1. ಯಶೋಗಾಥೆ

ಜಮೀನು ಇಲ್ಲದೇ ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಸಾಧಕ ಶ್ರೀ ಮಂಜುನಾಥ ರಂಗಪ್ಪ ಗುರಡ್ಡಿ

Mr. Manjunath Rangappa Gurudi

ಅನೇಕರು ಹೇಳ್ತಾರೆ ನಮ್ಮಲ್ಲಿ ಜಮೀನಿಲ್ಲ. ನೀರಿಲ್ಲ. ಮತ್ತೆ ಹೆಂಗೆ ಕೃಷಿ ಮಾಡೋದು.  ಜೀವನ ನಡೆಸೋದು ಹೆಂಗೆ? ಜಮೀನಿಲ್ಲದಿದ್ದರೆ ಏನಂತೆ ಉಪಕಸುಬು ಮಾಡಬಾರದೆ? ಸರಿ ಉಪಕಸುಬೆಂದರೆ ಯಾವುದು....  ಕುರಿ, ಮೇಕೆ, ಕೋಳಿ, ಹಸು ಸಾಕಣೆ. ಎಲ್ಲದಕ್ಕೂ ಜಮೀನು ಬೇಕಲ್ಲವೆ ಅನ್ನೋದು ಪ್ರತಿಯೊಬ್ಬರ ಪ್ರಶ್ನೆ.

ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು. ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನಾವು ಕಾಣಬಹುದು. ಮಂಜುನಾಥ್ ರಂಗಪ್ಪ ಗುರಡ್ಡಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಇವರ ಊರು. ಇವರಿಗೆ ಸ್ವಂತ ಕೃಷಿ ಜಮೀನಿಲ್ಲ. ನೌಕರಿಗೆ ಹೋಗೋಣ ಅಂದ್ರೆ ಜಾಸ್ತಿ ಓದಿಲ್ಲ. ಕೇವಲ 10ನೇ ಕ್ಲಾಸು ಇವರ ವಿದ್ಯಾಬ್ಯಾಸ. ಬೇರೆ ಕಡೆ ಕೆಲಸಕ್ಕೆ ಹೋಗೋಣ ಅಂದ್ರೆ ಊರು ಬಿಟ್ಟು ಮನೆಮಂದಿನೆಲ್ಲಾ ಬಿಟ್ಟು ಹೋಗೋಕೆ ಮನಸ್ಸು ಬರಲಿಲ್ಲ. ಮತ್ತೆ ಹೇಗಪ್ಪಾ ಜೀವನ ನಡೆಸೋದು ಅನ್ನೋ ಚಿಂತೆ ಇವರಿಗೂ ಕಾಡಿತ್ತು. ಆಗ ಒಂದು ಧೃಡ ನಿರ್ಧಾರಕ್ಕೆ ಬಂದರು. ಊರಲ್ಲೇ ಇದ್ದುಕೊಂಡು ಏನಾದರು ಉಪಕಸುಬು ಮಾಡಬೇಕು. ಅದರಲ್ಲೇ ಜೀವನ ಸಾಗಿಸಬೇಕು ಅಂತ ಯೋಚಿಸಿದರು. ಆಗ ಅವರಿಗೆ ಅರಿವಾದದ್ದು ಹಸು ಸಾಕಣೆ.

