1. ಸುದ್ದಿಗಳು

ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ- ಸಂಸದ ಡಾ. ಉಮೇಶ ಜಾಧವ

ಕಲಬುರಗಿ ಜಿಲ್ಲೆಯಲ್ಲಿ ಜು.19ರವರೆಗೆ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ತುರ್ತುಸಭೆ ನಡೆಸಿ, ಪ್ರವಾಹ ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಅವರು ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಂಡರು.

ಕೇವಲ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಬಂದು ಸಮಸ್ಯೆ ಎದುರಾಗಲ್ಲ. ಕಲಬುರಗಿ ಮಹಾನಗರದ ವಿವಿಧ ಪ್ರದೇಶಗಳಲ್ಲಿಯೂ  ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ನಗರದ ವಿವಿಧ ಕೊಳಚೆ ಪ್ರದೇಶ ಹಾಗೂ ಗುಡಿಸಲಲ್ಲಿ ವಾಸಿಸುವ ಜನರ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕೆಂದು ಪಾಲಿಕೆ ಆಯುಕ್ತರಾದ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ಸೂಚಿಸಿದರು.

ಇದಲ್ಲದೇ, ಸ್ಲಂ ನಿವಾಸಿಗಳ ಆರೋಗ್ಯ ಸ್ಥಿತಿಗತಿ ಕುರಿತು ಶೀಘ್ರವೇ ವರದಿ ತಯಾರಿಸಲು ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಜಂಟಿಯಾಗಿ ವರದಿ ನೀಡಬೇಕೆಂದು ತಿಳಿಸಿದ ಸಂಸದರು, ಮಳೆ ಬಂದಾಗ ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಒಳಚರಂಡಿ ಸಮಸ್ಯೆ ಆಗದಂತೆ, ಮಳೆ ನೀರು ಸುಗಮವಾಗಿ ಹರಿದು ಹೋಗುವಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಬೆಳೆ ವಿಮೆ ಮುಂತಾದ ರೈತರ ಅಹವಾಲುಗಳಿಗೆ ತೊಡಕಾಗದಂತೆ ಅಧಿಕಾರಿಗಳು ನೋಡಿಕೊಂಡು ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು. ಇನ್ನು ಭಾರೀ ಮಳೆಯಿಂದ ಮನೆಗಳು ಬಿದ್ದರೆ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರ ನೆರವಿಗೆ  ಸ್ಪಂದಿಸಬೇಕು ಎಂದು ಹೇಳಿದರು. ರೈತರೇ ಸಮಸ್ಯೆ ಹೇಳುವ ಮುನ್ನ ಅಧಿಕಾರಿಗಳೇ ಖುದ್ದಾಗಿ ರೈತರ ಬಳಿಗೆ ತೆರಳಿ, ಪರಿಸ್ಥಿತಿ ಅವಲೋಕಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸಲಹೆ ಮಾಡಿದರು. ಇದಲ್ಲದೇ, ಪ್ರವಾಹ ಸಂದರ್ಭದಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದು ನೆರವಿಗೆ ಧಾವಿಸಲು ಜಿಲ್ಲಾಡಳಿತದಿಂದ ಈಗಾಗಲೇ ಸ್ಥಾಪಿಸಿರುವ ಸಹಾಯವಾಣಿ ಮತ್ತುಷ್ಟೂ ಚುರುಕಾಗಿ ಕೆಲಸ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು, ಪ್ರವಾಹ ಎದುರಿಸಲು ಸೂಕ್ತ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ನದಿ ಪಾತ್ರದ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು. ಕಾಲುವೆಗಳಿಂದ ಸುಗಮವಾಗ ನೀರು ಹರಿದು ಹೋಗುವಂತೆ ಸ್ವಚ್ಛಗೊಳಿಸಲಾಗಿದೆ ಎಂದ ಜಿಲ್ಲಾಧಿಕಾರಿಗಳು, ಪ್ರವಾಹ ಎದುರಾದರೆ ರಕ್ಷಣೆಗೆಂದು ಪ್ರತಿ ತಾಲೂಕಿನಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಯೊAದಿಗೆ ಸ್ವಯಂ ಸೇವಕರು ಇರಲಿದ್ದು, ಅವರಿಗೆ ಈಗಾಗಲೇ ತರಬೇತಿ ನೀಡಿ, ರಕ್ಷಣಾ ಉಪಕರಣಗಳನ್ನು ಒದಗಿಸಲಾಗಿದೆ ಎಂದರು.

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಪ್ರತಿ ತಾಲೂಕಿನಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಕೇಂದ್ರದಲ್ಲಿ ಸೇರ್ಪಡೆಯಾಗುವ  ಸಾರ್ವಜನಿಕರಿಗೆ   200 ಅಗತ್ಯ ಕಿಟ್‌ಗಳನ್ನು ನೀಡಲು ಸಂಗ್ರಹಿಸಿಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ  ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಂ ಜಾರ್ಜ್, ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ, ಕೃಷಿ, ನೀರಾವರಿ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳು ಸೇರಿದಂತೆ ಇನ್ನಿತರ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Published On: 15 July 2021, 09:41 PM English Summary: Heavy rainfall till July 19th

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.