1. ಸುದ್ದಿಗಳು

ದೆಹಲಿ ದರ್ಬಾರಿನ ಮನದ ಮಾತಲ್ಲೂ ಮಿನುಗಿದ ಬಾಳೆ ಕಾಯಿ ಹುಡಿಯ ಕ್ರಾಂತಿಯ ಕಿಡಿ

Basavaraja KG
Basavaraja KG

ಬಾಳೆಗೆ ಬೆಲೆ ಕಡಿಮೆಯಾಯಿತು ‘ಬಿಸಾಕು’ ಎನ್ನುತ್ತಿದ್ದ ಬಾಳೆ ಬೆಳೆಗಾರರು ಈಗ ಬಿಸಾಕು ಎನ್ನುವುದನ್ನು ಬಿಟ್ಟು ‘ಬಾಕಾಹು’ ಎನ್ನುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಲ್ಲಗೆ ಶುರುವಾದ ಬಾಳೆ ಕಾಯಿ ಹುಡಿಯ (ಬಾಕಾಹು) ಕಿಡಿ ಈಗ ದೊಡ್ಡ ಕ್ರಾಂತಿಯಾಗಿ ಮಾರ್ಪಟ್ಟಿದೆ. ‘ಬಾಕಾಹು ಬಗ್ಗೆ ಮೊದಲು ಫೇಸ್‌ಬುಕ್‌ನಲ್ಲಿ ಲೇಖನ ಬರೆದಾಗ ಇದು ಒಂದು ಆಂದೋಲನದ ಎತ್ತರಕ್ಕೆ ಬೆಳೆಯುತ್ತದೆ ಎಂಬ ನಿರೀಕ್ಷೆ ಎಳ್ಳಷ್ಟೂ ಇರಲಿಲ್ಲ’ ಎನ್ನುತ್ತಾರೆ ಬಕಾಹು ಆಂದೋಲನದ ರೂವಾರಿ, ಅಡಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಶ್ರೀ ಪಡ್ರೆ ಅವರು.

ಕರ್ನಾಟಕ ಮತ್ತು ಕನ್ನಡಿಗರಿಗೆ ಬಾಳೆ ಕಾಯಿ ಹುಡಿ ಅಥವಾ ಪುಡಿ ಹೊಸದೇನಲ್ಲ. ತಾತ-ಮುತ್ತಾತರ ಕಾಲದಿಂದಲೂ ಬಾಳೆ ಕಾಯಿಯ ಪುಡಿಯನ್ನು ಪುಟ್ಟ ಮಕ್ಕಳಿಗೆ ಆಹಾರವಾಗಿ ಬಳಸಲಾಗುತ್ತಿದೆ. ಮುಖ್ಯವಾಗಿ ಕರಾವಳಿ ಜಿಲ್ಲೆಯ ಮನೆಗಳಲ್ಲಿ ಈಗಲೂ ಬಕಾಹುವನ್ನು ಶಿಷು ಆಹಾರವಾಗಿ ಬಳಸಲಾಗುತ್ತದೆ. ಆದರೆ, ಶಿಷು ಆಹಾರ, ಚಿಪ್ಸ್ ಮಾಡುವುದು ಬಿಟ್ಟರೆ ಬಾಳೆಕಾಯಿ ಒಣಗಿಸಿ ಹಿಟ್ಟು ಮಾಡಿ, ತರಹೇವಾರಿ ಖಾದ್ಯಗಳನ್ನು ತಯಾರಿಸುವ ಬಗ್ಗೆ ಇದುವರೆಗೂ ಒಂದೇ ಒಂದು ಪ್ರಯತ್ನ ಕೂಡ ನಡೆದಿರಲಿಲ್ಲ. ಅದೇ, ರಾಜ್ಯದ ಗಡಿಯಿಂದ ಆಚೆಗೆ ಮತ್ತೊಂದು ಮಗ್ಗುಲಲ್ಲಿರುವ ಕೇರಳದಲ್ಲಿ ಬಾಕಾಹುವಿನ ಬಹು ರೂಪಗಳ ಪರಿಚಯ-ಪರಾಕ್ರಮ ಸಾಂಗವಾಗಿ ಸಾಗಿತ್ತು. ಹಾಗಾದರೆ ಈ ಬಾಕಾಹು ಕೇರಳದಿಂದ ಕರ್ನಾಟಕಕ್ಕೆ ಬಂದದ್ದು ಹೇಗೆ?

