‘ಮಣ್ಣಿಂದ ಕಾಯ’ ಎಂಬ ಪದ್ಯದಲ್ಲಿ ಮಣ್ಣಿನ ಮಹತ್ವ, ಮಣ್ಣು ಮತ್ತು ಮಾನವ ಸಂಬಂಧಗಳ ಬಗ್ಗೆ ತಿಳಿಸಿದ ಶ್ರೀ. ಪುರಂದರ ದಾಸರು ‘ಮಣ್ಣು ಅಳಿದರೆ ಮಾನವ ಅಳಿದಂತೆ’ ಎಂಬ ಅವರ ಮಾರ್ಮಿಕ ನಿಲುವು ನಿತ್ಯ ಸತ್ಯವಾಗಿದೆ. ಬೆಳೆಯ ಮೇಲ್ಭಾಗದಲ್ಲಿ ಸಿಗುವ ತೆನೆಯ ಕಾಳುಗಳು ಮಾನವನಿಗೆ ಬದುಕಲು ಆಧಾರವಾಗಿದೆ. ತೆನೆಯ ಕೆಳಭಾಗದ ಹುಲ್ಲುಕಡ್ಡಿಗಳು ಪಶುಗಳಿಗೆ ಆಹಾರವಾಗಿದೆ. ಮಣ್ಣಿನಲ್ಲಿ ಅಳಿದುಳಿದ ಕೂಳೆಗಳು ಹಾಗೂ ಜೈವಿಕ ತ್ಯಾಜ್ಯಗಳು ಎರೆಹುಳುಗಳ ಆಹಾರಕ್ಕೆ ಆಧಾರವಾಗಿದೆ. ಹುಲ್ಲು ತೆನೆ, ಕಾಳುಗಳನ್ನು ಉತ್ಪತ್ತಿ ಮಾಡುವ ಭೂಮಿಯು ಮಣ್ಣಾದರೂ, ಅಸಂಖ್ಯಾತ ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ, ಎರೆಹುಳುಗಳಿಗೆ ಹಾಗೂ ಭೂಮಿಯ ಮೇಲೆ ವಾಸಿಸುವ ಸಕಲ ಜೀವರಾಶಿಗಳಿಗೆ ಮಣ್ಣು ಜೀವನಾಧಾರವಾಗಿದೆ ಎಂದು ಯತೀಂದ್ರರು ಮಣ್ಣಿನ ಮಹತ್ವವನ್ನು ತಿಳಿಸಿದ್ದಾರೆ.
ಮನುಷ್ಯನ ಬದುಕು ನಿಂತಿರುವುದೇ ಮಣ್ಣಿನ ಮೇಲೆ. ಪ್ರತಿ ಮನುಷ್ಯನ ಆಹಾರದ ಅಗತ್ಯವನ್ನು ನೀಗಿಸುತ್ತಿರುವುದೇ ಮಣ್ಣು. ಈ ಮಣ್ಣು ಮನುಷ್ಯನ ಬದುಕಿನಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ಮನಗಂಡು, ಅದರ ಸಂರಕ್ಷಣೆಯ ಉದ್ದೇಶದಿಂದ ಥೈಲಾಂಡ್‍ನ ರಾಜರಾದ ದಿವಂಗತ ಹೆಚ್.ಎಂ.ಭೂಮಿಬೊಲ್ ಅದೂಲ್ಯದೇಜ್ ಹುಟ್ಟಿದ ದಿನವಾದ ಡಿಸೆಂಬರ್ 5 ನ್ನು ಪ್ರತಿ ವರ್ಷ ‘ವಿಶ್ವ ಮಣ್ಣಿನ ದಿನ’ ಎಂದು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸುವಂತೆ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸ್ಸು ಮಾಡಿತ್ತು. ನಂತರ 2014ರ ಡಿಸೆಂಬರ್ 5 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯಿತು. ಪ್ರತಿ ವರ್ಷ ಒಂದೊಂದು ಧ್ಯೇಯವಾಕ್ಯಗಳೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. ವಿಶ್ವ ಮಣ್ಣು ವರ್ಷ 2020 ಅನ್ನು ‘ಮಣ್ಣನ್ನು ಜೀವಂತವಾಗಿಡಿ, ಮಣ್ಣಿನ ಜೀವ ವೈವಿಧ್ಯತೆಯನ್ನು ಸಂರಕ್ಷಿಸಿ’ ಎಂದು ಘೋಷಿಸಿದೆ.
