1 . ವಿಶ್ವದ ಅತಿದೊಡ್ಡ ಸಿಲಿಂಡರಾಕಾರದ ಅಕ್ವೇರಿಯಂ ಸ್ಫೋಟ: 1,500ಕ್ಕೂ ಹೆಚ್ಚು ಮೀನುಗಳ ಸಾವು
2 . ಕಬ್ಬು ಬೆಳೆಗಾರರಿಂದ ವಿಧಾನಸಭೆ ಮುತ್ತಿಗೆ ಎಚ್ಚರಿಕೆ: ಸರ್ಕಾರಕ್ಕೆ ಗಡುವು
3 . ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ಹೆಚ್ಚಳ!
4 . ದಾಖಲೆ ನಿರ್ಮಿಸಿದ 'ಮನೋಹರಿ ಚಾ':1 ಕೆಜಿಗೆ 1 ಲಕ್ಷ 15 ಸಾವಿರ ರೂಪಾಯಿ!
5 . ಮಹಿಳೆಯರ ಏಳ್ಗೆಗಾಗಿ ಒನಕೆ ಓಬವ್ವ ನಿಗಮ ರಚನೆ – ಸಿಎಂ ಬೊಮ್ಮಾಯಿ
6 . ಮೇಘಾಲಯ ಹಾಗೂ ತ್ರಿಪುರಾದಲ್ಲಿ ₹6,800 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
7 . ಪುಣೆ ಕಿಸಾನ್ ಮೇಳ-2022: ಇಂದು ಕೊನೆ ದಿನ
8 . ಬೆಳಗಾವಿ ಅಧಿವೇಶನ ಜನರಿಗೆ ಪರಿಹಾರ ಒದಗಿಸುವ ಅಧಿವೇಶನವಾಗಲಿದೆ – ಸಿಎಂ ಬೊಮ್ಮಾಯಿ
9 . ಸರ್ಕಾರದ ನಿಲುವು ಖಂಡಿಸಿ ಇಂದು ರೈತರಿಂದ ಮಂಡ್ಯ ಬಂದ್!
10 . ರಾಷ್ಟ್ರೀಯ ಹೆದ್ದಾರಿಯಲ್ಲಿ ಕವಿದ ಮಂಜು: 30ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ!
1-One
ಬರ್ಲಿನ್‌ನಲ್ಲಿರುವ ವಿಶ್ವದ ಅತಿದೊಡ್ಡ ಸಿಲಿಂಡರಾಕಾರದ ಅಕ್ವೇರಿಯಂ ಸ್ಫೋಟಗೊಂಡಿದೆ. ಈ ಅಕಸ್ಮಾತ್ ಅವಘಟದಿಂದ ಪ್ರವಾಸಿ ಆಕರ್ಷಣೆಯಾಗಿದ್ದ ಅಕ್ವೇರಿಯಂ ನಾಶವಾಗಿದೆ.
ಅಕ್ವೇರಿಯಂ ಇದ್ದಕ್ಕಿದ್ದಂತೆ ಒಡೆದ ಕಾರಣ ಒಂದು ಮಿಲಿಯನ್ ಲೀಟರ್ ನೀರು ಹೊರಬಂದಿತ್ತು. ಈ ಅಪಘಾತದಲ್ಲಿ ಇಬ್ಬರಿಗೆ ಸ್ವಲ್ಪ ಗಾಯಗಳಾಗಿವೆ ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ.
ಈ ಅಕ್ವೇರಿಯಂನಲ್ಲಿ 80 ವಿವಿಧ ಜಾತಿಗಳ 1,500 ಉಷ್ಣವಲಯದ ಮೀನುಗಳು ಇದ್ದವು. ದುರದೃಷ್ಟವಶಾತ್ ಈ ಅವಘಡದಲ್ಲಿ ಮೀನುಗಳೂ ಪ್ರಾಣ ಕಳೆದುಕೊಂಡಿವೆ.
ರಾತ್ರಿಯಲ್ಲಿ ಮೈನಸ್ 10 ಡಿಗ್ರಿ ಸೆಲ್ಸಿಯಸ್‌ನ ತಾಪಮಾನದಿಂದಾಗಿ ಅಕ್ವೇರಿಯಂನ ಗಾಜು ಬಿರುಕು ಬಿಟ್ಟಿದೆ. ನಂತರ ನೀರಿನ ಒತ್ತಡದಿಂದ ಅಕ್ವೇರಿಯಂ ಒಡೆದಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಆದರೆ ಅಕ್ವೇರಿಯಂ ಸ್ಫೋಟಕ್ಕೆ ಅಧಿಕೃತ ಕಾರಣ ಇನ್ ತಿಳಿದು ಬಂದಿಲ್ಲ.
