ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲೆಗಳಲ್ಲಿ ಶನಿವಾರ ಕೂಡ ಧಾರಾಕಾರ ಮಳೆಯಾದ ಪರಿಣಾಮವಾಗಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಮೃತ್ಯುಂಜಯ, ಪಯಸ್ವಿನಿ, ಫಲ್ಗುಣಿ ನದಿಗಳಲ್ಲಿ ನೀರಿನ ಹರಿವು ರಭಸ ಪಡೆದುಕೊಂಡಿದೆ. ಮರವೂರು, ತುಂಬೆ ಅಣೆಕಟ್ಟೆಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗಿದೆ. ಉಳಿದಂತೆ ಚಿಕ್ಕಮಗಳೂರು, ಧಾರವಾಡ, ಗದಗ, ಬಳ್ಳಾರಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಕಾಪು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಉಡುಪಿ, ಬೈಂದೂರು ತಾಲ್ಲೂಕುಗಳಲ್ಲಿ ಮಳೆ ಬಿರುಸಾಗಿದ್ದರಿಂದ ಕಾಪುವಿನಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ದೈತ್ಯ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಉಡುಪಿಯಲ್ಲಿ ಬೈಲೂರು,
ಬನ್ನಂಜೆ, ಮೂಡನಿಡಂಬೂರು, ಮಠದ ಬೆಟ್ಟು ಪ್ರದೇಶ ಜಲಾವೃತಗೊಂಡಿದೆ. ಭಾರೀ ಮಳೆಗೆ 23 ವಿದ್ಯುತ್ ಕಂಬಗಳು ಬಿದ್ದಿವೆ. 6 ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದರೆ, ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಮುಂಗಾರು ಚುರುಕಾಗಿರುವುದರಿಂದ ಅರಬ್ಬಿ ಸಮುದ್ರದ ದಡಕ್ಕೆ ದೊಡ್ಡ ಅಲೆಗಳು ಅಪ್ಪಳಿಸುತ್ತಿವೆ. ಕೊಡಗು ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದ್ದರಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಹೆಚ್ಚಳವಾಗಿದೆ.
ಕಳೆದ ಮೂರು ದಿನಗಳಿಂದ ಬಂಟ್ವಾಳ ಸುತ್ತಮುತ್ತ ಉತ್ತಮ ಮಳೆಯಾಗುತ್ತಿರುವ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
ಘಟ್ಟ ಪ್ರದೇಶದಲ್ಲಿ ಮಳೆಯಾದಾಗ ನೇತ್ರಾವತಿ, ಕುಮಾರಧಾರಾ ನದಿಗಳು ಹಾಗೂ ಅದರ ಉಪನದಿಗಳಲ್ಲಿ ನೀರು ಹೆಚ್ಚಾಗುತ್ತದೆ. ಉಪ್ಪಿನಂಗಡಿ ಸಂಗಮದಿಂದ ಎರಡೂ ನದಿಗಳು ಒಂದಾಗಿ ಹರಿಯುತ್ತವೆೆ. ನೀರಿನ ಹರಿವು ಹೆಚ್ಚಳವಾಗುತ್ತಿದ್ದಂತೆ ತುಂಬೆ ಡ್ಯಾಂನಲ್ಲಿ ಗೇಟ್ಗಳನ್ನು ತೆರೆಯಲಾಗುತ್ತಿದೆ. ಪ್ರಸ್ತುತ 30ರ ಪೈಕಿ 11 ಗೇಟ್ಗಳನ್ನು ತೆರೆಯಲಾಗಿದೆ.
Share your comments