ಇದ್ದ ಸ್ವಲ್ಪ ಭೂಮಿಯಲ್ಲಿಯೇ ಮಿಶ್ರಬೆಳೆ ಹಾಕಿ ಸುತ್ತಮುತ್ತಲ್ಲಿನ ರೈತರ ಆಕರ್ಷಣೀಯ ಕೇಂದ್ರವಾಗಿಸಿಕೊಂಡಿದ್ದಾರೆ ಈ ರೈತ. ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರ ಗ್ರಾಮದ ಧನಂಜಯಶೇಟ್ ತನ್ನ ಮನೆಯ ಹಿತ್ತಲಲ್ಲಿ ಮಿಶ್ರಬೆಳೆ ಪದ್ಧತಿಯಿಂದ ಅತಿಹೆಚ್ಚು ಆದಾಯಗಳಿಸಿ ನೆರೆಹೊರೆಯ ರೈತರ ಕಣ್ಣು ಹುಬ್ಬೆರುವಂತೆ ಮಾಡಿದ್ದಾರೆ.
ಬಹಳಷ್ಟು ರೈತರು ಸಾಲಸೂಲ ಮಾಡಿ ಬೆಳೆ ಬೆಳೆದು ಸಂಕಷ್ಟಕ್ಕೆ ಸಿಲುಕುತ್ತಿರುವವರ ಮಧ್ಯದಲ್ಲಿ ಈ ಶಿರಸಿ ಅನ್ನದಾತ ಎಲ್ಲ ರೈತರಿಗೂ ಮಾದರಿಯಾಗಿದ್ದಾರೆ. ಈ ಛಲಗಾರನಿಗೆ ಇರುವುದು ಕೇವಲ 1ಎಕರೆ19ಗುಂಟೆ ಜಮೀನು. ಇದರಲ್ಲಿಯೇ ಎಲ್ಲರೂ ಮೆಚ್ಚಿಕೊಳ್ಳುವಂತಹ ಕೆಲಸ ಮಾಡಿ ತೋರಿಸಿದ್ದಾರೆ.
ಒಂದು ಎಕರೆಯ ಪ್ರದೇಶ ತಗ್ಗು ಇರುವುದರಿಂದ ಸಂಪೂರ್ಣ ವೈಜ್ಞಾನಿಕ ರೀತಿಯಿಂದ ಭತ್ತ ಬೆಳೆದು ಸರಾಸರಿಯಂತೆ ಅವರು 41 ಕ್ವಿಂಟಾಲ್ ಇಳುವರಿಯೊಂದಿಗೆ ರೂ. 75,883 ಒಟ್ಟು ಆದಾಯ ಪಡೆದು ಇತರೆ ರೈತರಿಗೆ ಭತ್ತ ಬೆಳೆಯುವುದರಲ್ಲಿ ಮಾದರಿಯಾಗಿದ್ದಾರೆ. ಉಳಿದ 19 ಗುಂಟೆಯಲ್ಲಿ ಶುಂಠಿಯನ್ನು ಬೆಳೆಯುತ್ತಾ ಬಂದಿದ್ದಾರೆ.
