1. ಪಶುಸಂಗೋಪನೆ

ಮುದ್ದೆ ಚರ್ಮ ರೋಗಕ್ಕೆ ರೈತರು ಭಯಪಡಬಾರದು, ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ

ಪಶುಸಂಗೋಪನೆ ಹಾಗೂ ಹೈನುಗಾರಿಕೆ ಉದ್ಯಮಕ್ಕೆ ಸಾಂಕ್ರಾಮಿಕ ರೋಗವಾದ ಮುದ್ದೆ ಚರ್ಮ ವೈರಸ್‍ರೋಗ (Lumpy Skin Disease) ಭೀತಿ ಎದುರಾಗಿದೆ. ರೈತರು ಮುಂಜಾಗ್ರತಾ ಹಾಗೂ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಜಾನುವಾರುಗಳ ಮಾಲೀಕರು ಈ ರೋಗದ ಬಗ್ಗೆ ಭಯಪಡದೇ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ ರೋಗಗ್ರಸ್ಥ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಯಾವುದೇ ರೀತಿಯ ಹಾನಿಯಿಂದ ತಡೆಯಬಹುದಾಗಿದೆ. ನೆರೆಯ ರಾಜ್ಯಗಳಿಂದ ಹರಡಿರುವ ಈ ರೋಗವು ಜಾನುವಾರಗಳ ಹಾಲಿನ ಇಳುವರಿ ಕಡಿಮೆ ಮಾಡುತ್ತದೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆ ಮೊದಲು ಒರಿಸ್ಸಾದಲ್ಲಿ ಕಂಡುಬಂದು, ಆ ನಂತರ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಹಾಗೂ ಯಾದಗಿರಿ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಗೆ ಲಗ್ಗೆ ಇಟ್ಟಿದೆ. ಈ ಸಾಂಕ್ರಾಮಿಕ ವೈರಸ್ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಜಾನುವಾರುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದೆ.

       ರೋಗದ ಲಕ್ಷಣಗಳು ಇಂತಿವೆ. ಕ್ಯಾಪ್ರಿ ಪಾಕ್ಸ್ ವೈರಸ್‍ನಿಂದ ಬರುವ ರೋಗವು ಎತ್ತು, ಆಕಳು, ಎಮ್ಮೆ ಮತ್ತು ಕರುಗಳಲ್ಲಿ ಮಾತ್ರ ಕಾಣಿಸುತ್ತದೆ. ಈ ವೈರಾಣು ನೊಣ, ಸೊಳ್ಳೆ ಹಾಗೂ ಉಣ್ಣೆ ಕಚ್ಚುವ ಮೂಲಕ ಒಂದು ಜಾನುವಾರದಿಂದ ಇನ್ನೊಂದು ಜಾನುವಾರಕ್ಕೆ ಹರಡುತ್ತದೆ. ಮಿಶ್ರತಳಿಗಳು ಹಾಗೂ ಹೆಚ್ಚು ಹಾಲು ಕೊಡುವ ಆಕಳು ಮತ್ತು ಕರುಗಳಿಗೆ ಅತಿ ಹೆಚ್ಚಾಗಿ ಈ ರೋಗ ಭಾದಿಸುತ್ತದೆ. ಲಂಪಿ ಸ್ಕಿನ್ ಡಿಸೀಸ್ ಎಂದು ಕರೆಯಲ್ಪಡುವ ಈ ವೈರಸ್ ರೋಗ ಅತಿ ವೇಗವಾಗಿ ಒಂದು ಜಾನುವಾರದಿಂದ ಇನ್ನೊಂದು ಜಾನುವಾರಕ್ಕೆ ಹರಡುತ್ತದೆ. 2-3 ದಿನಗಳವರೆಗೆ ಸಾಧಾರಣ ಜ್ವರ, ನಂತರ ಜಾನುವಾರುಗಳ ಚರ್ಮದ ಮೇಲೆ ಚಿಕ್ಕ ಗಡ್ಡೆಗಳಾಗುವುದು, ಗಂಟು ಕಟ್ಟುವುದು, ರೂಪಾಯಿ ನಾಣ್ಯ ದಷ್ಟು ಚರ್ಮ ಮೇಲೆ ಹುಣ್ಣು ಬೀಳುವುದು ಈ ಕಾಯಿಲೆಯ ಮುಖ್ಯ ಲಕ್ಷಣಗಳಾಗಿವೆ. ಇದಲ್ಲದೆ, ಬಾಯಿ ಹಾಗೂ ಉಸಿರಾಟದ ನಾಳದಲ್ಲಿ ಗಾಯಗಳಾಗುವುದು, ಬಡಕಲಾಗುವುದು ಮತ್ತು ದುಗ್ದ ಗ್ರಂಥಿಗಳು ಊದಿಕೊಳ್ಳುವುದು ಕಾಣಿಸಿಕೊಳ್ಳುತ್ತದೆ. ಗರ್ಭಧರಿಸಿದ ದನಗಳು ಗರ್ಭಪಾತವಾಗುವುದು, ಬಂಜೆತನ ಸಮಸ್ಯೆ ಕಾಣಿಸುತ್ತದೆ. ಚಿಕಿತ್ಸೆ ನಿರ್ಲಕ್ಷಿಸಿದ್ದಲ್ಲಿ, ಜಾನುವಾರಗಳು ಸಾವನ್ನಪ್ಪಬಹುದು. ಸಾವಿನ ಪ್ರಮಾಣ ಕೇವಲ ಶೇಕಡ 1-2 ರಷ್ಟು ಇದ್ದರೂ ಸಹ ಜಾನುವಾರು ಸರಿಯಾಗಿ ಮೇವು ತಿನ್ನದೇ ನಿಗದಿತ ಪ್ರಮಾಣದಲ್ಲಿ ಹಾಲು ನೀಡುವುದಿಲ್ಲ. ಪೌಷ್ಠಿಕಾಂಶಗಳ ಕೊರತೆ ಉಂಟಾಗಿ ಜಾನುವಾರುಗಳು ಬೆದೆಗೆ ಬಾರದೇ ರೈತನ ಆರ್ಥಿಕತೆಯ ಮೇಲೆ ಹೊಡೆತ ಬೀಳುವ ಆತಂಕ ಎದುರಾಗಬಹುದಾಗಿದೆ.

