ಪ್ರಸಕ್ತ 2021-22ನೇ ಸಾಲಿಗೆ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ (ಪಿ.ಎಂ.ಇ.ಜಿ.ಪಿ.) ಉದ್ಯೋಗ ಕೈಗೊಳ್ಳಲು ಹಾಗೂ ಕೈಗಾರಿಕಾ, ಸೇವಾ ಘಟಕಗಳ ಸ್ಥಾಪನೆಗೆ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳು, ಸ್ವಸಹಾಯ ಗುಂಪುಗಳು ಹಾಗೂ ಸಂಘ-ಸಂಸ್ಥೆಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿದಾರರ ವಯೋಮಿತಿ 18 ವರ್ಷ ತುಂಬಿರಬೇಕು. ಈ ಯೋಜನೆಯಡಿ ಕೈಗಾರಿಕಾ/ಉತ್ಪಾದನಾ ಕ್ಷೇತ್ರಕ್ಕೆ 25 ಲಕ್ಷ ರೂ.ಗಳ ಹಾಗೂ ಸೇವಾ ಕ್ಷೇತ್ರಕ್ಕೆ 10 ಲಕ್ಷ ರೂ.ಗಳ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಇದಲ್ಲದೇ ಯೋಜನಾ ವೆಚ್ಚ ಉತ್ಪಾದಕ ಘಟಕಗಳಿಗೆ 10 ಲಕ್ಷ ರೂ. ಮತ್ತು ಸೇವಾ ಘಟಕಗಳಿಗೆ 5 ಲಕ್ಷ ರೂ. ಮೇಲ್ಪಟ್ಟ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಈ ಮೊದಲು ಕೇಂದ್ರ, ರಾಜ್ಯ ಸರ್ಕಾರದ ಸಹಾಯಧನ ಯೋಜನೆಗಳಡಿ ಪ್ರಯೋಜನ ಪಡೆದಿದ್ದಲ್ಲಿ, ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಕೇವಲ ಹೊಸ ಘಟಕಗಳ ಸ್ಥಾಪನೆಗೆ ಮಾತ್ರ ಅನ್ವಯವಾಗುತ್ತದೆ.
ಸಾಮಾನ್ಯ ವರ್ಗಕ್ಕೆ ಸಹಾಯಧನ ಶೇ.25 ಹಾಗೂ ವಿಶೇಷ ವರ್ಗದ ಪ.ಜಾತಿ ಹಾಗೂ ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು, ಮಹಿಳಾ ಫಲಾನುಭವಿಗಳಿಗೆ ಶೇ.35 ರಷ್ಟು ಸಹಾಯಧನ ನೀಡಲಾಗುವುದು.
ಅರ್ಹ ಫಲಾನುಭವಿಗಳು ವಿದ್ಯಾರ್ಹತೆ ಪ್ರಮಾಣ ಪತ್ರಗಳು (ತಾಂತ್ರಿಕ ಮತ್ತು ಶೈಕ್ಷಣಿಕ), ಆಧಾರ ಕಾರ್ಡ್, ಜಾತಿ ಪ್ರಮಾಣಪತ್ರ, ಪಡಿತರ ಚೀಟಿ, ವಾಸಸ್ಥಳ ಬಗ್ಗೆ ದಾಖಲಾತಿಗಳು, ಯೋಜನಾ ವರದಿ, ಭಾವಚಿತ್ರ, ಐ.ಡಿ. ಕಾರ್ಡ್, ಖಾತಾ ನಕಲು, ಜನಸಂಖ್ಯೆ ಪ್ರಮಾಣಪತ್ರ (ಗ್ರಾಮೀಣ ಭಾಗಕ್ಕೆ ಮಾತ್ರ), ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಕಂಪ್ಯೂಟರ್/ತಾಂತ್ರಿಕ ತರಬೇತಿ ಪಡೆದಿದ್ದಲ್ಲಿ ಪ್ರಮಾಣಪತ್ರ. ದಾಖಲಾತಿಗಳನ್ನು ಪಿ.ಎಂ.ಇ.ಜಿ.ಪಿ. ತಂತ್ರಾAಶದಲ್ಲಿ ಅಳವಡಿಸಬೇಕು.