ಫೋನ್ ಪೆ ಮಂತ್ರೋಪದೇಶ!

ಶ್ರೀ ಪಡ್ರೆ ಅವರ ಮಾತುಗಳಲ್ಲಿ ಹೇಳುವುದಾದರೆ ಬಾಕಾಹು ಕರ್ನಾಟಕದಲ್ಲಿ ಮನೆಮಾತಾಗಿದ್ದು ಫೋನ್ ಪೆ ಮಂತ್ರದಿAದ! ಇದಾವುದೋ ಹೊಸ ಮತ್ರ ಎಂದು ಗೂಗಲ್ ಸರ್ಚ್ ಮಾಡಬೇಡಿ. ಫೋನ್ ಪೆ ಮಂತ್ರ ಎಂದರೆ ಫೋನ್ ಮೂಲಕ ಮಾಹಿತಿ ಪಡೆಯುವುದು ಎಂದರ್ಥ. ಮೊದಲ ಬಾರಿ ಮನೆಯಲ್ಲೇ ಬಾಳೆ ಕಾಯಿ ಹುಡಿ ತಯಾರಿಸಿ ಯಶಸ್ವಿಯಾದವರು ಕೇರಳದ ಜೆಸ್ಸಿ ಜಾರ್ಜ್. ಇವರು ಕೇರಳದ ಆಲೆಪ್ಪಿಯ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಶೇಷಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ಪಡ್ರೆ ಅವರು ‘ಎನಿ ಟೈಮ್ ವೆಜಿಟೆಬಲ್ (ಎಟಿವಿ)’ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಜೆಸ್ಸಿ ಜಾರ್ಜ್ ಅವರ ಬಾಕಾಹು ಪ್ರಯೋಗದ ಚಿತ್ರಗಳನ್ನು ಸಣ್ಣ ಮಾಹಿತಿಯೊಂದಿಗೆ ಪೋಸ್ಟ್ ಮಾಡಿದರು. ಹಾಗೆ ಪೋಸ್ಟ್ ಮಾಡಿ ಮೊಬೈಲ್ ಫೋನನ್ನು ಪಕ್ಕದಲ್ಲಿಡಬೇಕು ಅನ್ನುವಾಗಲೇ ಅತ್ತ, ತುಮಕೂರಿನ ಕೃಷಿ ಕುಟುಂಬದ ಗೃಹಿಣಿ ನಯನಾ ಆನಂದ್ ಅವರ ಫೋನ್ ಕರೆ ಬಂತು.

ನಿಜದಲ್ಲಿ ನೋಡುವುದಾದರೆ ಶ್ರೀ ಪಡ್ರೆ ಅವರು ಎಟಿವಿ ಗ್ರೂಪಿನಲ್ಲಿ ಬಾಕಾಹು ಚಿತ್ರಗಳನ್ನು ಹಾಕುವ ಮೂಲಕ ರಾಜ್ಯದಲ್ಲಿ ಬಾಕಾಹು ಆಂದೋಲನಕ್ಕೆ ಗುದ್ದಲಿ ಪೂಜೆ ನೆರವೇರಿಸಿದರೆ, ಬಕಾಹು ಬಳಸಿ ಮೊದಲ ಬಾರಿಗೆ ಅಡುಗೆ ಮನೆಯಲ್ಲಿ ಹಲವು ಪ್ರಯೋಗಗಳನ್ನು ಮಾಡುವ ಮೂಲಕ ಆಂದೋಲನಕ್ಕೆ ಭದ್ರ ಅಡಿಪಾಯ ಹಾಕಿದವರು ತುಮಕೂರಿನ ಕ್ರಿಯಾಶೀಲ ಗೃಹಿಣಿ ನಯನಾ ಆನಂದ್. ಬಾಕಾಹು ಪೋಸ್ಟ್ ನೋಡುತ್ತಲೇ ಕರೆ ಮಾಡಿದ ನಯನಾ ಅವರಿಗೆ, ಶ್ರೀ ಪಡ್ರೆ ಅವರು ಜೆಸ್ಸಿ ಜಾರ್ಜ್ ಅವರ ನಂಬರ್ ಕೊಟ್ಟು ಫೋನ್ ಪೆ ಮಂತ್ರೋಪದೇಶ ಪಡೆಯಲು ಹೇಳಿದರು. ಜೆಸ್ಸಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ, ಜೆಸ್ಸಿ ಅವರಿಂದ ನಯನಾ ಅವರಿಗೆ ಮೂರು ನಿಮಿಷದ ಒಂದು ಧ್ವನಿ ಸಂದೇಶ ಬಂತು. ಈ ಒಂದು ಧ್ವನಿ ಸಂದೇಶದಿAದ ಸೃಷ್ಟಿಯಾದದ್ದೇ ಬಾಕಾಹು ಸಂಚಲನ!