2-Two
ಕಬ್ಬಿಗೆ ಸೂಕ್ತ ಸಲಹಾ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೀಗ ಕಬ್ಬು ಬೆಳೆಗಾರರು ಸರ್ಕಾರಕ್ಕೆ ಗಡುವು ನಿಗದಿ ಮಾಡಿದ್ದಾರೆ. ಡಿಸೆಂಬರ್ 23ರ ಒಳಗಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದೆ ಇದ್ದರೆ,
ಡಿಸೆಂಬರ್ 26ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕಬ್ಬಿನ FRP ದರ ಏರಿಕೆ ಮತ್ತು ಕಟಾವು ಕೂಲಿ ಸಾಗಾಣಿಕೆ ವೆಚ್ಚ ಕಡಿತ ಮಾಡುವ ಕುರಿತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ನೀಡಿದ್ದಾರೆ. ಅದರಂತೆ ಡಿಸೆಂಬರ್ 23 "ವಿಶ್ವ ರೈತ ದಿನದ" ಆಚರಣೆಯ ಒಳಗೆ ತೀರ್ಮಾನ ಕೈಗೊಳ್ಳಬೇಕು.
ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ, ಡಿ. 26ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಕಬ್ಬು ನುರಿಸಿರುವ ಕಾರ್ಖಾನೆಗಳು, ರೈತರಿಗೆ ಕಬ್ಬಿನ ಹಣವನ್ನ ಪಾವತಿಸಿಲ್ಲ.
ಕೆಲವು ಕಾರ್ಖಾನೆಗಳು ನೆಪ ಮಾತ್ರಕ್ಕೆ ಅಲ್ಪ ಸ್ವಲ್ಪ ಪಾವತಿಸಿದ್ದಾರೆ. FRP ನಿಯಮ ಪ್ರಕಾರ 14 ದಿವಸದಲ್ಲಿ ಪಾವತಿಸಬೇಕು. ಕಾರ್ಖಾನೆಗಳು ನಿಯಮ ಉಲ್ಲಂಘನೆ ಮಾಡಿ, ಎರಡು ಸಾವಿರ ಕೋಟಿಗೂ ಹೆಚ್ಚು ಹಣ ಉಳಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಕಾರ್ಖಾನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
3-Three
ಸರ್ಕಾರವು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸಿಹಿ ಸುದ್ದಿ ನೀಡಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಮಾಸಿಕ ಗೌರವಧನವನ್ನು ಎರಡು ಪಟ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಆದೇಶಾನುಸಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ M. N ಬಾನೊಳ್ಳಿ ಅವರು ಆದೇಶಿಸಿದ್ದಾರೆ.
ಈಚೆಗೆ ನಡೆದ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿಯೂ ಗೌರವ ಧನ ಹೆಚ್ಚಳ ಮಾಡುವ ಸಂಬಂಧ ಸುದೀರ್ಘ ಚರ್ಚೆ ನಡೆದಿತ್ತು. ಈ ಮೊದಲು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 3 ಸಾವಿರ, ಉಪಾಧ್ಯಕ್ಷರಿಗೆ 2 ಸಾವಿರ ಹಾಗೂ ಸದಸ್ಯರಿಗೆ 1 ಸಾವಿರ ರೂಪಾಯಿ ಮಾಸಿಕ ಗೌರವ ಧನ ನಿಗದಿಪಡಿಸಲಾಗಿತ್ತು.
ಗೌರವಧನವನ್ನು ಪರಿಷ್ಕರಿಸಲಾಗಿ, ಹೊಸ ಆದೇಶದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 6 ಸಾವಿರ ರೂಪಾಯಿ, ಉಪಾಧ್ಯಕ್ಷರಿಗೆ 4 ಸಾವಿರ ರೂಪಾಯಿ ಹಾಗೂ ಸದಸ್ಯರಿಗೆ 2 ಸಾವಿರ ರೂಪಾಯಿ ಗೌರವ ಧನ ನಿಗದಿ ಪಡಿಸಲಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಗೌರವಧನ ಹೆಚ್ಚಳ ಮಾಡುವ ಸಂಬಂಧ ಶೀಘ್ರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದರು.
4-Four
ಇತ್ತೀಚೆಗೆ ಅಸ್ಸಾಂ ರಾಜ್ಯದ ದಿಬ್ರುಗಢ ಎನ್ನುವ ಜಿಲ್ಲೆಯಲ್ಲಿ ವಿಶೇಷ ರೀತಿಯ ಚಹಾ ಮಾರಾಟ ಮಾಡಲಾಗುತ್ತಿದೆ. ಅಚ್ಚರಿಯ ಸಂಗತಿ ಎಂದರೆ ಈ ಚಹಾ ಕೆಜಿಗೆ 1 ಲಕ್ಷ 15 ಸಾವಿರ ರೂಪಾಯಿಯಂತೆ ಮಾರಾಟವಾಗುತ್ತಿದೆ.