ಹಸು ಸಾಕಣೆ ಅನಾದಿ ಕಾಲದಿಂದಲೂ ನಮ್ಮಲ್ಲಿ ರೂಢಿಯಲ್ಲಿದೆ. ಸಾಮಾನ್ಯವಾಗಿ ನಾವು ಒಂದು ಹಸುವನ್ನು ಚೆನ್ನಾಗಿ ಸಾಕಿದರೆ, ಆ ಒಂದು ಹಸು ನಮ್ಮ ಇಡೀ ಕುಟುಂಬವನ್ನು ಸಾಕುತ್ತೆ ಅನ್ನೋದು ಹಲವರ ಅಭಿಪ್ರಾಯ. ಇದನ್ನೇ ನಿಜಜೀವನದಲ್ಲಿ ಸಾಧಿಸಿ ತೋರಿಸಬೇಕು ಅನ್ನೋದು ಮಂಜುನಾಥ್ ಅವರ ಮನಸ್ಸಿಗೆ ಬಂತು. 2004 ರಲ್ಲಿ ಸಾಲ ಮಾಡಿ 18 ಸಾವಿರ ರೂಪಾಯಿಗೆ ಒಂದು ಹಸು ತಂದರು. ಸ್ಥಳೀಯ ನೆರೆಹೊರೆಯವರ  ಜಮೀನುಗಳಲ್ಲಿ ಸಿಗುವ ಕೃಷಿ ತ್ಯಾಜ್ಯಗಳು, ಬದುಗಳ ಮೇಲೆ ಬೆಳೆದ ಹುಲ್ಲು ಹೀಗೆ ಸುತ್ತಮುತ್ತಲೂ ಸಿಗುವ ಮೇವನ್ನು ಅವಲಂಭಿಸಿ ಹಸು ಸಾಕಣೆ ಮುಂದುವರೆಸಿದರು. ಜೀವನಕ್ಕೆ ಆಧಾರವೂ ಸಿಕ್ಕಂತಾಯಿತು. ಜೀವನದಲ್ಲಿ ಯಶಸ್ಸಿನ ಕೊನೆ ಹಂತದ ಮೆಟ್ಟಿಲು ಮುಟ್ಟಬೇಕೆಂದರೆ ನಾವು ಮೊದಲು ಮಾಡಬೇಕಾದದ್ದು ಪ್ರಥಮ ಮೆಟ್ಟಲನ್ನು ಹತ್ತುವುದು. ಒಂದು ಮೆಟ್ಟಿಲು ಹತ್ತಿದರೆ ಮಾತ್ರ ಮತ್ತೊಂದು ಮೆಟ್ಟಿಲು ಹತ್ತಲು ಸಾಧ್ಯ. ಹೀಗೆ ಒಂದು ಹಸುವಿನಿಂದ ಪ್ರಾರಂಭವಾದ ಮಂಜುನಾಥ್‍ರವರ ಹೈನುಗಾರಿಕೆ ಇಂದು ಅವರಲ್ಲಿ 12 ಹಸುಗಳಿವೆ.

ಉತ್ತಮ ಸಾಕಾಣಿಕಾ ವಿಧಾನಗಳ ಅಳವಡಿಕೆಯಿಂದ ಪ್ರತಿ ವರ್ಷ ಹಸು ಕರು ಹಾಕುವಂತೆ ನೋಡಿಕೊಳ್ಳುತ್ತಾರೆ. ಹಾಗಾಗಿ ಯಾವುದೇ ಹೊರಗಿನ ಬಂಡವಾಳವಿಲ್ಲದೆ ತಮ್ಮಲ್ಲೇ ಹಸುಗಳ ಸಂತಾನ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಇನ್ನು ಕಾಲ ಬದಲಾದಂತೆ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಂಡವು. ಮಂಜುನಾಥ್ ಸಹ ವೈಜ್ಞಾನಿಕ ಸಾಕಣೆಯನ್ನು ಅಳವಡಿಸಲು ಮುಂದಾದರು.

ಇವರ ಹೈನುಗಾರಿಕೆಯಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ:

  1. ಕುಟುಂಬದ ಸದಸ್ಯರೇ ಹಸುಗಳ ನಿರ್ವಹಣೆ ಮಾಡುವುದರಿಂದ ಕೂಲಿ ಆಳುಗಳ ಅವಲಂಬನೆ ಇಲ್ಲ.
  2. ಸ್ಥಳೀಯವಾಗಿ ಸಿಗುವ ವ್ಯರ್ಥವಾಗುತ್ತಿದ್ದ ಕಬ್ಬಿನ ಸೋಗೆಯಿಂದ ರಸಮೇವು ತಯಾರಿಸಿ ಬಳಕೆ ಮಾಡುತ್ತಿರುವುದು
  3. ಆಧುನಿಕ ಪದ್ದತಿಯಲ್ಲಿ ಹೈಡ್ರೋಪಾನಿಕ್ಸ್ (ಜಲಕೃಷಿಯಿಂದ) ಹಸಿರು ಮೇವು ಉತ್ಪಾದನೆ
  4. ಕೃತಕ ಪಶು ಆಹಾರದ ಬಳಕೆ ಕಡಿಮೆಗೊಳಿಸಿ ಉತ್ಪಾದನಾ ಖರ್ಚು ಇಳಿಮುಖವಾಗಿರುವುದು
  5. ಹಾಲಿನ ಗುಣಮಟ್ಟ ಹೆಚ್ಚಿಸಿ ಅಧಿಕ ಎಸ್.ಎನ್.ಎಫ್. ಮತ್ತು ಫ್ಯಾಟ್ ಪಡೆಯುವುದು
  6. ವರ್ಷಕ್ಕೊಂದು ಕರು ಪಡೆಯುವುದು.

