ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿನ್ಯೂಸ್ ಪರಿಚಯಿಸಿದ್ದು, ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
- ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ವರದಿ
- ಕೃಷಿ ಮಾರಾಟ ಮಂಡಳಿ ಎಫ್‌ಡಿ ಅಕ್ರಮ: ಇ.ಡಿ ಆರೋಪ ಪಟ್ಟಿ
- ಸಾಮೂಹಿಕ ವಿವಾಹದಲ್ಲಿ ಪ್ರಗ್ನೆನ್ಸಿ ಪರೀಕ್ಷೆ, ಹಲವರು ಗರ್ಭಿಣಿಯರು: ವಿವಾದ
- ತೆಲಂಗಾಣ: ವೈ.ಎಸ್.ಶರ್ಮಿಳಾ ಬಂಧನ: 14 ದಿನ ಪೊಲೀಸ್ ಕಸ್ಟಡಿಗೆ
- ನಂಬರ್ ಒನ್ ಮಾದರಿ ಕ್ಷೇತ್ರವಾಗಿ ಶಿಗ್ಗಾವಿ ಅಭಿವೃದ್ಧಿ: ಸಿ.ಎಂ
- ವಿರಾಟ ಕೊಹ್ಲಿಗೆ ಬರೋಬ್ಬರಿ 24 ಲಕ್ಷ ರೂಪಾಯಿ ದಂಡ!
ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದ್ದು,ಕಳೆದ 24 ಗಂಟೆಗಳಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಇನ್ನು ರಾಜ್ಯದಲ್ಲಿ ಮಂಗಳವಾರ ಮತ್ತು ಬುಧವಾರ ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ
ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ,
ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ರಾಮನಗರ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಮಿಂಚು ಗುಡುಗು ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ
ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಗರಿಷ್ಠ ಉಷ್ಣಾಂಶವು ಕರಾವಳಿಯ
ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ವರೆಗೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಸರ್ಕಾರಿ ನೌಕರರ ಗಮನಕ್ಕೆ: ಈ ದಿನ ಬರಲಿದೆಯಂತೆ ನಿಮ್ಮ ಖಾತೆಗೆ 18 ತಿಂಗಳ ಬಾಕಿ ಡಿಎ!
ಕರ್ನಾಟಕ ಕೃಷಿ ಮಾರಾಟ ಮಂಡಳಿಯ 100 ಕೋಟಿ ರೂಪಾಯಿ ಎಫ್‌ಡಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗಿದೆ.
ಕೃಷಿ ಮಾರಾಟ ಮಂಡಳಿಯ ಎಫ್‌ಡಿಯನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾಯಿಸಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್
ಆಕಾಶ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಜಾರಿ ನಿರ್ದೇಶನಾಲಯವು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
----------------
ಮಧ್ಯಪ್ರದೇಶದ ಸರ್ಕಾರ ಪರಿಚಯಿಸಿರುವ ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಈ ಯೋಜನೆಯಡಿಯಲ್ಲಿ ವಿವಾಹವಾಗುವ ವಧುಗಳಿಗೆ ಮದುವೆಗೂ ಮುನ್ನ ಗರ್ಭಧಾರಣೆ ಪರೀಕ್ಷೆಯನ್ನು ನಡೆಸಲಾಗಿದ್ದು,
ನಾಲ್ವರು ಯುವತಿಯರು ಗರ್ಭಿಣಿಯರಾಗಿದ್ದಾರೆ ಎಂದು ವರದಿ ಬಂದಿದೆ. ಹೀಗಾಗಿ, ಗರ್ಭಿಣಿಯಾಗಿರುವವರನ್ನು
ಈ ಯೋಜನೆಯಿಂದ ಕೈಬಿಡಲಾಗಿದೆ. ಇದೀಗ ಈ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಡ ಕುಟುಂಬದ
ಹೆಣ್ಣು ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಯೋಜನೆ
ಯಡಿ ಸಾಮೂಹಿಕ ವಿವಾಹವಾದ ದಂಪತಿಗೆ ನಗದು ಮತ್ತು ಗೃಹಬಳಕೆಯ ವಸ್ತುಗಳನ್ನು ನೀಡಲಾಗುತ್ತದೆ.
----------------
ಕರ್ನಾಟಕದ ಚುನಾವಣೆ ಕಾವು ಹೆಚ್ಚಾಗುತ್ತಿರುವಾಗಲೇ ನೆರೆಯ ರಾಜ್ಯ ತೆಲಂಗಾಣದಲ್ಲಿಯೂ ರಾಜಕೀಯ ಹೈಡ್ರಾಮ ಹೆಚ್ಚಾಗಿದೆ.
ಮುಂದಿನ ವರ್ಷ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.
ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಅವರ
ಸಹೋದರಿ ಹಾಗೂ ತೆಲಂಗಾಣದ ರಾಜಕಾರಣಿಯಾಗಿರುವ ವೈಎಸ್ ಶರ್ಮಿಳಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲದೇ ಅವರನ್ನು 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
----------------
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 23ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಿಗದಿತ
ಅವಧಿಯಲ್ಲಿ ಪಂದ್ಯ ಮುಗಿಸದೆ ಇರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸವಾಲು ಎದುರಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರಿಗೆ ಐಪಿಎಲ್ ಭಾರೀ ಮೊತ್ತದ ದಂಡವನ್ನು ವಿಧಿಸಲಾಗಿದೆ.
ಇನ್ನು ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದ ವೇಳೆ ಒಂದು ಓವರ್ ಕಡಿಮೆ ಬೌಲ್ ಮಾಡಿದ್ದರಿಂದಾಗಿ ಆರ್‌ಸಿಬಿ ತಂಡದ ನಾಯಕ
ಫಾಫ್ ಡುಪ್ಲೆಸಿಸ್‌ಗೆ 12 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿತ್ತು. ಇದೀಗ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಅವರಿಗೆ 24 ಲಕ್ಷ ರೂಪಾಯಿ
ಹಾಗೂ ಫಾಫ್ ಡುಪ್ಲೆಸಿಸ್ ಸೇರಿದಂತೆ ತಂಡದ ಆಟಗಾರರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ.25 ರಷ್ಟು ದಂಡವನ್ನು ವಿಧಿಸಲಾಗಿದೆ.
----------------
ಹಾವೇರಿಯ ಶಿಗ್ಗಾವಿಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಂದಿನ ಒಂದು ವರ್ಷದ ಅವಧಿಯ ಒಳಗಾಗಿ ಸವಣೂರಿನ ಎಲ್ಲಾ ವಾರ್ಡ್‌ಗಳಿಗೆ ಪ್ರತಿದಿನ 24 ಗಂಟೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು.
ಕರ್ನಾಟಕದಲ್ಲೇ ಶಿಗ್ಗಾವಿಯನ್ನು ನಂಬರ್ ಒನ್ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಅವರು, ನಿಮ್ಮೆಲ್ಲರ ಆಶೀರ್ವಾದದಿಂದ ಈ ಕ್ಷೇತ್ರದ ಸೇವೆ ಮಾಡುವ ಅವಕಾಶ ಸಿಕ್ಕಿದೆ.
ಇಲ್ಲಿ ಒಂದೂವರೆ ದಶಕದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸವನ್ನು ನೋಡಿದ್ದೀರಿ ಎಂದಿದ್ದಾರೆ.
----------------
Pic Credits
Pixabay
Virat Kohli Official Twitter Account
----------------
Share your comments