1. ಯಶೋಗಾಥೆ

ನೈಸರ್ಗಿಕ ಕೃಷಿ ಮೂಲಕ ಬೆಲ್ಲದ ನಿಜ ಸಿಹಿ ಸವಿದ ಯುವ ಕೃಷಿಕ ಶ್ರೀನಿಧಿ

KJ Staff
KJ Staff
Natural Farmer

ಕಬ್ಬು ಮಾರುವ ಬದಲು ತಾನೇ ಸಾವಯವ ಬೆಲ್ಲ ತಯಾರಿಸಿ ಲಾಭ ಪಡೆದ ಕಂಪ್ಯೂಟರ್ ಎಂಜಿನಿಯರ್ 

‘ಬೇಸಾಯ ಮನೆಮಂದಿಯಲ್ಲಾ ಸಾಯ’ ಎಂಬ ಮಾತು ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಕೃಷಿಕರ ಮಕ್ಕಳು ಕೃಷಿಗೆ ಬರಕೂಡದೆಂಬ ಆಲೋಚನೆ ಪೋಷಕರು ಮತ್ತು ಮಕ್ಕಳಿಬ್ಬರಲ್ಲೂ ಇದೆ. ಆದರೆ ಇದಕ್ಕೆಲ್ಲ ತದ್ವಿರುದ್ಧವಾಗಿ ಬೇಸಾಯದಿಂದ ನಷ್ಟ ಅನುಭವಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡರೂ, ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರೂ, ತನ್ನ ಹುಟ್ಟೂರಾದ ಚಾಮರಾಜನಗರಕ್ಕೆ ಬಂದು ನೈಸರ್ಗಿಕ ಕೃಷಿಯಲ್ಲಿ ಯಶ ಕಂಡಿರುವ ಯುವಕ ಶ್ರೀನಿಧಿಯವರ ಸಾಧನೆ ಹಲವರಿಗೆ ಸ್ಫೂರ್ತಿದಾಯಕವಾಗಿದೆ.

“ಒಮ್ಮೆ ಈರುಳ್ಳಿ ಫಸಲು ತುಂಬಾ ಚೆನ್ನಾಗಿ ಬಂದಿತ್ತು. ಕಟಾವು ಮಾಡಿ ರಾಶಿ ಮಾಡಿದ್ದೆವು. ದುರದೃಷ್ಟವಶಾತ್ ಅದೇ ದಿನ ಕುಂಭದ್ರೋಣ ಮಳೆ ಸುರಿಯಿತು. ಹೀಗಾಗಿ ಸುಮಾರು ಹತ್ತು ಲಕ್ಷ ಮೌಲ್ಯದ ಈರುಳ್ಳಿ ಕೊಳೆತು ಹೋಯಿತು. ಮನನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡರು. ನಂತರ 2011ರಲ್ಲಿ ಇಂಜಿನಿಯರಿಂಗ್ ಮುಗಿಸಿ ಊರಿಗೆ ಬಂದು ಅಮ್ಮನನ್ನು ನೋಡಿಕೊಳ್ಳಲು ಪ್ರಾರಂಭಿಸಿದೆ. ಇದೇ ವೇಳೆ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಒಂದು ಕೆಲಸ ದೊರೆಯಿತು. ಕುಟುಂಬ ನಿರ್ವಹಣೆಗೇನು ಕಡಿಮೆ ಇರಲಿಲ್ಲ.

ಪಿತ್ರಾರ್ಜಿತವಾಗಿ ಬಂದ ಐದು ಎಕರೆ ಜಮೀನಿಗೆ ಹತ್ತು ಬೋರ್ವೆಲ್ ಕೊರೆಸಿದರೂ ಒಂದು ಹನಿ ನೀರು ಬರಲಿಲ್ಲವಾದ್ದರಿಂದ ಅರಣ್ಯ ಕೃಷಿ ಮಾಡಬೇಕೆಂಬ ಚಿಂತನೆ ಮೂಡಿತು. ಇದೇ ಸಮಯದಲ್ಲಿ ನಮ್ಮ ತಾತ (ಅಮ್ಮನ ತಂದೆ) ಒಂದು ಎಕರೆ ಜಮೀನನ್ನು ಅವರ ಭಾಗಕ್ಕೆ ಕೊಟ್ಟರು. ಫಲವತ್ತಾಗಿರುವ ಮತ್ತು ಅಂತರ್ಜಲ ಮಟ್ಟವೂ ಉತ್ತಮವಾಗಿರುವಂತ ಭೂಮಿಯಿದು. ಈ ಜಮೀನಿನೊಂದಿಗೆ ಪಕ್ಕದ 2 ಎಕರೆಯನ್ನು ಗುತ್ತಿಗೆಗೆ ಪಡೆದು ಏನನ್ನಾದರೂ ಬೆಳೆಯಬೇಕೆಂಬ ಹಂಬಲ ಗಾಢವಾಯಿತು. ಆದರೆ ಅಪ್ಪ ಕೈಸುಟ್ಟುಕೊಂಡ ರಾಸಾಯನಿಕ ಕೃಷಿಯನ್ನು ಬಿಟ್ಟು ಬೇರೆ ಏನನ್ನಾದರೂ ಮಾಡಬೇಕೆಂಬೇಕೆಂದು ಆಲೋಚಿಸಿದೆ.

