1. ಸುದ್ದಿಗಳು

ಜಿಲ್ಲೆಯಲ್ಲಿ ಮೇವು, ಔಷಧಿ, ಕೃಷಿ ಪರಿಕರಗಳ ಅಗತ್ಯ ದಾಸ್ತಾನು ಇರಲಿ : ಸಚಿವ ಸಂತೋಷ ಲಾಡ್‌

Kalmesh T
Kalmesh T
Necessary stock of fodder, medicines, agricultural implements in the district: Santhosh Lad

ಮಳೆ ಕೊರತೆ ಮಾನ್ಸೂನ್ ವಿಳಂಬದಿಂದಾಗಿ ಜಿಲ್ಲೆಯ ಸುಮಾರು 99 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬಂದಿದ್ದು, ನೂತನ ಬೊರ್‍ವೆಲ್ ಕೊರೆಯಿಸುವ, ಬಾಡಿಗೆ ನೀರು ಪಡೆಯುವ, ಟ್ಯಾಂಕರ್ ನೀರು ಪೂರೈಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ 2022-23ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಅನ್ವಯಿಸಿದಂತೆ ವಿವಿಧ ಯೋಜನೆಗಳ ಕುರಿತ ಜಿಲ್ಲಾಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ನಿಯಮಾವಳಿಗಳ ನೆಪ ಹೇಳಿ, ಜನರಿಗೆ ಕುಡಿಯುವ ನೀರು ಕೊಡುವಲ್ಲಿ ವಿಳಂಬ ಮಾಡಬಾರದು. ಅಗತ್ಯವಿರುವ ಸ್ಥಳ ಅಥವಾ ಗ್ರಾಮಗಳಲ್ಲಿ ತಕ್ಷಣ ಬೊರವೆಲ್ ಕೊರಿಸಿ ಕುಡಿಯುವ ನೀರು ಕೊಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿಗಳು, ಶಾಸಕರ ಅಧ್ಯಕ್ಷತೆಯಲ್ಲಿ ಪ್ರತಿ ವಿಧಾನಸಭಾ ಮತಕ್ಷೇತ್ರದ ಟಾಸ್ಕ್‍ಪೋರ್ಸ್ ಸಮಿತಿ ಸಭೆ ಜರುಗುವಂತೆ ಸಮನ್ವಯ ಮಾಡಬೇಕು. ಯಾವ ಗ್ರಾಮದಲ್ಲಿಯೂ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಗೆ ವಹಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಇತರ ನಗರಗಳಲ್ಲಿ ಮತ್ತು ಮಹಾನಗರದಲ್ಲಿ ನಿಗಧಿಯಂತೆ ನೀರು ಸರಬರಾಜು ಮಾಡಬೇಕು. ನಗರದಲ್ಲಿ ಅಗತ್ಯವಿದ್ದರೆ ಬೊರ್‍ವೆಲ್ ಕೊರೆಸಿ ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರು, ಮೇವು, ಉದ್ಯೋಗ ಕೊರತೆ ಆಗದಂತೆ ಸಂಬಂಧಿಸಿದ ಇಲಾಖೆಗಳು ಕ್ರಮವಹಿಸಬೇಕು ಮತ್ತು ಜನರಿಗೆ ಅಗತ್ಯ ಔಷಧಿ ದಾಸ್ತಾನು ಇರುವಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಾತನಾಡಿ, ಜಲಜೀವನ್ ಮಿಷನ್ ಕಾಮಗಾರಿ ಗುಣಮಟ್ಟದಿಂದ ಆಗುವಂತೆ ಅಧಿಕಾರಿಗಳು ಉಸ್ತುವಾರಿ ಮಾಡಬೇಕು ಬೆಳೆ ವಿಮೆ, ಪರಿಹಾರ ರೈತರಿಗೆ ಸಕಾಲದಲ್ಲಿ ಸಿಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಕುಂದಗೋಳ ಶಾಸಕ ಎಂ.ಆರ್.ಪಾಟೀಲ್ ಮಾತನಾಡಿ, ನವಲಗುಂದ ಕ್ಷೇತ್ರದ ಅನೇಕ ಹಳ್ಳಿಗಳಲ್ಲಿ ನೀರಿನ ಅಭಾವ ಆಗುತ್ತಿದೆ. ಬಿತ್ತಿದ ಬೆಳೆಗೆ ವಿಮೆ ಆಗಬೇಕು ಎಂದರು

