1. ಆರೋಗ್ಯ ಜೀವನ

ಬಾಣಂತಿಯರ ಮೈಕೈಗೆ ಶಕ್ತಿ ತುಂಬವ ಅಳಿವೆ ಬೀಜ ಬೆಳೆಯೋರೇ ಕಮ್ಮಿ!

KJ Staff
KJ Staff
common cress seed

ಅಳಿವೆ ಬೀಜ... ಈ ಹೆಸರು ಕೇಳಿದೊಡನೆ ಮಹಿಳೆಯರು ಅಲರ್ಟ್ ಆಗುತ್ತಾರೆ. ಕೆಲವರು ಕಣ್ಣರಳಿಸಿ ನಕ್ಕರೆ, ಮತ್ತೆ ಕೆಲವರು ಹುಳಿ ಕುಡಿದು ವಾಕರಿಕೆ ಬಂದವರಂತೆ ಮುಖ ಕಿವುಚಿಕೊಳ್ಳುತ್ತಾರೆ. ಇನ್ನೂ ಕೆಲವರು ತಾವು ತಾಯಿಯಾಗಿ ಸಂಭ್ರಮಿಸಿದ ಆ ಕ್ಷಣದ ನೆನಪುಗಳಲ್ಲಿ ತೇಲಿ ಹೋಗುತ್ತಾರೆ. ಅಂದಹಾಗೆ ಬಹುತೇಕ ಮಹಿಳೆಯರಿಗೆ ಅದರಲ್ಲೂ ಹಳ್ಳಿಗಳಲ್ಲಿ, ತವರು ಮನೆಯಲ್ಲಿ ಹೆರಿಗೆಯ ದಿನಗಳನ್ನು ಕಳೆದವರಿಗೆ ಅಳಿವೆ ಬೀಜ ಅಂದಕೂಡಲೆ ನೆನಪಾಗುವುದು ತಾವು ಬಾಣಂತಿಯಾಗಿದ್ದ ದಿನಗಳು.

ಕನ್ನಡದಲ್ಲಿ ಅಳಿವೆ, ಅಳವೆ, ಆಳ್ವೆ, ಆಳಿವೆ, ಸಂಸ್ಕೃತದಲ್ಲಿ ನಂದಿನಿ, ಚಂದ್ರಿಕಾ, ಚಂದ್ರಸೂರ, ಹಿಂದಿಯಲ್ಲಿ ಹಲೀಮ್, ಮರಾಠಿಯಲ್ಲಿ ಅಳಿವರ್ಚಿ ಮತ್ತು ಆಂಗ್ಲಭಾಷೆಯಲ್ಲಿ ಗಾರ್ಡನ್ ಕ್ರೆಸ್ ಅಥವಾ ಕಾಮನ್ ಕ್ರೆಸ್ ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಬೀಜದ ಮಹತ್ವ ಬಲ್ಲವರೇ ಬಲ್ಲರು. ನಾಟಿ ವೈದ್ಯ ಪದ್ಧತಿ, ಆಯುರ್ವೇದ ವಿಜ್ಞಾನದಲ್ಲಿ ಅಳಿವೆಗೆ ಎಲ್ಲಿಲ್ಲದ ಮಹತ್ವವಿದೆ. ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದ್ದರೂ, ಈ ಬೀಜಗಳ ಲಭ್ಯತೆ ಕಡಿಮೆ ಇರುವ ಕಾರಣ ಬಾಣಂತಿಯರಿಗೆ ಮಾತ್ರ ಅಳಿವೆ ಬೀಜದ ಆಹಾರ ಮಾಡಿ ತಿನಿಸುತ್ತಾರೆ.

