1. ಸುದ್ದಿಗಳು

ಕಾಳೇಶ್ವರಂ ಏತನೀರಾವರಿ ಕಥೆ ಹೇಳುವ ‘ಲಿಫ್ಟಿಂಗ್ ಎ ರಿವರ್’ ಜೂ.25ರಂದು ರಾತ್ರಿ ಡಿಸ್ಕವರಿಯಲ್ಲಿ ಪ್ರಸಾರ

ಕಾಳೇಶ್ವರಂ ಏತನೀರಾವರಿ ಯೋಜನೆಯ ವಿಹಂಗಮ ನೋಟ.

ಇದು ಯಾರೂ ಕಂಡರಿಯದ, ಎಲ್ಲಿಯೂ ಕೇಳಿರದ ಕಥೆ. ಯಾರ ಹಂಗೂ ಇಲ್ಲದೆ, ತನ್ನಪಾಡಿಗೆ ತಾನು ನಿರ್ವಿಘ್ನವಾಗಿ ಹರಿಯುತ್ತಿದ್ದ ನದಿಯೊಂದನ್ನು ತಡೆದು ನಿಲ್ಲಿಸಿ, ಅದರ ದಿಕ್ಕನ್ನೇ ಬದಲಿಸಿದ ಕಥೆ. ಅಷ್ಟೇ ಅಲ್ಲ ಗುರುತ್ವಾಕರ್ಷಣ ದಿಕ್ಕಿನತ್ತ ಅಡೆ-ತಡೆ ಇಲ್ಲದೆ ಓಡುತ್ತಿದ್ದ ನದಿಗೆ ಬೇರೆ ದಿಕ್ಕು ತೋರಿಸುವ ಜೊತೆಗೆ, ನದಿ ಎಂಬ ನದಿ ನೀರನ್ನೇ ಅನಾಮತ್ತಾಗಿ ಸಮುದ್ರ ಮಟ್ಟದಿಂದ ಸುಮಾರು 600 ಮೀಟರ್‌ಗಳಷ್ಟು ಮೇಲಕ್ಕೆ ಎತ್ತಿ ಅದಕ್ಕೊಂದು ಬೇರೆಯದೇ ಮಾರ್ಗ ತೋರಿಸಿದ ಸಾಹಸಗಾಥೆ. ಈ ಕಥೆ ನೀವು ಕೇಳಬೇಕೆ? ಈ ಸಾಹಸಗಾಥೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕೇ? ಹಾಗಾದರೆ ಇಲ್ಲಿದೆ, ಇಡೀ ಜಗತ್ತೇ ತೆಲಂಗಾಣ ರಾಜ್ಯದತ್ತ ತಿರುಗಿ ನೋಡುವಂತೆ ಮಾಡಿರುವ ಕಾಳೇಶ್ವರಂ ಏತ ನೀರಾವರಿ ಯೋಜನೆಯ ಸಂಕ್ಷಿಪ್ತ ಮಾಹಿತಿ.

ಅಂದಹಾಗೆ, ಈ ಲೇಖನ ಓದಿದ ನಂತರ ಇಂದು ರಾತ್ರಿ (ಜೂನ್ 25, ಶುಕ್ರವಾರ) ಡಿಸ್ಕವರಿ ಚಾನೆಲ್‌ನಲ್ಲಿ 90 ನಿಮಿಷಗಳ ‘ಲಿಫ್ಟಿಂಗ್ ಎ ರಿವರ್’ ಎಂಬ ವಿಶೇಷ ಸಾಕ್ಷ್ಯಚಿತ್ರ  ಪ್ರಸಾರವಾಗಲಿದೆ. 90 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ತಪ್ಪದೆ ನೋಡಿ, ಇಂಥದೊಂದು ಅಪರೂಪದ ಸಾಹಸಗಾಥೆಯ ಸಂಪೂರ್ಣ ಮಾಹಿತಿ ಪಡೆಯಿರಿ. ಅದಕ್ಕೂ ಮೊದಲು ಈ ಯೋಜನೆಯ ಪರಿಚಯವನ್ನು ‘ಕೃಷಿ ಜಾಗರಣ’ದಲ್ಲಿ ಮಾಡಿಕೊಳ್ಳಿ.