ಕುಟುಂಬದಲ್ಲಿ ಹೆಚ್ಚಿನ ಸದಸ್ಯರಿದ್ದರೂ ಹೈನುಗಾರಿಕೆ ನಡೆಸುವ ಅನೇಕರು ಕೂಲಿ ಆಳುಗಳ ಮೇಲೆ ಅವಲಂಬಿತರಾಗಿರುವುದು ಸಾಮಾನ್ಯ. ಆದರೆ ಮಂಜುನಾಥ್‍ರವರ ಕುಟುಂಬದ ಮೂವರು ಸದಸ್ಯರೇ ಹೈನುಗಾರಿಕೆಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಆಳುಗಳ ಮೇಲಿನ ಅವಲಂಬನೆ ಇಲ್ಲದಿರುವುದರಿಂದ ಕೂಲಿ ಆಳುಗಳ ಖರ್ಚು ಇಲ್ಲದಂತಾಗಿದೆ. ಕುಟುಂಬದ ಎಲ್ಲರಿಗೂ ಉದ್ಯೋಗ ಲಭಿಸಿದಂತಾಗಿದೆ. ಪ್ರತಿಯೊಬ್ಬ ಹೈನುಗಾರರೂ ಇದನ್ನು ಗಮನಿಸಿದಲ್ಲಿ ಹೆಚ್ಚುವರಿ ಲಾಭ ಗಳಿಸಲು ಸಾಧ್ಯ.

ಕಬ್ಬು, ಭತ್ತ, ಮೆಕ್ಕೆಜೋಳವನ್ನು ನಮ್ಮ ರಾಜ್ಯದಲ್ಲಿ ಯಥೇಚ್ಛವಾಗಿ ಬೆಳೆಯುತ್ತಾರೆ. ಅನೇಕರು ಕಬ್ಬಿನ ಕಟಾವಿನ ನಂತರ ಉಳಿಯುವ ಸೋಗೆ ಅಥವಾ ರವದಿಯನ್ನು ಸುಟ್ಟು ಹಾಕುವುದು ಇಲ್ಲವೇ ಜಮೀನಿನಲ್ಲಿಯೇ ವ್ಯರ್ಥವಾಗಿ ಬಿಡುವುದು ರೂಢಿಯಲ್ಲಿದೆ. ಹಾಗೆಯೇ ಮೆಕ್ಕೆಜೋಳದ ಕಡ್ಡಿಗಳನ್ನು ಸಹ ವ್ಯರ್ಥ ಮಾಡುವುದು ಸಹಜ. ಇನ್ನು ಭತ್ತದ ಹುಲ್ಲಿನ ಸದ್ಬಳಕೆ ತೀರಾ ಕಡಿಮೆ. ಮಂಜುನಾಥ್ ಈ ಸಾಮಾನ್ಯ ವಿಷಯಗಳನ್ನು ತುಂಬಾ ಗಾಢವಾಗಿ ಯೋಚಿಸಿ ಮೇವಿನ ಸದ್ಬಳಕೆಗೆ ಮುಂದಾದರು. ಅದೇನೆಂದರೆ ತಮ್ಮ ಸುತ್ತಮುತ್ತಲ ಊರುಗಳಲ್ಲಿ ಹೆಚ್ಚಿನ ರೈತರು ಕಬ್ಬನ್ನು ಬೆಳೆಯುತ್ತಾರೆ. ಕಬ್ಬಿನ ಕಟಾವು ಸಮಯದಲ್ಲಿ ಆ ರೈತರ ಜಮೀನುಗಳಲ್ಲಿ ಸಿಗುವ ಕಬ್ಬಿನ ಸೋಗೆಯನ್ನು ಸಂಗ್ರಹಿಸುತ್ತಾರೆ. ಈ ಸೋಗೆಯನ್ನು ವೈಜ್ಞಾನಿಕ ವಿಧಾನದಲ್ಲಿ ಪೌಷ್ಠೀಕರಿಸಿ ಸೈಲೇಜ್ ಅಥವಾ ರಸಮೇವನ್ನಾಗಿ ಪರಿವರ್ತಿಸುತ್ತಾರೆ.

