ರೈತ ಬಾಂಧವರಿಗೆ ನೆರವಾಗುವ ಉದ್ದೇಶದಿಂದ ಬೀದರ್‌ನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ಮುಂಗಾರು ಬೆಳೆಗಳಲ್ಲಿ ಕಳೆಗಳ ಹತೋಟಿ’ ವಿಷಯವಾಗಿ ಇದೇ ಶನಿವಾರ ಅಂದರೆ, ಜೂನ್ 12ರಂದು ಬೆಳಗ್ಗೆ 11 ಗಂಟೆಗೆ ಆನ್‌ಲೈನ್ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಗೂಗಲ್ ಮೀಟ್ ವೇದಿಕೆಯಲ್ಲಿ ಕಾರ್ಯಾಗಾರ ನಡೆಯಲಿದೆ.
ಕೋವಿಡ್-19 ಸಂಕಷ್ಟದ ಸಮಯದಲ್ಲಿ ರೈತರಿಗೆ ಆಗತ್ಯವಾಗಿ ಬೇಕಿರುವ ತಾಂತ್ರಿಕತೆಗಳ ಬಗೆಗಿನ ಮಾಹಿತಿಯನ್ನು ಅವರು ಇರುವಲ್ಲಿಯೇ ತಿಳಿಸಿಕೊಡುವ ಉದ್ದೇಶದಿಂದ ಕೃಷಿ ವಿಜ್ಞಾನ ಕೇಂದ್ರ, ಬೀದರ್ ಕೆವಿಕೆ - ಕೃಷಿ ಪಾಠ ಶಾಲೆ ವತಿಯಿಂದ ಸರಣಿ ಆನ್ ಲೈನ್ ಕಾರ್ಯಕ್ರಮ ಅಭಿಯಾನವನ್ನು ಆರಂಬಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಶನಿವಾರದಂದು ರೈತರಿಗಾಗಿ ವಿಶೇಷ ತರಗತಿಗಳು ನಡೆಯಲಿವೆ. ಈ ವಾರ ‘ಮುಂಗಾರು ಬೆಳೆಗಳಲ್ಲಿ ಕಳೆಗಳ ಹತೋಟಿ’ ಎಂಬುದು ಪಠ್ಯ ವಿಷಯವಾಗಿದೆ.
ಮುಂಗಾರು ಹಂಗಾಮು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಳೆಗಳು, ಕಳೆಗಳ ವರ್ಗಿಕರಣ, ಏಕದಳ ಹಾಗೂ ದ್ವಿದಳ ಜಾತಿಯ ಕಳೆಗಳು, ಅವುಗಳಿಂದಾಗುವ ಬಾಧೆಯ ಪ್ರಮಾಣ, ಈ ಕಳೆಗಳ ಪಾರಂಪರಿಕ ಹಾಗೂ ರಾಸಾಯನಿಕ ಹತೋಟಿ ಕ್ರಮಗಳು, ಬಿತ್ತನೆ ಪೂರ್ವದಲ್ಲಿ ಹಾಗೂ ಬಿತ್ತನೆ ನಂತರ ಬಳಸಬಹುದಾದ ಕಳೆ ನಾಶಕಗಳು ಹಾಗೂ ಕಳೆ ನಿರ್ವಹಣೆ ಪದ್ಧತಿಗಳ ಕುರಿತು ಅನುಭವಿ ವಿಜ್ಞಾನಿಗಳು, ಬೇಸಾಯ ತಜ್ಞರು ಹಾಗೂ ವಿಜಯಪುರ ಜಿಲ್ಲೆ ಇಂಡಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ರಾಜೀವಕುಮಾರ ಬಿ. ನೆಗಳೂರ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಬೀದರ್ ಜಿಲ್ಲೆಯನ್ನು ಬೇಳೆಕಾಳುಗಳ ಬಟ್ಟಲು ಎನ್ನಲಾಗುತ್ತದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸೋಯಾ ಅವರೆ, ತೊಗರಿ, ಉದ್ದು, ಹೆಸರು, ಜೋಳ, ಎಳ್ಳು, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು,, ಈ ಎಲ್ಲಾ ಬೆಳೆಗಳಲ್ಲಿ ಕಳೆಯಿಂದಾಗಿ (ಸೆದೆ) ಬೆಳೆ ಸರಿಯಾಗಿ ಬಾರದೆ ಇಳುವರಿಯಲ್ಲಿ ಕುಂಟಿತವಾಗುತ್ತಿರುವುದು ಕಂಡುಬರುತ್ತಿದೆ. ಇತ್ತೀಚೆಗೆ ಕಳೆ ನಿರ್ವಹಣೆಯಲ್ಲಿ ಸಾಕಷ್ಟು ತಂತ್ರಜ್ಞಾನಗಳು ಅಭಿವೃದ್ಧಿಯಗಿದ್ದು ಇವುಗಳನ್ನು ಸಮಯಕ್ಕೆ ಸರಿಯಾಗಿ ರೈತರಿಗೆ ತಲುಪಿಸುವ ಜವಾಬ್ದಾರಿ ವಿಶ್ವವಿದ್ಯಾಲಯ ಮತ್ತು ಇಲಾಖೆಗಳ ಮೇಲಿದೆ. ಈ ನಿಟ್ಟಿನಲ್ಲಿ ಬಿದರ್ ಕೃಷಿ ವಿಜ್ಞಾನ ಕೇಂದ್ರವು ನಿರಂತರವಾಗಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದು ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾಗಿರುವ ಡಾ. ಸುನೀಲ್ ಕುಮಾರ್ ಎನ್.ಎಂ. ಅವರು ಮಾಹಿತಿ ನೀಡಿದ್ದಾರೆ.
ಗೂಗಲ್ ಮೀಟ್ ವೇದಿಕೆಯಲ್ಲಿ ನಡೆಯಲಿರುವ ಈ ಆನ್ ಲೈನ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು meet.google.com/ngx-xdwd-noh ಲಿಂಕ್ ಮೂಲಕ ಭಾಗವಹಿಸುವಂತೆ ಡಾ. ಸುನೀಲ್ ಕುಮಾರ್ ಎನ್.ಎಂ. ಅವರು ತಿಳಿಸಿದ್ದಾರೆ.
Share your comments