1. ಅಗ್ರಿಪಿಡಿಯಾ

ಈರುಳ್ಳಿ ಬೆಳೆಸುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ....

ರೈತ ದೇಶದ ಬೆನ್ನೆಲುಬಾದರೆ ಉತ್ತಮ ಗುಣಮಟ್ಟದ  ಬೀಜ ಉಪಯೋಗಿಸದೇ ಆಧುನಿಕ ಕೃಷಿ ತಂತ್ರಜ್ಞಾನ ಬೇಸಾಯ ಪದ್ಧತಿಗಳು, ರಸಗೊಬ್ಬರ, ಕ್ರಿಮಿ ಕೀಟನಾಶಕ ಬಳಸಿ ಬೇಸಾಯ ಮಾಡಿದರೆ ಅಪೂರ್ಣವೆನಿಸುತ್ತದೆ. ಇದರಿಂದ ನಿರೀಕ್ಷಿತ ಲಾಭಗಳಿಸಲು ಸಾಧ್ಯವಿಲ್ಲ. ಈರುಳ್ಳಿ ಬೆಳೆಯು ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಮುಖ್ಯವಾದ ತರಕಾರಿ ಅಥವಾ ಸಾಂಬರು ಪದಾರ್ಥದ ಬೆಳೆಯಾಗಿದೆ. ಈ ಬೆಳೆಯನ್ನು ಬಹುಮುಖ್ಯವಾಗಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ, ಉತ್ತರ ಪ್ರದೇಶ, ಆಂದ್ರಪ್ರದೇಶ ಹಾಗೂ ಓರಿಸ್ಸಾ ರಾಜ್ಯಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಈ ಬೆಳೆಯನ್ನು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಬಾಗಲಕೋಟಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮುಖ್ಯವಾಗಿ ಬೆಳೆಯಲಾಗುತ್ತೀದೆ. ಈರುಳ್ಳಿಯಲ್ಲಿ ಪೋಷಕಾಂಶಗಳಾದ ಪಿಷ್ಟ, ಸುಣ್ಣ, ರಂಜಕ ಮತ್ತು ರೈಬೋಫ್ಲೆವಿನ್ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.

ಈರುಳ್ಳಿ ಬೆಳೆ ವಿಸ್ತೀರ್ಣದಲ್ಲಿ ಚೀನಾ ದೇಶ ಮೊದಲನೆ ಸ್ಥಾನದಲ್ಲಿದ್ದು, ನಂತರ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಈರುಳ್ಳಿ ಬೆಳೆಯ ಸರಾಸರಿ ಇಳುವರಿ 10.6 ಟನ್ / ಪ್ರತಿ ಹೆಕ್ಟೇರಿಗೆ  ಈರುಳ್ಳಿಯನ್ನು ಭಾರತದಲ್ಲಿ ಗುಜರಾತನ ಭಾವನಗರ ಮತ್ತು ರಾಜ್‍ಕೋಟ್, ಮಹಾರಾಷ್ಟ್ರದ ನಾಸಿಕ್ ಮತ್ತು ಪುಣೆ ಹಾಗೂ ಕರ್ನಾಟಕದ ಚಿತ್ರದುರ್ಗ ಮತ್ತು ಉತ್ತರ ಪ್ರದೇಶದ ಬಾದನ್‍ನಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಾರೆ.

ಕರ್ನಾಟಕದಲ್ಲಿ ಸುಮಾರು 1.2 ಲಕ್ಷ  ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಉತ್ಪಾದನೆ ಮಟ್ಟ ಹೆಕ್ಟೇರ್‍ಗೆ 6 ಟನ್ ಇದ್ದು, ಕೋಲಾರ, ಚಿತ್ರದುರ್ಗ ಹಾಗೂ ಬೆಂಗಳೂರು ಜಿಲ್ಲೆಯ ಹಲವು ಭಾಗಗಳಲ್ಲಿ ಸಣ್ಣ ಗಾತ್ರದ ಕೆಂಪು ಈರುಳ್ಳಿ (ಗುಲಾಬಿ) ಹಾಗೂ ಇತರೆ ಜಿಲ್ಲೆಗಳಲ್ಲಿ ದೊಡ್ಡ ಗಾತ್ರದ ಬಳ್ಳಾರಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಭಾರತವು ಪ್ರತಿ ವರ್ಷ 3,80,000 ಟನ್‍ಗಳಷ್ಟು ಈರುಳ್ಳಿಯನ್ನು ರಫ್ತು ಮಾಡಿ ಸುಮಾರು 460 ಕೋಟಿ ರೂಪಾಯಿಗಳಷ್ಟು ವಿದೇಶಿ ವಿನಿಮಿಯ ಗಳಿಸುತ್ತಿದೆ. ಭಾರತದಿಂದ ಈರುಳ್ಳಿಯನ್ನು ದಕ್ಷಿಣ ಪೂರ್ವ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಕೋಲಾರ ಮತ್ತು ಬೆಂಗಳೂರು ಜಿಲ್ಲೆಯಲ್ಲಿ ಸುಮಾರು 4,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು 70,000 ಟನ್‍ಗಳಷ್ಟು ಈರುಳ್ಳಿಯನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. 

ಈರುಳ್ಳಿ ಉತ್ಪಾದನೆ ಹಾಗೂ ಉತ್ಪಾದಕತೆ ಭಾರತದಲ್ಲಿ ಕಡಿಮೆಗೆ ಕಾರಣಗಳು ಈ ರೀತಿ ಇವೆ.

1) ರೈತರಿಗೆ ಸರಿಯಾದ ತಳಿ ಆಯ್ಕೆ ಹಾಗೂ ಬಿತ್ತನೆ ಸಮಯದ ಬಗ್ಗೆ ಮಾಹಿತಿ ಇಲ್ಲದಿರುವುದು.

