ಹಸಿರು ಪಟಾಕಿ ಎಲ್ಲಿದೆ? ಎಲ್ಲಿ ಸಿಗುತ್ತೆ?
ಮುಂಬಯಿ: ದೀಪಾವಳಿ ಸಮೀಪಿಸುತ್ತಿದ್ದಂತೆ ಪಟಾಕಿ ಮಾರಾಟ ಮತ್ತು ಬಳಕೆ ಕುರಿತ ಚರ್ಚೆಗಳು ಆರಂಭವಾಗಿದ್ದು, ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಕೆ ಮಾಡಿ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಆದರೆ ಚರ್ಚೆಗೆ ಗ್ರಾಸವಾಗಿರುವ ಹಸಿರು ಪಟಾಕಿ ಎಲ್ಲಿ ಲಭ್ಯ ಎಂಬ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿಲ್ಲ. ಪಟಾಕಿ ಸಿಡಿಸಲು ನಿರ್ಬಂಧ ಮತ್ತು ಸಮಯದ ಮಿತಿ ನಿಗದಿಪಡಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಆದರೆ ಹಸಿರು ಪಟಾಕಿ ಮಾತ್ರ ಮುಂಬಯಿಯ ಯಾವುದೇ ಮಳಿಗೆಯಲ್ಲಿ ಸದ್ಯಕ್ಕೆ ದೊರೆಯುತ್ತಿಲ್ಲ. ಪಟಾಕಿ ಸಿಡಿಸಿದಾಗ ಅದರಿಂದ ಹೆಚ್ಚಿನ ಪ್ರಮಾಣದ ಹೊಗೆ ಮತ್ತು ಶಬ್ಧ ಉಂಟಾದರೆ ಅದರಿಂದ ಮಾಲಿನ್ಯ ಉಂಟಾಗುತ್ತದೆ. ಅಂತಹ ಪಟಾಕಿ ಬಳಸಬಾರದು, ಅದರ ಬದಲು ಹೊಗೆ ಮತ್ತು ಶಬ್ಧ ರಹಿತ ಹಸಿರು ಪಟಾಕಿ ಬಳಕೆ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ಆದರೆ ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿ ಮಧ್ಯೆ ವ್ಯತ್ಯಾಸ ಹುಡುಕಲು ಕಷ್ಟವಿದೆ.
ಈ ಸಮಸ್ಯೆಗೆ ಪರಿಹಾರ ಹುಡುಕಲು ಐಐಟಿಯ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ದೀಪಾವಳಿ ಹಬ್ಬಕ್ಕೆ ಎರಡು ವಾರಗಳಷ್ಟೇ ಉಳಿದಿವೆ. ಈಗಾಗಲೇ ದೊಡ್ಡ ಮಟ್ಟದ ಪಟಾಕಿ ದಾಸ್ತಾನು ಮಳಿಗೆಗಳು ಮತ್ತು ಡೀಲರ್‌ಗಳನ್ನು ತಲುಪಿದೆ. ಅಂಗಡಿಗಳಲ್ಲಿ ಪಟಾಕಿ ಮಾರಾಟ ಆರಂಭವಾಗಿದೆ. ಆದರೆ ಶೇ. 80 ಪಟಾಕಿ ಪ್ಯಾಕ್‌ಗಳಲ್ಲಿ ಅದರಲ್ಲಿರಬಹುದಾದ ರಾಸಾಯನಿಕ ಬಗ್ಗೆ ಮಾಹಿತಿಯಿಲ್ಲ.
Share your comments