1. ಸುದ್ದಿಗಳು

ಸಿರಿಧಾನ್ಯಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳು ಕುರಿತು ಆಗಸ್ಟ್ 13ರಂದು ಆನ್ಲೈನ್ ತರಬೇತಿ

ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲೆ ಸುತ್ತೂರಿನಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ (ಐಸಿಎಆರ್) ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ, ಕೊಡಗು ಜಿಲ್ಲೆ ಗೋಣಿಕೊಪ್ಪದ ಐಸಿಎಆರ್ ಐಐಎಚ್‌ಆರ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಗಸ್ಟ್ 13ರಂದು ‘ಸಿರಿಧಾನ್ಯಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳು, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ’ ವಿಷಯವಾಗಿ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ತರಬೇತಿ ಕಾರ್ಯಾಗಾರದಲ್ಲಿ ಮೈಸೂರು ಜಿಲ್ಲೆ ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತç ವಿಜ್ಞಾನಿಗಳಾಗಿರುವ ಶಾಮರಾಜ್ ಅವರು ‘ಸಿರಿಧಾನ್ಯಗಳ ಸುಧಾರಿತ ಬೇಸಾಯ ಕ್ರಮಗಳು’ ಕುರಿತು ಮಾಹಿತಿ ನೀಡಲಿದ್ದಾರೆ. ಇದೇ ವೇಳೆ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಭಾಗದ ವಿಜ್ಞಾನಿ ನೇತ್ರಾವತಿ ಎತ್ತಿನಮನಿ ಅವರು ‘ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ’ ಕುರಿತು ರೈತ ಬಾಂಧವರಿಗೆ ತಿಳಿಸಿಕೊಡುವರು.

ತರಬೇತಿ ಕಾರ್ಯಾಗಾರವು ಗೂಗಲ್ ಮೀಟ್ ವೇದಿಕೆಯಲ್ಲಿ ನಡೆಯಲಿದ್ದು, ಆಸಕ್ತ ರೈತ ಬಾಂಧವರು  https://meet.google.com/oeb-vtzw-krk ಈ ಲಿಂಕ್ ಬಳಸಿಕೊಂಡು ಭಾಗವಹಿಸಬಹುದು. ಸಿರಿಧಾನ್ಯಗಳನ್ನು ಬೆಳೆಯುವ ಆಸಕ್ತಿ ಹೊಂದಿರುವ ಯುವ ಕೃಷಿಕರು, ಈಗಾಗಲೇ ಸಿರಿಧಾನ್ಯಗಳ ಬೇಸಾಯದಲ್ಲಿ ತೊಡಗಿಕೊಂಡಿರುವ ರೈತರು ಗುಣಮಟ್ಟದ ಬೆಳೆ ಬೆಳೆಯಲು ಮತ್ತು ಹೆಚ್ಚಿನ ಇಳುವರಿ ಪಡೆಯಲು ಹಾಗೂ ಕಟಾವಿನ ನಂತರ ಧಾನ್ಯಗಳನ್ನು ಸಂರಕ್ಷಿಸುವುದು ಹಾಗೂ ಅವುಗಳ ಮೌಲ್ಯಯವರ್ಧನೆ ಮಾಡುವುದು ಹೇಗೆ ಎಂಬ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಲಿದ್ದು, ಹೆಚ್ಚಿನ ಸಂಖ್ಯೆಯ ರೈತರು ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ತರಬೇತಿಯ ಸದುಪಯೋಗ ಪಡೆಯಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ವಿನಂತಿಸಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸುವವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.