ಪಕ್ಕದ ತೆಲಂಗಾಣ ರಾಜ್ಯದಲ್ಲಿ ಗೋದಾವರಿ ನದಿ ಹರಿಯುತ್ತದೆ. ಇದು ತೆಲುಗು ರಾಜ್ಯಗಳ ರೈತರ ಕೈಗಳಿಗೆ ದುಡಿಮೆ ಹಾಗೂ ಜನರಿಗೆ ನಿತ್ಯ ಅನ್ನ ನೀಡುತ್ತಿರುವ ಅತ್ಯಂತ ಪ್ರಮುಖ ನದಿ. ಈ ನದಿಯ ನಿರನ್ನೆತ್ತಿ ಕೃಷಿ ಮತ್ತಿತರ ಉಪಯೋಗಕ್ಕೆ ಬಳಸಲು ರೂಪಿಸಿರುವುದೇ ಕಾಳೇಶ್ವರಂ ಏತ ನೀರಾವರಿ ಯೋಜನೆ. ಈ ಯೋಜನೆ ಆರಂಭವಾದ ಬಗೆ, ಅನುಷ್ಠಾನದ ವಿಷಯದಲ್ಲಿ ಕಬ್ಬಿಣದ ಕಡಲೆಯಂತಿದ್ದ ಯೋಜನೆ ರೂಪುರೇಷೆಗಳನ್ನು ಕಾರ್ಯರೂಪಕ್ಕೆ ತಂದ ವಿಧಾನ, ಸೇರಿ ಯೋಜನೆ ಹಿಂದಿನ ಹಲವಾರು ಸತ್ಯ ಸಂಗತಿಗಳು ಮತ್ತು ಯಶಸ್ಸಿನ ಬಗ್ಗೆ ವಿಶ್ವ ವಿಖ್ಯಾತ ಡಿಸ್ಕವರಿ ಚಾನೆಲ್ ವಿಶೇಷ ಸಾಕ್ಷ್ಯಚಿತ್ರ  ಒಂದನ್ನು ರೂಪಿಸಿದೆ.

ದಾಖಲೆ ಬರೆದ ಯೋಜನೆ

ಕಾಳೇಶ್ವರಂ ಏತ ನೀರಾವರಿ ಯೋಜನೆ ತನ್ನ ಹಲವು ವಿಶೇಷತೆಗಳಿಂದಾಗಿ ವಿಶ್ವದ ಗಮನ ಸೆಳೆದಿದೆ. ಹಾಗೆ ನೋಡಿದರೆ ಈ ಇಡೀ ಯೋಜನೆಯೇ ಜಾಗತಿಕ ಮಟ್ಟದಲ್ಲಿ ಒಂದು ಬೃಹತ್ ದಾಖಲೆ ಬರೆದಿದೆ. ಪ್ರಪಂಚದ ಅತಿ ದೊಡ್ಡ ಏತ ನೀರಾವರಿ ಯೋಜನೆ, ಅತಿ ಕಡಿಮೆ ಸಮಯದಲ್ಲಿ ಪೂರ್ಣಗೊಂಡ ಬೃಹತ್ ನೀರಾವರಿ ಯೋಜನೆ, ಪಾತಾಳದಲ್ಲಿ ಅತ್ಯದ್ಭುತವಾಗಿರುವ ಪಂಪ್‌ಹೌಸ್ ನಿರ್ಮಾಣ, ವಿಶ್ವದ ಅತಿ ದೊಡ್ಡವು ಎನ್ನಬಹುದಾದ ಮೋಟಾರ್‌ಗಳ ಅಳವಡಿಕೆ ಸೇರಿ ಹಲವು ಪ್ರಥಮಗಳು, ದಾಖಲೆಗಳ ಮೂಲಕ ಕಾಳೇಶ್ವರಂ ಯೋಜನೆ ಗಮನ ಸೆಳೆದಿದೆ.

