ಚಿತ್ರರಂಗದ ಒಗ್ಗಟ್ಟಿನ ಹೋರಾಟಕ್ಕೆ ಮಣಿದ ಸರ್ಕಾರ ಏಪ್ರಿಲ್ 7ರವರೆಗೆ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ. ಚಿತ್ರಮಂದಿರದಲ್ಲಿ ಶೇಕಡ 50ರಷ್ಟು ಪ್ರೇಕ್ಷಕರ ಸಾಮರ್ಥ್ಯವಕ್ಕೆ ಅವಕಾಶ ಮಾಡಿಕೊಟ್ಟ ಮರುದಿನವೇ ಸರ್ಕಾರ ತನ್ನ ನಿರ್ದಾರವನ್ನು ಮಾರ್ಪಡಿಸಿದೆ.
ನಟ ಪುನೀತ್ ರಾಜಕುಮಾರ್ ,ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ಮಾಪಕ ವಿಜಯ್ ಕಿರಂಗದೂರು ಸೇರಿದಂತೆ ಯುವರತ್ನ ಚಿತ್ರತಂಡ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಚಿತ್ರಮಂದಿರದಲ್ಲಿ ಶೇಕಡ ನೂರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಅವರ ತಂಡದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಚಿತ್ರಮಂದಿರದ ಮೇಲೆ ಹೇರಿದ್ದ ಶೇ.50 ರ ಮಿತಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. “ಯುವರತ್ನ” ಚಿತ್ರದ ಆನ್‌ಲೈನ್ ಟಿಕೆಟ್ ಬುಕಿಂಗ್ ಆಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ 7ರ ನಂತರ ಹೊಸ ನಿಯಮ ಅನ್ವಯವಾಗುವಂತೆ ನಿಯಮಗಳನ್ನು ಮಾರ್ಪಾಡು ಮಾಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಎಂದು ಆದೇಶ ಹೊರಡಿಸಿದ್ದಾರೆ.
ಇದಕ್ಕೂ ಮುನ್ನ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜಯರಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶೇ.100 ರ ಪ್ರೇಕ್ಷಕರ ಸಾಮರ್ಥ್ಯ ಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿತ್ತು.
ನಿನ್ನೆ (ಶುಕ್ರವಾರ) ರಾಜ್ಯ ಸರ್ಕಾರ ನೂತನ ಕೊರೋನಾ ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದರಲ್ಲಿ ಬೆಂಗಳೂರು ನಗರ ಸೇರಿ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿತ್ತು. ಏಪ್ರಿಲ್ 1ರಂದು ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ "ಯುವರತ್ನ" ಚಿತ್ರತಂಡಕ್ಕೆ ಇದರಿಂದ ಭಾರೀ ಅಸಮಾಧಾನ ಉಂಟಾಗಿತ್ತು.
ಪುನೀತ್ ಧನ್ಯವಾದ:
ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಪ್ರೇಕ್ಷಕರ ಸಾಮರ್ಥ್ಯವನ್ನು ಏಪ್ರಿಲ್ 7 ರಿಂದ ಅನ್ವಯವಾಗುವಂತೆ ಜಾರಿ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪುನೀತ್ ರಾಜಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. ಏಪ್ರಿಲ್ 7ರ ತನಕ ಶೇಕಡ ನೂರರಷ್ಟು ಪ್ರೇಕ್ಷಕರ ಸಾಮರ್ಥ್ಯವನ್ನು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಅವರು ಸರ್ಕಾರಕ್ಕೆ ಅಭಿಮಾನಿಗಳಿಗೆ ಮಾಧ್ಯಮ ಕೃತಜ್ಞತೆ ಸಲ್ಲಿಸಿದ್ದಾರೆ. ಮೂರು .ನಾಲ್ಕು ದಿನಗಳ ಕಾಲಾವಕಾಶ ಸಿಕ್ಕಿದೆ.ಇದು ತುಸು ಖುಷಿಕೊಟ್ಟಿದೆ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯುವರತ್ನ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ ಎಲ್ಲರಿಗೂ ತಾವು ಅಭಾರಿ ಎಂದು ಅವರು ತಿಳಿಸಿದ್ದಾರೆ.
ಏ. 4 ರಿಂದ ಮೂರುದಿನ ಶೇಕಡ ನೂರರಷ್ಟು ಚಿತ್ರಮಂದಿರದಲ್ಲಿ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಆರೋಗ್ಯದ ಕಡೆ ಕಾಳಜಿ ವಹಿಸುವಂತೆ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದರು
Share your comments