ಸಿರಿಧಾನ್ಯಗಳ ಬೆಳೆ ಬಗ್ಗೆ ಇತ್ತೀಚೆಗೆ ಕರ್ನಾಟಕದ ರೈತರ ವಲಯದಲ್ಲಿ ಜಾಗೃತಿ ಹೆಚ್ಚುತ್ತಿದೆ. ಹಳೇ ಮೈಸೂರು ಭಾಗ, ಚಿತ್ರದುರ್ಗ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ರೈತರು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, ಹಿಂದೊಮ್ಮೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗವು ರಾಜ್ಯದಲ್ಲೇ ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ತಜ್ಞರು ಹೇಳುವ ಪ್ರಕಾರ ಸಿರಿಧಾನ್ಯಗಳನ್ನು ಬೆಳೆಯುವುದು ಕಷ್ಟದ ಕೆಲಸವಲ್ಲ. ಅದೂ ಕೂಡ ಇತರ ಬೇಸಾಯ ಕ್ರಮಗಳಂತೆಯೇ ಇರುತ್ತದೆ. ಆದರೆ, ಸಿರಿಧಾನ್ಯ ಬೇಸಾಯವನ್ನು ಒಂದು ತಪಸ್ಸಿನ ರೀತಿ ಮಾಡಿದಾಗ ಮಾತ್ರ ರೈತರು ಯಶಸ್ವಿಯಾಗಬಹುದು.

ಈ ಕೃಷಿ ಸಂಪೂರ್ಣ ರಾಸಾಯನಿಕ ಹಾಗೂ ರಸಗೊಬ್ಬರ ಮುಕ್ತವಾಗಿರಬೇಕು. ಸಿರಿಧಾನ್ಯಗಳ ಬೆಳೆಯಲ್ಲಿ ಯಾವುದೇ ಕಾರಣಕ್ಕೂ ಕಳೆ ನಾಶಕ, ಕೀಟನಾಶಕಗಳನ್ನು ಬಳಸಬಾರದು. ಒಂದೊಮ್ಮೆ ರೋಗ ಅಥವಾ ಕೀಟಗಳ ಬಾಧೆ ಕಾಣಿಸಿಕೊಂಡರೆ ಅವುಗಳ ನಿಯಂತ್ರಣಕ್ಕೆ ನೈಸರ್ಗಿಕ ವಿಧಾನ ಅಥವಾ ಸಾವಯವ ವಿಧಾನದ ಮೂಲಕ ಸಿದ್ಧಪಡಿಸಿರುವ ಜೈವಿಕ, ಸಸ್ಯಜನ್ಯ ಕೀಟನಾಶಕಗಳನ್ನು ಮಾತ್ರ ಉಪಯೋಗಿಸಬೇಕು. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದ ಸಿರಿಧಾನ್ಯಗಳನ್ನು ಸಂಗ್ರಹಿಸುವಾಗಲೂ ಯಾವುದೇ ರೀತಿಯ ಸಂರಕ್ಷಕಗಳನ್ನು ಬಳಸುವಂತಿಲ್ಲ. ಅಲ್ಲೂ ಕೂಡ ಹಿರಿಯರು ಬಳಸುತ್ತಿದ್ದ ಸಾಂಪ್ರದಾಯಿಕ ಸಂಗ್ರಹಣಾ ವಿಧಾನಗಳನ್ನು ಬಳಸಿಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ನಿಯಮಗಳಿವೆ.

ಹೀಗೆ ರಾಸಾಯನಿಗಳ ಸೋಂಕಿಲ್ಲದೆ ಅಚ್ಚುಕಟ್ಟಾಗಿ ಬೆಳೆಯುವ ಸಿರಿಧಾನ್ಯಗಳ ಮಾರುಕಟ್ಟೆ ಕೂಡ ದೊಡ್ಡದಾಗೇ ಇದೆ. ಇತ್ತೀಚೆಗೆ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದ್ದು, ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿರಿಧಾನ್ಯಗಳಾಗಿರುವ ರಾಗಿ, ಜೋಳ, ನವಣೆ, ಸಾಮೆ, ಹಾರಕ, ಕೊರಲೆ ಬರಗು, ಊದಲು, ಸಜ್ಜೆ ಮೊದಲಾದ ಧಾನ್ಯಗಳನ್ನು ಬಳಸುತ್ತಿದ್ದಾರೆ.

Published On: 12 August 2021, 09:18 PM English Summary: online training on advanced farming practices in millets crops

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.