ತೆಲಂಗಾಣ ರಾಜ್ಯದ ಭೂಪಲಪಲ್ಲಿ ಜಿಲ್ಲೆ ವ್ಯಾಪ್ತಿಗೆ ಬರುವ ಕಾಳೇಶ್ವರಂ ಗ್ರಾಮದಲ್ಲಿ 2016ರಲ್ಲಿ ಆರಂಭವಾದ ಯೋಜನೆ ಕಾಮಗಾರಿ 2019ರಲ್ಲಿ ಪೂರ್ಣಗೊಂಡಿದ್ದು, ಅದೇ ವರ್ಷ ಜೂನ್ 21ರಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಲೋಕಾರ್ಪಣೆ ಮಾಡಿದ್ದರು. ವಾರ್ಷಿಕ 280 ಟಿಎಂಸಿ ನೀರು ಬಿಡುಗಡೆ ಸಾಮರ್ಥ್ಯ ಹೊಂದಿರುವ ಈ ಯೋಜನೆ, 500 ಕಿ.ಮೀ ವ್ಯಾಪ್ತಿ ಹೊಂದಿದ್ದು, ಏಳು ಲಿಂಕ್‌ಗಳು ಹಾಗೂ 28 ಪ್ಯಾಕೇಜ್‌ಗಳಲ್ಲಿ ವಿಭಾಗಿಸಲ್ಪಟ್ಟಿದೆ. ಯೋಜನೆಯಡಿ 1800 ಕಿ.ಮೀ ಉದ್ದದ ಚಾನಲ್ ಇದ್ದು, ತೆಲಂಗಾಣದ 13 ಜಿಲ್ಲೆಗಳಲ್ಲಿ ಹಾದು ಹೋಗಿದೆ. ಈ ಪೈಕಿ 203 ಕಿ.ಮೀ ಉದ್ದದ ಸುರಂಗ ಕಾಲುವೆಯೂ ಇದೆ.

ಡಿಸ್ಕವರಿಯಿಂದ ಸಾಕ್ಷ್ಯಚಿತ್ರ

‘ಭಾರತದ ಪ್ರತಿಷ್ಠೆ’ ಎನಿಸಿಕೊಂಡಿರುವ ಕಾಳೇಶ್ವರಂ ಏತ ನೀರಾವರಿ ಯೋಜನೆ ಕಾಮಗಾರಿ ನಡೆದುಬಂದ ಹಾದಿಯನ್ನು ಸತತ ಮೂರು ವರ್ಷಗಳ ಕಾಲ ಚಿತ್ರೀಕರಿಸಿರುವ ಡಿಸ್ಕವರಿ ಚಾನೆಲ್, ಯೋಜನೆಯ ಆಳ-ಅಗಲವನ್ನು ‘ಲಿಫ್ಟಿಂಗ್ ಎ ರಿವರ್’ ಸಾಕ್ಷ್ಯಚಿತ್ರದಲ್ಲಿ ವಿವರಿಸಿದೆ. ಈ ಯೋಜನೆಯನ್ನು ವಿಜ್ಞಾನ ಮತ್ತು ಎಂಜಿನಿಯರಿAಗ್ ತಂತ್ರಜ್ಞಾನದ ಅದ್ಭುತ ಸೃಷ್ಟಿ ಎಂದು ಬಣ್ಣಿಸಿದೆ. ಹಾಗೇ, ಮೂರು ವರ್ಷಗಳ ಕಾಲ ನಡೆಸಿದ ಯೋಜನೆಯ ಚಿತ್ರೀಕರಣವನ್ನು ಡಿಸ್ಕವರಿ ಚಾನೆಲ್ 90 ನಿಮಿಷಗಳ (ಒಂದೂವರೆ ತಾಸು) ಸಾಕ್ಷ್ಯಚಿತ್ರದ  ಮೂಲಕ ಪ್ರಸ್ತುತಪಡಿಸುತ್ತಿದೆ. ‘ಲಿಫ್ಟಿಂಗ್ ಎ ರಿವರ್’ ಕಾರ್ಯಕ್ರಮ ಜೂನ್ 25ರಂದು ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದ್ದು, ಜೂನ್ 27ರಂದು ಭಾನುವಾರ ಮಧ್ಯಾಹ್ನ 2.30ಕ್ಕೆ ಮರು ಪ್ರಸಾರವಾಗಲಿದೆ.

