ಮಾವಿಗೆ ಹಲವಾರು ಕೀಟಗಳ ಸಮಸ್ಯೆಯಿದ್ದು, ಅವುಗಳಲ್ಲಿ ಹಣ್ಣು ನೊಣದ ಬಾಧೆ ಪ್ರಮುಖವಾಗಿದೆ. ಆದ್ದರಿಂದ ಮಾವು ಬೆಳೆಗಾರರು ನಿರ್ವಹಣೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಮನವಿ ಮಾಡಿದ್ದಾರೆ.
ಹಣ್ಣುನೊಣದ ಬಾಧೆಯಿಂದ ಸುಮಾರು ಶೇ.25.31ರಷ್ಟು ಇಳುವರಿಯಲ್ಲಿ ನಷ್ಟ ಕಾಣಬಹುದು. ಮಾವು ಬೆಳೆಗಾರರು ಹಣ್ಣುನೊಣದ ಬಾಧೆಯ ಜೊತೆಗೆ ಓಟೆಕೊರಕ ಹಾಗೂ ಕೀಟನಾಶಕ ಅವಶೇಷಗಳ ಕಾರಣದಿಂದಾಗಿ ಕೆಲವು ರಾಷ್ಟ್ರಗಳಿಗೆ ರಫ್ತು ಮಾಡಲು ಸಾದ್ಯವಾಗುತ್ತಿಲ್ಲ. ಕಾರಣ ವಹಿವಾಟಿನಲ್ಲಿ ನಷ್ಟವನ್ನನುಭವಿಸುತ್ತಿದ್ದಾರೆ. ಜೊತೆಗೆ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಸಹ ಸರಿಯಾದ ಬೆಲೆ ಸಿಗದೆ ಕಷ್ಟವನ್ನನುಭವಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ಮಾವು ಬೆಳೆಯಲ್ಲಿ ಹಣ್ಣು ನೊಣದ ನಿರ್ವಹಣೆ ಬಹಳ ಮುಖ್ಯವಾಗಿರುತ್ತದೆ.
ಹಣ್ಣುನೊಣವು ಕೇವಲ ಹಣ್ಣುಗಳು ಮಾತ್ರವಲ್ಲದೇತರಕಾರಿ ಬೆಳೆಗಳಿಗೂ ಬಾಧೆಯನ್ನು ಮಾಡಿ ಹೆಚ್ಚು ನಷ್ಟವನ್ನುಂಟು ಮಾಡುವಕೀಟವಾಗಿದೆ. ಈ ಕೀಟವು'ಡಿಪ್ತೆರ'ಗಣಕ್ಕೆ ಸೇರಿದ್ದು ಹಲವಾರು ಜಾತಿಗಳನ್ನು ಹೊಂದಿದೆ. ಹಣ್ಣುನೊಣಗಳು ನೇರವಾಗಿ ಹಣ್ಣನ್ನುತಿಂದು ಹಾನಿ ಮಾಡುವದಕ್ಕಿಂತ ಹೆಚ್ಚು ಪರೋಕ್ಷವಾಗಿ ನಷ್ಟವನುಂಟು ಮಾಡುತ್ತದೆ.
ಜೀವನಚಕ್ರ: ಈ ಕೀಟವು ಮಾವು ಬೆಳೆಯ ಜೊತೆಗೆ ಇನ್ನು ಹಲವಾರು ಬೆಳೆಗಳನ್ನ ಅವಲಂಬಿಸಿರುತ್ತದೆ. ಉದಾ: ಬಾಳೆ, ನಿಂಬೆ ಜಾತಿಯ ಹಣ್ಣುಗಳು, ಟೊಮ್ಯಾಟೊ, ಪೇರಲ, ಸೀತಾಫಲ ಹಾಗೂ ಇನ್ನು ಹಲವು. ಈ ಕೀಟವು ಸುಮಾರು 10-13 ವಾರಗಳ ಜೀವನಚಕ್ರವನ್ನು ಹೊಂದಿದ್ದು ಪ್ರೌಢ ಹೆಣ್ಣುಕೀಟವು ಮೊಟ್ಟೆಗಳನ್ನು ಹಣ್ಣಿನ ಸಿಪ್ಪೆಯ ಮೇಲೆ ಸಿಕ್ಕಿಸುತ್ತದೆ. ನಂತರ ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ಹಣ್ಣಿನ ತಿರುಳನ್ನು ತಿಂದು ಹಾನಿ ಮಾಡುತ್ತವೆ, ನಂತರ ಬಾಧಿತ ಹಣ್ಣುಗಳು ನೆಲಕ್ಕೆ ಬಿದ್ದು ಮರಿ ಕೀಟಗಳು ಅಲ್ಲೇ ಕೋಶಾವಸ್ಥೆಗೆ (10-15 ದಿನ) ತೆರಳಿ ನಂತರಕೋಶದಿಂದ ಹೊರಬಂದಪ್ರೌಢ ಕೀಟಗಳು ಹೊಸ ಹಣ್ಣುಗಳನ್ನು ಹುಡುಕಿ ಬಾಧೆಯನ್ನು ಮಾಡುತ್ತವೆ.