ಶಾಸಕ ಅಬ್ಬಯ್ಯ ಪ್ರಸಾದ್ ಅವರು ಮಾತನಾಡಿ, ಮಹಾನಗರದಲ್ಲಿ ನಿರಂತರ ನೀರು ಯೋಜನೆ ಕಾಮಗಾರಿ ವಿಳಂಬವಾಗುತ್ತಿದೆ. ಕುಡಿಯುವ ನೀರಿನ ಸರಬರಾಜಿನಲ್ಲಿ ಸುಧಾರಣೆ ಆಗಬೇಕು, ಸ್ಲಂ, ಬಡವರು, ಕೂಲಿ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಮದ್ಯದಂಗಡಿ ತೆರೆಯದಂತೆ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಆರ್.ಎಂ. ಸೊಪ್ಪಮಠ ಅವರು ಮಾತನಾಡಿ, ಜಿಲ್ಲೆಯ 99 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡು ಬಂದಿದ್ದು, 4 ಗ್ರಾಮಗಳಿಗೆ ಮಾತ್ರ ಟ್ಯಾಂಕರ್ ಮೂಲಕ ಹಾಗೂ ಉಳಿದ 95 ಗ್ರಾಮಗಳಿಗೆ ಬೊರ್‍ವೆಲ್ ಮೂಲಕ ಗ್ರಾಮಗಳೀಗೆ ಅಗತ್ಯವಿರುವಷ್ಟು ನೀರನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ನೀರಿನ ಕೊರತೆ ಇರುವ ಗ್ರಾಮಗಳಿಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಅವರೊಂದಿಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಾಟೀಲ್ ಶಶಿ ಅವರು ಮಾತನಾಡಿ, ಆಸ್ಪತ್ರೆ ಸೌಲಭ್ಯ, ಔಷಧಿ ಲಭ್ಯತೆ, ಆಂಬುಲೆನ್ಸ್ ಬಳಕೆ ಕುರಿತು ವರದಿ ನೀಡಿದರು. ಜಿಲ್ಲೆಯಲ್ಲಿ ಅಪೌಷ್ಠಿಕತೆ ಇರುವ ಮಕ್ಕಳ ಸಂಖ್ಯೆ ಕಡಿಮೆಗೊಳಿಸಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಆರೋಗ್ಯ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗಳು ಈ ನಿಟ್ಟಿನಲ್ಲಿ ಜಂಟಿಯಾಗಿ ಕ್ರಮ ವಹಿಸುತ್ತಿವೆ ಎಂದು ಅವರು ಹೇಳಿದರು.

ಕೃಷಿ ಇಲಾಖೆ ಉಪನಿರ್ದೇಶಕಿ ಜಯಶ್ರೀ ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಕೊರೆತೆಯಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 2.57 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದ್ದು, ಈವರೆಗೆ 42,003 ಹೆಕ್ಟೇರ್ ಪ್ರದೇಶದಲ್ಲಿ (ಶೇ.16 ರಷ್ಟು) ಬಿತ್ತನೆಯಾಗಿದೆ. ಮುಂಗಾರಿನಲ್ಲಿ ಪ್ರಮುಖವಾಗಿ ಹೆಸರು, ಸೋಯಾ ಅವರೆ, ಹತ್ತಿ, ಮೆಕ್ಕೆಜೋಳ, ಶೇಂಗಾ, ಭತ್ತ, ಕಬ್ಬು, ಈರುಳ್ಳಿ, ಮೆಣಸಿನಕಾಯಿ, ಆಲೂಗಡ್ಡೆ, ಬೆಳೆಗಳನ್ನು ಬೆಳೆಯಲಾಗುತ್ತದೆ ಎಂದು ಹೇಳಿದರು.