ಸೈಲೇಜ್ ತಯಾರಿಕೆಯ ವಿಧಾನ:

ಸಂಗ್ರಹಿಸಿದ ಕಬ್ಬಿನ ಸೋಗೆಯನ್ನು ಮೇವು ಕತ್ತರಿಸುವ ಯಂತ್ರದಿಂದ ಅರ್ಧ ಇಂಚಿನಷ್ಟು ಉದ್ದವಿರುವಂತೆ ಕತ್ತರಿಸುತ್ತಾರೆ. ನಂತರ ರಸಮೇವು ತಯಾರಿಕೆಗೆ ಅಗತ್ಯ ದ್ರಾವಣ ತಯಾರಿಸಿಕೊಳ್ಳುತ್ತಾರೆ.

ಒಂದು ಟನ್ ಮೇವಿಗೆ ಅಗತ್ಯವಾದ ಪದಾರ್ಥಗಳು ಈ ರೀತಿ ಇವೆ.

ಬೆಲ್ಲ-4 ಕೆ.ಜಿ.

ಯೂರಿಯ -0.5 ಕೆ.ಜಿ

ಉಪ್ಪು -2 ಕೆ.ಜಿ.  

ನೀರು – 15 ಲೀ.

4 ರಿಂದ 5 ಸಣ್ಣ ನಿಂಬೆಹಣ್ಣಿನ ರಸ 

ಇವುಗಳ ಮಿಶ್ರಣವನ್ನು ತಯಾರಿಸುತ್ತಾರೆ. ನಂತರ 1ಟನ್ ಸಾಮಥ್ರ್ಯದ ಪ್ಲಾಸ್ಟಿಕ್ ಚೀಲಗಳಲ್ಲಿ 1 ಅಡಿಯಷ್ಟು ಕತ್ತರಿಸಿದ ಸೋಗೆಯನ್ನು ತುಂಬುತ್ತಾರೆ. ಚೆನ್ನಾಗಿ ಒತ್ತಿ ತುಳಿಯುವುದರಿಂದ ಹೆಚ್ಚು ಮೇವು ಸಂಗ್ರಹಣೆಯಾಗುತ್ತದೆ. ಜೊತೆಗೆ ಗಾಳಿ ಪ್ರವೇಶ ಆಗದಂತೆ ತಡೆಯುತ್ತದೆ.  ಅದರ ಮೇಲೆ ಸ್ವಲ್ಪ ರಸಮೇವು ದ್ರಾವಣವನ್ನು ಚಿಮುಕಿಸುತ್ತಾರೆ. ಪುನಃ 1ಅಡಿಯವರೆಗೂ ಕಬ್ಬಿನ ಸೋಗೆ ಮೇಲೆ ದ್ರಾವಣ ಹೀಗೆ ಪದರ ಪದರವಾಗಿ ತುಂಬಿಸಿ ಚೀಲವನ್ನು ಬಿಗಿಯಾಗಿ ಕಟ್ಟಿ 45ದಿನಗಳ ಕಾಲ ಇಡುತ್ತಾರೆ. ಒಂದು ಚೀಲದಲ್ಲಿ ಸುಮಾರು ಒಂದು ಟನ್ ಮೇವನ್ನು ತುಂಬಿಸುತ್ತಾರೆ. ಹೀಗೆ ಸುಮಾರು 25ಟನ್‍ನಷ್ಟು ಮೇವನ್ನು ರಸಮೇವನ್ನಾಗಿ ಪರಿವರ್ತಿಸಿ ಬಳಸುತ್ತಾರೆ. ಈ ರಸಮೇವನ್ನು ಒಂದೂವರೆ ತಿಂಗಳ ನಂತರದ ವಯಸ್ಸಿನ ಕರುಗಳಿಗೆ ಬಳಸುತ್ತಾರೆ. ಒಂದು ಬ್ಯಾಗ್ ಸುಮಾರು 20 ದಿನಗಳಿಗೆ ಸರಿಹೊಂದುತ್ತದೆ. ಈ ಪದ್ದತಿ ನೀರಾವರಿ ಪ್ರದೇಶದ ಕಬ್ಬು ಬೆಳೆಗಾರರಿಗೆ ಒಂದು ಉತ್ತಮ ಅವಕಾಶವಾಗಿದೆ.