2) ಯಾವ ತಳಿ ಯಾವ ಹಂಗಾಮಿಗೆ ಬಿತ್ತನೆ ಮಾಡಬೇಕು ಎನ್ನುವುದರ ಮಾಹಿತಿ ಕೊರತೆ

3) ರೋಗ ಹಾಗೂ ಕೀಟಬಾದೆ ನಿಯಂತ್ರಣ ಮಾಡುವುದರ ಬಗ್ಗೆ ಸರಿಯಾದ ಕ್ರಮದಲ್ಲಿ ಮಾಹಿತಿ ಕೊರತೆ

4) ಕೊನೆಯದಾಗಿ, ಕೊಯ್ಲು ನಂತರ ಸಂಗ್ರಹಣೆ ಬಗ್ಗೆ ಮಾಹಿತಿ ಇಲ್ಲದಿರುವುದು.

ಬಿತ್ತನೆ ಕಾಲ : 1) ಮೇ-ಜೂನ್ (ನೇರ ಬಿತ್ತನೆಗೆ)  2) ಜುಲೈ-ಆಗಸ್ಟ್ (ನಾಟಿ ಮಾಡಲು)

ಈರುಳ್ಳಿಯನ್ನು ಎಲ್ಲ ಕಾಲದಲ್ಲಿಯೂ ಬೆಳೆಯಬಹುದು, ಉತ್ತಮ ಗುಣಮಟ್ಟದ ಅಧಿಕ ಇಳುವರಿ ಪಡೆಯಲು ತಂಪಾದ ಹವಾಗುಣ ಮತ್ತು ಚಳಿಗಾಲ ಉತ್ತಮ, ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ, ಜನೆವರಿ-ಫೆಬ್ರವರಿ ಬೆಳೆ ಪ್ರಾರಂಭ ಮಾಡಲು ಸರಿಯಾದ ಕಾಲಾದರೂ ಸೆಪ್ಟೆಂಬರ್-ಅಕ್ಟೋಬರ್ ಬೆಳೆಯಿಂದ ಉತ್ಕೃಷ್ಟ ಗಡ್ಡೆಗಳನ್ನು ಪಡೆಯಬಹುದು.

ಭೂಮಿ ಹದಗೊಳಿಸುವುದು: ಭೂಮಿಯನ್ನು ಒಂದು ಸಾರಿ ಆಳವಾಗಿ ಉಳಿಮೆ ಮಾಡಿ ನಂತರ ಸಮಮಾಡಬೇಕಾಗುತ್ತದೆ..

ತಳಿಗಳು:  ಅಗ್ರಿ ಫೌಂಡ್ ರೆಡ್ ರೋಸ್, ಅಗ್ರಿಪೌಂಡ್ ಲೈಟ್‍ರೆಡ್, ಬೆಂಗಳೂರು ಗುಲಾಬಿ, ಬಳ್ಳಾರಿ ರೆಡ್,ಅರ್ಕಾ ನಿಕೇತನ್, ಅರ್ಕಾ ಕಲ್ಯಾಣ, ಭೀಮಾಸೂಪರ್, ಪಂಚಗಂಗಾ, ಎನ್-53, ಹಾಗೂ ಅರ್ಕಾ ಪಿತಾಂಬರ್, ಮುಖ್ಯವಾದ ತಳಿಗಳು.

ಮಣ್ಣು ಮತ್ತು ಹವಾಗುಣ: ಈರುಳ್ಳಿ ಬೆಳೆಯಲು ಆಳವಾದ ಫಲವತ್ತಾದ ನೀರು ಬಸಿದು ಹೋಗುವ ಮೆಕ್ಕಲು ಮಣ್ಣು ಉತ್ತಮ, ಮರಳು ಮಿಶ್ರಿತ ಗೋಡು, ಪುಡಿಪುಡಿಯಾದ ಮಣ್ಣು ಸಹ ಯೋಗ್ಯ, ಮಣ್ಣಿನ ರಸಸಾರ 6.5 - 7.0 ಇರಬೇಕು.

ಈರುಳ್ಳಿ ಬೀಜೋತ್ಪಾದನೆಯನ್ನು 2 ವಿಧಾನದಲ್ಲಿ ಮಾಡಬಹುದು.

1) ಬೀಜದಿಂದ - ಬೀಜೊತ್ಪಾದನೆ

2) ಗೆಡ್ಡೆಯಿಂದ - ಬೀಜ ಉತ್ಪಾದನೆ ಮಾಡುವುದು 

ಉತ್ತಮವಾದ ಗುಣಮಟ್ಟ ಈರುಳ್ಳಿ ಬೀಜ ಪಡೆಯಲು ಗೆಡ್ಡೆಯಿಂದ ಬೀಜೊತ್ಪಾದನೆ ಕೈಗೊಳ್ಳುವುದರಿಂದ ಉತ್ತಮ ಗುಣಮಟ್ಟದ ಜೊತೆಗೆ ಹೆಚ್ಚಿನ ಇಳುವರಿ ಪಡೆಯಬಹುದು.

ಬೀಜ ಗಡ್ಡೆಗಳ ಬೇಸಾಯ ಕ್ರಮ :

ಹೆಚ್ಚಿನ ಪ್ರದೇಶದಲ್ಲಿ ಬೀಜವನ್ನು ಚೆಲ್ಲಿ ನೇರ ಬಿತ್ತನೆ ಮಾಡಲಾಗುತ್ತಿದೆ ನೇರ ಬಿತ್ತನೆ ಮಾಡುವುದರಿಂದ ಕಳೆ ನಿರ್ವಹಣೆ ಒಂದು ಸಮಸ್ಯೆಯಾಗಿ, ಉತ್ಪಾದನೆ ವೆಚ್ಚದ ಹೆಚ್ಚು ಭಾಗ ಕಳೆ ನಿರ್ವಹಣೆಗೆ ಖರ್ಚಾಗುವುದು ಮತ್ತು ಕಡಿಮೆ ಇಳುವರಿ ಹಾಗೂ ಕಳಪೆ ಗುಣಮಟ್ಟದ ಗಡ್ಡೆಗಳು ಸಾಮಾನ್ಯವಾಗಿದೆ. ವೈಜ್ಞಾನಿಕ ಬೇಸಾಯ ಕ್ರಮಗಳಿಂದ ವಿದೇಶ ಮಾರುಕಟ್ಟೆಗೆ ಸರಿ ಹೊಂದುವ ಶ್ರೇಷ್ಠ ಗುಣಮಟ್ಟದ ಗಡ್ಡೆಗಳ ಉತ್ಪಾದನೆಯ ಜೊತೆಗೆ ಅಧಿಕ ಇಳುವರಿಯನ್ನು ಅಧಿಕಗೊಳಿಸುವುದು ಅವಶ್ಯಕ.