ಪ್ರಕಾಶಮಾನವಾದ ಗೋಲ್ಡನ್ ಬಣ್ಣದ ಈ ಚಹಾದ ಹೆಸರು ಮನೋಹರಿ ಟೀ. ರಂಜನ್ ಲೋಹಿಯಾ ಎಂಬುವರು ಮನೋಹರಿ ಗೋಲ್ಡ್ ಟೀ ಮಾರಾಟ ಮಾಡಲು ಖಾಸಗಿ ಹರಾಜು ಕಂಪನಿಯ ಪೋರ್ಟಲ್‌ನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಖಾಸಗಿ ಪೋರ್ಟಲ್ 'ಟೀ ಇಂಟೆಕ್'ನಲ್ಲಿ 'ಮನೋಹರಿ ಟೀ' ಹರಾಜಿನಲ್ಲಿ ಈ ಬೆಲೆಯನ್ನು ಪಡೆದುಕೊಂಡಿದೆ. ಡಿಸೆಂಬರ್ 2021ರಲ್ಲಿ ಈ ಮನೋಹರಿ ಚಹಾ 99ಸಾವಿರದ 999ಕ್ಕೆ ಮಾರಾಟ ಮಾಡಲಾಗಿತ್ತು.
ಮನೋಹರಿ ಗೋಲ್ಟನ್ ಟೀಯನ್ನು ಚಹಾ ಸಸ್ಯದ ಮೊಗ್ಗುಗಳಿಂದ ಉತ್ಪಾದಿಸಲಾಗುತ್ತದೆ. ಈ ಚಹಾವನ್ನು ತಯಾರಿಸಲು ಮೇ ನಿಂದ ಜೂನ್ ವರೆಗೆ ಬೆಳಿಗ್ಗೆ ಮೊಗ್ಗುಗಳನ್ನು ಆರಿಸಲಾಗುತ್ತದೆ.
5-Five
ವೀರವನಿತೆ ಒನಕೆ ಓಬವ್ವನವರ ಹೆಸರಿನಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವನ್ನು ಮುಂದಿನ ಬಜೆಟ್‌ನಲ್ಲಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವೀರವನಿತೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಓಬವ್ವನವರ ಹೆಸರಿನಲ್ಲಿ ಮಹಿಳಾ ಕಾಲೇಜನ್ನು ಸ್ಥಾಪಿಸಲಾಗುವುದು.
ಒನಕೆ ಓಬವ್ವ ಟ್ರಸ್ಟ್ ಹೆಸರಿನಲ್ಲಿ ಸಮುದಾಯಕ್ಕೆ 80 ಎಕರೆ ಜಮೀನನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಒನಕೆ ಓಬವ್ವನ ಜೀವನ ಸಾಧನೆಗಳ ಸಂಶೋಧನೆಗಾಗಿ ವಿಶ್ವವಿದ್ಯಾಲಯಲದಲ್ಲಿ ಅಧ್ಯಯನ ಪೀಠ ರಚಿಸಲಾಗುವುದು.
ಸಮುದಾಯಕ್ಕೆ ಉದ್ಯೋಗ, ಭೂ ಒಡೆತನ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸಲಾಗುವುದು ಎಂದರು.
6-Six
ಮೇಘಾಲಯ ಹಾಗೂ ತ್ರಿಪುರಾದಲ್ಲಿ ₹6,800 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರವು ದೈವಿಕ ಉದ್ದೇಶ ಇಟ್ಟುಕೊಂಡಿದೆ ಎಂದರು.
ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ₹2,450 ಕೋಟಿ ಮೊತ್ತದ ಕಾಮಗಾರಿಗಳನ್ನು ಕೂಡ ಅವರು ಉದ್ಘಾಟಿಸಿದರು. ‘ಕಳೆದ ಎಂಟು ವರ್ಷಗಳಿಂದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಈಶಾನ್ಯವು ಶಾಂತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
ಹಲವು ಬಂಡುಕೋರ ಗುಂಪುಗಳು ಹಿಂಸೆಯ ಮಾರ್ಗವನ್ನು ತೊರೆದಿವೆ. ರಾಜ್ಯಸರ್ಕಾರಗಳ ನೆರವಿನ ಜೊತೆಗೆ ತೆಗೆದುಕೊಂಡ ಕ್ರಮಗಳಿಂದಾಗಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ. ರಾಜ್ಯಗಳ ನಡುವಿನ ಗಡಿಬಿಕ್ಕಟ್ಟುಗಳೂ ಶಮನಗೊಂಡಿವೆ’ ಎಂದು ಮೋದಿ ಹೇಳಿದರು.
