1. ಯಶೋಗಾಥೆ

ಹೈಡ್ರೋಫೋನಿಕ್

ಹೈನುಗಾರಿಕೆಯಲ್ಲಿ ಸಾಧನೆ ಮಾಡಬೇಕೆಂಬುದು ಪ್ರಕಾಶ್ ವಿಜಾಪುರರು ಬಾಲ್ಯದಲ್ಲಿಯೇ ಕಂಡ ಕನಸು. ತನ್ನ ಕನಸನ್ನು ಈಡೇರಿಸಿಕೊಳ್ಳಲು ಎಸ್.ಎಸ್.ಎಲ್.ಸಿ ಓದುತ್ತಿರುವಾಗಲೇ ರುಡ್ಸೆಟ್ ಸಂಸ್ಥೆಗೆ ತೆರಳಿ ವಾರ ಪೂರ್ತಿ ಕುಳಿತು ತರಬೇತಿ ಪಡೆದು ಬಂದಿದ್ದರು. ಇವರ ಮನೆಯ ಪಕ್ಕದಲ್ಲಿಯೇ ಇರುವ ಚಂದ್ರಶೇಖರ್ ಎನ್ನುವವರ ಹೈನುಗಾರಿಕೆ ಘಟಕ ಪ್ರಕಾಶ್ ಅವರಲ್ಲಿ  ಬಾಲ್ಯದಲ್ಲಿಯೇ ಹೈನುಗಾರಿಕೆಯೆಡೆ ಕುತೂಹಲ ಹುಟ್ಟಲು ಕಾರಣ. ಅವರ ಕೊಟ್ಟಿಗೆಯಲ್ಲಿ ನಲವತ್ತು ಆಕಳುಗಳಿದ್ದವು. ತನ್ನ ತಾಯಿಯ ಜೊತೆಗೆ ಚಂದ್ರಶೇಖರ್ ಅವರಲ್ಲಿರುವ ಹಿಟ್ಟಿನ ಗಿರಣಿಗೆ ತೆರಳುತ್ತಿದ್ದ ಬಾಲಕ ಪ್ರಕಾಶ್ ತಾಯಿ ಹಿಟ್ಟು ಮಾಡಿಸಿಕೊಳ್ಳುವ ತರಾತುರಿಯಲ್ಲಿದ್ದರೆ ಈತ ಕೊಟ್ಟಿಗೆಯಲ್ಲಿನ ಆಕಳುಗಳನ್ನು ನೋಡಲು ತೆರಳಿ ಕುತೂಹಲದಿಂದ ವೀಕ್ಷಿಸುತ್ತಿದ್ದ. ಚಿಕ್ಕಂದಿನಿಂದಲೇ ಪ್ರಾಣಿಗಳೆಡೆಗೆ ಆಕರ್ಷಿತರಾದ ಬಾಲಕ ಪ್ರಕಾಶ್ ಅವರಲ್ಲಿ ಸಹಜವಾಗಿಯೇ ಜಾನುವಾರು ಸಾಕಾಣಿಕೆ ಮಾಡಬೇಕೆನ್ನುವ ಕನಸು ಬೇರೂರಿತ್ತು. ಪಿಯುಸಿ ಮುಗಿಯುತ್ತಿದ್ದಂತೆಯೆ ತಂದೆ ಬಸವಂತಪ್ಪರಲ್ಲಿ ತಾವು ಮಾಡಲಿರುವ ಹೈನುಗಾರಿಕೆ ಆಲೋಚನೆ ಹಂಚಿಕೊಂಡರು.

