ಸಿಕ್ಕಿಂ ನ ನಾಕು ಲಾ ಗಡಿ ಬಳಿ ವಿನಾಕಾರಣ ತಗಾದೆ ತೆಗೆದ ಚೀನಿ ಸೈನಿಕರು, ಭಾರತೀಯ ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಭಾರತೀಯ ಸೇನೆ, ಚೀನಿ ಸೈನಿಕರನ್ನು ಗಡಿಯಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ನಾಲ್ವರು ಭಾರತೀಯ ಸೈನಿಕರು ಹಾಗೂ ಏಳು ಚೀನ ಸೈನಿಕರು ಗಾಯಗೊಂಡಿದ್ದಾರೆ.
ಏಕಾಏಕಿ ಗಡಿಗೆ ನುಗ್ಗಿದ ಚೀನಿ ಸೈನಿಕರ ಗುಂಪು, ಭಾರತೀಯ ಸೈನಿಕರೊಂದಿಗೆ ವಿನಾಕಾರಣ ಜಗಳಕ್ಕಿಳಿದಿದ್ದಲ್ಲದೇ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದೆ. ಭಾರತ-ಚೀನಾ ಸೇನೆ ನಡುವಿನ ಈ ತಿಕ್ಕಾಟ ತಾತ್ಕಾಲಿಕವಾಗಿತ್ತು ಎಂದು ಭಾರತೀಯ ಸೇನೆ ವಕ್ತಾರರು ಸ್ಪಷ್ಟಪಡಿಸಿದ್ದಾರೆ ಪರಸ್ಪರ ಕೈ ಮಿಲಾಯಿಸಿದ್ದರಿಂದ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಜತಾಂತ್ರಿಕ ಮಾತುಕತೆಯ ನಂತರ ಗಲಾಟೆ ಅಂತ್ಯಗೊಂಡಿದೆ’ ಎಂದು ತಿಳಿಸಿದ್ದಾರೆ.
ಏನಿದು ‘ನಾಕು ಲಾ’?: ‘ನಾಕು ಲಾ’ ಎಂಬುದು ಎರಡೂ ದೇಶಗಳನ್ನು ಸಂಪರ್ಕಿಸುವ ಒಂದು ಕಾಲುದಾರಿ ಸಾಗಿ ಹೋಗುವ ಜಾಗ. ಸಮುದ್ರಮಟ್ಟಕ್ಕಿಂತ ಸುಮಾರು 5,000 ಅಡಿಗಳಷ್ಟು ಎತ್ತರದಲ್ಲಿದೆ.
ಇಲ್ಲಿ ಭಾರತ ಮತ್ತು ಚೀನಾ ಸೈನಿಕರು ಪರಸ್ಪರ ಕಾವಲು ಕಾಯುತ್ತಿರುತ್ತಾರೆ. ಸಾಮಾನ್ಯವಾಗಿ ಭಾರತ, ಚೀನ ನಡುವಿನ ನೈಜ ಗಡಿ ರೇಖೆ (ಎಲ್‌ಎಸಿ) ಬಳಿಯಲ್ಲಿ ಆಗಾಗ ಎರಡೂ ದೇಶಗಳ ಸೈನಿಕರು ವಾದ-ವಿವಾದಗಳಲ್ಲಿ ತೊಡಗಿದ್ದುಂಟು. ಆದರೆ, ‘ನಾಕು ಲಾ’ ಸ್ಥಳ ಉತ್ತರ ಸಿಕ್ಕಿಂನಲ್ಲಿ ಹಿಂದೆ ಯಾವಾಗಲೂ ಇಂಥ ಘಟನೆ ನಡೆದಿರಲಿಲ್ಲ. ಈ ಪ್ರದೇಶದಲ್ಲಿ ಹೀಗಾಗಿರುವುದು ಇದೇ ಮೊದಲು.
ಪರಸ್ಪರ ಕೈ ಕೈ ಮಿಲಾಯಿಸಿದ ಉಭಯ ದೇಶಗಳ ಸೈನಿಕರು, ಕಲ್ಲುತೂರಾಟವನ್ನೂ ನಡೆಸಿದ್ದಾರೆ ಎಂದು ಸೇನೆ ತಿಳಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾರೆ.
– 2019ರಲ್ಲಿ “ಪಂಗ್ಯಾಂಗ್ ತ್ಸೋ’ ಸರೋವರದ ಬಳಿಯಲ್ಲಿ ಭಾರತ ಮತ್ತು ಚೀನದ ಸೈನಿಕರು ಪರಸ್ಪರ ಮುಖಾಮುಖಿಯಾಗಿದ್ದರು. ಆ ವಿವಾದ ಎರಡೂ ಕಡೆಯ ರಾಜತಾಂತ್ರಿಕ ಸಿಬಂದಿಯ ಮಾತುಕತೆ ಮೂಲಕ ಪರಿಹಾರವಾಯಿತು.
2018ರಲ್ಲಿ ಪ್ರಧಾನಿ ಮೋದಿ, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾಗವಹಿಸಿದ್ದ ಉಭಯ ದೇಶಗಳ ನಡುವಿನ ಅನಧಿಕೃತ ಸಮ್ಮೇಳನದಲ್ಲಿ ಭಾರತ-ಚೀನ ಸೈನಿಕರಿಗೆ ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೆಲವಾರು ಮಾರ್ಗಸೂಚಿಗಳನ್ನು ನಿಗದಿಗೊಳಿಸಲಾಗಿತ್ತು.
ಸದ್ಯ ಎರಡೂ ಕಡೆಯ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದು, ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಉಭಯ ದೇಶಗಳ ಸೈನಿಕರು ತಮ್ಮ ತಮ್ಮ ಪೋಸ್ಟ್‌ಗಳಿಗೆ ಮರಳಿದ್ದಾರೆ ಎನ್ನಲಾಗಿದೆ.
ಗಡಿಯಲ್ಲಿ ಕೈ ಕೈ ಮಿಲಾಯಿಸಿದ ಭಾರತ-ಚೀನಾ ಸೈನಿಕರು: ಎರಡೂ ದೇಶಗಳ ಸೈನಿಕರಿಗೆ ಗಾಯ
Published On: 11 May 2020, 08:25 PM
English Summary: indian, Chinese troops clash near Naku La in Sikkim sector
Share your comments