ಬೆಳೆಯುವವರು ಕಡಿಮೆ

ನೋಡಲು ಅಗಸೆ ಬೀಜಗಳಂತೆ ಕಾಣುವ ಅಳಿವೆ ಬೀಜಗಳನ್ನು ಈಗ ಬೆಳೆಯುವುದು ತೀರಾ ಕಡಿಮೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಒಣ ಬೇಸಾಯ ಮಾಡುವ ರೈತರ ಮನೆಗಳಲ್ಲಿ ಅಳಿವೆ ಬೀಜಗಳು ಕಾಣಸಿಗುತ್ತವೆ. ಇತ್ತ ಬಯಲು ಸೀಮೆಯ ಹಳ್ಳಿ ಮನೆಗಳಲ್ಲೂ ಅಳಿವೆ ಬೀಜಗಳ ಬಳಕೆ ಇದೆ. ಆದರೆ ಮೊದಲೇ ಹೇಳಿದಂತೆ ಮನೆ ಮಗಳಿಗೆ ಮಗುವಾದಾಗ ಮಾತ್ರ ಈ ಬೀಜಗಳು ಡಬ್ಬಿಯಿಂದ ಹೊರಗೆ ಬರುತ್ತವೆ. ಅಲ್ಲಿವರೆಗೆ ಕಪಾಟು ಇಲ್ಲವೇ ಬೀರುವಿನಲ್ಲಿ ಭದ್ರವಾಗಿ ಇರಿಸಲಾಗಿರುತ್ತದೆ. ಕೆಲವು ದಿನಸಿ ಅಂಗಡಿಗಳಲ್ಲಿಯೂ ಇವು ಸಿಗುತ್ತವೆ. ಆದರೆ, ಅಗಸೆ ಬೀಜದಂತೆ ಕಾಣುವುದರಿಂದ ಬಹಳಷ್ಟು ಮಂದಿ ಇವುಗಳನ್ನು ಕಂಡುಹಿಡಿಯುವಲ್ಲಿ ಎಡವುತ್ತಾರೆ.

ಬಾಣಂತಿಯರ ಧಾನ್ಯ

ಅತ್ಯಂತ ಪೌಷ್ಠಿಕ ಧಾನ್ಯವಾಗಿರುವ ಅಳಿವೆಯನ್ನು ಬಾಣಂತಿಯರ ಧಾನ್ಯ ಎಂದೂ ಕರೆಯುತ್ತಾರೆ. ಹೆರಿಗೆಯ ಬಳಿಕ ಬಾಣಂತಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸೊಂಟ ನೋವು ನಿವಾರಿಸಲು ಅಳಿವೆ ಬೀಜಗಳಿಂದ ತಯಾರಿಸಿದ ಆಹಾರ (ಪಾಯಸ, ಉಂಡೆ, ಲಡ್ಡು) ನೀಡಲಾಗುತ್ತದೆ. ಸೊಂಟದ ಕೆಳಭಾಗದಲ್ಲಿ ಇರುವ ಶ್ರೋಣಿಯ ಸ್ನಾಯುಗಳಿಗೆ (ಪೆಲ್ವಿಕ್ ಮಸಲ್ಸ್) ಶಕ್ತಿ ತುಂಬುವಲ್ಲಿ ಅಳಿವೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ತಾಯಂದಿರ ಎದೆಹಾಲು ಹೆಚ್ಚಿಸುವುದು ಈ ಅಳಿವೆಯ ವಿಶೇಷ ಗುಣವಾಗಿದೆ.

ಹಿಂದೆಲ್ಲಾ ಅಜ್ಜಿಯರು ಮೊಮ್ಮಕ್ಕಳ ಬಾಣಂತನ ಮಾಡುವಾಗ ಒಂದು ದಿನ ಕೂಡ ಈ ಅಳಿವೆಯ ಆಹಾರ ತಪ್ಪುತ್ತಿರಲಿಲ್ಲ. ಬೆಳ್ಳಂ ಬೆಳಗ್ಗೆಯೇ ನೀರಿನ ದೊಡ್ಡ ಲೋಟ ಒಂದಕ್ಕೆ ಅಳಿವೆ ಸುರಿದು, ಹಾಲು, ತುಪ್ಪ ಬೆರೆಸಿ ಸ್ವಲ್ಪ ಬಿಸಿ ಇರುವಂತೆಯೇ ಲೋಟವನ್ನು ಬಾಣಂತಿ ಮೊಮ್ಮಗಳ ಕೈಗೆ ತಂದಿಡುತ್ತಿದ್ದ ಅಜ್ಜಿ, ‘ಕಣ್ ಮುಚ್ಕೊಂಡು ಕುಡಿಯವ್ವಾ’ ಎಂದು ಹೇಳುತ್ತಿದ್ದರಂತೆ. ಅಳಿವೆ ರಸದ ಲೇಟ ಮೇಲೆತ್ತಿದರೆ ಖಾಲಿ ಆದ ನಂತರವೇ ಇಳಿಸಬೇಕು ಎಂಬ ಅಲಿಖಿತ ನಿಯಮವೂ ಇತ್ತಂತೆ. ಈಗಿನ ಬಾಣಂತಿಯರು ಆ ಸಂಪ್ರದಾಯಗಳನ್ನೆಲ್ಲಾ ಪಾಲಿಸುವುದಿಲ್ಲ. ಆದರೆ, ಅಳಿವೆ ರಸ ಕುಡಿಯುವುದ ಬಿಡುವುದಿಲ್ಲ. ಕೆಲವರಿಗೆ  ಇದು ಅಚ್ಚುಮೆಚ್ಚಾದರೆ, ಇನ್ನೂ ಕೆಲವರಿಗೆ ಒಂಚೂರೂ ಇಷ್ಟವಾಗುವುದಿಲ್ಲ.