ಬಿ.ಕಾಂ ಓದುತ್ತಿರುವಾಗಲೇ  ತಮ್ಮ ಹೊಲದಲ್ಲಿ ಕೊಳವೆ ಬಾವಿ ತೆಗೆಯಿಸಿದ ಪ್ರಕಾಶ್ ಕಾಲೇಜು ಮುಗಿಯುತ್ತಿದ್ದಂತೆಯೆ ಕೊಟ್ಟಿಗೆ ರಚನೆಗೆ ಮುಂದಾದರು. ತಮ್ಮ ಐದು ಎಕರೆ ಕೃಷಿ ಜಮೀನನ್ನು ಹಸಿರು ಮೇವು ಕೃಷಿಗೆ ಒಳಪಡಿಸಿದರು. ಸ್ಥಳೀಯವಾಗಿಯೇ ದೊರೆತ ಐದು ಆಕಳನ್ನು ಒಮ್ಮೆಲೇ ಕರೀದಿಸಿದರು. ಉತ್ತಮ ಹಾಲಿನ ಇಳುವರಿ ಸಿಗತೊಡಗಿತು. ಹೈನುಗಾರಿಕೆಯಲ್ಲಿ ತರಬೇತಿ ಪಡೆದಿದ್ದರಿಂದ ನಿರ್ವಹಣೆ ಕಷ್ಟವೆನಿಸಲಿಲ್ಲ. ತಾಂತ್ರಿಕತೆ ಅಳವಡಿಸಿಕೊಂಡು ಮುಂದುವರೆಯತೊಡಗಿದರು. ಉತ್ಪಾದನೆಯಾದ ಹಾಲು ಸ್ಥಳೀಯವಾಗಿಯೇ ಮಾರಾಟ ಮಾಡತೊಡಗಿದರು. ಆರು ತಿಂಗಳಾಗುವ ಹೊತ್ತಿಗೆ ಜಾನುವಾರುಗಳ ಸಂಖ್ಯೆ ಹೆಚ್ಚಿಸಬೇಕೆನ್ನಿಸಿತು. ಪುನಃ ಐದು ಆಕಳನ್ನು ಕರೀದಿಸಿ ತಂದರು. ದಿನದಿಂದ ದಿನಕ್ಕೆ ಹೈನುಗಾರಿಕೆಯಲ್ಲಿನ ಇವರ ಆಸಕ್ತಿ ವೃದ್ದಿಯಾಗುತ್ತಾ ಹೋಯಿತು. ವರ್ಷ ಎರಡು ಕಳೆಯುವುದರೊಳಗಾಗಿ ಜಾನುವಾರುಗಳ ಸಂಖ್ಯೆ ಮೂವತ್ತಕ್ಕೇರಿತ್ತು. ಈಗ ಹೈನುಗಾರಿಕೆ ಆರಂಭಿಸಿ ಮೂರು ದಶಕಗಳು ಸಂದಿದೆ. 40 ಆಕಳುಗಳು ಕೊಟ್ಟಿಗೆಯಲ್ಲಿವೆ. 35 ಎಚ್.ಎಫ್ ತಳಿಯ ಆಕಳು. ಐದು ಜರ್ಸಿ ಆಕಳುಗಳಿವೆ. ಹದಿನೈದು ಕರುಗಳೊಂದಿಗೆ ಎರಡು ಎಮ್ಮೆಗಳಿವೆ.

ತಮ್ಮಲ್ಲಿ ಹುಟ್ಟಿದ ಕರುಗಳನ್ನು ಸರಿಯಾಗಿ ಪೋಷಿಸಿ ಉತ್ತಮ ಹಾಲಿನ ಇಳುವರಿ ನೀಡುವ ಆಕಳುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ದಿನ ನಿತ್ಯ 300-350 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ವರ್ಷಪೂರ್ತಿ ಇವರಲ್ಲಿ ದಿನಕ್ಕೆ ಸರಾಸರಿ 300 ಲೀಟರ್ ಹಾಲು ಸಿಗುತ್ತಿರುತ್ತದೆ. ಪ್ರಕಾಶ್ ವಿಜಾಪುರ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದವರು.

ಹೈಡ್ರೋಫೋನಿಕ್ ವಿಧಾನದಲ್ಲಿ ಹಸಿರು ಮೇವು:

ಹೈನುಗಾರಿಕೆಯಲ್ಲಿ ಪ್ರಕಾಶ್ ವಿಜಾಪುರರಿಗೆ ಮೂರು ದಶಕದ ಅನುಭವ. 2010-2015 ರ ನಡುವೆ ಮಳೆಯ ಕೊರತೆಯಿಂದ ನೀರಿಗೆ ಬರ ತೀರ್ವವಾಗಿತ್ತು. ಮೇವು ಬೆಳೆಸಲು ನೀರಿನ ಅಭಾವ. ನಲವತ್ತು ಆಕಳನ್ನು ಪೋಷಿಸುತ್ತಿರುವ ಇವರಿಗೆ ಇದು ತಲೆನೋವಾಗಿ ಪರಿಣಮಿಸಿತ್ತು. ಹಸಿರು ಮೇವು ಸಿಗದೇ ಆಕಳುಗಳೂ ಹಾಲು ಕಡಿತಗೊಳಿಸಿಕೊಂಡಿದ್ದವು. ಮೇವು ಕರೀದಿಸಲು ಹೋದರೆ ಉಳಿಕೆ ದಿನಗಳಲ್ಲಿ 2000 ರೂಪಾಯಿಗೆ ಸಿಗುತ್ತಿದ್ದ ಒಂದು ಟ್ರಾಕ್ಟರ್ ಲೋಡ್ ಮೇವು 10,000 ರೂಪಾಯಿಗೆ ಏರಿಕೆಯಾಗಿತ್ತು. ಇದರಿಂದ ತೀರ್ವವಾಗಿ ಮನನೊಂದ ಪ್ರಕಾಶ್ ಒಂದು ಹಂತದಲ್ಲಿ ಆಕಳುಗಳನ್ನು ಮಾರಿ ಬಿಡೋಣ ಎಂದು ನಿರ್ಧರಿಸಿದ್ದರು. ನಷ್ಟ ಮಾಡಿಕೊಂಡು ಹೈನುಗಾರಿಕೆ ಮಾಡುವುದರಲ್ಲಿ ಯಾವ ಸುಖವಿದೆ ವಿಕೃಯಿಸುವುದೇ ಒಳಿತು ಎಂದು ಹಲವರು ಇವರಿಗೆ ಸಲಹೆ ನೀಡಿದ್ದರು. ಆದರೆ ಪ್ರೀತಿಯಿಂದ ಸಾಕಿದ ಜಾನುವಾರುಗಳನ್ನು ಮಾರಲು ಇವರಿಗೆ ಮನಸ್ಸಾಗಲಿಲ್ಲ. ಹಸಿರು ಮೇವು ಬೆಳೆಯಲು ಪರ್ಯಾಯ ಮಾರ್ಗ ಹುಡುಕಲು ಮುಂದಾದರು.

ನೀರಿನ ಕೊರತೆಯಿರುವ ಸ್ಥಳಗಳಲ್ಲಿ ಹೇಗೆ ಹೈನುಗಾರಿಕೆ ಮಾಡಲಾಗುತ್ತಿದೆ. ಮಳೆ ಬೀಳದ ಪ್ರದೇಶಗಳಲ್ಲಿ ಅದ್ಹೇಗೆ ಹಸಿರು ಮೇವು ಬೆಳೆದುಕೊಳ್ಳುತ್ತಾರೆ ಎನ್ನುವ ಕುತೂಹಲದ ಬೆನ್ನು ಹತ್ತಿ ಉತ್ತರ ಕಂಡುಕೊಳ್ಳಲು ಬರ ಪ್ರದೇಶಗಳಿಗೆ ಪಯಣಿಸಿದರು. ಅಲ್ಲಿನ ರೈತರ ಹೈನುಗಾರಿಕೆ ಮಾದರಿಗಳನ್ನು ಅದ್ಯಯನ ಮಾಡಿದರು. ಕೃಷಿ ವಿಶ್ವ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳಲ್ಲಿ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದರು. ಅದೊಮ್ಮೆ ಅಂತರ್ಜಾಲದಲ್ಲಿ ಕುತೂಹಲದಿಂದ ಈ ಬಗ್ಗೆ ಮಾಹಿತಿ ಕಲೆ ಹಾಕಲು ತೊಡಗಿದ್ದಾಗ ಮಣ್ಣು ರಹಿತ ಹಸಿರು ಮೇವು ಬೆಳೆಯುವ ವಿಧಾನ ಇವರ ಗಮನ ಸೆಳೆಯಿತು.

ಬ್ರೆಜಿಲ್ ಮತ್ತು ಡೆನ್ಮಾರ್ಕಗಳಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಮೇವು ಬೆಳೆಸುತ್ತಿರುವ ಬಗ್ಗೆ ಮಾಹಿತಿ ದೊರೆಯಿತು. ಮಾಹಿತಿಯ ಜಾಡು ಹಿಡಿದು ಬೆಳೆಯ ವಿಧಾನದ ಬಗ್ಗೆ ಅಧ್ಯಯನ ಮಾಡಿದರು. ಬೀಜದ ಆಯ್ಕೆ, ಮೇವು ಬೆಳೆಸುವ ವಿಧಾನ ಬಗ್ಗೆ ಅರಿತುಕೊಂಡು ಮಣ್ಣು ರಹಿತವಾಗಿ ಬೆಳೆಯುವ ಹಸಿರು ಮೇವಿನ ಕೃಷಿಗೆ ಮುಂದಾದರು.