ಹೆಚ್ಚಿನ ಮಾಹಿತಿಯನ್ನು www.pmegp.in ನ್ಯೂ ಪೋರ್ಟಲ್ ವೆಬ್‌ಸೈಟ್‌ನ್ನು ಅಥವಾ www. www.kvic.org.in ದಿಂದ ಅಥವಾ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಜೇವರ್ಗಿ ಕ್ರಾಸ್ ಹತ್ತಿರ, ಎಂ.ಎಸ್.ಕೆ. ಮಿಲ್ ರಸ್ತೆ, ಕಲಬುರಗಿ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಹಾಯಧನ ನೀಡಲು ಅರ್ಜಿ ಆಹ್ವಾನ
ಪ್ರಸಕ್ತ 2021-22ನೇ ಸಾಲಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ದುಡಿಮೆ ಬಂಡವಾಳ ಸಾಲ ಒದಗಿಸುವ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಸಾಲ ಪಡೆಯಲು ಉದ್ದೇಶಿಸಿರುವ ಕೈಮಗ್ಗ ನೇಕಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಪ್ರಸಕ್ತ ಸಾಲಿಗೆ ಈ ಯೋಜನೆಯಡಿ ಜಿಲ್ಲೆಯ 10 ಕೈಮಗ್ಗ ನೇಕಾರರಿಗೆ ಬ್ಯಾಂಕ್‌ಗಳಿಂದ ಸಾಲ ಒದಗಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ಶೇ. 6ರ ಬಡ್ಡಿ ದರದಲ್ಲಿ ಕೈಮಗ್ಗ ನೇಕಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲವನ್ನು ಒದಗಿಸಲಾಗುತ್ತದೆ.
ಬ್ಯಾಂಕ್‌ನವರು ವಿಧಿಸುವ ಸಾಲದ ಮೇಲಿನ ಗರಿಷ್ಠ ಬಡ್ಡಿ ದರ ಶೇ. 7 ರಂತೆ ಸಾಲ ಮಂಜೂರಾದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ಬಡ್ಡಿ ಸಹಾಯಧನವಾಗಿ ನೀಡಲಿದೆ. ಸಾಲದ ಮೊಬಲಗಿನ ಶೇ. 20 ಗರಿಷ್ಠ 10,000 ರೂಪಾಯಿಗಳನ್ನು ಮಾರ್ಜಿನ್ ಮನಿಯಾಗಿ ಸಾಲದ ಖಾತೆಗೆ ಜಮಾ ಮಾಡಲಾಗುವುದು. ನೇಕಾರರ ಕೈಮಗ್ಗ ನೇಕಾರಿಕೆ ವ್ಯವಹಾರವನ್ನು ಆಧರಿಸಿ ಈ ಯೋಜನೆಯಡಿ ಗರಿಷ್ಠ 5,00,000 ರೂ.ಗಳ ಸಾಲವನ್ನು ಒದಗಿಸಲಾಗುತ್ತದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯಲು ಉದ್ದೇಶಿಸಿರುವ ಕೈಮಗ್ಗ ನೇಕಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಕಲಬುರಗಿ, ಗುರು ಬಸವ ಕಟ್ಟಡ, ಮನೆ ನಂ.2-910, ಓಕಳಿ ಕ್ಯಾಂಪ್, ಸೌಭಾಗ್ಯ ಕಲ್ಯಾಣ ಮಂಟಪ ಹತ್ತಿರ, ಸೇಡಂ ರಸ್ತೆ, ಕಲಬುರಗಿ-585102 ಕಚೇರಿಗೆ 2021ರ ಆಗಸ್ಟ್ 31 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08472-278629 ಗೆ ಸಂಪರ್ಕಿಸಲು ಕೋರಲಾಗಿದೆ.
Share your comments