1. ಸುದ್ದಿಗಳು

ಕರ್ನಾಟಕ, ಆಂಧ್ರಪ್ರದೇಶದ ನಂತರ ತಮಿಳುನಾಡಿನಲ್ಲಿ ಐತಿಹಾಸಿಕ ಕೃಷಿ ಬಜೆಟ್ ಮಂಡನೆ

ಕರ್ನಾಟಕ ಮತ್ತು ಆಂಧ್ರಪ್ರದೇಶದ ನಂತರ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ರಾಜ್ಯ ತಮಿಳುನಾಡು ಆಗಿದೆ. ಕೃಷಿಗಾಗಿ ವಿಶೇಷ ಬಜೆಟ್ ಹೊಂದುವ ಸಂಪ್ರದಾಯವನ್ನು ಕರ್ನಾಟಕವು  2011-12 ರಲ್ಲಿ ಪ್ರಾರಂಭಿಸಿತು, ಮತ್ತು 2013-14 ರಲ್ಲಿ ಅವಿಭಜಿತ ಆಂಧ್ರಪ್ರದೇಶ ರಾಜ್ಯವು ಅನುಸರಿಸಿತು. ತೆಲಂಗಾಣ, ರಾಜಸ್ಥಾನ ಮತ್ತು ಬಿಹಾರದಂತಹ ರಾಜ್ಯಗಳು ಸಹ ಇದೇ ರೀತಿಯ ಯೋಜನೆಗಳನ್ನು ಹೊಂದಿದ್ದರೂ ಸಹ ಪ್ರತ್ಯೇಕ ಬಜೆಟ್ ಮಂಡನೆ ಮಾಡಿಲ್ಲ.

ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಶನಿವಾರ ಕೃಷಿಗಾಗಿ ವಿಶೇಷ ಬಜೆಟ್ ಅನ್ನು ತಮಿಳುನಾಡು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಎಂ.ಆರ್.ಕೆ. ಪನ್ನೀರ್​ಸೆಲ್ವಂ ಮಂಡಿಸಿದರು. ತಮಿಳುನಾಡು ರಾಜ್ಯದಲ್ಲಿ ಡಿಎಂಕೆ ಪಕ್ಷದ ನೇತೃತ್ವದ ಸರಕಾರವು ಇದೇ ಮೊದಲ ಸಲ ಕೃಷಿ ಬಜೆಟ್ ಮಂಡನೆ ಮಾಡಿದೆ.

ಕೃಷಿಗಾಗಿ ಮೊದಲ ವಿಶೇಷ ಬಜೆಟ್ ಮಂಡಿಸಿದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ಎಮ್‌ಆರ್‌ಕೆ ಪನ್ನೀರಸೆಲ್ವಂ ಅವರು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಈ ಕೃಷಿ ಬಜೆಟ್ ಅನ್ನು ಅರ್ಪಿಸಲಾಗಿದೆ ಎಂದು ಹೇಳಿದರು.

ತಮಿಳುನಾಡು 2021-22ನೇ ಸಾಲಿನ ಬಜೆಟ್​ನಲ್ಲಿ ಕೃಷಿಗಾಗಿ ರೂ.34,220.65 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ. ಈ ಬಾರಿ ಪ್ರಮುಖವಾಗಿ ಪಶುಸಂಗೋಪನೆ, ಮೀನುಗಾರಿಕೆ, ಹೈನುಗಾರಿಕೆ ಅಭಿವೃದ್ಧಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ರೇಷ್ಮೆ ಕೃಷಿ ಮತ್ತು ಅರಣ್ಯ ವಲಯಗಳಿಗೆ ಹೆಚ್ಚಿನ ಆದ್ಯತೆಗೆ ಅವಕಾಶ ಕಲ್ಪಿಸಲಾಗಿದೆ.

4,508.23 ಕೋಟಿ ರೂಪಾಯಿ ರೈತರ ವಿದ್ಯುತ್ ಗಾಗಿ ಮೀಸಲಿರಿಸಲಾಗಿದೆ ಎಂದು ತಿಳಿಸಿರುವ ಸಚಿವರು, ರೈತರು ಬಳಕೆ ಮಾಡುವ ಪಂಪ್​ಸೆಟ್​ಗಳಿಗೆ ಉಚಿತವಾಗಿ ವಿದ್ಯುತ್​ ನೀಡಲು ನಿರ್ಧರಿಸಿದ್ದು, ​1,245.45 ಕೋಟಿ ರೂಪಾಯಿ ಕೃಷಿ ಇಲಾಖೆ ಅಭಿವೃದ್ಧಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದರು.