7-Seven
ಡಿಸೆಂಬರ್ 14 ರಂದು ಪುಣೆಯಲ್ಲಿ ಆರಂಭಗೊಂಡಿದ್ದ ಭಾರತದ ಅತಿದೊಡ್ಡ ಕೃಷಿ ಪ್ರದರ್ಶನ ಕಾರ್ಯಕ್ರಮ ಇಂದು ಕೊನೆಗೊಳ್ಳಲಿದೆ.
5 ದಿನಗಳಿಂದ ನಡೆಯುತ್ತಿರುವ ಪುಣೆ ಕಿಸಾನ್ ಮೇಳದ ಮುಖ್ಯ ಉದ್ದೇಶವು "ಭಾರತೀಯ ಕೃಷಿ ಸಮುದಾಯವನ್ನು ಒಗ್ಗೂಡಿಸುವ ವೇದಿಕೆಯನ್ನು ಸೃಷ್ಟಿಸುವುದು" ಆಗಿತ್ತು.
ಕೃಷಿ ಜಾಗರಣ ತಂಡದಿಂದ ಎಲ್ಲ ಬಗೆಯ ಮಾಹಿತಿಗಳನ್ನು ಕಲೆಹಾಕಲು ಮತ್ತು ಪ್ರದರ್ಶನದಲ್ಲಿ ರೈತರೊಂದಿಗೆ ಸಂವಾದ ಮಾಡಲಾಯಿತು.
8-Eight
ಇಂದಿನಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತಿದೆ. ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗುವುದು. ಜನರಿಗೆ ಪರಿಹಾರ ಒದಗಿಸುವ ಅಧಿವೇಶನ ಇದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದು ಸುವರ್ಣ ವಿಧಾನಸೌಧಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ.
ರಾಜ್ಯವನ್ನು ಮುನ್ನಡೆಸುವ ದಿಸೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ. ಹಲವಾರು ಕಾನೂನುಗಳ ರಚನೆಗಳ ಉದ್ದೇಶದಿಂದ ಕಲಾಪ ನಡೆಸಲಾಗುತ್ತಿದೆ ಎಂದರು.
9-Nine
ಕಬ್ಬಿನ ದರ ನಿಗದಿ, ಹಾಲಿನ ದರ ಹೆಚ್ಚಳ ಮಾಡಲು ಹಿಂಜರಿಯುತ್ತಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಡಿಸೆಂಬರ್ 19ರಂದು ಜಿಲ್ಲಾ ರೈತ ಸಂಘ ನೀಡಿರುವ ಮಂಡ್ಯ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.
ಹೀಗಾಗಿ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಂಡ್ಯದಲ್ಲಿ ಬಂದ್ ಇರಲಿದೆ. ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹೌದು, ಪ್ರತಿ ಲೀಟರ್ ಹಾಲಿಗೆ 40 ರೂಪಾಯಿ ನೀಡಬೇಕು ಎನ್ನುವುದನ್ನು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ
ಕಳೆದ 43 ದಿನಗಳಿಂದ ರೈತರು ನಿರಂತರ ಧರಣಿ ನಡೆಸುತ್ತಿದ್ದಾರೆ.
ಹೀಗಿದ್ದರೂ ರೈತರ ಮನವಿಯನ್ನು ಮಾತ್ರ ಸರ್ಕಾರ ಕಿವಿಗೆ ಹಾಕಿಕೊಂಡಿರಲಿಲ್ಲ. ಆದರೀಗ ರೈತರ ಮೇಲೆ ಸರ್ಕಾರದ ಧೋರಣೆ ಖಂಡಿಸಿ ಬಂದ್ ಗೆ ಕರೆ ನೀಡಲಾಗಿದ್ದು,
ಬಂದ್ ಹಾಗೂ ಬೃಹತ್ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅನ್ನದಾತರು ಸಜ್ಜಾಗಿದ್ದಾರೆ.
10 .
ಹರಿಯಾಣದ ಕರ್ನಾಲ್ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಕವಿದಿದ್ದ ಮಂಜಿನಿಂದಾಗಿ ಭಾನುವಾರ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿವೆ.
ಇದರಲ್ಲಿ 30ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂರೂ ಪ್ರತ್ಯೇಕ ಸ್ಥಳಗಳಲ್ಲಿ 30 ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, 12 ಜನ ಗಾಯಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು
ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.
ನಮಸ್ಕಾರ…
Share your comments