ರೈತರು ಮತ್ತು ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿರುವ ಮಾಹಿತಿಯನ್ನು ನೋಡಲು ಮತ್ತು ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಲು ಬೆಳೆ ದರ್ಶಕ್ 2020-21 ಆ್ಯಪ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಒಂದು ವೇಳೆ ಮಾಹಿತಿ ತಪ್ಪಾಗಿ ದಾಖಲಿಸಿದ್ದರೆ ಅ. 15ರೊಳಗಾಗಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬೆಳೆ ಸಮೀಕ್ಷೆ ಸಮಯದಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ವೀಕ್ಷಿಸಬಹುದು.ಅಲ್ಲದೆ ರೈತರ ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ, ರೈತರು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿ ಸೇರಿದಂತೆ ಇತರ ಬೆಳೆ ಸಮೀಕ್ಷೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ರೈತರು ಆಕ್ಷೇಪಣೆ ಸಲ್ಲಿಸಬಹುದು. ಜತೆಗೆ ರೈತರು ತಾವು ಸಲ್ಲಿಸಿರುವ ಆಕ್ಷೇಪಣೆಯ ಕುರಿತು ಸರಕಾರಿ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮದ ಮಾಹಿತಿಯನ್ನು ಸಹ ತಿಳಿಯಬಹುದು.
ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿನ ಮೊದಲ ಹಂತದಲ್ಲಿ ರೈತರು ಸ್ವತಃ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಕೈಗೊಳ್ಳಲು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನಂತರ ಖಾಸಗಿ ನಿವಾಸಿಗಳಿಂದಲೂ ರೈತರ ಜಮೀನಿನ ಬೆಳೆ ಸಮೀಕ್ಷೆಗೆ ಅವಕಾಶ ನೀಡಲಾಗಿತ್ತು. ಈ ಬೆಳೆ ಸಮೀಕ್ಷೆಯಲ್ಲಿ ಅಪ್‌ಲೋಡ್ ಮಾಡಲಾದ ಮಾಹಿತಿ ತಿಳಿಯಲು ಬೆಳೆ ದರ್ಶಕ್ 2020-21 ಆ್ಯಪ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ.
ಬೆಳೆ ದರ್ಶಕ್ ಆ್ಯಪ್ (Aap) ಮೊದಲ ಪರದೆಯಲ್ಲಿ ಬೆಳೆ ಸಮೀಕ್ಷೆ ವರ್ಷ, ಋತುಮಾನ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ನಂಬರ್ ಹಾಕಿ ವಿವರ ಪಡೆಯಬಹುದು. ಇದಾದ ನಂತರ ಸರ್ವೆ ನಂಬರ್ /ಹಿಸ್ಸಾ ವಿವರ ಸಿಗಲಿದೆ. ಇಲ್ಲಿ ಒಂದೇ ಸರ್ವೆ ನಂಬರ್ ನಲ್ಲಿ ಒಂದಕ್ಕಿಂತ ಹೆಚ್ಚು ಹಿಸ್ಸೆಗಳಿದ್ದರೆ ಅದನ್ನು ಆಯ್ಕ ಮಾಡಬೇಕು. ಕೊನೆಯದಾಗಿ ಮಾಲಿಕರ ವಿವರ ಪಡೆದು ಖಚಿತಪಡಿಸಿಕೊಳ್ಳಬಹುದು. ಇದಾದ ಬಳಿಗೆ ಗ್ರಾಮದ ಬೆಳೆ (crop) ಸಮೀಕ್ಷೆ ನಡೆಸುವವರ ವಿವರಕ್ಕೆ ಹಾಗೂ ದಾಖಲಿಸಿದ ಬೆಳೆ ವಿವರಕ್ಕೆ ಪ್ರತ್ಯೇಕ ಎರಡು (Button) ಗುಂಡಿಗಳಿವೆ. ಸಮೀಕ್ಷೆದಾರರ ವಿವರ ಕ್ಲಿಕ್ಕಿಸಿದರೆ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಪರದೆ ಮೇಲೆ ಮೂಡಲಿದೆ. ದಾಖಲಿಸಿದ ಬೆಳೆ ವಿವರ ಕ್ಲಿಕ್ಕಿಸಿದರೆ ಬೆಳೆ ಹೆಸರು, ವಿಸ್ತೀರ್ಣ, ವರ್ಗ ಹಾಗೂ ಚಿತ್ರ ಸಿಗಲಿದೆ. ಒಂದು ವೇಳೆ ಈಗಾಗಲೇ ಜಮೀನು ಸಮೀಕ್ಷೆ ಕಾರ‍್ಯ ಮುಗಿದಿದ್ದರೆ, ತಮ್ಮ ಜಮೀನಿನ ಚಿತ್ರ ಸರಿಯಾಗಿ ಅಪ್‌ಲೋಡ್ (Upload) ಮಾಡಲಾಗಿದೆಯೋ ?, ಯಾವ ಬೆಳೆ ಎಂಬುದನ್ನು ಸಮೀಕ್ಷೆಯಲ್ಲಿ ನಿಖರವಾಗಿ ನಮೂದಿಸಲಾಗಿದೆಯೋ ? ಅಥವಾ ಇಲ್ಲವೋ ಎಂಬುದನ್ನು ರೈತರು (farmer) ತಮ್ಮ ಮೊಬೈಲ್‌ನಲ್ಲೇ ಕುಂತಲ್ಲೇ ತಿಳಿಯಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು. ಬೆಳೆ ಸಮೀಕ್ಷೆಯ ಸಹಾಯವಾಣಿ 8448447715 ಗೆ ಕರೆ ಮಾಡಬಹುದು.
Share your comments