ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 24 ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಸುತ್ತಮುತ್ತ ಗುಡುಗು ಮಿಂಚು ಸಹಿತ ಸಾಧಾರಣ ಮಳೆ (Rain) ಯಾಗಲಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಲಿದೆ.
ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುತ್ತದೆ. ರಾಜ್ಯದ ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 3.3 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಹೀಗಾಗಿ ಇದೇ 24 ಮತ್ತು 25ರಂದು ಮೀನುಗಾರರು (Fishers) ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.
ಶಿವಮೊಗ್ಗ ಯಾದಗಿರಿಯಲ್ಲಿ ಮಳೆಯ ಆರ್ಭಟ:
ಶಿವಮೊಗ್ಗ, ಯಾದಗಿರಿ ಜಿಲ್ಲೆಯಲ್ಲಿ ಗುರುವಾರ ವರುಣನ ಆರ್ಭಟ (Heavy rain) ಜೋರಾ ಗಿದ್ದು, ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಾಜ್ಯದ ಉಳಿದ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ.ಶಿವಮೊಗ್ಗ ನಗರ ಸುತ್ತಮುತ್ತ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಕೋಣಂದೂರು, ಹೊಸನಗರ, ರಿಪ್ಪನ್‌ಪೇಟೆ, ಸಾಗರ, ಭದ್ರಾವತಿಯಲ್ಲಿ ರಭಸವಾಗಿ ಮಳೆ ಸುರಿದಿದೆ. ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಗುಡಿಸಲುಗಳಿಗೆ ನೀರು ನುಗ್ಗಿದೆ. ಕೆಲವು ಗ್ರಾಮಗಳಲ್ಲಿ ಮನೆ ಗೋಡೆಗಳು ಕುಸಿದಿವೆ ಕಲಬುರಗಿ, ಬೀದರ್, ಕೊಡಗು ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಮಡಿಕೇರಿ ಹಾಗೂ ಸುಂಟಿಕೊಪ್ಪದಲ್ಲಿ ತುಸು ಹೊತ್ತು ಬಿರುಸಿನ ಮಳೆಯಾಗಿದೆ. ಮೈಸೂರು ಜಿಲ್ಲೆಯ ತಲಕಾಡು ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ತುಮಕೂರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
ತಂದೆ-ಮಗು ನಾಪತ್ತೆ:
ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿ ಸಮೀಪದ ಗುಂಡಲಬಂಡಾ ಜಲಪಾತ ವೀಕ್ಷಣೆಗೆ ಬಂದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ತಂದೆ ಹಾಗೂ 5 ವರ್ಷದ ಮಗು ಗುರುವಾರ ನೀರು ಪಾಲಾಗಿದ್ದಾರೆ. ಏಕಾಏಕಿ ಭಾರೀ ಪ್ರಮಾಣದ ನೀರು ಹರಿದು ಬಂದಿದ್ದರಿಂದ ದೇವದುರ್ಗ ತಾಲೂಕು ಮಂಡಲಗುಂಡ ಗ್ರಾಮದ ಕೃಷ್ಣಪ್ಪ ಮತ್ತು ಇವರ ಮಗ ಧನುಷ್ ನೀರಲ್ಲಿ ಕೊಚ್ಚಿಹೋಗಿದ್ದು, ಹುಡುಕಾಟ ನಡೆದಿದೆ.
Share your comments