1. ಸುದ್ದಿಗಳು

ಕನ್ನಡ ಕುಲಕೋಟಿಯನ್ನು ಅಗಲಿದ ಕೆ.ಎಸ್. ನಿಸಾರ್ ಅಹಮದ್

ಕನ್ನಡ ಹಿರಿಯ ಸಾಹಿತಿ ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಗಳಿಸಿದ್ದ ಕೆ.ಎಸ್ ನಿಸಾರ್ ಅಹಮದ್(84) ಭಾನುವಾರ  ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಿಸಾರ್ ಅಹಮದ್ ಈ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಿಸಾರ್ ಅಹಮದ್‍ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ, ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ’ ಎಂಬ ರಮ್ಯಾದ್ಭುತ ಸಾಲಿನ ಹಾಡನ್ನು ಬರೆದು ಕರುನಾಡಿನಾದ್ಯಂತ ‘ನಿತ್ಯೋತ್ಸವ’ ಕವಿ ಎಂದೇ ಮನೆಮಾತಾಗಿದ್ದರು.
ನಿಸಾರ್ ಅಹಮದ್ ಅವರು 1936ರ ಫೆಬ್ರವರಿ 5ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಕೆ.ಎಸ್. ಹೈದರ್ ಮತ್ತು ತಾಯಿ ಷಾನ್ ವಾಜ್ ಬೇಗಂ. ಭೂವಿಜ್ಞಾನ ವಿಭಾಗದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದಿದ್ದ ನಿಸಾರ್ ಅವರು ಬೆಂಗಳೂರು, ಶಿವಮೊಗ್ಗ, ಗುಲ್ಬರ್ಗಾ ಸೇರಿದಂತೆ ನಾಡಿನ ಹಲವು ಕಡೆಗಳಲ್ಲಿ ಪ್ರಾದ್ಯಾಪಕಾರಾಗಿ ಸೇವೆಯನ್ನು ಸಲ್ಲಿಸಿದ್ದರು.

2003ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊಫೆಸರ್ ನಿಸಾರ್ ಅಹಮದ್ ಅವರು ಆಯ್ಕೆಗೊಂಡಿದ್ದರು.

ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಎಂ.ಸಿ. ಸೀತಾರಾಮಯ್ಯ, ಜಿ.ಪಿ. ರಾಜರತ್ನಂ, ಎಲ್. ಗುಂಡಪ್ಪ ಮೊದಲಾದ ಗುರುಗಳ ಪ್ರಭಾವಕ್ಕೊಳಗಾಗಿದ್ದ ನಿಸಾರ್ ಅವರಲ್ಲಿ ಸಹಜವಾಗಿಯೇ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು.

ಮನಸು ಗಾಂಧಿ ಬಜಾರು, ನೆನದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಸಮಗ್ರ ಕವಿತೆಗಳು, ನವೋಲ್ಲಾಸ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರೊಫೆಸರ್ ನಿಸಾರ್ ಅಹಮದ್ ಅವರ ಪ್ರಮುಖ ಕವನ ಸಂಕಲನಗಳು.

ನಿಸಾರ್ ಅಹಮ್ಮದ್ ಅವರು ತಮ್ಮ ಸಾಹಿತ್ಯ ಕೃಷಿ ಜೀವನದಲ್ಲಿ ವಿಮರ್ಶಾ ಬರಹಗಳು, ಅನುವಾದ ಬರಹ ವಿಭಾಗಗಳಲ್ಲೂ ಕೈಯಾಡಿಸಿದ್ದರೂ ಜನಸಾಮಾನ್ಯರಿಗೆ ಅವರೆಂದೂ ನಿತ್ಯೋತ್ಸವದ ಕವಿಯಾಗಿಯೇ ಉಳಿದಿದ್ದರು. ಇದೀಗ ಪ್ರೊಫೆಸರ್ ನಿಸಾರ್ ಅಹಮ್ಮದ್ ಅವರು ಭೌತಿಕವಾಗಿ ನಮ್ಮನ್ನಗಲಿದ್ದರೂ ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಅತ್ಯುನ್ನತ ಕೊಡುಗೆಗಳ ಮೂಲಕ ಅವರ ನೆನಪು ಕನ್ನಡಿಗರ ಮನದಲ್ಲಿ ನಿತ್ಯ ನೂತನವಾಗಿರುತ್ತದೆ.

ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಸೋವಿಯತ್ ನೆಹರೂ ಪುರಸ್ಕಾರ, ಕರ್ನಾಟಕ ವಿಶ್ವ ವಿದ್ಯಾನಿಲಯದ ಡಾಕ್ಟರೇಟ್, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪ್ರೊಫೆಸರ್ ನಿಸಾರ್ ಅಹಮದ್ ಅವರು ಭಾಜನರಾಗಿದ್ದರು.
Published On: 03 May 2020, 06:17 PM English Summary: karnataka Famous writer K.S Nisar Ahamad death

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.