1. ಅಗ್ರಿಪಿಡಿಯಾ

ಭತ್ತಕ್ಕೆ ಬೆಂಕಿರೋಗ ತಗುಲಿದರೆ ಈ ರೀತಿ ಮಾಡಿ

ಭತ್ತ ಪ್ರಮುಖ ಆಹಾರ ಬೆಳೆ, ಇದರ ಇಳುವರಿ ಕಡಿಮೆಯಾಗಲು ರೋಗಗಳು ಕೂಡ ಹಲವಾರು ರೀತಿಯಲ್ಲಿ ಕಾರಣವಾಗಿರುತ್ತವೆ.  ಈ ರೋಗಗಳು ಸಾಮಾನ್ಯವಾಗಿ ಮುಂಗಾರಿನಲ್ಲಿ ಹೆಚ್ಚಾಗಿ ಕಂಡು ಬಂದು ಬೇಸಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ.  ರಾಜ್ಯದಲ್ಲಿ ಬೆಂಕಿರೋಗ, ಎಲೆ ಕವಚಕೊಳೆ ರೋಗ, ಕಂದು ಚುಕ್ಕೆರೋಗ, ತೆನೆ ಕವಚ ಕೊಳೆ ರೋಗ, ಹುಸಿಕಾಡಿಗೆ ರೋಗ, ಊದು ಬತ್ತಿ ರೋಗ, ದುಂಡಾಣು ಅಂಗಮಾರಿ ರೋಗ ಹಾಗೂ ಬೇರು ಗಂಟುರೋಗ ಭತ್ತಕ್ಕೆ ಬರುವ ಪ್ರಮುಖ ರೋಗಗಳಾಗಿವೆ. ಭತ್ತಕ್ಕೆ ಬೆಂಕಿ ರೋಗ ಬರದಂತೆ ಮಾಡಲು ಏನೇನು ಕ್ರಮಕೈಗೊಳ್ಳಬೇಕೆಂಬುದರ ಸಂಪರ್ಣ ಮಾಹಿತಿ ಇಲ್ಲಿದೆ.

ಬೆಂಕಿ ರೋಗ:

 ನಮ್ಮ ರಾಜ್ಯದಲ್ಲಿ ಭತ್ತಕ್ಕೆ ಬರುವ ರೋಗಗಳಲ್ಲಿ ಅತೀ ಹೆಚ್ಚು ತೀವ್ರವಾದ ರೋಗವೆಂದರೆ ಬೆಂಕಿ ರೋಗ. ಇದರಿಂದ ನೂರಕ್ಕೆ ನೂರರಷ್ಟು ನಷ್ಟ ಹೊಂದಬಹುದು.  ಭತ್ತ ಬೆಳೆಯುವ ಎಲ್ಲೆಡೆ ಈ ರೋಗದ ಹಾವಳಿ ಕಂಡು ಬರುತ್ತದೆ.  ಈ ರೋಗವು ಸಸಿಮಡಿಯಿಂದ ಹಿಡಿದು ಕಾಳು ಕಟ್ಟುವವರೆಗೂ ಕಂಡುಬರುವುದು.  ಸಸಿಮಡಿಯಲ್ಲಿ ಅಥವಾ ನಾಟಿ ಮಾಡಿದ ಪೈರಿನಲ್ಲಿ ಮೊದಲಿಗೆ ಎಲೆಗಳ ಮೇಲೆ ತಿಳಿಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.  ನಂತರ ಈ ಚುಕ್ಕೆಗಳು ದೊಡ್ಡದಾಗಿ ವಜ್ರಾಕಾರ ಹೊಂದುತ್ತವೆ.  ರೋಗ ತೀವ್ರವಾದಂತೆ ಚುಕ್ಕೆಗಳು ಹೆಚ್ಚಾಗಿ ಸಸಿಯನ್ನು ಸಂಪೂರ್ಣವಾಗಿ ಆವರಿಸಿ ಒಣಗಲು ಕಾರಣವಾಗುತ್ತದೆ.  ಆದ್ದರಿಂದ ಈ ರೋಗಕ್ಕೆ ಬೆಂಕಿರೋಗ ಎಂದು ಹೆಸರು.  ರೋಗ ಲಕ್ಷಣಗಳು ಕೇವಲ ಎಲೆಯ ಮೇಲಷ್ಟೆ ಅಲ್ಲದೆ ಕಾಂಡ, ಗಿಣ್ಣು ಹಾಗೂ ತೆನೆಗಳ ಮೇಲೂ ಕಂದು ಬಣ್ಣದ ಮಚ್ಚೆಯಂತೆ ಕಾಣಿಸಿಕೊಳ್ಳುತ್ತವೆ.  ಹೂವು ಹಾಗೂ ತೆನೆಗೆ ಬರುವ ಸಮಯದಲ್ಲಿ ತೆನೆಯ ಬುಡಭಾಗದಲ್ಲಿ 2.5 ರಿಂದ 4.0 ಸೆಂ.ಮೀ. ನಷ್ಟು ಭಾಗ ಹಸಿರು ಅಥವಾ ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗುತ್ತದೆ. ಕಾಳುಕಟ್ಟುವ ಮೊದಲೇ ತೆನೆಯ ಬುಡಭಾಗಕ್ಕೆ ಈ ರೋಗ ಭಾದಿಸಿದರೆ ತೀವ್ರವಾದ ನಷ್ಟವಾಗುವುದು.  ಕಾಳು ಕಟ್ಟಿದ ನಂತರ ರೋಗ ತಗುಲಿದರೆ ಕಾಳು ಸದೃಡವಾಗದೆ ಹೋಗುವುದು.