ಏನಿದು ಮಣ್ಣು : ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಜೀವವಾಗಿದೆ. ಮಣ್ಣಿನ ಫಲವತ್ತತೆ ಪೋಷಕಾಂಶಗಳು ಮಾತ್ರವಲ್ಲ, ಅನುಕೂಲಕರ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂದಗಳನ್ನು ಒಳಗೊಂಡಿದೆ. ಇದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಸಜೀವ ಮಣ್ಣು ಸಕಲ ಜೀವಿಗಳಿಗೆ ಆಹಾರ, ಮೇವು, ವಸತಿ, ಇಂಧನ ಇತ್ಯಾದಿ ಒದಗಿಸುತ್ತಿದೆ. ಮಳೆ ನೀರನ್ನು ಸಂಗ್ರಹಿಸಿ ಶುದ್ಧ ಮಾಡುತ್ತ್ತದೆ. ಸಾವಯವ ವಸ್ತುವನ್ನು ಪೋಷಕಾಂಶಗಳಾಗಿ ಬದಲಿಸುತ್ತದೆ. ಪ್ರವಾಹಗಳನ್ನು ಹಾಗೂ ಹವಾಮಾನ ಏರುಪೇರನ್ನು ತಡೆಯುತ್ತದೆ. ಭೂಮಿ ಮೇಲಿನ ಜೀವ ಜಂತುಗಳಿಗೆ ಆಶ್ರಯ ನೀಡುತ್ತದೆ.
ಜೀವಾಧಾರ ಮಣ್ಣು ಮತ್ತು ಮಣ್ಣಿನ ಜೀವ ವೈವಿಧ್ಯತೆ:
ಮೇಲುನೋಟಕ್ಕೆ ಮಣ್ಣು ಒಂದು ಜಡ ವಸ್ತುವಿನಂತೆ ಕಂಡು ಬಂದರೂ ಅದು ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವ ಚೈತನ್ಯಶೀಲ ಮತ್ತು ಕ್ರೀಯಾಶೀ¯ ವಸ್ತು. ಮಣ್ಣಿನಲ್ಲಿ ಕಣ್ಣಿಗೆ ಗೋಚರಿಸುವ ಜೀವಿಗಳೂ ವಾಸವಾಗಿವೆ. ಇವುಗಳ ಅಸ್ತಿತ್ವದಿಂದಾಗಿಯೇ ಅದೊಂದು ಜೀವಂತ ವಸ್ತು.
ಅತಿಯಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ನಮ್ಮ ಸುತ್ತಮುತ್ತಲಿನ ವಾತಾವರಣ, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುವುದರ ಜೊತೆಗೆ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸುತ್ತಿದ್ದು, ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಳ್ಳುತ್ತಿದೆ. ರಾಸಾಯನಿಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸುವುದು ಅಗತ್ಯ ಮತ್ತು ಅನಿವಾರ್ಯ. ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾದಂತೆ ಜೀವಿಗಳ ವೃದ್ಧಿ ಹೆಚ್ಚುತ್ತದೆ. ಇದರಿಂದ ಮಣ್ಣು ಆರೋಗ್ಯವಾಗಿ ಫಲವತ್ತಾಗಿ ಮಾರ್ಪಾಡಾಗುತ್ತದೆ. ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸಲು ಅನೇಕ ವಿಧಾನಗಳಿವೆ.
