ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಬಿಪಿಎಲ್ ಕಾರ್ಡ್‌ದಾರರ ಕುಟುಂಬಸ್ಥರಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ ಯಾರಾದರೂ ವಯಸ್ಕರು ಮೃತಪಟ್ಟಿದ್ದರೆ ಅಂತಹ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಅವರು ತಿಳಿಸಿದರು. .
ಲಾಕ್ಡೌನ್ ನಿಂದಾಗಿ ಸಾವನ್ನಪ್ಪಿದ ವ್ಯಕ್ತಿ ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ಸಿಗಲಿದೆ. ಕೋವಿಡ್ ನಿಂದ ಮೃತಪಟ್ಟ ಆ ಕುಟುಂಬದ ದುಡಿಯುವ ವಯಸ್ಕರ ಹೆಸರಿನಲ್ಲಿ ಪರಿಹಾರ ಮೊತ್ತ ನೀಡಾಲಗುವುದು ಎಂದ ಅವರು ಕೋವಿಡ್ ನಿಂದಾಗಿ ಹಲವಾರು ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕುಟುಂಬಗಳು ತೀವ್ರ ಸಂಕಷ್ಟಕ್ಕೊಳಲಾಗಿದ್ದರಿಂದ ಅವರ ನೆರವಿಗೆ ಪರಿಹಾರ ನೀಡಲಾಗುತ್ತಿದೆ. ಈ ಕುರಿತು ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ ಎಂದರು.
ರಾಜ್ಯದಲ್ಲಿ ಕೋವಿಡ್ ನಿಂದಾಗಿ ಸುಮಾರು 20 ಸಾವಿರಿಕ್ಕೂ ಹೆಚ್ಚು ಜನ ಬಿಪಿಎಲ್ ಕುಟುಂಬಗಳ ಸದಸ್ಯರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಸರ್ಕಾರದ ಈ ತೀರ್ಮಾನ ಬಡ ಕುಟುಂಬಗಳ ಪಾಲಿಗೆ ಸ್ವಲ್ಪಮಟ್ಟಿಗಾದರೂ ಆಶಾಭಾವನೆ ಮೂಡಿಸಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಇರುವವರೆಗೂ ಈ ಯೋಜನೆ ಮುಂದುವರೆಯಲಿದೆ. ಕೋವಿಡ್ ಲಸಿಕೆಗಾಗಿ ಮೀಸಲಿಟ್ಟಿದ್ದ ಹಣವನ್ನು ಈ ಯೋಜನೆಗೆ ಬಳಸಲಾಗುವದು. ಕೇಂದ್ರಸರ್ಕಾರವು ಲಸಿಕೆ ಖರೀದಿ ಮಾಡಿ ಕೊಡುವುದರಿಂದ ರಾಜ್ಯಕ್ಕೆ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಯಶವಂತಪೂರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ ಕೊರೋನಾದಿಂದಾಗಿ ಮೃತಪಟ್ಟ ಕುಟುಂಬಕ್ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದೇ ರೀತಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಸಹ ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಖಾಸಗಿ ಆಸ್ಪತ್ರೆಯ ಖರ್ಚು ವೆಚ್ಚ ವೈಯಕ್ತಿಕವಾಗಿ ಭರಿಸುತ್ತೇನೆಂದು ಘೋಷಿಸಿದ್ದಾರೆ.
ಲಾಕ್‌ಡೌನ್‌ನಿಂದ ಬಾಧಿತರಾದ ಹಲವು ಶ್ರಮಿಕ ವರ್ಗಗಳಿಗೆ ಸರ್ಕಾರ 1750 ಕೋಟಿ ರೂಪಾಯಿಗೆ ಹೆಚ್ಚಿನ ಪ್ಯಾಕೇಜ್‌ನ್ನು ನೀಡಿದ್ದು, ಬಿಪಿಎಲ್ ಕುಟುಂಬಗಳಲ್ಲಿ ಮೃತಪಟ್ಟಿರುವವರಿಗೆ 1 ಲಕ್ಷ ರೂ. ಪರಿಹಾರ ನೀಡುವ ಮೂಲಕ ಸರ್ಕಾರ ಬಡವರ ನೆರವಿಗೆ ನಿಂತಿದೆ ಎಂದು ಅವರು ಹೇಳಿದರು.
Share your comments