ಬಾಕಾಹು ತಯಾರಿ ಸುಲಭ

ಏಲಕ್ಕಿ ಬಾಳೆ, ಪಚ್ಚೆ ಬಾಳೆ ಹೀಗೆ ಯಾವುದೇ ತಳಿಯ ಬಾಳೆ ಕಾಯಿಗಳ ಸಿಪ್ಪೆ ಸುಲಿದು, ಚಿಪ್ಸ್ ರೀತಿ ಸಣ್ಣಗೆ ಕತ್ತರಿಸಿ ಬಿಸಿಲು ಅಥವಾ ಡ್ರಯರ್‌ನಲ್ಲಿ ಒಣಗಿಸಿ, ಮಿಕ್ಸರ್‌ನಲ್ಲಿ ಪುಡಿ ಮಾಡಿದರೆ ಬಾಕಾಹು ರೆಡಿ. ಇಷ್ಟು ಸುಲಭ ವಿಧಾನ ತಿಳಿದ ನಯನಾ ಅವರು, ಕ್ಷಣ ಕೂಡ ವ್ಯರ್ಥ ಮಾಡದೆ ಮನೆಯಲ್ಲಿದ್ದ ಬಾಳೆ ಕಾಯಿಗಳನ್ನು ಕತ್ತರಿಸಿ, ಒಣಗಿಸಿ ಎರಡೇ ದಿನದಲ್ಲಿ ಬಾಕಾಹು ರೆಡಿ ಮಾಡಿಯೇ ಬಿಟ್ಟರು. ಬಳಿಕ ಆ ಪುಡಿ ಬಳಸಿ ದಿನಕ್ಕೊಂದು ಆಹಾರ ತಯಾರಿಸಿ ಎಟಿವಿ ಗ್ರೂಪಿನಲ್ಲಿ ಪೋಸ್ಟ್ ಮಾಡತೊಡಗಿದರು. ಅಲ್ಲಿಂದ ಮುಂದೆ ಶ್ರೀ ಪಡ್ರೆ ಅವರು ನಯನಾ ಅವರ ಬಾಕಾಹು ತಯಾರಿ ವೃತ್ತಾಂತ ಹಾಗೂ ಅಡುಗೆಗಳ ರೆಸಿಪಿಗಳನ್ನು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಪ್ರಕಟಿಸಿದರು. ಇಷ್ಟೆಲ್ಲವೂ ನಡೆದದ್ದು ಜೂನ್ ತಿಂಗಳ ಮೊದಲ ವಾರದಲ್ಲಿ.

ಮನದ ಮಾತಲ್ಲಿ ಬಾಕಾಹು ಬಹುಪರಾಕು!