ಸಾವಯವ ಪದಾರ್ಥಗಳು: ಪ್ರಾಣಿಗಳ ಮಲಮೂತ್ರ, ಒಣಎಲೆ, ಹಸಿರೆಲೆಗಳು, ಹಿಂಡಿ, ಕಾಂಪೋಸ್ಟ್, ಎರೆಗೊಬ್ಬರ, ಜೈವಿಕ ಗೊಬ್ಬರ, ಕಾಸಾಯಿಖಾನೆಯ ತ್ಯಾಜ್ಯವಸ್ತು, ಮೀನಿನ ಪುಡಿ, ಮೊದಲಾದ ಪ್ರಾಣಿಜನ್ಯ ವಸ್ತುಗಳು ಸಾವಯವ ಗೊಬ್ಬರವಾಗಿ ಬಳಸಲಾಗುತ್ತಿದೆ. ಪ್ರಾಣಿ ಮತ್ತು ಸಸ್ಯ ಮೂಲದ ಸಾವಯವ ವಸ್ತುಗಳು ಕಳಿತು ಹ್ಯೂಮಸ್ ಆಗಿ ಮಾರ್ಪಾಡಾಗುತ್ತದೆ. ಹ್ಯೂಮಸ್ ಮಣ್ಣಿನ ಸ್ವರೂಪವನ್ನು ಸ್ಥಿರವಾಗಿಟ್ಟುಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಇದು ಸೂಕ್ಷ್ಮಜೀವಿಗಳ ಚಟುವಟಿಕೆಗೂ ಸಹಾಯವಾಗುತ್ತದೆ.
ಮಣ್ಣಿನ ಜೀವಿಗಳು: ಸಾಮಾನ್ಯವಾಗಿ ಸೂಕ್ಷ್ಮಜೀವಿಗಳೆಂದರೆ ರೋಗ ಹರಡುವ ಜೀವಿಯೆಂದೆ ಭಾವನೆ. ಆದರೆ ಮಣ್ಣಿನಲ್ಲಿರುವ ಅನೇಕ ಸೂಕ್ಷ್ಮಜೀವಿಗಳು ಮನುಷ್ಯರಿಗೆ ಉಪಕಾರಿಗಳು. ಇದು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಬ್ಯಾಕ್ಟೀರಿಯಾ, ಪ್ರೋಟೋಜೋವ, ಆಕ್ಟಿನೊಮೈಸಿಟಸ್, ಶಿಲಿಂದ್ರ, ಪಾಚಿ ಮೊದಲಾದುವುಗಳು ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು. ಇದಲ್ಲದೆ ಇರುವೆ, ಗೆದ್ದಲು, ಜೀರುಂಡೆ ಮೊದಲಾದ ಕೀಟಗಳು, ಸಹಸ್ರಪದಿಗಳು, ಜಂತುಹುಳು, ಎರೆಹುಳುಗಳು ಮೊದಲಾದ ಕಣ್ಣಿಗೆ ಗೋಚರಿಸುವ ಚಿಕ್ಕ ಪ್ರಾಣಿಗಳು ಮಣ್ಣಿನಲ್ಲಿ ವಾಸವಾಗಿರುತ್ತದೆ. ಸೂಕ್ಷ್ಮಜೀವಿಗಳು ಮತ್ತು ಕೀಟಗಳು ಮಣ್ಣಿನ ಉತ್ಪಾದಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಸ್ಯಗಳ ಬೆಳೆವಣಿಗೆಯನ್ನು ಪ್ರಚೋದಿಸುವ ಹಾರ್ಮೊನ್ ಮತ್ತು ಕಿಣ್ವಗಳು (ಎನ್‍ಜೈಮ್) ಈ ಸೂಕ್ಷ್ಮಾಣುಗಳಲ್ಲಿವೆ. ಇದು ಮಣ್ಣಿನ ಗುಣಧರ್ಮಗಳನ್ನು ಸುಧಾರಿಸುತ್ತದೆ ಮತ್ತು ಸಸ್ಯಗಳ ಬೇರಿನ ಬೆಳೆವಣಿಗೆ ವೃದ್ಧಿಯಾಗಲು ಸಹಕರಿಸುತ್ತದೆ.