ಪೂರ್ವ ಮುಂಗಾರು ಮಾರ್ಚ್-ಮೇ ದಲ್ಲಿ ವಾಡಿಕೆ ಮಳೆ 120 ಮಿ.ಮೀ ಇದ್ದು, ಈಗ 91 ಮಿ.ಮೀ ಮಳೆಯಾಗಿದೆ. ಜೂನ್ 27 ರ ವರೆಗೆ 109 ಮಿ.ಮೀ ವಾಡಿಕೆ ಮಳೆಗೆ, ಕೇವಲ 40 ಮಿ.ಮೀ. ಮಳೆಯಾಗಿದ್ದು, 69 ಮಿ.ಮೀ ದಷ್ಟು ಮಳೆಯ ಕೊರತೆ ಆಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ವರ್ಷ 16,595 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ವಿತರಣೆ ಮಾಡಲಾಗಿತ್ತು. ಈ ವರ್ಷ 25,000 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ನೀಡಲಾಗಿದ್ದು 16,052 ಕ್ವಿಂಟಾಲ್ ನಮ್ಮ ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ.

ಈ ಪೈಕಿ 7,310 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದ್ದು, 8,733 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ. ರೈತರ ಬೇಡಿಕೆ ಅನ್ವಯ ವಿವಿಧ ಬಿತ್ತನೆ ಬೀಜಗಳನ್ನು ಪೂರೈಸಲಾಗುವುದು, ಬಿತ್ತನೆ ಬೀಜದ ಯಾವುದೇ ಕೊರತೆ ಇರುವುದಿಲ್ಲ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಸಹಾಯಧನದಡಿಯಲ್ಲಿ ಬಿತ್ತನೆ ಬೀಜ ವಿತರಿಸಲು 14 ರೈತ ಸಂಪರ್ಕ ಕೇಂದ್ರ ಹಾಗೂ 16 ಉಪ ಕೇಂದ್ರಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕಿಂತ 2 ಪಟ್ಟು ಹೆಚ್ಚು ಮುಂಗಾರು ಹಂಗಾಮಿಗೆ ಎಪ್ರೀಲ್‍ದಿಂದ ಸೆಪ್ಟೆಂಬರ್‍ವರೆಗೆ 53,787 ಮೆಟ್ರಿಕ್‍ಟನ್ ವಿವಿಧ ರಸಗೊಬ್ಬರದ ಅವಶ್ಯಕತೆಯಿದ್ದು, ಪ್ರಸಕ್ತ ಮುಂಗಾರು ಹಂಗಾಮಿಗಾಗಿ ರೈತರಿಗೆ ವಿತರಿಸಿದ ನಂತರ ಈಗ 42,575 ಮೆಟ್ರಿಕ್‍ಟನ್ ವಿವಿಧ ಶ್ರೇಣಿಯ ರಸಗೊಬ್ಬರ ಲಭ್ಯವಿದೆ.

ಮುಖ್ಯವಾಗಿ ಯೂರಿಯಾ 11,346 ಮೆಟ್ರಿಕ್‍ಟನ್ ಹಾಗೂ ಡಿಎಪಿ 10,474 ಮೆಟ್ರಿಕ್‍ಟನ್ ಲಭ್ಯವಿದೆ. ಮತ್ತು ಕಾಪೂ ದಾಸ್ತಾನಿನಡಿಯಲ್ಲಿ 4,302 ಮೆಟ್ರಿಕ್‍ಟನ್ ಯೂರಿಯಾ, 2,138 ಮೆಟ್ರಿಕ್‍ಟನ್ ಡಿಎಪಿ 201 ಮೆಟ್ರಿಕ್‍ಟನ್ ಎಮ್.ಓ.ಪಿ ಹಾಗೂ 1,301 ಮೆಟ್ರಿಕ್‍ಟನ್ ಕಾಂಪ್ಲೆಕ್ಸ್ ರಸಗೊಬ್ಬರ ದಾಸ್ತಾನಿಕರಿಸಲಾಗಿದೆ ಎಂದು ಅವರು ಸಚಿವರಿಗೆ ತಿಳಿಸಿದರು.

Published On: 03 July 2023, 05:51 PM English Summary: Necessary stock of fodder, medicines, agricultural implements in the district: Santhosh Lad

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.