ಬಾಧೆಯ ಲಕ್ಷಣಗಳು: ಈ ಕೀಟದ ಬಾಧೆ ಹಣ್ಣುಗಳು ದ್ವಾರಗಾಯಿಅಥವಾ ಮಾಗಿರುವ ಹಂತದಲ್ಲಿರುವಾಗ ಕಂಡುಬರುತ್ತದೆ. ಪ್ರೌಢಕೀಟ ಮೊಟ್ಟೆಯನ್ನಿಟ್ಟಾಗ, ಆ ಸ್ಥಳದಲ್ಲಿ ಸೂಕ್ಷ್ಮಾಣು ಜೀವಿಗಳು ಒಳಸೇರಿ ಹಣ್ಣುಗಳನ್ನು ಕೊಳೆಸಲಾರಂಭಿಸುತ್ತದೆ. ನಂತರ ಹಣ್ಣುಗಳು ಕೊಳೆತು ಮರದಿಂದ ಉದುರುವುದನ್ನು ಕಾಣಬಹುದು. ಬಾಧಿತ ಹಣ್ಣಿನಿಂದಅಂಟುದ್ರವ ಹೊರಬರುವುದನ್ನುಕಾಣಬಹುದು ಬಾಧಿತ ಹಣ್ಣುಗಳ ಮೇಲೆ ಕಂದು ಮಚ್ಚೆಗಳನ್ನು ಕಾಣಬಹುದುಜೊತೆಗೆ ಕೆಲವು ಸಂದರ್ಭದಲ್ಲಿ ಹಣ್ಣುಗಳು ವಿರೂಪಗೊಳ್ಳುವುದನ್ನು ಕಾಣಬಹುದು.
ಸಮಗ್ರಕೀಟ ನಿರ್ವಹಣಾ ಕ್ರಮಗಳು: ಬಾಧೆಗೊಳಪಟ್ಟ ಹಣ್ಣುಗಳನ್ನು 15 ದಿನಗಳಿಗೊಮ್ಮೆ ಆರಿಸಿ ನಾಶಪಡಿಸುವುದು. ತೋಟದಲ್ಲಿನ ಮರದ ಬುಡದಲ್ಲಿನ ಮಣ್ಣನ್ನು ಸಡಿಲಗೊಳಿಸುವುದು ಅಥವಾ ಬೇಸಿಗೆ ಉಳುಮೆ ಮಾಡುವುದು. ಸರಿಯಾದ ಸಮಯಕ್ಕೆ ಹಣ್ಣುಗಳನ್ನು ಕೊಯ್ಲು ಮಾಡಬೇಕು (ಪೂರ್ತಿ ಮಾಗಿದ ಹಣ್ಣುಗಳಿಗೆ ಹಣ್ಣುನೊಣದ ಬಾಧೆ ಹೆಚ್ಚಾಗಿರುತ್ತದೆ).ಕಡಿಮೆ ಮರಗಳಿದ್ದರೆ ಹಣ್ಣುಗಳಿಗೆ ಪೇಪರ್ ಬ್ಯಾಗ್ ಹಾಕಿ ಹಣ್ಣುಗಳನ್ನು ಬಾಧೆಯಿಂದಕಾಪಾಡಬಹುದು. ಕೋಯ್ಲಿನ 15 ರಿಂದ 20 ದಿನಗಳ ಮುಂಚೆ ಡೆಕಾಮೆಥ್ರಿನ್ 2.8 ಇ.ಸಿ. 0.5 ಮಿಲೀ + ಅಜಾಡಿರಾಕ್ಟಿನ್ 2 ಮಿ.ಲೀ/ಲೀ ಸಿಂಪಡಿಸಬೇಕು. ಬಾಧೆತೀವ್ರವಾಗಿದ್ದಾಗಅಥವಾ ಹಣ್ಣುನೊಣಗಳು ಹೆಚ್ಚಿದ್ದಾಗ 100 ಗ್ರಾಂ ಬೆಲ್ಲ + 2 ಮಿ.ಲೀ. ಡೆಲ್ಟಾಮೆಥ್ರಿನ್ 2.8 ಇ.ಸಿ. ಯನ್ನುಒಂದು ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ 7 ದಿನಗಳಿಗೊಮ್ಮೆ ಕಾಂಡದ ಮೇಲೆ ಸಿಂಪಡಿಸಬೇಕು. ಪ್ರತೀ ಹೆಕ್ಟರ್ ಪ್ರದೇಶದಲ್ಲಿ 10 ಮೋಹಕ ಬಲೆಗಳನ್ನು ಹಾಕಬೇಕು, ಈ ಬಲೆಗಳಲ್ಲಿ ಪ್ರತೀ ಲೀ. ನೀರಿನಲ್ಲಿ 1 ಮಿ.ಲೀ ಮೀಥೈಲ್‍ಯುಜಿನಾಲ್ ಮತ್ತು 1 ಮಿ.ಲೀ ಡೈಕ್ಲೋರೊವಾಸ್ 76 ಇ.ಸಿ. ಅಥವಾ 1 ಮಿ.ಲೀ ಮಲಾಥಿಯಾನ್ 50 ಇ.ಸಿ. ಬೆರಸಿದ ದ್ರಾವಣ ಬಳಸಬೇಕು ಅಥವಾ 1.7 ಮಿ.ಲೀ ಡೈಮಿಥೋಯೇಟ್ 30 ಇ.ಸಿಯನ್ನು 10 ಗ್ರಾಂ ಬೆಲ್ಲದೊಂದಿಗೆ ಕರಗಿಸಿ ಹಣ್ಣು ಮಾಗುವ ಅವಧಿಯಲ್ಲಿ ಸಿಂಪರಣೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ದೇವಿಹೊಸೂರು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾಕೇಂದ್ರ ಕೀಟಶಾಸ್ತ್ರ ವಿಭಾಗ ಡಾ.ವಿನಯಕುಮಾರ್ (9164405294) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
Share your comments