ಗೆಳೆಯರೊಂದಿಗೆ ಈ ಬಗ್ಗೆ ಚರ್ಚಿಸುತ್ತಿದ್ದಾಗ ಸ್ವಾಮಿ ಆನಂದ್ ಬರೆದಿರುವ ಸುಭಾಷ್ ಪಾಳೇಕರರ ನೈಸರ್ಗಿಕ ಕೃಷಿ ಪುಸ್ತಕ ಓದಲು ಸಲಹೆ ನೀಡಿದರು. ಈ ಪುಸ್ತಕ ನನ್ನ ಜೀವನದ ದಿಕ್ಕನ್ನೇ ಬದಲಿಸಿತು. 3 ಎಕರೆಯಲ್ಲಿ ಏಲಕ್ಕಿ ಬಾಳೆಯನ್ನು ಬೆಳೆದೆ. ಪಾಳೇಕರರ ಸಲಹೆಯಂತೆ ಮಣ್ಣಿನ ಫಲವತ್ತತೆ ಹೆಚ್ಚಿಸಲು ಜೀವಮೃತ ತೊಟ್ಟಿ ಕಟ್ಟಿಸಿದೆ. ಹೊದಿಕೆಯಾಗಿ ಸಿಹಿಗೆಣಸು ದ್ವಿದಳ ಧಾನ್ಯಗಳನ್ನು ಬೆಳೆದೆ. ಮಿತವಾಗಿ ನೀರನ್ನು ಬಳಸಬೇಕೆಂಬ ಉದ್ದೇಶದಿಂದ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡೆ. ಜೀವಮೃತಕ್ಕಾಗಿ ಒಂದು ಹಳ್ಳಿಕಾರ್ ಹಸು ಕೊಂಡುತಂದೆ. ಅದೀಗ ಐದು ಕರುಗಳಿಗೆ ಜನ್ಮನೀಡಿದೆ. ಆರ್ಥಿಕ ತೊಂದರೆ ಎದುರಾದಾಗ ಕೆಲವು ಕರುಗಳನ್ನು ಮಾರಿದ್ದೂ ಉಂಟು.

ಡೈರೆಕ್ಟ್ ಮಾರ್ಕೆಟಿಂಗ್:

ಕೋಲಾರದ ರೈತರು ಮಾವು ಮತ್ತು ದ್ರಾಕ್ಷಿಯನ್ನು ಪೆಟ್ಟಿಗೆಗಳಲ್ಲಿ ಇಟ್ಟು ಮಾರಾಟ ಮಾಡುವುದನ್ನು ಕಂಡಿದ್ದೆ. ಅದೇ ರೀತಿ ನಾನು ಬಾಳೆಹಣ್ಣನ್ನು ಪೆಟ್ಟಿಗೆಯಲ್ಲಿಟ್ಟು ಏಕೆ ಮಾಡಬಾರದು ಎಂದು ಯೋಚಿಸಿದೆ. ಹೊಸ ಪೆಟ್ಟಿಗೆಗಳನ್ನು ಕೊಂಡುಕೊಳ್ಳುವ ಆರ್ಥಿಕತೆ ನನಗಿರಲಿಲ್ಲ. ಹಾಗಾಗಿ ಉಪಯೋಗಿಸಲ್ಪಟ್ಟ ಅನ್ನಭಾಗ್ಯ ಯೋಜನೆಯ ರಟ್ಟಿನ ಪೆಟ್ಟಿಗೆಗಳನ್ನು ಒಂದೆರಡು ರೂಪಾಯಿಗೆ ಖರೀದಿಸಿ ಅದರಲ್ಲಿ 3ಕೆಜಿ ತೂಗುವಷ್ಟು ಬಾಳೆಕಾಯಿಯನ್ನು ಇರಿಸಿದೆ.

