1. ಸುದ್ದಿಗಳು

7 ನೇ ವೇತನ ಆಯೋಗ: ಒಕ್ಕೂಟ ಸರ್ಕಾರದ ನೌಕರರಿಗೆ 28% ಡಿಎ ಹೆಚ್ಚಳ

ಕೇಂದ್ರ ಸರಕಾರಿ ಉದ್ಯೋಗಿಗಳು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ.   ಕೇಂದ್ರ ಸರಕಾರಿ ಉದ್ಯೋಗಿಗಳ ತುಟ್ಟಿ ಭತ್ಯೆ ಶೇ 17ರಿಂದ ಶೇ 28ರವರೆಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು ಜುಲೈ 1ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರುತ್ತಿದೆ.

ಹಲವಾರು ಅನುಮೋದನೆಗಳು ಅಗತ್ಯವಿರುವುದರಿಂದ ಉದ್ಯೋಗಿಗಳಿಗೆ ಹೆಚ್ಚಳವಾದ ಡಿಎ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹಿಂದಿನ ವರದಿಯು ಸೂಚಿಸಿದ್ದವು. ಆದರೆ ಇದೀಗ ಅಂತಹ ಯಾವುದೇ ವಿಳಂಬ ಇರುವುದಿಲ್ಲ ಎನ್ನಲಾಗಿದ್ದು, ಒಕ್ಕೂಟ ಸರ್ಕಾರದ ನೌಕರರು ಜುಲೈ 1, 2021 ರಿಂದ ಇರುವ ಬಾಕಿಯನ್ನು ಪಡೆಯುವ ಸಾಧ್ಯತೆಯಿದೆ.

ಈ ನಿರ್ಧಾರವು ಕೇಂದ್ರ ಸರಕಾರದ ಲಕ್ಷಾಂತರ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ನೆಮ್ಮದಿ ನೀಡಿದೆ. ತುಟ್ಟಿ ಭತ್ಯೆ ಹೆಚ್ಚಳದ ಸುದ್ದಿಗಾಗಿ ಅವರು ಹಲವು ತಿಂಗಳಿನಿಂದ ಎದುರು ನೋಡುತ್ತಿದ್ದರು. ಈ ನಿರ್ಧಾರವು ಸರಕಾರದ ಬೊಕ್ಕಸಕ್ಕೆ ಅಂದಾಜು 34,400 ಕೋಟಿ ರೂಪಾಯಿ ಹೊರೆ ಉಂಟುಮಾಡಲಿದೆ.

'ಕೇಂದ್ರ ಸರಕಾರಿ ನೌಕರರ ಡಿಯರ್‌ನೆಸ್ ಅಲೋಯನ್ಸ್ ಮತ್ತು ಪಿಂಚಣಿದಾರರ ಡಿಯರ್‌ನೆಸ್ ರಿಲೀಫ್ ಅನ್ನು ಜುಲೈ 1ರಿಂದ ಅನ್ವಯವಾಗುವಂತೆ ಶೇ 28ರಷ್ಟು ಹೆಚ್ಚಿಸಲು ಸರಕಾರ ತೀರ್ಮಾನಿಸಿದೆ. ಮೂಲ ವೇತನ/ಪಿಂಚಣಿಯಲ್ಲಿ ಹಾಲಿ ಇರುವ ಶೇ 17ರ ಮೇಲೆ ಶೇ 11ರಷ್ಟು ಈ ಹೆಚ್ಚಳ ಜಾರಿಯಾಗಲಿದೆ' ಎಂದು ಸರಕಾರದ ಹೇಳಿಕೆ ತಿಳಿಸಿದೆ.

ಜುಲೈ 1, 2021ರಿಂದ ಅನ್ವಯ ಆಗುವಂತೆಯೇ ಆ ಬಾಕಿ ಬರಲಿದೆ. ಸಂಪುಟದಿಂದ ಅನುಮತಿ ದೊರೆಯುವ ಮೊದಲಿಗೆ ಕನಿಷ್ಠ ಮೂರು ಡಿಎ ಕಂತು ಬಾಕಿ ಇತ್ತು. ಎರಡು ಕಳೆದ ವರ್ಷದ್ದು ಮತ್ತು ಈ ವರ್ಷದ್ದು ಒಂದು (1.1.2020, 1.7.2020 ಮತ್ತು 1.1.2021). ಮೂರು ಕಂತಿನ ಬಾಕಿ ಸೇರಿಸಿ ಶೇ 11ರಷ್ಟು ಡಿಎ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ.

ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸಿನಂತೆ ಡಿಎ ಮತ್ತು ಡಿಆರ್ ಸೌಲಭ್ಯಗಳ ಪ್ರಯೋಜನಗಳು ಜುಲೈ 1ರಿಂದ ಜಾರಿಯಾಗಲಿದೆ ಎಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಡಿಎ ಮತ್ತು ಡಿಆರ್ ಹೆಚ್ಚಳವು ಜುಲೈ 1ರಿಂದ ಅನ್ವಯವಾಗುತ್ತಿದೆ ಎಂಬ ಸುತ್ತೋಲೆಗಳು ಹರಿದಾಡಿದ್ದವು. ಆದರೆ ಇದು ಸುಳ್ಳು ಎಂದು ಸರಕಾರ ಸ್ಪಷ್ಟನೆ ನೀಡಿತ್ತು. ಅದಾಗಿ ಮೂರು ವಾರಗಳಲ್ಲಿಯೇ ಡಿಎ ಹೆಚ್ಚಳದ ಖುಷಿ ಸುದ್ದಿ ನೀಡಿದೆ.

ಸುಮಾರು 48,34,000 ಕೇಂದ್ರ ಸರಕಾರಿ ಉದ್ಯೋಗಿಗಳು ಹಾಗೂ 65,26,000 ಪಿಂಚಣಿದಾರರಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆಯಿದೆ. ಡಿಎ ಮತ್ತು ಡಿಆರ್‌ಗಳನ್ನು ನಾಲ್ಕು ಅವಧಿಗಳಲ್ಲಿ ಹೆಚ್ಚಿಳ ಮಾಡಬೇಕಿತ್ತು. 2020ರ ಜನವರಿ 1, 2020ರ ಜುಲೈ 1, 2021ರ ಜನವರಿ 1 ಮತ್ತು 2021ರ ಜುಲೈ 1ರಂದು ಹೆಚ್ಚಿಸಬೇಕಿತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ 2020ರ ಏಪ್ರಿಲ್ 23ರಂದು ಆ ವರ್ಷದ ಜನವರಿ 1ರಿಂದ ಜಾರಿಯಾಗಿದ್ದ ಡಿಎ ಮತ್ತು ಡಿಆರ್ ಏರಿಕೆಯನ್ನು ತಡೆಹಿಡಿದಿದ್ದ ಸರಕಾರ, 2021ರ ಜುಲೈ 1ರವರೆಗೂ ಅದನ್ನು ನೀಡದೆ ಇರಲು ತೀರ್ಮಾನಿಸಿತ್ತು. 2021ರ ಜುಲೈನಿಂದಲೇ ಹಿಂಬಾಕಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Published On: 15 July 2021, 02:25 PM English Summary: 7th Pay Commission: Centre hikes DA for central govt employees to 28%

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2023 Krishi Jagran Media Group. All Rights Reserved.