ಆದರೆ ಇಷ್ಟೇ ಕೃಷಿಯಿಂದ ಮನೆ ನಡೆಸಲು ಸಾಧ್ಯವಾಗದೇ ಇದ್ದಾಗ ಮನೆ ಹಿತ್ತಲಲ್ಲಿ 3 ಗುಂಟೆ ಖಾಲಿ ಇದ್ದ ಜಾಗವನ್ನು ಬಳಸಿಕೊಂಡು ವೈಜ್ಞಾನಿಕ ರೀತಿಯಿಂದ ತೋಟಗಾರಿಕಾ ಮಿಶ್ರಬೆಳೆ ಪದ್ಧತಿಯ ವ್ಯವಸಾಯ ಮಾಡುತ್ತಿದ್ದಾರೆ.ಆ ಖಾಲಿ ಜಾಗದಲ್ಲಿ 20 ವರ್ಷಗಳ ಹಿಂದೆ 8 ತೆಂಗಿನ ಗಿಡಗಳನ್ನು ಹಾಗೂ 2 ಮಾವಿನ ಗಿಡಗಳನ್ನು ನೆಟ್ಟಿದ್ದರು. ಅದರ ಮಧ್ಯೆ 7 ವರ್ಷಗಳ ಹಿಂದೆ 80 ಅಡಿಕೆ ಗಿಡಗಳನ್ನು ನೆಟ್ಟರು ಮತ್ತೇ 5 ವರ್ಷಗಳ ಹಿಂದೆ 1 ಬೇರು ಹಲಸು, 1 ಹಲಸು, 1 ರಾಜ ನೀಲಿ ಗಿಡ, 1 ಸಪೋಟ ಗಿಡವನ್ನು ನೆಟ್ಟರು. ಇಷ್ಟೆಲ್ಲಾ ಮಾಡಿದ ಇವರು ಎರಡು ವರ್ಷಗಳ ಹಿಂದೆ ಆಧುನಿಕ ಕೃಷಿಯ ಮೊರೆ ಹೋಗಿ ಕೃಷಿ ವಿಜ್ಞಾನಿಗಳ ಸಲಹೆ ತೆಗೆದುಕೊಂಡರು. ಕೃಷಿ ವಿಜ್ಞಾನಿಗಳ ಸಹಾಯ ಮತ್ತು ಸಲಹೆ ಮೇರೆಗೆ ಎಲ್ಲಾ ಅಡಿಕೆ, ತೆಂಗು, ಮಾವು ಮತ್ತು ಸಪೋಟಾ ಮರಗಳಿಗೆ ಕಾಳುಮೆಣಸು ಸಸಿಗಳನ್ನು ನೆಟ್ಟು ಹಬ್ಬಿಸಲಾಯಿತು. ಅಡಿಕೆ ಮರಕ್ಕೆ ಒಂದರಂತೆ ತೆಂಗು ಮತ್ತು ಇತರೆ ಮರಗಳಿಗೆ 2 ರಂತೆ 100 ಕಾಳುಮೆಣಸು ಸಸಿಗಳನ್ನು ಹಬ್ಬಿಸಲಾಯಿತು. ಇದರ ಜೊತೆ ಜೊತೆಗೆ 70 ಎಲ್ಲಕ್ಕಿ ಗಿಡಗಳನ್ನು ನೆಡಲಾಯಿತು.ಅಷ್ಟೇ ಅಲ್ಲದೇ ನಿರಂತರ ಆದಾಯಕ್ಕಾಗಿ 7 ಅಡಿಕೆ ಮರಗಳಿಗೆ ವೀಳ್ಯದ ಬಳ್ಳಿಗಳನ್ನು ಹಬ್ಬಿಸಲಾಯಿತು. ಜೊತೆಗೆ 5 ಬಾಳೆ ಗಿಡಗಳನ್ನು ನೆಡಲಾಯಿತು.
3 ಗುಂಟೆ ಜಾಗದಲ್ಲಿಯೇ ಜಗತ್ತು
8 ತೆಂಗು, 80 ಅಡಿಕೆ, 2 ಮಾವು, 1 ಸಪೋಟಾ, 1 ಬೇರು ಹಲಸು, 2 ಹಲಸು, 1 ರಾಜನೆಲ್ಲಿ, 2 ಸಾಗುವಾನಿ, 100 ಕಾಳು ಮೆಣಸು, 70 ಏಲಕ್ಕಿ, 7ವೀಳ್ಯದ ಬಳ್ಳಿಗಳು ಹಾಗೂ 5 ಬಾಳೆ ಗಿಡಗಳನ್ನು ನೆಟ್ಟು ವಿಶಿಷ್ಟ ಮಿಶ್ರಬೆಳೆ ಪದ್ಧತಿಗೆ ಸಾಕ್ಷಿಯಾಗಿದ್ದಾರೆ.ಈ ಪದ್ಧತಿಯಿಂದ ಜಾಗ, ಗಾಳಿ, ಸೂರ್ಯನ ಬೆಳಕು, ತೇವಾಂಶ, ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗುತ್ತದೆ. ಇದೇ ಜಾಗದಲ್ಲಿ ಒಂದು ಬಾವಿಯನ್ನು ಮಾಡಿಕೊಂಡು ಈ ಬಾವಿಯಿಂದಲೇ ಎಲ್ಲ ಬೆಳೆಗಳಿಗೆ ನೀರಿನ ಪೊರೈಕೆ ಮಾಡುತ್ತಿದ್ದಾರೆ. ಮನೆ ಪಕ್ಕದಲ್ಲೇ ಇರುವುದರಿಂದ ಮನೆಯವರು ಎಲ್ಲಾ ಸೇರಿ ತುಂಬಾ ಕಾಳಜಿ ವಹಿಸಿ ಪೋಷಣೆ ಮಾಡಿ ಬೆಳೆಸುತ್ತಿದ್ದಾರೆ.