ಈ ರೋಗವು ಹಗಲಿನ ಉಷ್ಟಾಂಶ ಶೇಕಡಾ (30 ಸೆ.) ಹಾಗೂ ರಾತ್ರಿ ಉಷ್ಣಾಂಶ (20 ಸೆ.) ಮತ್ತು ಗಾಳಿಯಲ್ಲಿ ಹೆಚ್ಚು ತೇವಾಂಶವಿದ್ದಾಗ (ಶೇ.92). ದಿನದ ಬೆಳಕು 14 ಗಂಟೆಗಳು ಮತ್ತು ರಾತ್ರಿ 10 ಗಂಟೆಗಳ ಕಾಲ ಕತ್ತಲಿರುವ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.  ಇದರೊಂದಿಗೆ ಅತಿಯಾದ ಸಾರಜನಕ ಬಳಕೆ, ರೋಗ ನಿರೋಧಕ ಶಕ್ತಿ ಅಥವಾ ರೋಗ ಸಹಿಷ್ಣುತೆ ಇಲ್ಲದ ತಳಿಗಳ ಬಳಕೆ ಮತ್ತು ಹಸಿರೆಲೆ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರದ ಬಳಕೆ ಕಡಿಮೆಯಾದಲ್ಲಿ ರೋಗ ತೀವ್ರವಾಗುವುದು. ಮುಂಗಾರಿನ ಕಾಲದಲ್ಲಿ ಬಿತ್ತನೆ ಮತ್ತು ನಾಟಿ ಮಾಡದಿದ್ದರೆ ರೋಗದ ಹಾವಳಿ ಉಲ್ಬಣಗೊಳ್ಳುವುದು.

ಪೀಡೆನಾಶಕಗಳ ಬಳಕೆ

ಬೀಜೋಪಚಾರ : ಬೆಂಕಿರೋಗ, ತೆನೆಕವಚ ಕೊಳೆರೋಗ, ಎಲೆ ಕವಚ ಕೊಳೆರೋಗ ಹಾಗೂ ಊದು ಬತ್ತಿ ರೋಗಗಳು ಸಾಮಾನ್ಯವಾಗಿ ಬೀಜದಿಂದ ಹರಡುವುದರಿಂದ ಬಿತ್ತನೆಗೆ ಮುಂಚಿತವಾಗಿ ಕಡ್ಡಾಯವಾಗಿ ಬೀಜೋಪಚಾರ ಮಾಡುವುದು ಹಾಗೂ ಬೆಂಕಿರೋಗ ಬಾಧಿತ ಪ್ರದೇಶಗಳಲ್ಲಿ ಟ್ರೈಸ್ಲೈಕಜೋಲ್ 75 ಡಬ್ಲ್ಯೂಪಿ 3 ಗ್ರಾಂ / ಕಿ.ಗ್ರಾಂ ಅಥವಾ ಕಾರ್ಬೆಂಡೈಜಿಮ್ 25% + ಮ್ಯಾಂಕೋಜೆಬ್ 50% ಡಬ್ಲ್ಯೂಸ್ 4 ಗ್ರಾಂ / ಕಿ.ಗ್ರಾಂ ಬೀಜಕ್ಕೆ ಉಪಯೋಗಿಸಿ ಬೀಜೋಪಚಾರ ಮಾಡಬೇಕು.. ದುಂಡಾಣು ಅಂಗಮಾರಿ ರೋಗ ಕಂಡು ಬರುವ ಪ್ರದೇಶದಲ್ಲಿ ಸ್ಟ್ರೆಪ್ಟೋಸೈಕ್ಲಿನ್ 25 ಗ್ರಾಂ ಮತ್ತು ತಾಮ್ರದ ಆಕ್ಸಿಕ್ಲೋರೈಡ್ 150 ಗ್ರಾಂ ಅನ್ನು 50 ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣದಲ್ಲಿ 25 ಕೆ.ಜಿ ಬಿತ್ತನೆ ಬೀಜವನ್ನು 25 ಗಂಟೆಗಳ ಕಾಲ ನೆನೆಸಿ, ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡುವುದು.