ಹೊಸ ಪ್ರಯತ್ನಕ್ಕೆ ಅಡಿಯಿಟ್ಟ ಇವರಿಗೆ ಹಲವರಿಂದ ನಿರಾಸೆಯ ಮಾತುಗಳೆದುರಾದವು. ನಮ್ಮ ಭಾಗದಲ್ಲಿ ಎಲ್ಲಿಯೂ ಇಲ್ಲದ ಆ ಮಾದರಿ ನಿನ್ನಲ್ಲಿ ಆಗಲಿಕ್ಕಿಲ್ಲ ಬಿಡು ಎಂದರು. ನಕಾರಾತ್ಮಕ ಮಾತುಗಳಿಗೆ ಕಿವಿಕೊಡದ ಜಿಜಾಪುರ ಅಗತ್ಯವಿರುವ ಸಾಮಗ್ರಿಗಳನ್ನು ಕಲೆ ಹಾಕಲು ಮೌನ ಹೆಜ್ಜೆಗಳನ್ನಿಡತೊಡಗಿದರು.

ಸರಳ ಶೆಡ್ ರಚನೆ:

ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿ ಹೈಡ್ರೋಫೋನಿಕ್ ಮೇವು ಬೆಳೆಸಲು ಬೇಕಾದ ಶೇಡ್ ರಚಿಸಿಕೊಂಡರು. ಬಿದಿರು ಮತ್ತಿತರ ಕಟ್ಟಿಗೆಯ ಕಂಬಗಳನ್ನು ನಿಲ್ಲಿಸಿ ಅಡ್ಡಲಾಗಿ ಉದ್ದನೆಯ ಕಟ್ಟಿಗೆಯ ಕೋಲುಗಳನ್ನೇ ಕಟ್ಟಿ ಟ್ರೇಗಳನ್ನಿಡಲು ವ್ಯವಸ್ಥೆ ರೂಪಿಸಿಕೊಂಡರು. ಎಪ್ಪತ್ತು ಅಡಿ ಉದ್ದ ಆರು ಅಡಿ ಅಗಲವಿರುವ ಐದು ಖಾನೆಗಳನ್ನು ಹೊಂದಿರುವ ಸರಳವಾದ ಘಟಕ ರಚನೆ ಮಾಡಿಕೊಂಡರು. ಘಟಕದ ಸುತ್ತಲೂ ಹಸಿರು ಬಣ್ಣದ ಶೇಡ್ ನೆಟ್ ಅಳವಡಿಸಿಕೊಂಡರು. ನೀರು ಪೂರೈಕೆಗೆಂದು 2000 ಲೀಟರ್ ಸಾಮಥ್ರ್ಯದ ಸಿಂಟೆಕ್ಸ್ ಅಳವಡಿಸಿಕೊಂಡರು. ನೀರು ಹದವಾಗಿ ಮೇವಿನ ಬೆಳೆಗೆ ಸಿಂಪರಣೆ ಆಗುವಂತೆ ಮಾಡಲು ಟೈಮರ್ ಅಳವಡಿಸಿಕೊಂಡರು. ಪ್ರತಿ ಗಂಟೆಗೆ ಒಮ್ಮೆ ಒಂದು ನಿಮಿಷಗಳ ಕಾಲ ನೀರು ತನ್ನಿಂದ ತಾನೇ ಸ್ಪ್ರೇ ಆಗುವುದು ಇದರ ವಿಶೇಷತೆ.

ಟ್ರೇ ಗಳಲ್ಲಿ ಮೇವಿನ ಹುಲ್ಲು ಬೆಳೆಸಬೇಕಾಗುತ್ತದೆ. ಇದಕ್ಕಾಗಿ ಒಂದು ಅಡಿ ಅಗಲ ಒಂದುವರೆ ಅಡಿ ಉದ್ದದ ಟ್ರೇಗಳನ್ನು ಕರೀದಿಸಿ ತಂದಿದ್ದಾರೆ. ತಳಭಾಗದಲ್ಲಿ ಚಿಕ್ಕ ಚಿಕ್ಕ ರಂದ್ರಗಳನ್ನು ಹೊಂದಿರುವ ಪ್ರತಿ ಟ್ರೇಗೆ ಎಪ್ಪತ್ತೈದು ರೂಪಾಯಿ ವೆಚ್ಚವಾಗಿದೆ. ಒಟ್ಟು 750 ಟ್ರೇಗಳಲ್ಲಿ ಮಣ್ಣು ರಹಿತವಾಗಿ ಹಸಿರು ಹುಲ್ಲು ಬೆಳೆಸಿಕೊಳ್ಳುತ್ತಿದ್ದಾರೆ.