ಮತ್ತೊಂದು ವೈಜ್ಞಾನಿಕ ವಿಧಾನವೆಂದರೆ ಹೈಡ್ರೋಪಾನಿಕ್ಸ್. ಇತ್ತೀಚೆಗೆ ಪ್ರಚಲಿತಗೊಂಡಿರುವ ಜಲಕೃಷಿ. ಮಣ್ಣಿಲ್ಲದೆ ಬೆಳೆ ಬೆಳೆಸುವ ವಿಧಾನ. ಜಮೀನು ರಹಿತರೂ ಅಳವಡಿಸಬಹುದಾದ ಸುಲಭ ಮಾರ್ಗ.

ವಾರಣ ಡೈರಿಯವರ ಸಹಾಯಧನ ಪಡೆದು 80ಟ್ರೇಗಳ ಸಾಮಥ್ರ್ಯದ ಹೈಡ್ರೋಪಾನಿಕ್ಸ್ ಘಟಕ ಪ್ರಾರಂಭಿಸಿದ್ದಾರೆ. ನಿರಂತರವಾಗಿ ಪ್ರತಿ ದಿನ 10ಟ್ರೇಗಳಿಂದ 50ಕೆ.ಜಿ.ಯಷ್ಟು ಹಸಿರು ಮೇವು ಉತ್ಪಾದಿಸುತ್ತಿದ್ದಾರೆ. ಹೈಡ್ರೋಪಾನಿಕ್ ಘಟಕಕ್ಕೆ ತಗುಲುವ ಖರ್ಚು 18000ರೂಪಾಯಿ. ಇದರಲ್ಲಿ ವಾರಣ ಡೈರಿಯಿಂದ 6000 ರೂಪಾಯಿ ಸಹಾಯ ಧನ ದೊರೆತಿದೆ.

                    

 ಬೆಳೆಸುವ ವಿಧಾನ:

ಹೈಡ್ರೋಪಾನಿಕ್ಸ್ ವಿಧಾನದಲ್ಲಿ ಮೇವು ಬೆಳೆಯಲು ಮೆಕ್ಕೆಜೋಳದ ಬೀಜ ಅತ್ಯವಶ್ಯಕ ಹಾಗೂ ಹೆಚ್ಚು ಸೂಕ್ತ. ಮೊದಲು ಬಿತ್ತನೆ ಬೀಜಗಳನ್ನು 24ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಚೀಲದಲ್ಲಿ ಕಟ್ಟಿ 24ಗಂಟೆಗಳ ಕಾಲ ಮೊಳಕೆಯೊಡೆಯಲು ಬಿಡಬೇಕು. ಹೀಗೆ ಮೊಳಕೆ ಬಂದ ಬೀಜಗಳನ್ನು ತಳಭಾಗದಲ್ಲಿ ರಂಧ್ರಗಳನ್ನು ಕೊರೆದ ಪ್ಲಾಸ್ಟಿಕ್ ಟ್ರೇಗಳಲ್ಲಿ ಹರಡಬೇಕು. 1.5ಅಡಿ ಉದ್ದ 1ಅಡಿ ಅಗಲ ಅಳತೆಯ ಪ್ರತಿ ಟ್ರೇಗೆ 400ಗ್ರಾಂ. ಬೀಜ ಬೇಕಾಗುತ್ತದೆ. ನಮಗೆ ಅಗತ್ಯವಿರುವಷ್ಟು ಟ್ರೇಗಳಿಗೆ ಬೀಜ ಹಾಕಿ ಸ್ಟ್ಯಾಂಡ್‍ನಲ್ಲಿ ಜೋಡಿಸಿಡಬೇಕು. ಪ್ರತಿ 2ಗಂಟೆಗೆ ಒಮ್ಮೆ ಒಂದು ನಿಮಿಷದಂತೆ ನೀರನ್ನು ಚಿಮುಕಿಸುವಂತಹ ಸಾಧಕದಿಂದ ತೆಳುವಾಗಿ ನೀರು ಚಿಮುಕಿಸಬೇಕು. ಇದಕ್ಕಾಗಿ ಆಟೋಮ್ಯಾಟಿಕ್ ಟೈಮರ್ ಅಳವಡಿಸಿ ತನ್ನಷ್ಟಕ್ಕೆ ತಾನೇ ಚಾಲನೆ ಪಡೆಯುವ ಯಂತ್ರವನ್ನು ಅಳವಡಿಸಿದ್ದಾರೆ.  ಬಿತ್ತನೆಯಾದ 10ದಿನಗಳಲ್ಲಿ ಮೇವು ಸಿದ್ದವಾಗುತ್ತದೆ. ಈ ಮೊಳಕೆಗಳು ಯಥೇಚ್ಚೇಯಾಗಿ ಬೇರುಗಳಿಂದ ಕೂಡಿದ್ದು ಹೆಚ್ಚಿನ ಪ್ರಮಾಣದ ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ. ಜಾನುವಾರುಗಳಿಗೆ ಉತ್ಕøಷ್ಟವಾದ ಮೇವು. ಒಂದು ಟ್ರೇ ನಿಂದ 4-5ಕೆ.ಜಿಯಷ್ಟು ಮೇವು ಉತ್ಪಾದಿಸಬಹುದು. ನಮಗೆ ತಗಲುವ ಖರ್ಚು ಪ್ರತಿ ಕೆ.ಜಿ.ಗೆ 1ರೂಪಾಯಿ. ಪ್ರತಿನಿತ್ಯ ಅಗತ್ಯವಿರುವಷ್ಟು ಮೇವನ್ನು ಉತ್ಪಾದಿಸಲು ಸೂಕ್ತ ಪ್ರಮಾಣದ ಟ್ರೇಗಳ ಸಂಖ್ಯೆಯನ್ನು ಹೊಂದಿರಬೇಕು. ಈ ವಿಧಾನ ಬಳಸಿ ಜಮೀನು ರಹಿತ ರೈತರೂ ಸಹ ಸುಲಭವಾಗಿ ಮೇವು ಉತ್ಪಾದನೆ ಮಾಡಬಹುದು.