ಇಂತಹ ಸಣ್ಣ ಜಾಗದಲ್ಲಿ 2019-20ರ ಸಾಲಿನಲ್ಲಿ, ಅಡಿಕೆ ಬೆಳೆಯಿಂದ 60 ಕಿ.ಗ್ರಾಂ. ಕೆಂಪಡಕೆ, 18 ಕಿ.ಗ್ರಾಂ ಚಾಲಿ ಅಡಿಕೆ, 560 ತೆಂಗಿನಕಾಯಿ, 7 ವೀಳ್ಯದ ಎಲೆ ಬಳ್ಳಿಯಿಂದ ವರ್ಷಕ್ಕೆ ಸುಮಾರು 20000ಎಲೆ, 75 ಕಿ.ಗ್ರಾಂ ಬಾಳೆ, ಒಂದು ಸೋಪಟಾ ಗಿಡದಿಂದ 3 ಕ್ವಿಂ. ಹಣ್ಣು, 50 ಕಿ.ಗ್ರಾಂ ಮಾವಿನ ಹಣ್ಣು, 13 ಕಿ.ಗ್ರಾಂ ಒಣ ಕಾಳುಮೆಣಸು, 100 ಗ್ರಾಂ ಏಲಕ್ಕಿ ಬೆಳೆದಿದ್ದಾರೆ.
ಆದಾಯ ರೂಪದಲ್ಲಿ ಇವರ ಇಳುವರಿಯ ಮೊತ್ತ
ಅಡಿಕೆಯಿಂದ ರೂ. 24,960, ತೆಂಗಿನಕಾಯಿಯಿಂದ ರೂ. 11,200, ವೀಳ್ಯದ ಎಲೆಯಿಂದ ರೂ. 9,000, ಸಪೋಟಾ ಹಣ್ಣಿನಿಂದ ರೂ. 9,000, ಮಾವಿನ ಹಣ್ಣಿನಿಂದ ರೂ. 2,500, ಕಾಳುಮೆಣಸಿನಿಂದ ರೂ. 4,500, ಹಲಸಿನ ಹಣ್ಣಿನಿಂದ ರೂ. 1,000 ಈ ಎಲ್ಲಾ ಬೆಳೆಗಳಿಂದ ಒಟ್ಟು ಆದಾಯ ರೂ 62,160ಗಳನ್ನು ಗಳಸಿದ್ದಾರೆ.
ಈ ಹೆಮ್ಮೆಯ ಅನ್ನದಾತನನ್ನು ನಾವು ಸಂಪರ್ಕಿಸಿದಾಗ "ಇದು ಕೇವಲ ಪ್ರಾರಂಭದ ಆದಾಯ ಮುಂದಿನ ವರ್ಷ ಈ ಆದಾಯ ಇಮ್ಮಡಿಯಾಗುವುದು ಎಂದ ಸಂತಸವ್ಯಕ್ತಪಡಿಸುತ್ತಾರೆ ಧನಂಜಯ ಶೇಟ್. ಮೊಬೈಲ್ ಸಂ:- 9916358489, 9480721688
ಲೇಖನ: ಯೋಗೇಂದ್ರ ಜಾಯಗೊಂಡೆ
Share your comments