ತಮಿಳುನಾಡಿನ ಎಲ್ಲಾ ಗ್ರಾಮಗಳು ಒಟ್ಟಾರೆ ಕೃಷಿ ಅಭಿವೃದ್ಧಿ ಮತ್ತು ಸ್ವಾವಲಂಬನೆ ಸಾಧಿಸಲು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತರಲು ಯೋಜಿಸುತ್ತಿದೆ. ತಾಟಿನಿಂಗು ಮರಗಳನ್ನು ಕಡಿಯದಂತೆ ಕಾಯಿದೆ ರೂಪಿಸುವ ಮತ್ತು ತಾಟಿನಿಂಗು ಬೋರ್ಡ್ ಆರಂಭಿಸುವ ಪ್ರಸ್ತಾಪ ಕೂಡ ಬಜೆಟ್ ನಲ್ಲಿದೆ. ತಾಟಿನಿಂಗು ಬೆಲ್ಲ ಮತ್ತು ಇತರೆ ತಾಟಿನಿಂಗು ಮೌಲ್ಯವರ್ಧಿತ ಪದಾರ್ಥಗಳನ್ನು ಪಡಿತರ ಮೂಲಕ ವಿತರಿಸಲು 3 ಕೋಟಿ ಎತ್ತಿಡಲಾಗಿದೆ.

ಯುವಕರು ಉದ್ಯೋಗಾಕಾಂಕ್ಷಿಗಳಿಗಿಂತ ಉದ್ಯೋಗ ಸೃಷ್ಟಿಕರ್ತರಾದಾಗ ಮಾತ್ರ ಕೃಷಿ ಕ್ಷೇತ್ರವು ವೇಗವಾಗಿ ಬೆಳೆಯುತ್ತದೆ ಎಂದು ಸಚಿವರು ಹೇಳಿದ್ದು, ಇದಕ್ಕಾಗಿ, ಕೃಷಿ-ವ್ಯಾಪಾರ ಸಂಸ್ಥೆಗಳು ಮತ್ತು ಹಳೆಯ ವಿದ್ಯಾರ್ಥಿಗಳ ಸಹಾಯದಿಂದ ತಮ್ಮ ಪದವಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಾಮರ್ಥ್ಯ ವೃದ್ಧಿ ತರಬೇತಿಯನ್ನು ನೀಡಲಾಗುವುದು. ಈ ಯೋಜನೆಯನ್ನು ರೂ 2.68 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೈತ ಕುಟುಂಬಗಳಿಗೆ ಸಮಗ್ರ ಕೃಷಿ ವ್ಯವಸ್ಥೆ ಜಾರಿ, ರೈತರನ್ನು ನೈಸರ್ಗಿಕ ವಿಕೋಪಗಳಿಂದ ರಕ್ಷಿಸಲು ಕೃಷಿ ವಲಯ ಸಮಿತಿ, ಚೆನ್ನೈನಲ್ಲಿ ಕೃಷಿಗಾಗಿ ಪ್ರತ್ಯೇಕ ಮ್ಯೂಸಿಯಂ, ಹೊಸ ಸ್ಥಳೀಯ ಕೃಷಿ ತಂತ್ರಗಳು ಮತ್ತು ಯಂತ್ರೋಪಕರಣಗಳನ್ನು ಕಂಡುಹಿಡಿದ ರೈತರಿಗೆ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಪನ್ನೀರ್​ಸೆಲ್ವಂ ಹೇಳಿದರು.

ಕೃಷಿ ಬಜೆಟ್ ನ ಪ್ರಮುಖ ಅಂಶಗಳು

ಕೃಷಿ ಕ್ಷೇತ್ರದ ಬೆಳವಣಿಗೆಗೆ 16 ಅಂಶಗಳ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು, ಇದರಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ರಾಗಿ, ಹಣ್ಣುಗಳು ಮತ್ತು ಇತರ ಕೃಷಿ ಉತ್ಪನ್ನಗಳಿಗೆ ಸಮಂಜಸವಾದ ಬೆಲೆಯನ್ನು ಖಾತರಿಪಡಿಸುವುದು. ಯುವಕರನ್ನು ಕೃಷಿ ಉದ್ಯಮಿಗಳಾಗಿ ಪ್ರೋತ್ಸಾಹಿಸುವುದು. ಸಾವಯವ ಕೃಷಿಗಾಗಿ ಹೊಸ ಯೋಜನೆಯನ್ನು ಘೋಷಿಸಲಾಗಿದೆ; ಸಾವಯವ ಕೃಷಿಗಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸಲಾಗುವುದು. ತಮಿಳುನಾಡಿನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ರೈತರಿಗೆ ಇನ್ಪುಟ್ ಸಬ್ಸಿಡಿಗಳನ್ನು ನೀಡಲಾಗುವುದು ಎಂದು ಕೃಷಿ ಸಚಿವರು ಘೋಷಿಸಿದ್ದಾರೆ.

Published On: 16 August 2021, 10:18 AM English Summary: Tamil Nadu to become third state to present separate agricultural Budget

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.