1. ಸುದ್ದಿಗಳು

ಆರ್ಥಿಕತೆಗೆ ಚೈತನ್ಯ ಸ್ವಾವಲಂಬನೆಗೆ 20 ಲಕ್ಷ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ

narendra modi

ಕೊರೋನಾ ವೈರಸ್ ಸೋಂಕಿನಿಂದಾಗಿ ಆರ್ಥಿಕ ಕುಸಿತ ಕಂಡಿರುವ ಇಡೀ ದೇಶಕ್ಕೆ ಆತ್ಮಬಲ ವೃದ್ಧಿಸುವ ಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿ ಆಡಿದ್ದಾರೆ. ಆತ್ಮ ವಿಶ್ವಾಸದಿಂದ ಸಮಸ್ಯೆಗಳನ್ನು ಎದುರಿಸಿ ಎಂದು ಕರೆ ನೀಡಿರುವ ಪ್ರಧಾನಿ, ಲೋಕ ಕಲ್ಯಾಣಕ್ಕಾಗಿ ದುಡಿಯುವಂತೆ ಹೇಳಿದ್ದಾರೆ.

ಕೋವಿಡ್ ಸಂಬಂಧಿತ ಮೂರನೇ ಹಂತದ ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿರುವ ಸಂದರ್ಭದಲ್ಲಿ ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ‘ಆತ್ಮ ನಿರ್ಭರ ಭಾರತ’ ಎಂಬ ಹೊಸ ಪರಿಕಲ್ಪನೆಯನ್ನು ದೇಶವಾಸಿಗಳ ಮುಂದೆ ತೆರೆದಿಟ್ಟರು.

ಇದಕ್ಕೆ ಬಲ ತುಂಬುವ ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ಪ್ಯಾಕೇಜ್ ಒಂದರ ಘೋಷಣೆಯನ್ನೂ ಸಹ ಮಾಡಿದರು.
ಭಾರತದ ಪ್ರಜೆಗಳ ಸಂಸ್ಕಾರವನ್ನು ಸ್ಮರಿಸಿದ ಪ್ರಧಾನಿ, ನಮ್ಮದು ವಸುಧೈವ ಕುಟುಂಬಕಂ ಸೂತ್ರದ ಸಮಾಜ ಎಂದು ನೆನಪಿಸಿದರು ಇಡೀ ವಿಶ್ವವನ್ನೇ ಒಂದು ಪರಿವಾರ ಎಂದು ಭಾವಿಸಿಕೊಂಡು ಪ್ರಪಂಚದ ಶಾಂತಿ, ಸುಖಕ್ಕಾಗಿ ಮುನ್ನುಗ್ಗಲು ಕರೆ ನೀಡಿದ್ದಾರೆ. ವ್ಯಕ್ತಿ ಕೇಂದ್ರಿತವಾಗಿ ಭಾರತೀಯರು ಬದುಕೋದಿಲ್ಲ ಎಂದು ಹೇಳಿರುವ ಪ್ರಧಾನಿ ಮೋದಿ, ಈ ಸಂಕಷ್ಟವನ್ನೇ ಸವಾಲನ್ನಾಗಿ ಸ್ವೀಕರಿಸಿ, ಅನಾಹುತವನ್ನೇ ಅವಕಾಶವನ್ನಾಗಿ ಬದಲಿಸಿಕೊಳ್ಳಲು ಕರೆ ನೀಡಿದ್ದಾರೆ.

ಹಿಂದೆಂದೂ ಇಲ್ಲದಂತಹ ಬಿಕ್ಕಟ್ಟನ್ನು ಈಗ ಭಾರತವು ಎದುರಿಸುತ್ತಿದೆ. ಕೊರೋನಾ ವೈರಾಣು ವಿರುದ್ಧದ ಹೋರಾಟದಲ್ಲಿ ಭಾರತವು ದಣಿಯುವುದಿಲ್ಲ ಅಥವಾ ಕೈಚೆಲ್ಲುವುದಿಲ್ಲ. ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಮಾತ್ರವಲ್ಲ ಮುಂದಕ್ಕೂ ಸಾಗಬೇಕು ಹೇಳಿದರು.