ಬೀಜೋತ್ಪಾದನೆ : ಈರುಳ್ಳಿ ಪರಕೀಯ ಪರಾಗಸ್ಪರ್ಶದ ಬೆಳೆ. ಕೀಟಗಳು ಪರಕೀಯ ಪರಾಗಸ್ಪರ್ಶವಾಗಲು ಸಹಾಯ ಮಾಡುತ್ತವೆ. ಬೀಜೋತ್ಪಾದನೆಯಲ್ಲಿ ಎರಡು ವಿಧಗಳು.

1) ಬೀಜ ಚಲ್ಲಿ ನೇರ ಬಿತ್ತನೆ :

ಭೂಮಿಯನ್ನು ಉಳುಮೆ ಮಾಡಿ ಹದವಾಗಿ ಸಿದ್ಧಪಡಿಸಬೇಕು. ಹೆಕ್ಟೇರಿಗೆ 30 ಟನ್ ಕೊಟ್ಟಿಗೆ ಗೊಬ್ಬರವನ್ನು ಮತ್ತು ರಸಗೊಬ್ಬರಗಳನ್ನು ಮಣ್ಣಿನಲ್ಲಿ ಮಿಶ್ರ ಮಾಡಬೇಕು. ನಂತರ ಅವಶ್ಯಕತೆಗೆ ತಕ್ಕಂತೆ 4x3 ಅಡಿ ಅಗಲವಿರುವ ಪಾತಿಗಳನ್ನು ಮಾಡಿ ಬೀಜಗಳನ್ನು ಪಾತಿಗಳಲ್ಲಿ ಹೆಚ್ಚು ಆಳಕ್ಕೆ ಹಾಕದೆ ಸಮನಾಗಿ ಸರಿಯಾದ ಅಂತರದಲ್ಲಿ ಬೀಳುವಂತೆ ಚೆಲ್ಲಿ ತಕ್ಷಣ ನೀರು ಹಾಯಿಸಬೇಕು. ಈ ವಿಧಾನದಲ್ಲಿ 8-10 ಕೆ.ಜಿ. ಬಿತ್ತನೆ ಬೀಜ ಬೇಕಾಗುತ್ತದೆ. ನಾಲ್ಕು ವಾರಗಳ ನಂತರ ಒತ್ತಾಗಿ ಬೆಳೆದ ಸಸಿಗಳನ್ನು ಕಿತ್ತು ಸಸಿಯಿಂದ ಸಸಿಗೆ 3-4 ಇಂಚು ಅಂತರವಿರುªಂತ ಹೆಚ್ಚಬೇಕು. ಇದರಿಂದ ಸಾಧಾರಣ ಇಳುವರಿ ಪಡೆಯಬಹುದು ಹಾಗೂ ಕಳಪೆ ಗುಣಮಟ್ಟದ ಗೆಡ್ಡೆಗಳು ಉತ್ಪಾದನೆಯಾಗುತ್ತದೆ.

ಬೀಜ ಬಿತ್ತಿ ನೇರ ಬೀಜೋತ್ಪಾದನೆ :

ಬೀಜ ಬಿತ್ತಿ ಗಡ್ಡೆಗಳನ್ನು ಪಡೆದು ಗಡ್ಡೆಗಳನ್ನು ತೆಗೆಯದೆ ಅದೇ ಗಡ್ಡೆಗಳಿಂದ ನೇರವಾಗಿ ಬೀಜ ಉತ್ಪಾದನೆ ಮಾಡವುದು, ರೈತರು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ತಿರಸ್ಕರಿಸಲ್ಪಟ್ಟ ಸಣ್ಣ ಗಡ್ಡೆಗಳನ್ನು ಬಿತ್ತಿ ಬೀಜೋತ್ಪಾದನೆ ಮಾಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಈ ವಿಧಾನದಿಂದ ಆಗಸ್ಟ್ ತಿಂಗಳಲ್ಲಿ ಬೀಜ ಬಿತ್ತಿ ಸೆಪ್ಟೆಂಬರ್‍ನಲ್ಲಿ ನಾಟಿ ಮಾಡಿ ನೇರವಾಗಿ ಬೀಜ ಪಡೆಯಬಹುದು.

2) ನಾಟಿ ಮಾಡುವುದು :