 

ಸೈಲೇಜ್ ಹಾಗೂ ಹೈಡ್ರೋಪಾನಿಕ್ಸ್ ಜೊತೆಗೆ ಸ್ಥಳೀಯ ಜಮೀನುಗಳಲ್ಲಿ ಸಿಗುವ ಒಣಕಣಿಕೆ (ಒಣಮೇವು) ಸಂಗ್ರಹಿಸುತ್ತಾರೆ. ಈ ಮೇವನ್ನು ಉಚಿತವಾಗಿ ನೀಡುತ್ತಿರುವ ರಬಕವಿ ಗ್ರಾಮಸ್ಥರು ಹಾಗೂ ತಮ್ಮ ಬಂಧುಗಳನ್ನು ಮಂಜುನಾಥ್ ಹೃದಯಪೂರ್ವಕವಾಗಿ ಸ್ಮರಿಸುತ್ತಾರೆ.

ಆಹಾರ ನೀಡುವ ವಿಧಾನ: ( ಪ್ರತಿ ಹಾಲು ಹಿಂಡುವ ರಾಸುವಿಗೆ)

ಬೆಳಿಗ್ಗೆ : ಸ್ಥಳೀಯರ ಜಮೀನುಗಳಿಂದ ಸಂಗ್ರಹಿಸಿದ ಒಣಮೇವು 10-15ಕೆ.ಜಿ ಜೊತೆಗೆ 1ಕಿ.ಜಿ. ಹಿಂಡಿ

ಮದ್ಯಾಹ್ನ: 10 ಕೆ.ಜಿ. ಸೈಲೇಜ್ ಮೇವು

ಸಂಜೆ: 10 ಕೆ.ಜಿ. ಹೈಡ್ರೋಪಾನಿಕ್ಸ್ ಮೇವು ಜೊತೆಗೆ 1 ಕೆ.ಜಿ. ಹಿಂಡಿ

 

ಉತ್ಪಾದನಾ ಖರ್ಚಿನಲ್ಲಿ ಇಳಿಮುಖ:

ಹೆಚ್ಚು ಪೌಷ್ಟಿದಾಯಕ ಹೈಡ್ರೋಪಾನಿಕ್ಸ್ ಹಾಗೂ ರಸಭರಿತ ಸೈಲೇಜ್ ಮೇವನ್ನು ಪೂರೈಸುವುದರಿಂದ ಕೃತಕ ಆಹಾರ ಅಥವಾ ಸಿದ್ದಪಡಿಸಿದ ಪಶು ಆಹಾರ ಬಳಕೆಯ ಪ್ರಮಾಣ ಕಡಿಮೆ ಮಾಡಿದ್ದಾರೆ. ಈ ಹಿಂದೆ ಹಾಲು ನೀಡುವ ಪ್ರತಿ ರಾಸುವಿಗೆ ಬೆಳಿಗ್ಗೆ 3ಕೆ.ಜಿ. ಆಹಾರ ಸಂಜೆ 3ಕೆ.ಜಿ ದಾಣಿ ಮಿಶ್ರಣ ನೀಡುತ್ತಿದ್ದರು. ಆದರೆ ಈಗ ಬೆಳಿಗ್ಗೆ ಕೇವಲ 1ಕೆ.ಜಿ. ಹಾಗೂ  ಸಂಜೆ 1ಕೆ.ಜಿ ಬಳಸುತ್ತಾರೆ. ಹಾಗಾಗಿ 4 ಕೆ.ಜಿ ಪಶುಆಹಾರ ಕಡಿಮೆಯಾಗಿ ಪ್ರತಿದಿನ ಪ್ರತಿ ರಾಸುವಿನಿಂದ  ಸುಮಾರು 80ರೂಪಾಯಿಯಷ್ಟು ಹಣ ಉಳಿತಾಯವಾಗುತ್ತಿದೆ.

ಹಾಲಿನ ಗುಣಮಟ್ಟ ಏರಿಕೆ:

ಸಮತೋಲನ ಆಹಾರ ಪೂರೈಕೆಯಿಂದಾಗಿ ತಾವು ಉತ್ಪಾದಿಸುವ ಹಾಲಿನ ಗುಣಮಟ್ಟ ಉತ್ತಮಗೊಂಡಿದೆ. ಹಾಲಿನಲ್ಲಿ ಕನಿಷ್ಟ 4.4 ಫ್ಯಾಟ್ ಮತ್ತು 8.7ಎಸ್.ಎನ್.ಎಫ್. ಪಡೆಯುತ್ತಿದ್ದಾರೆ. ಪ್ರತಿ ಲೀ. ಹಾಲಿಗೆ 28ರೂಪಾಯಿ ಪಡೆಯುತ್ತಾರೆ.

ತಿಂಗಳಿಗೆ 30 ಸಾವಿರ ರೂ. ಆದಾಯ:

ಮಂಜುನಾಥ್‍ರವರಲ್ಲಿ ಪ್ರಸ್ತುತ 8ರಾಸುಗಳು ಹಾಗೂ 4ಕರುಗಳಿವೆ. ವರ್ಷಪೂರ್ತಿ ನಿರಂತರವಾಗಿ ಹಾಲು ಉತ್ಪಾದನೆಯ ಸಲುವಾಗಿ ಎರಡು ಬ್ಯಾಚ್‍ಗಳಲ್ಲಿ ಹಾಲುಕರೆಯುವ ರಾಸುಗಳನ್ನು ವಿಂಗಡಿಸಿದ್ದಾರೆ. 4 ಹಸುಗಳು ಹಾಲು ನೀಡುವ ಹಂತದಲ್ಲಿದ್ದರೆ, ಮತ್ತೆ ನಾಲ್ಕು ಹಸುಗಳು ಗರ್ಭ ಧರಿಸಿರುತ್ತವೆ. ಪ್ರತಿ ದಿನ ಸರಾಸರಿ 60 ಲೀ ಹಾಲು ಪಡೆಯುತ್ತಿದ್ದಾರೆ. ದಿನದ ಸಂಪಾದನೆ ಸರಾಸರಿ ಒಂದು ಸಾವಿರದಿಂದ ಒಂದೂವರೆ ಸಾವಿರ ರೂಪಾಯಿ ಆಗಿದೆ. ತಿಂಗಳಿಗೆ 30 ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ಮಂಜುನಾಥ್ ಅವರ ಈ ಸಾಧನೆಗೆ ಬೆನ್ನುಲುಬಾಗಿ ಇವರ ತಂದೆ ರಂಗಪ್ಪ ತಿಮ್ಮಪ್ಪ ಗುರಡ್ಡಿ. ತಮ್ಮ ಇಳಿವಯಸ್ಸಿನಲ್ಲೂ ಪ್ರತಿದಿನ 3-4 ಹೊರೆ ಮೇವು ಸಂಗ್ರಹಿಸಿ ತರುತ್ತಾರೆ. ದಿನನಿತ್ಯದ ಪಶುಪಾಲನಾ ಚಟುವಟಿಕೆಗಳಲ್ಲಿ ಮಗನ ಜೊತೆ ಸಕ್ರಿಯವಾಗಿ ಭಾಗವಹಿಸುತ್ತಾರೆ.