ಜೈವಿಕ ಗೊಬ್ಬರ ಜೈವಿಕ ಗೊಬ್ಬರ ಸಮಗ್ರ ಪೋಷಕಾಂಶಗಳ ಬಳಕೆಯಲ್ಲಿ ಒಂದು ಮುಖ್ಯ ಅಂಗವಾಗಿದೆ. ವಾತಾವರಣದಲ್ಲಿನ ಸಾರಜನಕವನ್ನು ಸ್ಥಿರೀಕರಿಸುವ ಮತ್ತು ಮಣ್ಣಿನಲ್ಲಿನ ರಂಜಕವು ಸಸ್ಯಗಳಿಗೆ ದೊರೆಯುವಂತೆ ಮಾಡುವ ಪ್ರಕೃತಿಯಲ್ಲಿನ ಕೆಲವು ಸೂಕ್ಷ್ಮಜೀವಿಗಳ ಗುಂಪಿಗೆ ಜೈವಿಕ ಗೊಬ್ಬರವೆನ್ನುತ್ತಾರೆ. ಮಣ್ಣಿನ ಪೊಟ್ಯಾಷ್‍ನ್ನು ಕರಗಿಸುವ ಸೂಕ್ಷ್ಮ ಜೀವಿಗಳು ಹಾಗು ಬೇರಿನ ಮೇಲೆ ಬೆಳೆಯುವ ಟ್ರೈಕೋಡರ್ಮ ಶಿಲೀಂಧ್ರಿಯ ಸುಡೋಮೊನಾಸ್ ಜೈವಿಕ ಪೀಡೆನಾಶಕಗಳನ್ನು ಕೂಡ ಈ ಗುಂಪಿಗೆ ಸೇರಿಸಲಾಗಿದೆ.ಈ ಸೂಕ್ಷ್ಮ ಜೀವಿಗಳು ಎಲ್ಲಾ ಮಣ್ಣಿನಲ್ಲಿ ಇರುವುದಾದರೂ, ಬೆಳೆಯನ್ನು ಬೆಳೆಯುವ ಸಂದರ್ಭಗಳಲ್ಲಿ ಇವುಗಳ ಸಂಖ್ಯೆಯನ್ನು ಸೋಂಕು ಮಾಡುವ ಮೂಲಕ ಹೆಚ್ಚಿಸಿ ಉತ್ತಮ ಇಳುವರಿ ಪಡೆಯಬಹುದು.ಮಣ್ಣಿನ ಸಾವಯವ ಅಂಶವು ಈ ಸೂಕ್ಷ್ಮಜೀವಿಗಳನ್ನು ಕಾಪಾಡಿಕೊಳ್ಳಲು ಮತ್ತು ಅಭಿವೃದ್ಧಿಸಲು ಸಹಕಾರಿಯಾಗಿದೆ. ತೇವವಿರುವ, ಕೊಳೆಯುವ ಸಾವಯವ ಪದಾರ್ಥಗಳಿರುವ ಮಣ್ಣಿನಲ್ಲಿ ಸೂಕ್ಷ್ಮಜೀವಿಗಳು, ಉಪಯುಕ್ತ ಕೀಟಗಳ ಸಂಖ್ಯೆ ಹೆಚ್ಚಾಗಿರುತ್ತದೆ.
ಹಸಿರಲೆ ಗೊಬ್ಬರ: ಬೆಳೆಗಳಾದ ಸೆಣಬು, ಡಯಂಚ, ಅಲಸಂದೆ, ಸಸ್ಬೇನಿಯ, ಕಾಡು ಉದ್ದು, ವೆಲ್ವೆಟ್ ಬೀನ್ಸ್, ಹೊಂಗೆ, ಇತರೆ ಗಿಡ, ಮರ, ಎಲೆಗಳು, ಕಾಂಡ ಇತರೆ ಭಾಗಗಳು ಮತ್ತು ಕಳೆಗಳನ್ನು ಹಸಿರಾಗಿದ್ದಾಗಲೇ ಮಣ್ಣಿಗೆ ಗೊಬ್ಬರವಾಗಿ ಸೇರಿಸಿ ಅದರ ಫಲವತ್ತತೆಯನ್ನು ಹೆಚ್ಚಿಸುವುದಕ್ಕೆ ಹಸಿರೆಲೆ ಗೊಬ್ಬರ ಎಂದು ಕರೆಯುತ್ತೇವೆ. ಇವುಗಳು ಹೆಚ್ಚಾಗಿ ದ್ವಿದಳ ಧಾನ್ಯದ ಬೆಳೆಗಳಾಗಿದ್ದು, ಪ್ರಮುಖ ಬೆಳೆ ಬೆಳೆಯುವ ಜಮೀನಿನಲ್ಲೇ ಬೆಳೆದು ಅಥವಾ ಬೇರೆಡೆಯಿಂದ ತಂದು ಭೂಮಿಗೆ ಸೇರಿಸಬಹುದು. ಹಸಿರೆಲೆಗೊಬ್ಬರಗಳು ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ ಹಾಗೂ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ಸುಸ್ಥಿರ ಇಳುವರಿಯನ್ನು ಪಡೆಯಬಹುದಾಗಿದೆ.