ಎತ್ತರದ ಮಡಿಗಳಲ್ಲಿ ವೈಜ್ಞಾನಿಕ ಕ್ರಮವಹಿಸಿ ಸಸಿಗಳನ್ನು ಬೆಳೆದು ನಾಟಿ ಮಾಡಬೇಕು. ಸುಮಾರು 25 ಅಡಿ ಉದ್ದ 4 ಅಂಗುಲ ಎತ್ತರ ಸಸಿಮಡಿಗಳನ್ನು ಮಾಡಿಕೊಳ್ಳಬೇಕು. ಒಂದು ಎಕರೆಗೆ ಇಂತಹ 25 ಸಸಿಮಡಿಗಳು ಬೇಕಾಗುತ್ತವೆ. ಪ್ರತಿ ಸಸಿಮಡಿಗೆ 20-25 ಕೆ.ಜಿ. ಕೊಟ್ಟಿಗೆ ಗೊಬ್ಬರ, 500 ಗ್ರಾಂ ರಸಗೊಬ್ಬರ (15:15:15) ಮತ್ತು 100 ಗ್ರಾಂ ಪೂರಡಾನ್ ಹರಳನ್ನು ಮಣ್ಣಿನಲ್ಲಿ ಮಿಶ್ರ ಮಾಡಬೇಕು. ಎರಡು ಅಂಗಲವಿರುವ ಸಾಲುಗಳಲ್ಲಿ ಬೀಜ ಬಿತ್ತನೆ ಮಾಡಬೇಕು. ನಂತರ ಹಸನಾದ ಕೊಟ್ಟಿಗೆ ಗೊಬ್ಬರವನ್ನು ಪುಡಿಮಾಡಿ ಮೇಲೆ ಹಾಕಬೇಕು. ಈ ವಿಧಾನದಿಂದ 2-3 ಕೆ.ಜಿ. ಬೀಜದ ಪ್ರಮಾಣ ಬೇಕು. ಬಿತ್ತನೆ ತಕ್ಷಣ ಮತ್ತು ನಂತರ ದಿನ ಬಿಟ್ಟು ದಿನ ಸಸಿಮಡಿಗಳಿಗೆ ನೀರು ಹಾಕಬೇಕು. ಸಸಿಮಡಿಗಳನ್ನು  ಒಣಹುಲ್ಲಿನಿಂದ ಮುಚ್ಚಬೇಕು. ಮೊಳಕೆ ಬಂದ ನಂತರ ಹಾಗೂ 15 ದಿನಗಳಿಗೊಮ್ಮೆ ಶೇ. 2ರ ಕ್ಯಾಪ್ಟಾಪ್ ದ್ರಾವಣದಿಂದ ನೆನೆಸಬೇಕು. ಸಸಿಮಡಿಗಳಲ್ಲಿ ಕಳೆ ಬರದಂತೆ ನೋಡಿಕೊಳ್ಳಬೇಕು.

ಈಗಾಗಲೇ ನೇರ ಬೀಜ ಬಿತ್ತನೆ ಮಾಡುವ ವಿಧಾನದಲಿ ತಿಳಿಸಿರುವಂತೆ ಭೂಮಿಯನ್ನು ಸಿದ್ಧಪಡಿಸಬೇಕು. ಪಾತಿಗಳಲ್ಲಿ ಶಿಫಾರಸ್ಸು ಮಾಡಿದ ಅರ್ಧಭಾಗ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಒದಗಿಸುವ ರಸಗೊಬ್ಬರ (ಹೆಕ್ಟೇರಿಗೆ 155 ಕೆ.ಜಿ. ಸಾರಜನಕ, 50 ಕೆ.ಜಿ. ರಂಜಕ ಹಾಗೂ 120 ಕೆ.ಜಿ. ಪೊಟ್ಯಾಷ)ವನ್ನು ಹಾಕಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು. ರಸಗೊಬ್ಬರ ಕೊಟ್ಟ ನಂತರ ನೀರು ಹಾಯಿಸಬೇಕು.

ಪಾತಿಗಳಲ್ಲಿ 8 ರಿಂದ 6 ಸೆಂ.ಮೀ. ಅಂತರ ಕೊಟ್ಟು ನಾಟಿ ಮಾಡಬೇಕು. ಒಂದಕ್ಕಿಂತ ಹೆಚ್ಚು ಸಸಿ ಮತ್ತು ಆಳಕ್ಕೆ ನಾಟಿ ಮಾಡಬಾರದು. ನಾಟಿ ವಿಧಾನದಿಂದ ಎಕರೆಗೆ 3-4 ಕೆ.ಜಿ. ಬೀಜ ಬೇಕಾಗಬಹುದು. ಅಧಿಕ ಇಳುವರಿ ಹಾಗೂ ಶ್ರೇಷ್ಠ ಮಟ್ಟದ ಗೆಡ್ಡೆಗಳನ್ನು ಪಡೆಯಲು ನಾಟಿ ವಿಧಾನ ಉತ್ತಮ.

ಬಿತ್ತನೆ ನಂತರದ ಬೇಸಾಯ ಕ್ರಮಗಳು : 

ಈರುಳ್ಳಿ ಸಸಿಗಳ ಬೇರುಗಳ ಮಣ್ಣಿನ ಮೇಲ್ಪದರದ 5 ಸೆಂ.ಮೀ. ಆಳದಲ್ಲಿರುವುದರಿಂದ ಮೇಲ್ಪದರದಲ್ಲಿ ತೇವಾಂಶವಿರುವ ಹಾಗೆ ನೋಡಿಕೊಳ್ಳಬೇಕು. ಹವಾಗುಣಕ್ಕನುಗುಣವಾಗಿ 5-6 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಅವಶ್ಯಕತೆಗಿಂತ ಹೆಚ್ಚು ನೀರು ಕೊಟ್ಟಲ್ಲಿ ಕವಲು ಗಡ್ಡೆಗಳು ಹೆಚ್ಚಾಗಿ ಅವಧಿಗಿಂತ ಮೊದಲೇ ಕೊಯ್ಲಿಗೆ ಸಿದ್ಧಗೊಳ್ಳುತ್ತದೆ.

ನಾಟಿ ಮಾಡದ ತಕ್ಷಣ ಕಳೆಗಳು ಬೆಳಯದಂತೆ ಹೆಚ್ಚು ನಿಗಾ ವಹಿಸಬೇಕು ಆಗಾಗ ಕಳೆ ತೆಗೆದು ಮೇಲ್ಪದರದ ಮಣ್ಣನ್ನು ಸಡಿಲ ಮಾಡಬೇಕು.

