‘ಸ್ಥಳೀಯವಾಗಿ ಮೀನುಮರಿ ಉತ್ಪಾದನೆ ಹೆಚ್ಚಿಸಿ, ಇತರ ರಾಜ್ಯಗಳಿಂದ ತರಿಸಿಕೊಳ್ಳುವ ಮೀನಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶವಿದೆ’ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದರು.
ಅವರು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪದ ಮಾರ್ಕಂಡೇಯ ಜಲಾಶಯ, ಮೀನುಮರಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದರು.
ಇಲಾಖೆಗೆ ಸಂಬಂಧಿಸಿದಂತೆ ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಆಸ್ತಿಯಿದೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಗೂ ನೈಜ ಚಿತ್ರಣಕ್ಕೂ ವ್ಯತ್ಯಾಸವಿದ್ದು, ಖುದ್ದು ಪರಿಶೀಲಿಸಲು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಪ್ರವಾಸದ ಸಂದರ್ಭ ಇಲಾಖೆಯ ಕೆಲ ಅಧಿಕಾರಿಗಳಲ್ಲಿ ಅಜಾಗ್ರತೆ ಕಂಡುಬಂದಿದೆ. ಎಚ್ಚೆತ್ತುಕೊಳ್ಳಲು ಸೂಚಿಸಲಾಗಿದೆ. ತಿದ್ದಿಕೊಳ್ಳದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿವಿಧ ಸ್ಥಳಗಳಲ್ಲಿನ ಇಲಾಖೆಯ ಆಸ್ತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಬಳಿಕ ಎಲ್ಲೆಲ್ಲಿ ಯಾವ್ಯಾವ ಅಭಿವೃದ್ಧಿ ಕೆಲಸ ಮಾಡಬಹುದು ಎನ್ನುವುದನ್ನು ಅಂದಾಜಿಸಲಾಗುತ್ತದೆ. ಮೀನಮರಿ ಉತ್ಪಾದನೆ ಹೆಚ್ಚಿದರೆ, ಹಲವರಿಗೆ ಕೆಲಸ ಸಿಗಲಿದೆ. ಜತೆಗೆ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಮೀನು ಪೂರೈಕೆ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಟಾನಗೊ ಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದಲ್ಲಿ ಯಾವ್ಯಾವ ಯೋಜನೆಗಳಿವೆ ಎಂದು ತಿಳಿಸುವ ಬದಲು, ಯೋಜನೆ ಅನುಷ್ಠಾನಗೊಳಿಸಿ ಅದರಿಂದ ಜನರಿಗೆ ಅನುಕೂಲ ಆಗಿರುವ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ತಹಶೀಲ್ದಾರ್ ಎಂ.ದಯಾನಂದ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಚಿಕ್ಕವೀರನಾಯಕ, ಸಹಾಯಕ ನಿರ್ದೇಶಕ ಸತೀಶ್, ಚಂದ್ರಶೇಖರ್, ಜೆಸಿಬಿ ಮುತ್ತು ಇದ್ದರು.
ಉತ್ಪಾದನೆ ಕುಂಠಿತ
ಮೀನುಮರಿ ಕೇಂದ್ರ ಆರಂಭವಾಗಿ 51 ವರ್ಷವಾಗಿದೆ. ಆರಂಭದಲ್ಲಿ ಇದ್ದ ಹಾಗೆಯೇ ಈಗಲೂ ಇದೆ. ಯಾವುದೇ ಅಭಿವೃದ್ಧಿಯಾಗಿಲ್ಲ. ನೀರು ಇಲ್ಲದೆ ಮೀನುಮರಿ ಉತ್ಪಾದನೆ ಕುಂಠಿತಗೊಂಡಿದೆ. ಕನಿಷ್ಠ ಸಮರ್ಪಕ ಸಂಪರ್ಕ ರಸ್ತೆಯಿಲ್ಲ ಎಂದು ಗ್ರಾಮಸ್ಥರು ದೂರಿದರು. ನೀರು ಇಲ್ಲದ ಕಾರಣ ಬೇಡಿಕೆಗೆ ತಕ್ಕಂತೆ ಮರಿ ಉತ್ಪಾದನೆ ಮಾಡಲಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಇಲ್ಲಿನ ಮಾರ್ಕಂಡೇಯ ಜಲಾಶಯ ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿದೆ. ಹಲ ಬಾರಿ ಸಚಿವರು ಇಲ್ಲಿಗೆ ಬಂದು ಹೋಗಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ಈ ಬಗ್ಗೆ ಕಾಳಜಿ ವಹಿಸಬೇಕು ಎನ್ನುವ ಪತ್ರಕರ್ತರ ಮನವಿಗೆ ಪ್ರತಿಕ್ರಯಿಸಿದ ಸಚಿವರು, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕೆ ಇಲಾಖೆ, ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದರು.
Share your comments