ನಮ್ಮಲ್ಲಿ ಸಂಪನ್ಮೂಲ, ಸಾಮರ್ಥ್ಯ, ಜಗತ್ತಿನ ಅತ್ಯುತ್ತಮ ಪ್ರತಿಭೆ ಎಲ್ಲವೂ ಇವೆ. ಅತ್ಯುತ್ತಮ ವಸ್ತುಗಳನ್ನು ನಾವು ತಯಾರಿಸಬೇಕು, ನಮ್ಮ ಪೂರೈಕೆ ವ್ಯವಸ್ಥೆಯನ್ನು ಆಧುನಿಕಗೊಳಿಸಿ ಸರಪಣಿಯನ್ನು ಉತ್ತಮಪಡಿಸಬೇಕು. ನಮಗಿದು ಸಾಧ್ಯ, ನಾವಿದನ್ನು ಮಾಡಿಯೇ ತೀರುತ್ತೇವೆ’ ಎಂಬ ಆಶಾಭಾವವನ್ನು ಮೋದಿಯವರು ವ್ಯಕ್ತಪಡಿಸಿದರು.

ಆರ್ಥಿಕ ಪ್ಯಾಕೇಜ್‌ನ ವಿವರಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು  ಪ್ರಕಟಿಸಲಿದ್ದಾರೆ. ನಾನಿಂದು ಹೊಸ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದ್ದೇನೆ. 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಇದಾಗಿದ್ದು ಇದು ನಮ್ಮ ಜಿಡಿಪಿಯ 10 ಪ್ರತಿಶತವಾಗಿದೆ. ಆತ್ಮ ನಿರ್ಭರ ಭಾರತ ಸಂಕಲ್ಪವನ್ನು ಸಾಕಾರಗೊಳಿಸಲು ಈ ಆರ್ಥಿಕ ಪ್ಯಾಕೇಜ್ ಸಹಕಾರಿಯಾಗಲಿದೆ. ನಮ್ಮ ಗ್ರಾಮೋದ್ಯೋಗ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳನ್ನೂ ಸೇರಿದಂತೆ ಎಲ್ಲಾ ಉದ್ಯಮ ವಲಯಗಳಿಗೆ, ಶ್ರಮಜೀವಿಗಳಿಗೆ ಮತ್ತು ರೈತ ವರ್ಗಕ್ಕೆ ಬಲ ತುಂಬಲಿದೆ ಎಂದರು.

ಎಲ್ಲಾ ಸರಕಾರಿ ಯಂತ್ರಗಳೂ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಜನಧನ್, ಆಧಾರ್ ಆಧಾರಿತ ವ್ಯವಸ್ಥೆ ನಮ್ಮ ದೇಶದ ಕಟ್ಟಕಡೆಯ ವ್ಯಕ್ತಿಯ ಬಳಿಗೆ ಸರಕಾರದ ಸೌಲಭ್ಯವನ್ನು ತಲುಪಿಸಿದ ಉದಾಹರಣೆ ನಮ್ಮ ಮುಂದಿದೆ. ಈ ಪ್ಯಾಕೇಜ್ ನಮ್ಮ ಮೇಕ್ ಇನ್ ಇಂಡಿಯಾದ ಕನಸನ್ನು ಸಾಕಾರಗೊಳಿಸಲಿದೆ.

ನಾವೆಲ್ಲರೂ ಇಂದು ದೇಶೀ ಉತ್ಪನ್ನಗಳಿಗೆ ಬಲ ತುಂಬಬೇಕಾಗಿದೆ. ನಾವು ದೇಶೀ ವಸ್ತುಗಳನ್ನು ಖರೀದಿಸುವುದು ಮಾತ್ರವಲ್ಲದೇ ಅದರ ಪ್ರಚಾರವನ್ನು ಮಾಡಬೇಕಾಗಿರುವುದೂ ನಮ್ಮ ಕರ್ತವ್ಯವಾಗಿದೆ. ಈ ಕೋವಿಡ್ ಬಹು ದಿನಗಳವರೆಗೆ ನಮ್ಮೊಂದಿಗೆ ಇರಲಿದೆ. ಹಾಗಾಗಿ ನಾವೆಲ್ಲರೂ ಸುರಕ್ಷಿತ ರೀತಿಯಲ್ಲಿ ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ ಎಂದರು.
ಪ್ಯಾಕೇಜ್‌ ಯಾರಿಗೆ

ಕಾರ್ಮಿಕರು, ರೈತರು, ಪ್ರಾಮಾಣಿಕ ತೆರಿಗೆ ಪಾವತಿದಾರರು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಎಲ್ಲರಿಗೂ ಈ ಪ್ಯಾಕೇಜ್‌ನಲ್ಲಿ ಪಾಲು ಇದೆ ಎಂದು ಪ್ರಧಾನಿ ಹೇಳಿದ್ದಾರೆ.