ಕೈಯಿಂದ ಕಳೆ ತೆಗೆಯಲು ಹೆಚ್ಚು ಜನ ಬೇಕಾಗುವುದರಿಂದ ಉತ್ಪಾದನೆ ವೆಚ್ಚ ಹೆಚ್ಚು. ಆದುದರಿಂದ ಕಳೆನಾಶಕಗಳ ಬಳಕೆ ಉತ್ತಮ. ನಾಟಿ ಮಾಡುವ ಮೊದಲು ಮಣ್ಣಿನಲಿ ತೇವಾಂಶ ಇರುವಾಗ ಬಸಲಿನ್ ಸಿಂಪರಣೆ ಮಾಡಿ ನಂತರ ನಾಟಿ ಮಾಡಿದ 20-30 ದಿನಗಳಲ್ಲಿ ಉಳಿದ ಕಳೆಯನ್ನು ಕೈಯಿಂದ ತೆಗೆಯಬೇಕು. ಅಥವಾ ನಾಟಿ ಮಾಡಿದ 3 ದಿನಗಳ ನಂತರ 1.5 ಲೀ. ಸ್ಟಾಂಪ್ ಕಳೆನಾಶಕವನ್ನು ಎಕರೆ ಪ್ರದೇಶಕ್ಕೆ ಸಿಂಪರಣೆ ಮಾಡಿ 20-30 ದಿನಗಳಲ್ಲಿ ಉಳಿದ ಕಳೆಯನ್ನು ಕೈಯಿಂದ ತೆಗೆಯಬೇಕು ಅಥವಾ ನಾಟಿ ಮಾಡಿದ 3 ದಿನಗಳ ನಂತರ 1.5 ಲೀ. ಸ್ಟಾಂಪ್ ಕಳೆನಾಶಕವನ್ನು ಎಕರೆ ಪ್ರದೇಶಕ್ಕೆ ಸಿಂಪರಣೆ ಮಾಡಿ 20-30 ದಿನಗಳಲ್ಲಿ ಉಳಿದ ಕಳೆಯನ್ನು ಕೈಯಿಂದ ತೆಗೆದು ಕಳೆಯನ್ನು ನಿಯಂತ್ರಣ ಮಾಡಬೇಕು.

ಮೇಲು ಗೊಬ್ಬರ: ನಾಟಿ / ಬಿತ್ತನೆ 20-30 ದಿನಗಳಲ್ಲಿ ಕಳೆ ತೆಗೆದ ನಂತರ 75 ಕೆ.ಜಿ. ಸಾರಜನಕ ಒದಗಿಸುವ ರಸಗೊಬ್ಬರವನ್ನು ಮೇಲು ಗೊಬ್ಬರವಾಗಿ ಕೊಡಬೇಕು.

ಸಸ್ಯ ಸಂರಕ್ಷಣೆ: ಈರುಳ್ಳಿ ಬೆಳೆ ಹಲವಾರು ಕೀಟ ಹಾಗೂ ರೋಗ ಬಾಧೆಗಳಿಗೆ ತುತ್ತಾಗುತ್ತದೆ. ಕೀಟಗಳ ಬಾಧೆ ಹೆಚ್ಚಾಗಿರುವುದಿಲ್ಲ. ಆದರೆ ನುಸಿ ಕೀಟ ಹೆಚ್ಚು ಉಪದ್ರವಕಾರಿ. ರೋಗಗಳಲಿ ತುಂಬಾ ಹಾನಿಕಾರ ಎಂದರೆ ಕೆಂಪು ಮಚ್ಚೆ ರೋಗ, ಕಾಂಡ ಕೊರೆಯುವ ರೋಗ, ಕಾಡಿಗೆ ರೋಗ, ಸೆಂಪಿಲಿಯಂ ಬ್ಲೈಟ್ ರೋಗಗಳನ್ನು ಹತೋಟಿಯಲ್ಲಿಡಲು 2.5 ಗ್ರಾಂ ಕಾರ್ಬಂಡೈಜಿಮ್ ಅಥವಾ ಡೈಥೇನ್ ಎಂ -45ಅಥವಾ ಮ್ಯಾಂಕೋಜೆಬ್ / ಕಬಾಚ್‍ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಿ. ಹಾಗೆಯೇ ಸಮಯಕ್ಕೆ ಸರಿಯಾಗಿ ಅವಶ್ಯಕತೆ ಅರಿತು ಸಿಂಪರಣೆ ಮಾಡುವುದರಿಂದ ಮತ್ತು ರಓರಹಿತ ಬೀಜಗಳನ್ನು ಉಪಯೋಗಿಸುವುದರಿಂದ ಕೀಟ ಮತ್ತು ರೋಗಗಳನ್ನು ಹತೋಟಿಯಲ್ಲಿಡಬಹುದು. ಈ ಬೆಳೆಗೆ ಥ್ರಿಪ್ಸ್ ನುಸಿ ಕಾಣಿಸಿಕೊಂಡಾಗ ಡೈಮಿಥೋಯೇಟ್ 1.7 ಮೀ.ಲೀ ಅಥವಾ ಫಾಸ್ಪಾಮಿಡಾನ್ -100 ಇ.ಸಿ. 0.5 ಮಿ.ಲೀ. ಪ್ರತಿ ಲೀರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು ಸೂಕ್ತ.

ಬೆಳೆಗಳ ಪರ್ಯಾಯ ಅನುಸರಿಸುವುದು, ಬೀಜೋಪಚಾರ ಮತ್ತು ಸಮಗ್ರ ಕೀಟ ನಿರ್ವಹಣೆ ಇವುಗಳು ಸಮಗ್ರ ಸಸ್ಯ ಸಂರಕ್ಷಣೆಯಲ್ಲಿ ಅತಿಮುಖ್ಯ.

ಕೊಯ್ಲು: ಈರುಳ್ಳಿ ಗಡ್ಡೆಯ ಮೇಲ್ಭಾಗ ಹಳದಿ ಬಣ್ಣ ತಿರುಗಿ ಭಾಗಷ: ಒಣಗಿ ಭೂಮಿಯ ಮೇಲೆ ಬಾಗಿದ್ದರೆ ಕೊಯ್ದಿಗೆ ಸರಿಯಾದ ಸಮಯವೆಂದು ತಿಳಿಯಬೇಕು. ಅವಧಿಗೆ ಮುನ್ನ ಕೊಯ್ಲು ಮಾಡುವುದರಿಂದ ಗೆಡ್ಡೆಗಳು ಮೊಳೆಯುತ್ತವೆ. ಇಳುವರಿ ಕಡಿಮೆಯಾಗುತ್ತದೆ. ತಡವಾಗಿ ಕೊಯ್ಲು ಮಾಡಿದ್ದಲ್ಲಿ ಗೆಡ್ಡೆಗಳು ರೋಗಕ್ಕೆ ತುತ್ತಾಗುತ್ತದೆ. ಕೆಲವು ಕವಲು ಗೆಡ್ಡೆಗಳು ಹೆಚ್ಚಾಗಿ ಗೆಡ್ಡೆಗಳು ಕೆಡುತ್ತವೆ.