ಮಂಜುನಾಥ್‍ರವರ ಹೈನಾಗಾರಿಕೆಗೆ ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ನೆರವಾದದ್ದು. ವಾರಣ ಡೈರಿಯ ಡಾ|| ಆರ್.ಬಿ.ಪಾಟೀಲ್ ಹಾಗೂ ಡಾ|| ಭರತ್ ತೇರದಾಳ ಇವರು ಹಸುಗಳ ಆರೋಗ್ಯ ರಕ್ಷಣೆ ಹಾಗೂ ತಾಂತ್ರಿಕ ನಿರ್ವಹಣೆಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡುತ್ತಿರುತ್ತಾರೆ. ಹೈಡ್ರೋಪಾನಿಕ್ಸ್ ಘಟಕ ನಿರ್ಮಾಣ ಹಾಗೂ ಸೈಲೇಜ್ ಬ್ಯಾಗ್‍ಗಳ ಖರೀದಿಗೆ ವಾರಣ ಡೈರಿಯಂದ ಪ್ರೋತ್ಸಾಹ ಧನ ನೀಡಿದ್ದಾರೆ. ಜೊತೆಗೆ ರಬಕವಿ ಗ್ರಾಮದಲ್ಲಿಯೇ ವಾರಣ ಡೈರಿಯ ಹಾಲು ಸಂಗ್ರಹಣಾ ಕೇಂದ್ರವನ್ನು ಪ್ರಾರಂಭಿಸಲು ನೆರವಾಗಿದ್ದಾರೆ. ಈ ಮೂಲಕ ಮಂಜುನಾಥ್ ಅವರು ಪ್ರತಿ ತಿಂಗಳು ಸುಮಾರು 6000 ರೂ ಹೆಚ್ಚುವರಿ ಆದಾಯ ಪಡೆಯುತ್ತಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿ ಹಲವು ಸಂಸ್ಥೆಗಳು ಸನ್ಮಾನಿಸಿವೆ. ರಾಜ್ಯದ ಹಲವು ರೈತ ತರಬೇತಿ ಕೇಂದ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಅನುಭವವನ್ನು  ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಹೆಸರಘಟ್ಟ ಹೈನುಗಾರಿಕಾ ತರಬೇತಿ ಕೆಂದ್ರದಲ್ಲಿಯೂ ಸನ್ಮಾನ ಏರ್ಪಡಿಸಲಾಗಿತ್ತು.

ಜಮೀನಿದ್ದವರೆಲ್ಲಾ ಕೈಲಾಗದೆ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಈ ಕಾಲದಲ್ಲಿ ಹಳ್ಳಿಯಲ್ಲೇ ಸ್ವಂತ ಉದ್ಯೋಗಕ್ಕಾಗಿ ಹೈನುಗಾರಿಕೆ ನಡೆಸುತ್ತಿರುವ ಮಂಜುನಾಥ್ ಮಾದರಿಯಾಗಿದ್ದಾರೆ. ಇವರ ಈ ಸಾಧನೆ, ಮೇವು ಬೆಳೆಯಲು ನೀರಿಲ್ಲದೆ ಪರದಾಡುತ್ತಿರುವ ಅನೇಕ ರೈತರಿಗೆ ಉತ್ತೇಜನವಾಗಿದೆ. ಹೈನುಗಾರಿಕೆ ಲಾಭದಾಯಕವಲ್ಲ ಎಂದು ದೂರ ಸರಿಯುತ್ತಿರುವ ಅನೇಕ ರೈತರಿಗೆ ಈ ಲೇಖನ ಪ್ರೋತ್ಸಾಹದಾಯಕವಾಗಲಿದೆ ಎಂದು ಭಾವಿಸುತ್ತೇನೆ.

 

ಹೆಚ್ಚಿನ ಮಾಹಿತಿಗೆ ರೈತರನ್ನು ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.. 8970055196

Published On: 04 October 2018, 03:20 AM English Summary: Mr. Manjunath Rangappa Gurudi, a successful successor to dairy farming without land

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.