ಖನಿಜದ ಆಗರ ಅಳಿವೆ

ಅಳಿವೆ ಬೀಜಗಳಲ್ಲಿ ಖನಿಜದ ಅಂಶ ಯಥೇಚ್ಚವಾಗಿರುತ್ತದೆ. ಇದು ಲವಣ ಹಾಗೂ ವಿಟಮಿನ್‌ನ ಆಗರವೂ ಹೌದು. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗುವ ಅಳಿವೆ, ದೇಹಕ್ಕೆ ಶಕ್ತಿ ಒದಗಿಸುವುದು ಮಾತ್ರವಲ್ಲದೆ, ಹೀಮೋಗ್ಲೋಬಿನ್ ಪ್ರಮಾಣ ವೃದ್ಧಿಸುವಲ್ಲಿ ನೆರವಾಗುತ್ತದೆ. ಇದರ ಸೇವನೆಯಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ. ಒಂದು ಟೀ ಚಮಚ ಅಳಿವೆ ಬೀಜಗಳನ್ನು ಚೆನ್ನಾಗಿ ತೊಳೆದು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಎದ್ದ ನಂತರ 15 ನಿಮಿಷಗಳ ಕಾಲ ಒಲೆ ಮೇಲಿಟ್ಟು ಕುದಿಸಿ, ಹಾಲು ಮತ್ತು ತುಪ್ಪ, ಸಕ್ಕರೆ ಅಥವಾ ಬೆಲ್ಲ ಬೆರೆಸಿ ಸೇವಿಸಬೇಕು (ಸಿಹಿ ತಿನ್ನದವರು ಸಕ್ಕರೆ, ಬೆಲ್ಲ ಬೆರೆಸದೆ ಸೇವಿಸಬಹುದು). ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಪ್ರಯೋಜನಗಳು ಹೆಚ್ಚು. ಬಾಣಂತಿಯರು ಮಾತ್ರವಲ್ಲದೆ ಯಾರುಬೇಕಾದರೂ ಅಳಿವೆ ಆಹಾರ ಸೇವಿಸಬಹುದು. ಆದರೆ ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಎಂಬ ಮಾತು ನೆನಪಲ್ಲಿ ಇರಬೇಕು.

ಬಿಕ್ಕಳಿಕೆ ನಿಲ್ಲಿಸುತ್ತೆ

ಕೆಲವರಿಗೆ ಬಿಕ್ಕಳಿಗೆ ಹತ್ತಿದರೆ ನಿಲ್ಲವುದೇ ಇಲ್ಲ. ಗಂಟೆಗಟ್ಟಲೆ ಬಿಕ್ಕಳಿಸುತ್ತಲೇ ಇರುತ್ತಾರೆ. ನೀರು ಕುಡಿಯುವುದು, ಉಸಿರು ಬಿಗಿ ಹಿಡಿಯುವುದು, ಹೊಟ್ಟೆ ಕೆಳಗೆ ನಾಡಿ ಮಲಗುವುದು ಸೇರಿ ಯಾವುದೇ ಉಪಾಯ ಮಾಡಿದರೂ ಬಿಕ್ಕಳಿಕೆ ನಿರಂತರವಾಗಿರುತ್ತವೆ. ಅಂತಹ ಸಂದರ್ಭದಲ್ಲಿ ಹೆಚ್ಚು ನುಣ್ಣಗೆ ಆಗದ ರೀತಿಯಲ್ಲಿ ಪುಡಿ ಮಾಡಿಟ್ಟ ಅಳಿವೆ ಬೀಜಗಳನ್ನು ಕಾಲು ಲೀಟರ್ ನೀರಿಗೆ ಬೆರೆಸಿ, 30ರಿಂದ 45 ನಿಮಿಷಗಳ ಕಾಲ ನೆನೆಸಿಡಬೇಕು. ಬಳಿಕ ಸ್ವಲ್ಪ ಗಟ್ಟಿಯಾಗುವ ಅಳಿವೆ ಪುಡಿಯನ್ನು ಎರಡು ಸ್ಪೂನ್ ತಿನಿಸಿದರೆ ಬಿಕ್ಕಳಿಕೆ ನಿಲ್ಲುತ್ತವೆ. ಉರಿ ಬಿಕ್ಕಳಿಕೆಗೆ ಇದು ರಾಮ ಬಾಣ ಎನ್ನಲಾಗುತ್ತದೆ.