ಸುಧಾರಿತ ಬೇಸಾಯ ಕ್ರಮಗಳಿಂದ ಎಕರೆಗೆ 8-10 ಟನ್ ಗೆಡ್ಡೆಗಳನ್ನು ಗೆಡ್ಡೆಗಳು ಪಡೆಯಬಹುದು. ಗೆಡ್ಡೆಗಳಲ್ಲಿ ಬೀಜೋತ್ಪಾದನೆತಾಕಿನಿಂದ ಬೇರ ಈರುಳ್ಳಿ ಬೆಳೆ ತಾಕಿಗೆ 5 ಮೀ. ಅಂತರವಾದರೂ ಇರಬೇಕು.

ಹತ್ತಿ ಅಥವಾ ತೊಗರಿ ಕಟ್ಟಿಗೆಯಿಂದ ಚೌಕಾರಾರದಲ್ಲಿ ತಯಾರಿಸಿದ ಆಧಾರದ ಮೇಲೆ ಎಲೆಗಳ ಸಮೇತ ಕಟಾವು ಮಾಡದ ಗೆಡ್ಡೆಗಳನ್ನು ಒಟ್ಟುತೀವಿ, ಆಗ ಗೆಡ್ಡೆಗಳು ಒಳಗಡೆ ಹೋಗಬೇಕು. ಎಲೆಗಳು ಹೊರಗಡೆ ಬರಬೇಕು. ಹೀಗೆ ಒಂದು ಪದರು ಕಟ್ಟಿಗೆ ಒಂದು ಪದರ ಈರುಳ್ಳಿ ಒಟ್ಟುತ್ತಾ ಕೊನೆಗೆ ತೊಗರಿ ಕಟ್ಟಿಗೆ ಹಾಕಿ ಮುಚ್ಚುತ್ತೇವೆ. ಇದು ಸೂರ್ಯ ಕಿರಣಗಳನ್ನು ತಡೆಯುವುದರ ಜೊತೆಗೆ ಮೊಳಕೆಯೊಡೆಯುವುದಿಲ್ಲ. 10-15 ದಿವಸ ಹೀಗೆ ಬಿಡುವುದರಿಂದ ಗೆಡ್ಡೆಗಳಲ್ಲಿ ಉತ್ತಮ ಆಹಾರ ಶೇಖರಣೆಯಾಗುತ್ತದೆ. ಒಳ್ಳೆ ಗೆಡ್ಡೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇವೆ.

ಮೇಲುಗೊಬ್ಬರ : ನಾಟಿ/ಬಿತ್ತನೆ ಮಾಡಿ 20-30 ದಿನಗಳ ಕಳೆ ತೆಗೆದ ನಂತರ 7.5 ಕೆ.ಜಿ. ಸಾರಜನಕ ಒದಗಿಸುವ ರಸಗೊಬ್ಬರವನ್ನು ಮೇಲು ಗೊಬ್ಬರವಾಗಿ ಕೊಡಬೇಕು.

ಗೆಡ್ಡೆಯಿಂದ ಬೀಜೋತ್ಪಾದನೆ: 

ಗಡ್ಡೆಗಳನ್ನು ಮಾರುಕಟ್ಟೆಗೆ ಬೆಳೆದಂತೆ ಮೇಲೆ ವಿವರಿಸಿದ ರೀತಿಯಲ್ಲಿ ಬೆಳೆದು ಪೂರ್ತಿ ಬೆಳವಣಿಗೆ ಹೊಂದಿದ, ಸರಿಯಾದ ಸಮಯಕ್ಕೆ  ಕೊಯ್ಲು ಮಾಡಿದ, ಒಣಗಿಸಿದ, ಹದಮಾಡಿದ ಗೆಡ್ಡೆಗಳ ಆಯ್ಕೆ ಅತಿ ಮುಖ್ಯ. ಕವಲು ಗೆಡ್ಡೆಗಳನ್ನು ತೆಗೆಯಬೇಕು. ಒಂದು ಎಕರೆಗೆ 1500 – 1700 ಕಿಲೋ ದುಂಡಾಕಾರದ ಗೆಡ್ಡೆ ಆಯ್ಕೆ ಮಾಡಿ ಮೊದಲನೇ ಬೆಳೆ ಬರೀ ಗೆಡ್ಡೆ ಬೆಳೆಸಿ ಅದರಲ್ಲಿ ಕೊಳತ ರೋಗ ಪಿಡಿತ, ಮೋಳಕೆ ಬಂದ, ಚಿಕ್ಕ, ದೊಡ್ಡ ಗೆಡ್ಡೆಗಳನ್ನು ತೆಗೆದು ಒಂದೇ ಆಕಾರದ / ಗಾತ್ರದ ಚೆನ್ನಾಗಿ ಬಲಿತ ಖಾತ್ರಿ ಗೆಡ್ಡೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.

8 -10 ದಿವಸ ಬಿಸಿಲಿನಲ್ಲಿ ಒಣಗಿಸಿ ನಂತರ ಬಿತ್ತನೆಗೆ ಉಪಯೋಗಿಸಬೇಕು.