ಬಾಳೆ ಕಾಯಿ ಹುಡಿಗೆ ಸಂಬಂಧಿಸಿದ ಮೊದಲ ಪೊಸ್ಟ್ ಫೇಸ್‌ಬುಕ್ ವೇದಿಕೆಯಲ್ಲಿ ಕಾಣಿಸಿಕೊಂಡ ಬಳಿಕ ‘ಬಾಕಾಹು ಆಂದೋಲನ’ ಪಡೆದ ತಿರುವು, ಸಾಗಿದ ವೇಗವನ್ನು ಮಾತ್ರ ಯಾರೂ ಸಹ ನಿರೀಕ್ಷಿಸಿರಲಿಲ್ಲ. ಕೇವಲ 15 ದಿನಗಳಲ್ಲಿ ಅರ್ಧ ಕರ್ನಾಟಕದಲ್ಲಿ ಈ ಆರೋಗ್ಯದಾಯಕ ಪುಡಿ ಮನೆ ಮಾತಾಯಿತು. ಅತ್ತ ಒಂದು ವಾರ ಕಳೆಯುತ್ತಿದ್ದಂತೆ ಇದರ ಪುಕಾರು ದಿಲ್ಲಿಯ ಸಂಸತ್ ಭವನದಲ್ಲೂ ಪ್ರತಿಧ್ವನಿಸಿತು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಬಾಕಾಹು ಆಂದೋಲನವನ್ನು ಬಾಯ್ತುಂಬಾ ಹೊಗಳಿದರು. ಈ ಮುಲಕ ಸದ್ದಿಲ್ಲದೆ ಸಾಂಗವಾಗಿ ಸಾಗುತ್ತಿದ್ದ ಈ ಆಂದೋಲನ ದೇಶದ ಉದ್ದಗಲಕ್ಕೂ ಪರಿಚಿತವಾಯಿತು.

ಬಾಳೆ ಬೆಳಗುವ ಸಮಯ

ಪ್ರತಿ ಬಾರಿ ಬಾಳೆ ಬೆಳೆ ಬಂದಾಗಲೂ ಬೆಲೆ ಕುಸಿತದ ಕರಿ ನೆರಳು ಮಾರುಕಟ್ಟೆಯನ್ನು ಆವರಿಸುತ್ತದೆ. ಬಾಳೆ ಗಿಡಗಳನ್ನು ಮಕ್ಕಳಂತೆ ನೋಡಿಕೊಂಡ ರೈತರು ಬಂದಷ್ಟು ಬರಲಿ ಎಂದು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಮಾರುಕಟ್ಟೆ ವ್ಯವಸ್ಥೆ, ದಲ್ಲಾಳಿಗಳ ಮೇಲಿನ ಕಿಚ್ಚಿಗೆ ಬಾಳೆ ಗೊನೆಗಳನ್ನು ರಸ್ತೆ ಬದಿ ಸುರಿದು ಮನೆಗೆ ಹೋಗುತ್ತಾರೆ. ಈಗ ಕ್ರಾಂತಿಯ ಕಿಡಿ ಹಚ್ಚುತ್ತಿರುವ ಬಾಕಾಹು, ಬಾಳೆ ಮತ್ತು ಬಾಳೆ ಬೆಳೆಗಾರರ ಪಾಲಿಗೆ ಬೆಳಕಾಗಬಹುದು ಎಂಬ ನಿರೀಕ್ಷೆಯಿದೆ. ‘ಬಾಳೆಗೆ ಬೆಲೆ ಸಿಗಲಿಲ್ಲ ಎಂದು ಬಿಸಾಕುವ ಬದಲು ಬಾಳೆ ಕಾಯಿಗಳನ್ನು ಕಿತ್ತು, ಕತ್ತರಿಸಿ, ಒಣಗಿಸಿ ಪುಡಿ ಮಾಡುವುದು ಮತ್ತು ಮಾಡಿದ ಪುಡಿಯನ್ನು ಮಾರಾಟ ಮಾಡುವುದು ಬುದ್ಧಿವಂತ ನಡೆಯಾಗಬಲ್ಲದು’ ಎನ್ನುತ್ತಾರೆ ಶ್ರೀ ಪಡ್ರೆ ಅವರು.