ಬೆಳೆಯುವ ವಿಧಾನ:

ಹೈಡ್ರೋಫೋನಿಕ್ ಮಾದರಿಯಲ್ಲಿ ಹಸಿರು ಮೇವು ಬೆಳೆಯಿಸಲು ಮೆಕ್ಕೆ ಜೋಳ, ಗೋಧಿ, ಬಾರ್ಲಿ, ಹೆಸರುಕಾಳು, ಮಡಿಕೆಕಾಳು, ಅಲಸಂದಿ ಇತ್ಯಾದಿ ಕಾಳುಗಳನ್ನು ಬಳಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಯಾವ ಧಾನ್ಯಕ್ಕೆ ಕಡಿಮೆ ದರವಿರುತ್ತದೆಯೋ ಆ ಧಾನ್ಯವನ್ನೇ ಬಳಸಿಕೊಳ್ಳುವುದು ಉತ್ತಮ. ಇತರ ಧಾನ್ಯಗಳಿಗೆ ಹೋಲಿಸಿದರೆ ಮೆಕ್ಕೆಜೋಳದ ದರ ಕಡಿಮೆ. ಹಾಗಾಗಿ ಇವರು ಮೇವು ಬೆಳೆಸಲು ಮೆಕ್ಕೆ ಜೋಳವನ್ನೇ ಆಯ್ದುಕೊಳ್ಳುತ್ತಾರೆ.

ಗೋವಿನಜೋಳ ರೈತರಿಂದ ಕರೀದಿಸುವುದು ಉತ್ತಮ. ನುಸಿ ಬಾಧೆಗೆ ಒಳಗಾಗಿರದ, ಚಿಕ್ಕ ಚಿಕ್ಕ ರಂದ್ರಗಳಿಂದ ಕೂಡಿರದ, ಅತೀ ಸಣ್ಣಗಿರುವ ಕಾಳುಗಳನ್ನು ಆಯ್ದುಕೊಳ್ಳಬಾರದು. ಒಂದು ವೇಳೆ ಕಾಳು ಚಿಕ್ಕದಿದ್ದರೂ ಮೊಳಕೆ ಬರುವ ಸ್ಥಳದಲ್ಲಿ ಸ್ಥಳಾವಕಾಶ ಸರಿಯಾಗಿರುವ ಕಾಳುಗಳನ್ನು ಆರಿಸಿಕೊಳ್ಳಬೇಕು.

ಆಯ್ದುಕೊಂಡ ಕಾಳುಗಳನ್ನು ನೀರಿನಲ್ಲಿ ತೊಳೆದು ಶುದ್ದಗೊಳಿಸಿಕೊಳ್ಳಬೇಕು. ನಂತರ ಆ ಕಾಳುಗಳನ್ನು ಒಂದು ದಿನ ನೀರಿನಲ್ಲಿ ನೆನೆ ಇಡಬೇಕು. ನೀರಿನಿಂದ ತೆಗೆದ ಕಾಳುಗಳನ್ನು ಎರಡು ದಿನಗಳ ಕಾಲ ಗೋಣಿ ಚೀಲ ಅಥವಾ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಬಿಗಿಯಾಗಿ ಕಟ್ಟಿ ಗಾಳಿಯಾಡದಂತೆ ಬೆಚ್ಚಗಿಡುವುದು ಮುಂದಿನ ಹಂತ. ಚಿಕ್ಕ ಮೊಳಕೆ ಬಂದಂತೆ ಕಂಡು ಬರುವ ಕಾಳುಗಳು ಎರಡು ದಿನದಲ್ಲಿ ಸಿದ್ದಗೊಂಡಿರುತ್ತದೆ. ಈ ಕಾಳುಗಳನ್ನು ಒಂದು ಅಡಿ ಅಗಲ, ಒಂದುವರೆ ಅಡಿ ಉದ್ದವಿರುವ ಟ್ರೇಗಳಲ್ಲಿ ಹಾಕಬೇಕು. ಒಂದು ಕಾಳಿನ ಮೇಲೆ ಒಂದು ಕಾಳು ಬೀಳದಂತೆ ತೆಳುವಾಗಿ ಹರಡುವುದು ಬಹಳ ಮುಖ್ಯಒಂದು ಟ್ರೇಗೆ 800 ಗ್ರಾಂ ಕಾಳು ಅಗತ್ಯ.