ಸಂದು ನೋವಾದಾಗ, ದೇಹದ ಯಾವುದೇ ಅಂಗಕ್ಕೆ ಹೊರಗಿನಿಂದ ಪೆಟ್ಟು ಬಿದ್ದ ರಕ್ತ ಹೆಪ್ಪುಗಟ್ಟಿದಾಗ ಅಳಿವೆ ಬೀಜಗಳನ್ನು ನೀರಿನಲ್ಲಿ ಅರೆದು, ಪೆಟ್ಟು ಬಿದ್ದ ಸ್ಥಳಕ್ಕೆ ಲೇಪಿಸಬೇಕು. ಇದರಿಂದ ತಕ್ಷಣವೇ ಹೆಪ್ಪುಗಟ್ಟಿದ ರಕ್ತ ಸರಿ ಹೋಗುತ್ತದೆ ಮತ್ತು ಸಂದು ನೋವು ಕೂಡ ಕಡಿಮೆಯಾಗುತ್ತದೆ. ಶಕ್ತಿವರ್ಧಕವಾಗಿರುವ ಅಳಿವೆ, ಕರುಳಿನ ಆರೋಗ್ಯ ಕಾಪಾಡುವ ಗುಣ ಹೊಂದಿದೆ. ಅಳಿವೆ ಸೇವನೆಯಿಂದ ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ. ಚರ್ಮದ ಸೌಂದರ್ಯ ಹೆಚ್ಚುತ್ತದೆ.

ಅಳಿವೆ ಪಾಯಸ

100 ಎಂ.ಎಲ್ ಹಾಲನ್ನು ಒಲೆ ಮೇಲೆ ಕುದಿಯಲು ಇಟ್ಟು, ಹಾಲು ಸ್ವಲ್ಪ ಕುದಿ ಬಂದ ನಂತರ ಅದಕ್ಕೆ 10 ಗ್ರಾಂ. ಅಳಿವೆ ಬೀಜ ಇಲ್ಲವೇ ಅಷ್ಟೇ ಪ್ರಮಾಣದ ಅಳಿವೆ ಬೀಜದ ಪುಡಿಯನ್ನು ಹಾಕಬೇಕು. ಸಿಹಿಗಾಗಿ ಅಗತ್ಯದಷ್ಟು ಬೆಲ್ಲ (ಸಾಮಾನ್ಯವಾಗಿ 10-20 ಗ್ರಾಂ.) ಹಾಕಿ ಚೆನ್ನಾಗಿ ಕುದಿಸಿದರೆ ಅಳಿವೆ ಪಾಯಸ ಸಿದ್ಧವಾಗುತ್ತದೆ. ಶಕ್ತಿ ವರ್ಧಕ ಹಾಗೂ ಆರೋಗ್ಯ ವರ್ಧಕವಾಗಿರುವ ಈ ಪಾಯಸವನ್ನು ಯಾರುಬೇಕಾದರೂ ಕುಡಿಯಬಹುದು. ಅಳಿವೆ ಪಾಯಸವನ್ನು ಬಾಣಂತಿಯರ ಪಾಯಸ ಎಂದೂ ಕರೆಯುತ್ತಾರೆ.

Published On: 05 June 2021, 05:35 PM English Summary: Do you know the common Cress seed?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.