ರೈತರು ಕೈಗೊಳ್ಳಬೇಕಾದ ಮುಂಜಾಗ್ರತೆ ಹಾಗೂ ಹತೋಟಿ ಕ್ರಮಗಳು ಇಂತಿವೆ:

 ಲಂಪಿ ಸ್ಕಿನ್ ಡಿಸೀಸ್ ಬಂದಿರುವ ಜಾನುವಾರುಗಳನ್ನು ಉಳಿದ ಆರೋಗ್ಯವಂತಹ ಜಾನುವಾರುಗಳಿಂದ ಬೇರ್ಪಡಿಸಬೇಕು. ಜಾನುವಾರುಗಳ ಮೈಮೇಲೆ ಚಿಕ್ಕ-ಚಿಕ್ಕ ಗಡ್ಡೆಗಳು ಕಾಣಿಸಿಕೊಂಡಿದ್ದರೆ, ದನದ ಕೊಟ್ಟಿಗೆಯಲ್ಲಿ ಕಟ್ಟದೆ ಹೊರಗಡೆ ಕಟ್ಟಬೇಕು. ನೊಣ, ಸೊಳ್ಳೆ ಹಾಗೂ ಉಣ್ಣೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ನೊಣ ಹಾಗೂ ಸೊಳ್ಳೆಗಳು ಬೆಳಗಿನ ಜಾವ ಹಾಗೂ ಸಾಯಂಕಾಲದ ಸಮಯದಲ್ಲಿ ಜಾನುವಾರಗಳಿಗೆ ಅತೀಯಾಗಿ ಕಚ್ಚುತ್ತವೆ.  ಹೀಗಾಗಿ ದಪ್ಪನೆಯ ಸೊಳ್ಳೆಯ ಪರದೆಯ ಒಳಗಡೆ ಜಾನುವಾರುಗಳನ್ನು ಕಟ್ಟಬೇಕು. ನಂತರ ಬೇವಿನ ಎಲೆಗಳ ಹೊಗೆಯಿಂದ ಸೊಳ್ಳೆಗಳ ಕಡಿತವನ್ನು ನಿಯಂತ್ರಿಸಬೇಕು. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಜಾನುವಾರುಗಳ ಚಲನೆಯನ್ನು ನಿರ್ಬಂಧಿಸಬೇಕು. ರೋಗ ಬಂದಂತಹ ಪ್ರದೇಶದಿಂದ ಯಾವುದೇ ಜಾನುವಾರುಗಳ ಮಾರಾಟ /ಖರೀದಿ ಮಾಡಬಾರದು. ಜಾನುವಾರುಗಳನ್ನು ಕಟ್ಟುವಂತಹ ಸ್ಥಳ, ಹಗ್ಗ, ಸರಪಳಿ ಅಥವಾ ಇತ್ಯಾದಿ ವಸ್ತುಗಳನ್ನು ಕ್ರಿಮಿನಾಶಕಗಳಿಂದ ಸ್ವಚ್ಚಗೊಳಿಸಬೇಕು. ಎಲ್ಲದಕ್ಕಿಂತ ಮುಖ್ಯವಾಗಿ, ಜಾನುವಾರುಗಳಲ್ಲಿ ಮುದ್ದೆ ರೋಗದ ಲಕ್ಷಣಗಳು ಕಂಡ ಕೂಡಲೇ ಸಮೀಪದ ಪಶು ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಬೇಕು. ಈ ಕಾಯಿಲೆಗೆ ಲಕ್ಷಣದ ಅನುಗುಣವಾಗಿ ಔಷಧ ಲಭ್ಯವಿದ್ದು, ಸಾವಿನ ಪ್ರಮಾಣ ಕಡಿಮೆ ಇರುತ್ತದೆ. ಆದರೂ ಮುಂಜಾಗ್ರತೆಗಾಗಿ ಜಾನುವಾರುಗಳಿಗೆ ತಮ್ಮ ಸಮೀಪದ ಪಶು ಚಿಕಿತ್ಸಾ ಸಂಸ್ಥೆಯಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದ್ದಾರೆ.

Published On: 03 September 2020, 05:05 PM English Summary: Lumpy Skin Disease precaution

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.