ಬೀಜ ಹರಡಿ ಸಿದ್ದಗೊಂಡ ಟ್ರೇಗಳನ್ನು ಹೈಡ್ರೋಫೋನಿಕ್ ಘಟಕಕ್ಕೆ ವರ್ಗಾಯಿಸುವುದು ಮುಂದಿನ ಹಂತ. ಒಂದರ ನಂತರ ಒಂದರಂತೆ ಪ್ರತಿ ಖಾನೆಯಲ್ಲಿ ಜೋಡಿಸಿಡುವುದು ಅಗತ್ಯ. ದಿನ ನಿತ್ಯ ನೀರು ಸಿಂಪರಣೆಯ ಬಗ್ಗೆ ಗಮನ ಹರಿಸುವುದು ಅಗತ್ಯ. ಪ್ರತಿ ಗಂಟೆಗೆ ಒಮ್ಮೆಯಂತೆ ಒಂದು ನಿಮಿಷ ನೀರನ್ನು ಸಿಂಪರಣೆ ಮಾಡಬೇಕಾಗುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ, ಗಂಟೆಗೆ ಒಮ್ಮೆಯಂತೆ ಸ್ಪ್ರೇ ಮಾಡಿದರೆ ಸಾಕು. ಬೇಸಿಗೆಯಲ್ಲಿ ಇಪ್ಪತ್ತನಾಲ್ಕು ಗಂಟೆಗಳ ಕಾಲ ಗಂಟೆಗೆ ಒಮ್ಮೆಯಂತೆ ಸ್ಪ್ರೇ ಮಾಡಬೇಕು.

ಹಸಿರು ಮೇವಿಗೆ ಜೀವಾಮೃತ ದ್ರಾವಣವನ್ನು ಸಿಂಪಡಿಸುತ್ತಾರೆ. ಪ್ರತಿ ದಿನ ಸಾಯಂಕಾಲದ ವೇಳೆಗೆ ಹದಿನಾಲ್ಕು ಲೀಟರ್ ನೀರಿಗೆ ಒಂದು ಲೀಟರ್ ಜೀವಾಮೃತ ಮಿಶ್ರಣ ಮಾಡಿ ಸಿಂಪಡಿಸುತ್ತಾರೆ. ಒಂಭತ್ತು ದಿನಕ್ಕೆ ಹುಲ್ಲುಗಳು 8-10 ಇಂಚುಗಳಷ್ಟು ಬೆಳೆದಿರುತ್ತದೆ. ಸಮೃದ್ದವಾಗಿ ಹಸಿರು ತುಂಬಿಕೊಂಡಿರುವ ಮೇವು ಜಾನುವಾರುಗಳಿಗೆ ಪರಿಪೂರ್ಣ ಆಹಾರ ಒದಗಿಸಿದಂತಾಗುತ್ತದೆ. 10-12 ದಿನದ ವರೆಗೆ ಹುಲ್ಲನ್ನು ಜಾನುವಾರುಗಳಿಗೆ ನೀಡಬಹುದು. ಒಂದು ಆಕಳಿಗೆ ಒಮ್ಮೆ ಎರಡು ಟ್ರೇ ಹಸಿರು ಮೇವು ನೀಡಿದರೆ ಹಿಂಡಿಯ ಪ್ರಮಾಣವನ್ನು ತಗ್ಗಿಸಬಹುದು.

ಹೈಡ್ರೋಫೋನಿಕ್ ವಿಧಾನದಲ್ಲಿ ಬೆಳೆದ ಹಸಿರು ಮೇವು ಲಾಭದಾಯಕವಾಗಬಲ್ಲದು. ಕೇವಲ ಎರಡು ರೂಪಾಯಿಗಳಲ್ಲಿ ಒಂದು ಕಿಲೋಗ್ರಾಂ ಮೇವು ಉತ್ಪಾದನೆ ಮಾಡಬಹುದು. ಲಾಭದಾಯಕ ಹೈನುಗಾರಿಕೆಯಲ್ಲಿ ಸಹಕಾರಿಯಾಗಬಲ್ಲದು ಎನ್ನುತ್ತಾರೆ ಪ್ರಕಾಶ್ ವಿಜಾಪುರ.

ಮೊದಲನೇಯ ದಿನ
ಎರಡನೇಯ ದಿನ
ಮೂರನೇ ದಿನ
ನಾಲ್ಕನೇ ದಿನ
ಐದನೇ ದಿನ
ಆರನೇ ದಿನ
ಏಳನೇ ದಿನ
ಎಂಟನೇ ದಿನ
Published On: 03 October 2018, 11:19 AM English Summary: Hydroponics success story

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.