‘ರೈತರು ಮನಸ್ಸು ಮಾಡಿದರೆ ಬಾಕಾಹುವನನ್ನು ಮನೆಯಲ್ಲೇ ತಯಾರಿಸಬಹುದು. ಇದಕ್ಕೆ ದಿನ ಪೂರ್ತಿ ಸಮಯ ಬೇಡ. ಕೂಲಿ ಕೇಳುವ ಆಳುಗಳೂ ಬೇಡ. ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ದಿನದಲ್ಲಿ ಎರಡು ಅಥವಾ ಮೂರು ಗಂಟೆ ಸಮಯವನ್ನು ಬಾಕಾಹುಗಾಗಿ ಮೀಸಲಿಟ್ಟರೆ ಸಾಕು. ತಯಾರಿಸಿದ ಪುಡಿ ಮಾರಾಟಕ್ಕೆ ತಮ್ಮೂರಿನಲ್ಲೇ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು. ತಮ್ಮ ಬೀದಿಯ, ಅಕ್ಕ-ಪಕ್ಕದ ಮನೆಯವರಿಗೆ ಬಾಳೆ ಹಿಟ್ಟಿನ ರುಚಿ ತೋರಿಸಿ, ಅಲ್ಲೇ ಮಾರಾಟ ಮಾಡಬಹುದು’ ಎಂಬುದು ಶ್ರೀ ಪಡ್ರೆ ಅವರ ಅಭಿಪ್ರಾಯ.

;

ಬಾಕಾಹು ಉಪಯೋಗಗಳೇನು?

ನಾವೆಲ್ಲರೂ ಪ್ರತಿ ನಿತ್ಯ ಬಳಸುವ ಗೋಧಿ, ಮೈದಾ ಹಿಟ್ಟುಗಳ ಸ್ಥಾನವನ್ನು ಬಾಕಾಹು ತುಂಬಲ್ಲದು. ಗೋಧಿ, ಮೈದಾ ಹಿಟ್ಟುಗಳಿಗೆ ಹೋಲಿಸಿದರೆ ಬಾಕಾಹು ಬೆಲೆ ಹೆಚ್ಚಾದ್ದರಿಂದ (ಕೆ.ಜಿಗೆ 200 ರೂ.) ಆ ಹಿಟ್ಟುಗಳ ಜೊತೆ ಇದನ್ನು ಬೆರೆಸಿ ಖಾದ್ಯಗಳನ್ನು ತಯಾರಿಸಬಹುದು. ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳ ಗೃಹಿಣಿಯರು ಬಾಕಾಹುವಿನಲ್ಲಿ ರೊಟ್ಟಿ, ದೋಸೆ, ಕಡುಬು, ಪೂರಿ, ಉಪ್ಪಿಟ್ಟು, ನಿಪ್ಪಟ್ಟು, ಚಕ್ಕುಲಿ, ಉಂಡೆ, ಡ್ರೆöÊ ಜಾಮೂನು, ಬಿಸ್ಕೇಟ್, ಕುಕ್ಕೀಸ್, ದೂದ್ ಪೇಡ, ಮಾಲ್ಟ್, ಗುಳಿಯಪ್ಪ, ಈರುಳ್ಳಿ ಬಜ್ಜಿ, ಗೋಳಿ ಬಜ್ಜಿ ಹೀಗೆ ನುರಾರು ಖಾದ್ಯಗಳನ್ನು ತಯಾರಿಸಿದ್ದಾರೆ. ಬಾಕಾಹುವಿನಿಂದ ಏನೆಲ್ಲಾ ಮಾಡಬಹುದು, ಮಾಡುವ ವಿಧಾನ ಹೇಗೆ (ರೆಸಿಪಿ), ಬಾಳೆ ಹಿಟ್ಟಿಗೆ ಮಾರುಕಟ್ಟೆ ಹೇಗಿದೆ ಎಂಬೆಲ್ಲಾ ಮಾಹಿತಿ ಮತ್ತೊಂದು ಲೇಖನದ ಮೂಲಕ ನಿಮ್ಮ ಮುಂದೆ ಬರಲಿದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.