ಗುರುತ್ವಾಕರ್ಷಣದ ದಿಕ್ಕಿನತ್ತ ಹರಿಯುತ್ತಿರುವ ಗೋದಾವರಿ ನದಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ಬೇರೊಂದು ದಿಕ್ಕಿನತ್ತ ತಿರುಗಿಸಿ, ಬೃಹತ್ ಪಂಪ್‌ಹೌಸ್ ಮತ್ತು ಮೋಟಾರ್‌ಗಳ ಮೂಲಕ ನದಿ ನೀರನ್ನು ಸಮುದ್ರ ಮಟ್ಟದಿಂದ 600 ಮೀಟರ್ ಮೇಲಕ್ಕೆ ತಂದು ಹರಿಸಲಾಗುತ್ತಿದೆ. ಭೂಮಿಯ ಅಡಿಯಲ್ಲಿ ನಿರ್ಮಿಸಿರುವ ಬೃಹತ್ ಪೌಂಪ್ ಹೌಸ್, ಹೈಟೆಕ್ ಬಹುಮಹಡಿ ಕಟ್ಟಡವನ್ನೂ ನಾಚಿಸುವಂತಿದೆ. ಈ ಪಂಪ್‌ಹೌಸ್ ಮೂಲಕ ಎತ್ತುವ ನೀರನ್ನು ಏಳು ಸಣ್ಣ ಅಣೆಕಟ್ಟೆಗಳಲ್ಲಿ ಸಂಗ್ರಹಿಸಿ, ಕಾಲುವೆ ಮತ್ತು ಪೈಪ್ ಲೈನ್‌ಗಳ ಮೂಲಕ ಕೆರೆಗಳಿಗೆ ಹರಿಸಿ ಅಲ್ಲಿಂದ ಕೃಷಿ ಸೇರಿ ವಿವಿಧ ಬಳಕೆಗಳಿಗೆ ಉಪಯೋಗಿಸಲಾಗುತ್ತಿದೆ. ಯೋಜನೆಯಡಿ 15 ಬೃಹದಾಕಾರದ ಪಂಪಿAಗ್ ಕೇಂದ್ರಗಳನ್ನು ನಿರ್ಮಿಸಿದ್ದು, 5,159 ಮೆಗಾವ್ಯಾಟ್ ಪಂಪಿAಗ್ ಸಾಮರ್ಥ್ಯದ 104 ಪಂಪ್‌ಗಳನ್ನು ಅಳವಡಿಸಲಾಗಿದೆ. ಈ ಮಟ್ಟಿಗಿನ ದೊಡ್ಡ ಸಾಮರ್ಥ್ಯದ ನೀರೆತ್ತುವ ಸಾಧನಗಳನ್ನು ಅಳವಡಿಸಿರುವ ವಿಶ್ವದ ಪ್ರಥಮ ಏತ ನೀರಾವರಿ ಯೋಜನೆ ಇದಾಗಿದೆ.

ಕಾಳೇಶ್ವರಂ ಯೋಜನೆಯ ವಿಶೇಷತೆ

* ವಿಶ್ವದ ಅತಿ ದೊಡ್ಡ ಏತ ನೀರಾವರಿ ಯೋಜನೆ

* ಭೂಮಿ ಆಳದಲ್ಲಿ ಪಂಪ್‌ಹೌಸ್‌ಗಳ ನಿರ್ಮಾಣ

* ಭಾರತದ ಹೆಮ್ಮೆ ಎನಿಸಿಕೊಂಡಿರುವ ವಿಶ್ವದ ಅತಿ ದೊಡ್ಡ ಏತ ನೀರಾರಿ ಯೋಜನೆ

* ಪ್ರತಿ ನಿತ್ಯ 2 ಟಿಎಂಸಿ ನೀರನ್ನು ಸಮುದ್ರ ಮಟ್ಟದಿಂದ 600 ಮೀಟರ್ ಮೇಲೆತ್ತುವ ಯೋಜನೆ

* ಕೃಷಿ, ಅಂತರ್ಜಲ, ಮೀನುಗಾರಿಕೆ, ಪ್ರವಾಸೋದ್ಯಮ, ಕೈಗಾರಿಕೆ ಕ್ಷೇತ್ರಗಳಿಗೆ ಯೋಜನೆ ಲಾಭ

Published On: 25 June 2021, 11:09 AM English Summary: lifting a river- the untold story of kaleshwaram lift irrigation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.