ಗೆಡ್ಡೆಗಳ ಬಿತ್ತನೆ :   ಸುಪ್ತಾವಸ್ಥೆ ಕಳೆದುಕೊಂಡಂತಹ ರೋಗರಹಿತವಾದ ಸಾಧಾರಣ ಗೆಡ್ಡೆಗಳನ್ನು ಆಯ್ಕ ಮಾಡಿ ನಂತರ ತುದಿಯ ಮೂರನೇ ಒಂದು ಭಾಗ ಕತ್ತರಿಸಿ, ಕತ್ತರಿಸಿದ ಭಾಗಕ್ಕೆ ಬ್ಲೆಟಾಕ್ಸ (ಕಾಪರ್ ಆಕ್ಸಿ ಕ್ಲೋರೈಡ್) ದ್ರಾವಣದಲ್ಲಿ  ಅದ್ದಿ ನಂತರ 15 ನಿಮಿಷ ಬಿಸಿಲಿನಲ್ಲಿ ಒಣಗಿಸಿ ತದನಂತರ ಗಡ್ಡೆಗಳನ್ನು 30 x 20 ಸೆಂ. ಮೀ ಅಂತರದಲ್ಲಿ ನಾಟಿ ಮಾಡಬೇಕು ಬಿತ್ತನೆ ಮಾಡಿದ ಮರುದಿವಸ ಕ್ಯಾಪ್ಟಾನ್ ಅಥವಾ ಡೈಥೆನ್‍ಒ-45 ಶೀಲಿಂದ್ರ ನಾಶಕದಿಂದ ಸಿಂಪಡಿಸಬೇಕು.

ಗೊಬ್ಬರ ಬಳಕೆ ಒಂದು ಎಕರೆಗೆ: ಕೊಟ್ಟಗೆ ಗೊಬ್ಬರ 10 ಟನ್, ಸಾರಜನಕ 125 ಕೆಜಿ, ರಂಜಕ 50 ಕೆಜಿ ಮತ್ತು 125 ಕೆ.ಜಿ ಪೊಟ್ಯಾಷ ಗೊಬ್ಬರ ಹಾಕಬೇಕು ಶೇ 50ರ ಸಾರಜನಕ ನಾಟಿ ಸಮಯದಲ್ಲಿ ಉಳಿದ ಶೇ 50ರ ಸಾರಜನಕ ನಾಟಿ ಮಾಡಿದ 30 ದಿಸದ ನಂತರ ಕೊಡಬೇಕು.

ನೀರಾವರಿ ಮತ್ತು ಅಂತರ ಬೇಸಾಯ : 4-5 ದಿನಗಳಿಗೊಮ್ಮೆ ಹವಾಗುಣ ಅರಿತು ನೀರು ಹಾಯಿಸಬೇಕು. ಕಳೆ ನಿಯಂತ್ರಣಕ್ಕೆ ಆದ್ಯತೆ ಕೊಡಬೇಕು.

ಬೆಳೆ ಬೇರ್ಪಡಿಸುವಅಂತರ : 500ಮೀ.ಕೊಡಬೇಕು ಅನ್ಯ ಜಾತಿಯ ಸಸಿಗಳನ್ನು ಶೀಘ್ರವಾಗಿ ಮತ್ತು ತಡವಾಗಿ ಬರುವ ಹೂ ಗೊಂಚಲುಗಳನ್ನು ಮತ್ತು ಅನ್ಯ ಜಾತಿಯ ಸಸಿಗಳನ್ನು ಬೀಜೋತ್ಪಾದನೆ ತಾಕಿನಿಂದ ತೆಗೆಯಬೇಕು.

ಬೀಜ ಮೊಳಕೆ ಪ್ರಯಾಣ :  ಶೇ. 70 ಕ್ಕಿಂತ ಮೇಲ್ಪಟ್ಟು ಇರಬೇಕು.

ಬೆಳೆದು ಬೆಳವಣಿಗೆ ಹೊಂದಿದ ಸರಿಯಾದ ಸಮಯಕ್ಕೆ ಕೊಯ್ಲು ಮಾಡಿದ ಒಣಗಿಸಿ ಹದ ಮಾಡಿದ ಗಡ್ಡೆಗಳ ಆಯ್ಕೆ ಅತಿಮುಖ್ಯ ಕವಲು ಗಡ್ಡೆಗಳು ಮತ್ತು ರೋಗ ತಾಗಿದ ಗಡ್ಡೆಗಳನ್ನು ತೆಗೆಯಬೇಕು ಏಕ ಸುಳಿ ಗಡ್ಡೆಗಳು ಆಯ್ಕೆ ಅನಿವಾರ್ಯ.

ಬಿತ್ತನೆ ಗಡ್ಡೆಗಳ ಪ್ರಮಾಣ         : 1500-1700 ಕೆಜಿ/ಎಕರೆಗೆ

ಬಿತ್ತನೆ ಕಾಲ                         : ನವೆಂಬರ್ ತಿಂಗಳು

ಗಡ್ಡೆಗಳ ಬಿತ್ತನೆ                      : ಸುಪ್ತಾವಸ್ಥೆ ಕಳೆದ ಕಳೆದುಕೊಂಡ ನಂತರ ರೋಗರಹಿತವಾದ ಸಾಧಾರಣ ಗಡ್ಡೆಗಳನ್ನು

                                          ಉಪಯೋಗಿಸಬೇಕು.

ಅಂತರ                              : 30 ಸೆಂಟಿಮೀಟರ್ ಸಾಲಿನಲ್ಲಿ ಸಸಿಯಿಂದ ಸಸಿಗೆ 20 ಸೆಂಟಿ ಮೀಟರ್ ಅಂತರವಿರಬೇಕು.

ಗೊಬ್ಬರ ಬಳಕೆ ಒಂದು ಎಕರೆಗೆ  : ಕೊಟ್ಟಿಗೆ ಗೊಬ್ಬರ 10 ಟನ್ ರಾಸಾಯನಿಕ ಗೊಬ್ಬರ ಸಾರಜನಕ 60 ಕೆಜಿ ರಂಜಕ 50 ಕೆಜಿ

                                          ಪೋಟ್ಯಾಷ್ 75 ಕೆಜಿ.

ನೀರಾವರಿ ಮತ್ತು ಅಂತರ ಬೇಸಾಯ

4-5 ದಿನಗಳಿಗೊಮ್ಮೆ ಹವಾಗುಣ ಅರಿತು ನೀರು ಹಾಯಿಸಬೇಕು. ಕಳೆ ನಿಯಂತ್ರಣಕ್ಕೆ ಆದ್ಯತೆ ಕೊಡಬೇಕು.