ಎರೆಗೊಬ್ಬರ: ಸ್ಥಳಿಯವಾಗಿ ದೊರಕುವ ಕೃಷಿ ತ್ಯಾಜ್ಯಗಳಿಂದ ಕಡಿಮೆ ಖರ್ಚಿನಲ್ಲಿ ಎರೆಹುಳು ಗೊಬ್ಬರ ತಯಾರಿಸಿ ರೈತರು ತಮ್ಮ ಹೊಲದಲ್ಲಿ ಬಳಸಬಹುದು. ರೈತನ ಮಿತ್ರ, ಪ್ರಕೃತಿಯ ನೇಗಿಲು ಎಂದೇ ಕರೆಯುವ ಎರೆಹುಳು ಮಣ್ಣು ಮತ್ತು ಕಳೆಯುವ ವಸ್ತುಗಳನ್ನು ತಿಂದು ವಿಸರ್ಜಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಈ ಎರೆಹುಳು ದೇಹದಿಂದ ಬರುವ ಹಿಕ್ಕೆಗಳನ್ನು ಇಂಗ್ಲೀಷ್‍ನಲ್ಲಿ ವರ್ಮಿಕಾಂಪೋಸ್ಟ್ಟ್ ಎಂದು ಕನ್ನಡದಲ್ಲಿ ಎರೆಗೊಬ್ಬರವೆಂದು ಕರೆಯಲಾಗುತ್ತದೆ. ಐಸೀನಿಯಾ ಫೀಟಿಡಾ, ಯೂಡ್ರಿಲಸ್ ಯುಜೀನಿಯಾ, ಪೆರೆಯೋನಿಕ್ಸ್ ಎಕ್ಸ್‍ಕವೇಟಸ್ ಮತ್ತು ಪೆಯೋನಿಕ್ಸ್ ಸ್ಯಾಂಸಿಬ್ಯಾರಿಕಸ್ ಎರೆಹುಳುಗಳನ್ನು ಎರೆ ಗೊಬ್ಬರ ತಯಾರಿಕೆಗೆ ಬಳಸಲಾಗುತ್ತದೆ.
ಮಣ್ಣನ್ನು ಆರೋಗ್ಯವಾಗಿಡಲು, ರಾಸಾಯನಿಕ ಗೊಬ್ಬರಗಳನ್ನು ಕನಿಷ್ಟ ಮಟ್ಟದಲ್ಲಿರಿಸಿ ಜೈವಿಕ ಸಾವಯವ ಗೊಬ್ಬರಗಳನ್ನು ಅವಶ್ಯ ಪ್ರಮಾಣದಲ್ಲಿ ಒದಗಿಸಬೇಕು. ಇದರಿಂದ ನಿಸರ್ಗದ ಅಮೂಲ್ಯ ಕೊಡುಗೆಯಾದ ಮಣ್ಣು ಚೈತನ್ಯದಾಯಕವು, ಕ್ರೀಯಾಶೀಲವೂ ಆಗಿರುವಂತೆ ನೋಡಿಕೊಳ್ಳಬಹುದು. ನೆಲ ಜೀವಿಗಳ ಬದುಕಿಗೆ ಮಣ್ಣೆ ಆಧಾರ. ಹುಟ್ಟಿನಿಂದ ಸಾವಿನ ತನಕವು ನಾವು ಮಣ್ಣಿನಲ್ಲಿ ಬದುಕಿಗಾಗಿ ದುಡಿಯುತ್ತೇವೆ. ಸತ್ತಾಗ ಮಣ್ಣನ್ನೇ ಸೇರುತ್ತೇವೆ. ಈ ನೈಸರ್ಗಿಕ ಸಂಪತ್ತನ್ನು ಕಾಪಾಡುವಲ್ಲಿ ನಾವೆಲ್ಲ ಸಹಕರಿಸೋಣ.
ಲೇಖನ: ಶ್ರೀಮತಿ ಪ್ರೀತು ಡಿ. ಸಿ., ಡಾ. ಸವಿತಾ ಎಸ್. ಎಂ., ಡಾ. ರಾಜೇಂದ್ರ ಬಿ. ಎಸ್.
ಕೃಷಿ ವಿಜ್ಞಾನ ಕೇಂದ್ರ, ಮಾಗಡಿ, ರಾಮನಗರ
Share your comments