ಲಾಕ್‌ಡೌನ್‌ 4.0

ದೇಶವ್ಯಾಪಿ ಹೇರಲಾಗಿರುವ ಲಾಕ್‌ಡೌನ್‌ನ ಮೂರನೇ ವಿಸ್ತರಣೆಯು ಇದೇ 17ಕ್ಕೆ ಕೊನೆಯಾಗಲಿದೆ. ಆದರೆ, ನಾಲ್ಕನೇ ಹಂತದ ದಿಗ್ಬಂಧನ ಆರಂಭವಾಗಲಿದೆ. ಈ ಹಂತದ ನಿರ್ಬಂಧಗಳು ಹಿಂದಿನ ಅವಧಿಗಳಿಗಿಂತ ಭಿನ್ನವಾಗಿರ ಲಿವೆ. ಈ ಬಗೆಗಿನ ಮಾಹಿತಿಯನ್ನು ಇದೇ 18ರೊಳಗೆ ಜನರಿಗೆ ನೀಡಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ. ರಾಜ್ಯಗಳು ನೀಡಿದ ಸಲಹೆಗಳ ಆಧಾರದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್‌ನ ನಿಯಮಗಳು ರೂಪುಗೊಳ್ಳಲಿವೆ

ಕೊರೊನಾ ಜತೆಗೆ ಬದುಕು

ಕೊರೊನಾ ವೈರಾಣು ಬಹು ದೀರ್ಘ ಕಾಲದವರೆಗೆ ನಮ್ಮ ಜತೆಗೇ ಇರಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ, ನಮ್ಮ ಜೀವನವು ಕೊರೊನಾ ಸುತ್ತಲೇ ಗಿರಕಿ ಹೊಡೆಯಲು ಬಿಡಬಾರದು. ಮುಖಗವಸು ಧರಿಸೋಣ, ಅಂತರ ಕಾಯ್ದುಕೊಳ್ಳೋಣ, ಈ ಸೋಂಕು ನಮ್ಮನ್ನು ಬಾಧಿಸದಂತೆ ನೋಡಿಕೊಳ್ಳೋಣ ಎಂದು ಮೋದಿ ಕರೆ ಕೊಟ್ಟಿದ್ದಾರೆ.
 ಈ ಬಾರಿಯ ಲಾಕ್ ಡೌನ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಈ ಕುರಿತಾದ ಮಾಹಿತಿ ಮೇ 17ರ ಒಳಗೆ ನಿಮಗೆ ನೀಡಲಾಗುವುದು.

ಕಛ್ ಭೂಕಂಪದ ದಿನಗಳನ್ನು ನನ್ನ ಕಣ್ಣಾರೆ ಕಂಡಿದ್ದೇನೆ. ಎಲ್ಲವೂ ಧ್ವಂಸಗೊಂಡಿತ್ತು. ಅಲ್ಲಿ ಮೃತ್ಯು ಚಾದರ ಹಾಸಿದಂತಿತ್ತು ಪರಿಸ್ಥಿತಿ. ಇನ್ನೆಂದೂ ಕಛ್ ಎದ್ದು ನಿಲ್ಲದು ಅಂದುಕೊಂಡಿದ್ದಾಗಲೇ ಕಛ್ ದೇಶದ ಮುಂದೆ ಹೊಸ ರೂಪದಲ್ಲಿ ಎದ್ದು ನಿಂತಿತು. ಇದು ಭಾರತದ ಸಂಕಲ್ಪ ಶಕ್ತಿಯ ದ್ಯೋತಕವಾಗಿದೆ.

ಭಾರತದ ಅತ್ಮ ನಿರ್ಭರತೆ ಐದು ಆಧಾರ ಸ್ತಂಭಗಳ ಮೇಲೆ ನಿಂತಿದೆ:

ಆರ್ಥಿಕತೆ, ಮೂಲಭೂತ ಸೌಲಭ್ಯ, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ, ನಮ್ಮ ಭೌಗೋಳಿಕ ವೈವಿಧ್ಯತೆ ಹಾಗೂ ಬೇಡಿಕೆ ಎಂಬುದೇ ಈ ಐದು ಆಧಾರ ಸ್ತಂಭಗಳಾಗಿವೆ ಎಂದರು

Published On: 13 May 2020, 07:53 PM English Summary: PM Modi announces ₹20 trillion stimulus package to restart economy

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.