ಬಿತ್ತನೆ ಬೀಜದ ಬೀಜೋಪಚಾರ ವಿಧಾನ: ಭತ್ತ ಮೊಳಕೆಯೊಡೆಯುವ ಮುನ್ನ (ಒಣ) ಅಥವಾ ಮೊಳಕೆಯೊಡೆದ ಭತ್ತಕ್ಕೆ ಬೀಜೋಪಚಾರ ಮಾಡುವುದು. ಶಿಫಾರಸ್ಸಿನ ಪ್ರಮಾಣದ ಬಿತ್ತನೆ ಬೀಜವನ್ನು (25 ಕಿ.ಗ್ರಾಂ / ಎಕರೆಗೆ) ಪ್ಲಾಸ್ಟಿಕ್ ಹಾಳೆ / ಸಿಮೆಂಟ್ ನೆಲ / ಗಟ್ಟಿ ನೆಲದ ಮೇಲೆ ಹರಡಿ, ಅದರ ಮೇಲೆ ತೆಳುವಾಗಿ ನೀರು ಚಿಮುಕಿಸುವುದು ಅಥವಾ ಬಿತ್ತನೆ ಬೀಜವನ್ನು ಚೀಲದ ಸಮೇತ 5-10 ನಿಮಿಷ ನೀರಿನಲ್ಲಿ ಅದ್ದಿ ತೆಗೆದು ಶಿಫಾರಸ್ಸಿನ ಪ್ರಮಾಣದ ರೋಗನಾಶಕವನ್ನು ಕೈ ಚೀಲ ಧರಿಸಿ ಚೆನ್ನಾಗಿ ಮಿಶ್ರಣಮಾಡಿ ನಂತರ ಈ ಬಿತ್ತನೆ ಬೀಜವನ್ನು 3 ರಿಂದ 12 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಬಳಸಬಹುದು.

ಪೀಡೆನಾಶಕಗಳ ಸಿಂಪರಣೆ : ಕೆಳಗೆ ತಿಳಿಸಿರುವ ಪೀಡೆನಾಶಕಗಳನ್ನು ಸರಿಯಾದ ಸಮಯದಲ್ಲಿ ಸಿಂಪಡಿಸಿ ರೋಗ ನಿರ್ವಹಣೆ ಮಾಡಬಹುದು.  ಸಿಂಪರಣೆ ದ್ರಾವಣಕ್ಕೆ ಬೇಕಾಗಿರುವ ನೀರಿನ ಪ್ರಮಾಣ ಬೆಳೆ ಹಂತದ ಮೇಲೆ ನಿರ್ಧರಿತವಾಗಿರುವುದರಿಂದ 150-200 ಲೀಟರ್ ಪ್ರಮಾಣದಲ್ಲಿ ಉಪಯೋಗಿಸಬಹುದು.

ರೋಗಗಳು

ಪೀಡೆನಾಶಕಗಳು

ಪ್ರತಿ ಲೀಟರ್ ನೀರಿಗೆ

ಬೆಂಕಿ ರೋಗ

 

ಟ್ರೈಸೈಕ್ಲೋಜೋಲ್ 75 ಡಬ್ಲ್ಯೂ.ಪಿ

          ಅಥವಾ

ಎಡಿಫೆನ್‍ಫಾಸ್ 50 ಇ.ಸಿ

ಕಿಟಾಜಿನ್ 48 ಇ.ಸಿ ಕಾರ್ಬೆಂಡೈಜಿಮ್ 50 ಡಬ್ಲ್ಯೂ.ಪಿ

ಟೆಬುಕೋನಜೋಲ್ 50% +

ಟ್ರೈಪ್ಲೊಕ್ಸಿಸ್ಟ್ರೋಬಿನ್ 25% 

ಸಂಯುಕ್ತ ಶಿಲೀಂಧ್ರನಾಶಕ

(ನೆಟಿವೊ 75 ಡಬ್ಲ್ಯೂಜಿ)

0.6 ಗ್ರಾಂ

 

1.0 ಮಿ.ಲೀ.

1.0 ಮಿ.ಲೀ.

1.0 ಗ್ರಾಂ

 

 

0.4 ಗ್ರಾಂ

ಲೇಖಕರು: ಡಾ: ಎಂ.ಎ. ಮೂರ್ತಿ,  ಡಾ: ಕೆ. ಶಿವರಾಮು ಮತ್ತು ಶ್ರೀ ಶ್ರೀಹರ್ಷಕುಮಾರ್, ಕೃಷಿ ಮಾಹಿತಿ ಘಟಕ,

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

Published On: 01 October 2020, 09:14 PM English Summary: Paddy Cultivation and Management

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.