ಬೆಳೆ ಬೇರ್ಪಡಿಸುವ ಅಂತರ : 400ಮೀ.ಕೊಡಬೇಕು ಶೀಘ್ರವಾಗಿ ಮತ್ತು ತಡವಾಗಿ ಬರುವ ಹೂ ಗೊಂಚಲುಗಳನ್ನು ಮತ್ತು ಅನ್ಯ ಜಾತಿಯ ಸಸಿಗಳನ್ನು ಬೀಜೋತ್ಪಾದನೆ ತಾಕಿನಿಂದ ತೆಗೆಯಬೇಕು ಇದರಿಂದ ಗುಣಮಟ್ಟದ ಶುದ್ಧ ಬೀಜ ಪಡೆಯಬಹುದು

ಸಸ್ಯ ಸಂರಕ್ಷಣೆ : ರೋಗ ರಹಿತ ಬೀಜೋತ್ಪಾದನೆಗಾಗಿ 15 ದಿನಗಳಿಗೊಮ್ಮೆ ಸೂಕ್ತ ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳಿಂದ ಸಿಂಪರಣೆ ಮಾಡಬೇಕು

ಜೇನು ನೊಣಗಳ : ಅವಶ್ಯಕತೆ ಜೇನುನೊಣಗಳ ಸಂಖ್ಯೆ ಸಾಕಷ್ಟಿದ್ದರೆ ಬೀಜದ ಇಳುವರಿ ಹೆಚ್ಚಿಸಬಹುದು ಅದಕ್ಕಾಗಿ ಎರಡು ಜೇನುನೊಣಗಳ ಪಟ್ಟಿಗೆಗಳನ್ನು ಬೀಜೋತ್ಪಾದನಾ ತಾಕುಗಳಲ್ಲಿ ಇಡಬೇಕು.

ಕೊಯಿಲು : ಬೀಜಗಳು ಬಲಿತು ಹೂ ಗೊಂಚಲಿನಲ್ಲಿ ಶೇ. 10 ರಷ್ಟು ಹೂಗಳಲ್ಲಿ ಕಪ್ಪು ಬೀಜ ಕಾಣಿಸಿಕೊಂಡಾಗ ಗೊಂಚಲುಗಳನ್ನು ಕಟಾವು ಮಾಡಬೇಕು. ಈರುಳ್ಳಿ ಹೂವಿಗೆ ನಾವು ಅಂಬೆಲ್ ಎಂದು ಕರೆಯುತ್ತೇವೆ.

ಬೀಜ ಸಂಸ್ಕರಿಸುವುದು : 3-4 ದಿನಗಳು ಟಾರ್ಪಾಲಿನ ಮೇಲೆ ಗೊಂಚಲುಗಳನ್ನು ಒಣಗಿಸಿ ಬೇರ್ಪಡಿಸಬೇಕು ನಂತರ ಬೀಜ ಬೇರ್ಪಡಿಸಬೇಕು  vದನಂತರ ಬೀಜಗಳನ್ನು ಸ್ವಚ್ಛ ಮಾಡಿ ಸಣ್ಣ ಬೀಜಗಳನ್ನು ತೆಗೆಯಬೇಕು, ಬೀಜದ ತೇವಾಂಶ ಶೇ 8ಕ್ಕಿಂತ ಕಡಿಮೆ ಇರುವ ಹಾಗೆ ಒಣಗಿಸಬೇಕು.

ಇಳುವರಿ : 3-4 ಕ್ವಿಂಟಾಲ್ ಪ್ರತಿ ಎಕರಿಗೆ

ಆದಾಯ : ಈಗಿನ ಮಾರುಕಟ್ಟೆಯಲ್ಲಿ ಈರುಳ್ಳಿ ಬೀಜದ ಬೆಲೆ ಪ್ರತಿ ಒಂದು ಕೆ.ಜಿ.ಗೆ ರೂ.1500 ರಿಂದ 2000 ಇದೆ. ಇದರಿಂದ ಒಟ್ಟು 4.5 ರಿಂದ 6 ಲಕ್ಷದ ವರೆಗೆ ರೈತರು ನಾಲ್ಕು ತಿಂಗಳಲ್ಲಿ ಆದಾಯಗಳಿಸಬಹುದು.

ಬೀಜ ಮೊಳಕೆ ಪ್ರಮಾಣ :  ಶೇ. 70 ಕ್ಕಿಂತ ಮೇಲ್ಪಟ್ಟು ಇರಬೇಕು

ಬೀಜೋತ್ಪಾದನೆ ಸಮಯದಲ್ಲಿ ಅನುಸರಿಸಬೇಕಾದ ಕ್ಷೇತ್ರ ಹಾಗೂ ಬೀಜ ಮಾನದಂಡಗಳು

ಕ್ಷೇತ್ರ ಮಾನದಂಡಗಳು

ಬೀಜ ಮಾನದಂಡಗಳು

ಪ್ರತ್ಯೇಕತೆ ಅಂತರ ದೂರ (ಮೀ.)

ಮೂಲ ಬೀಜ - 800 ಮೀ.

ಪ್ರಮಾಣಿತ ಬೀಜ – 400 ಮೀ.

ಬೀಜ ಶುದ್ಧತೆ (ಶೇ) : 98%

ಜಡವಸ್ತು (ಶೇ) : 2%

ಇತರೆ ಬೆಳೆ ಬೀಜ : 10 ಕೆ.ಜಿ.

ಕಳೆ ಬೀಜ : 10 ಕೆ.ಜಿ.

ಮೊಳಕೆ (ಶೇ) : 70%

ತೇವಾಂಶ (ಶೇ) : 7-8%

 

ಲೇಖಕರು: ಡಾ. ಲೋಕೇಶ ಕೆ. ಮತ್ತು ಶ್ರೀ ಸುಹಾಸ ಪಿ.ಡಿ., ಕೃಷಿ ಮಹಾವಿದ್ಯಾಲಯ, ಕಲಬುರಗಿ,ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು

Published On: 30 September 2020, 04:47 PM English Summary: complete information for onion growers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.