್ 1 ಲೀ.  ನೀರಿನಲ್ಲಿ ಬೆರೆಸಿ ಸಿಂಪಡಿಸಿ.
  1. ನಂಜಾಣು ರೋಗ

ಎಲೆಗಳ ಮೇಲೆ ಕಾಯಿಗಳ ಮೇಲೆ ಉಂಗುರಾಕಾರದ ಮಚ್ಚೆಗಳು ಕಾಣುತ್ತವೆ. ಇದನ್ನು ಉಂಗುರಾಕಾರದ ನಂಜಾಣು ರೋಗ ಎನ್ನುತ್ತಾರೆ. ಕಪ್ಪು ಹೇನು ಹರಡುವ ವೈರಸ್‌ನಿಂದಾಗಿ ಈ ರೋಗ ಉಲ್ಬಣಗೊಳ್ಳುತ್ತದೆ. ಇಲಿ ಬಾಲದಂತೆ ಎಲೆಗಳು ವಿಕಾರಗೊಳ್ಳುತ್ತದೆ.

ಹತೋಟಿ:

  • ನಾಟಿ ಮಾಡಲು ಮೊಸಾಯಿಕ್ ನಂಜುರೋಗ ಮತ್ತು ಎಲೆ ಮುರುಟು ರೋಗದಿಂದ ಮುಕ್ತವಾದ ಸಸಿಗಳನ್ನು ಉಪಯೋಗಿಸಬೇಕು. ಸಸಿಗಳನ್ನು ನರ್ಸರಿಯಲ್ಲಿ ನೈಲಾನ್ ಜಾಳಿಗೆಯಲ್ಲಿ ಬೆಳೆಯುವುದರಿಂದ ರೋಗ ಹರಡುವ ಕೀಟಗಳನ್ನು ಹತೋಟಿಯಲ್ಲಿಡಬಹುದು. ಜೂನ್–ಜುಲೈ ತಿಂಗಳುಗಳಲ್ಲಿ ನಾಟಿ ಮಾಡುವುದರಿಂದ ರೋಗದ ತೀವ್ರತೆ ಕಡಿಮೆಯಾಗುತ್ತದೆ.
  • ಗಡಿ ಬೆಳೆಗಳನ್ನು (ಬಾರ್ಡರ್ ಕ್ರಾಪ್) ಬೆಳೆಯುವ ಮೂಲಕ ಅಂದರೆ ಅಗಸಿ ಅಥವಾ ಹರಳು (ಹರಳೆಣ್ಣೆ ಕಾಯಿ) ಬೆಳೆಗಳನ್ನು ಪಪಾಯ ನಾಟಿ ಮಾಡುವ 15 ದಿನಗಳ ಮೊದಲು ಬೆಳೆಯುವ ಮೂಲಕ ರೋಗವನ್ನು ನಿಯಂತ್ರಿಸಬಹುದು.
  • ರೋಗ ಗ್ರಸ್ಥ ಗಿಡಗಳನ್ನು ಕಿತ್ತು ಸುಡಬೇಕಲ್ಲದೇ, ರೋಗ ತಗುಲಿದ ಗಿಡದ ಅಕ್ಕ ಪಕ್ಕದ ಎಲ್ಲಾ ಗಿಡಗಳಿಗೂ ಸಿಂಪರಣೆ ಕೈಗೊಳ್ಳಬೇಕು ಮತ್ತು ಕೀಟದ ನಿರ್ವಹಣೆಗಾಗಿ, ಅಂತರವ್ಯಾಪಿ ಕೀಟನಾಶಕಗಳಾದ ರೋಗಾರ್ (2 ಮಿ.ಲೀ.) ಅಥವಾ ಇಮಿಡಾಕ್ಲೋಪ್ರಿಡ್ (0.3 ಮಿ.ಲೀ.) ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಲೇಖನ: ಹೀನಾ. ಎಮ್. ಎಸ್. 7019095720, ರವಿ ವೈ, ಸಂತೋಷ ಶಿಂಧೆ ಮತ್ತು ಎಸ್. ಎಸ್. ಅಂಜುಮ್ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಇಂಡಿ

Published On: 18 July 2021, 10:17 PM English Summary: Modern farming techniques of papaya crop

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.