ನಾನು ಬಾಳೆಹಣ್ಣು ಎರಡು ಹಂತದಲ್ಲಿ ಕಟಾವು ಮಾಡಲು ಪ್ರಾರಂಭಿಸಿದೆ. ಒಂದು ಪೆಟ್ಟಿಗೆಯಲ್ಲಿ ಇಂದು ಕಟಾವಾದ 2 ಚಿಪ್ಪುಗಳನ್ನು ಇರಿಸಿ ಮತ್ತೊಂದು ಹತ್ತು ದಿನಗಳ ಹಿಂದೆ ಕಟಾವಾದ ಮಾಗುತ್ತಿರುವ ಒಂದು ಚಿಪ್ಪನ್ನು ಇರಿಸಿದೆ.

ಒಮ್ಮೆ ಗ್ರಾಹಕರು ಒಂದು ಪೆಟ್ಟಿಗೆ ಖರೀದಿಸಿದರೆ ಹಂತಹಂತವಾಗಿ ಬಾಳೆಹಣ್ಣು ಹಣ್ಣಾಗಿ ಸುಮಾರು 25ದಿನಗಳ ಕಾಲ ಇದನ್ನು ಬಳಸಬಹುದಾಗಿದೆ. ನೈಸರ್ಗಿಕ ಕೃಷಿ ವಿಧಾನದಲ್ಲಿ ಬೆಳೆದದ್ದರಿಂದ ಬಾಳೆಯ ಶೆಲ್ಫ್ ಲೈಫ್ ಹೆಚ್ಚಾಗಿದೆ.

3ಕೆಜಿಯ ಒಂದು ಪೆಟ್ಟಿಗೆಯನ್ನು ನೂರು ರೂಪಾಯಿ ದರದಲ್ಲಿ (ನಾನೇ ನಿಗದಿಪಡಿಸಿದ ದರ) ನಮ್ಮ ಕಚೇರಿಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ ‌. ನಂತರ ಸ್ನೇಹಿತರು, ರೋಟರಿಕ್ಲಬ್, ಯೋಗ ತರಗತಿಗಳು, ಹೀಗೆ ಹತ್ತು ಹಲವು ಕಡೆ ಜನರಿಗೆ ರಾಸಾಯನಿಕ ಮುಕ್ತ ಬಾಳೆಯ ವಿಶೇಷತೆಗಳ ಬಗ್ಗೆ ತಿಳಿಸಿ ಮಾರಾಟ ಮಾಡಿದೆ. ಇದರಿಂದ ತಕ್ಕಮಟ್ಟಿನ ಆದಾಯವು ದೊರೆಯಿತು ಹೆಚ್ಚಿನ ಗ್ರಾಹಕರು ಪರಿಚಯವಾದರು.

ಬಾಳೆ ಬೆಳೆಯ ನಂತರ ಕಬ್ಬನ್ನು ಬೆಳೆಯಲು ನಿಶ್ಚಯಿಸಿದೆ. ಪಾಳೇಕರ್ ಪದ್ಧತಿ ಅಳವಡಿಸಿದರೂ ಎಕರೆಗೆ ಕೇವಲ 10 ಟನ್ ಕಬ್ಬು ದೊರೆಯಿತು. ಆದರೂ ದೃತಿಗೆಡದೆ ಕಬ್ಬು ಮಾರಾಟ ಮಾಡದೆ, ರಾಸಾಯನಿಕ ಬಳಸದೇ ಬೆಲ್ಲ ತಯಾರಿಸಿದೆ. ಸುಮಾರು ಮೂರುಸಾವಿರ ಕೆಜಿ ಬೆಲ್ಲವನ್ನು 100 ರೂಪಾಯಿ ದರದಲ್ಲಿ ನೇರವಾಗಿ ಗ್ರಾಹಕರಿಗೆ ತಲುಪಿಸಿದೆ. ಬೆಲ್ಲಕ್ಕೆ ಬೇಡಿಕೆ ಹೆಚ್ಚಾದರಿಂದ ಮರು ವರ್ಷವೂ ಕಬ್ಬನ್ನು ಬೆಳೆದೆ. ನಂತರ ಎಕರೆಗೆ 30 ಟನ್ ಇಳುವರಿ ದೊರೆಯಿತು.

 

ಮರು ವರ್ಷವೂ ಕಬ್ಬನ್ನು ಬೆಳೆದವು. ವಾಟ್ಸಾಪ್ನಲ್ಲಿ ಒಂದು ವಿಡಿಯೋ ಸಂದೇಶ ಬಂದಿತ್ತು. ಚೈನಾದಲ್ಲಿ ಕಬ್ಬನ್ನು ಬಿದಿರಿನ ಕಡ್ಡಿಗಳ ಸಹಾಯದಿಂದ ಕಟ್ಟಿ ನೇರವಾಗಿ ಬೆಳಸುತ್ತಿದ್ದರು. ಇದರಿಂದ ಹೆಚ್ಚಿನ ಇಳುವರಿ ದೊರೆಯುವುದೆಂದು ಹೇಳಿದ್ದರು. ನಾನು ನಮ್ಮ ತೋಟದಲ್ಲಿ ಅದರಂತೆಯೇ ಮಾಡಿ ಎಕರೆಗೆ 50 ಟನ್ ಪಡೆದೆ.ಈ ಬಾರಿ ತಮಿಳುನಾಡಿನಿಂದ ನುರಿತ ತಜ್ಞರನ್ನು ಕರೆತಂದು ಬೇಕಿಂಗ್ ಸೋಡಾ ಬಳಸಿ ಬೆಲ್ಲದಪುಡಿ ತಯಾರಿಸಿದೆವು.

ಒಮ್ಮೆ ನಮ್ಮ ಬೆಲ್ಲವನ್ನು ಉಪಯೋಗಿಸಿದ ಗ್ರಹಕರು ಮತ್ತೆ ಮತ್ತೆ ನಮ್ಮಲ್ಲಿಯೇ ಕೊಂಡುಕೊಳ್ಳುತ್ತಿದ್ದಾರೆ ಮತ್ತು ಇತರರಿಗೂ ನಮ್ಮ ಬೆಲ್ಲದ ಬಗ್ಗೆ ಹೇಳುತ್ತಿದ್ದಾರೆ. ಕಬ್ಬು ಬೆಳೆಯುವದರಿಂದ ಹಿಡಿದು ಬೆಲ್ಲ ತಯಾರಿಸುವವರೆಗೂ ಯಾವುದೇ ರಾಸಾಯನಿಕಗಳನ್ನು ಬಳಸದಿರುವದರಿಂದ ಗ್ರಾಹಕರೂ ನಮ್ಮ ಉತ್ಪನ್ನವನ್ನು ಮೆಚ್ಚಿಕೊಂಡಿದ್ದಾರೆ.

ಚಾಮರಾಜನಗರದಲ್ಲಿ ಒಂದು ಕಬ್ಬಿನ ಹಾಲಿನ ಅಂಗಡಿಯನ್ನು ಪ್ರಾರಂಭಿಸಿದ್ದೇವೆ. 1 ಟನ್ ಕಬ್ಬನ್ನು ಮಾರಿದರೆ ನಮಗೆ ಕಾರ್ಖಾನೆಯಿಂದ ₹2000 ದೊರೆಯುತ್ತದೆ. ಅದೇ ಒಂದು ಟನ್ ಕಬ್ಬನ್ನು ಕಬ್ಬಿನ ಹಾಲಾಗಿ ಪರಿವರ್ತಿಸಿದರೆ ಸುಮಾರು 600 ಲೀಟರ್ ದೊರೆಯುತ್ತದೆ. ಒಂದು ಲಿಟರಿಗೆ 40 ರೂಪಾಯಿ ಇಟ್ಟು ಮಾರಿದರು 24 ಸಾವಿರ ರೂ. ದೊರೆಯುತ್ತದೆ ವರ್ಷಕ್ಕೆ ನಾನು 10 ಟನ್ ಕಬ್ಬನ್ನು ಜ್ಯೂಸ್ ಆಗಿ ಮಾರಿದರು 10-12 ಲಕ್ಷ ಲಾಭ ದೊರೆಯುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಶ್ರೀನಿಧಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8904641947

ಲೇಖನ: ಸುಧಾ ಸಂದೀಪ್

Published On: 29 November 2021, 12:18 PM English Summary: meet srinidhi, a natural farmer who tasted the real sweet of jaggery

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.