1. ಸುದ್ದಿಗಳು

ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ, ಗಾಳಿ ಮಳೆಗೆ 250 ಮನೆಗಳಿಗೆ ಹಾನಿ

ರಾಜ್ಯದ ಮಲೆನಾಡು ಕರಾವಳಿ ಭಾಗಗಳಲ್ಲಿ ಮಳೆಯ ಅಬ್ಬರ ಕಡಿಮೆಗೊಂಡರೂ ಸಹ ಕಲ್ಯಾಣ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿದೆ. ನೂರಾರು ಮನೆಗಳು ಕುಸಿದು ಜನಜೀವನ ಅಸ್ತವ್ಯಸ್ತವಾಗಿದೆ. ಸಾವಿರಾರು ಎಕರೆ ಬೆಳೆ ಜಲಾವೃತವಾಗಿದೆ. ಕಟಾವಿಗೆ ಬಂದ ಈರುಳ್ಳಿ, ಶೇಂಗಾ, ಹತ್ತಿ, ಸೋಯಾಬಿನ್, ಹೆಸರು, ಭತ್ತ ಮತ್ತಿತರ ಬೆಳೆಗಳು ನೀರು ಪಾಲಾಗಿವೆ.

ನೆರೆ ಆರ್ಭಟಕ್ಕೆ ತತ್ತರಿಸಿ ಈಗಷ್ಟೇ ನಿಟ್ಟುಸಿರುಬಿಡುತ್ತಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೆ ಗಾಯದ ಮೇಲೆ ಬರೆ ಎಳೆದಂತಿದೆ. ಶುಕ್ರವಾರ ರಾತ್ರಿ ಬಿಟ್ಟುಬಿಡದೆ ಸುರಿದ ಮಳೆಯಿಂದ ಜನಜೀವನ ನಲುಗಿಹೋಗಿದ್ದು, ಹತ್ತಿ, ಭತ್ತ, ತೊಗರಿ, ಮೆಣಸಿನಕಾಯಿ ಸೇರಿ ಲಕ್ಷಾಂತರ ಹೆಕ್ಟೆರ್ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಬೆಳೆ ಕೊಚ್ಚಿಹೋಗಿದೆ.

ಕಲ್ಯಾಣ ಕರ್ನಾಟಕ ಸೇರಿ ಉತ್ತರ ಕರ್ನಾಟಕದ 11 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ವ್ಯಾಪಕ ಮಳೆಯಾಗಿದೆ.  ಕಲಬುರಗಿ ಜಿಲ್ಲೆಯೊಂದರಲ್ಲಿಯೇ ಏಲಕ್ಕೂ ಹೆಚ್ಚು ಮನೆಗಳು ಜಲಾವೃತ್ತವಾಗಿವೆ.

ಕಲ್ಯಾಣ ಕರ್ನಾಟಕದಲ್ಲಿ ಜೋರು:

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಎಲ್ಲೆರಿ ಗ್ರಾಮದಲ್ಲಿ ಹಳ್ಳ ದಾಟುತ್ತಿದ್ದಾಗ ದ್ವಿಚಕ್ರ ವಾಹನವೊಂದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸವಾರರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಒಂಟಗೋಡಿ ಬಳಿ ಬೈಕ್‌ ಸವಾರ, ಡಿಸಿಸಿ ಬ್ಯಾಂಕ್‌ ಮುಧೋಳ ಶಾಖೆಯ ನೌಕರ ಸಂತೋಷ ಅಡವಿ (27) ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಬಳಿ ಲಾರಿಯೊಂದು ನೀರಿನಲ್ಲಿ ಕೊಚ್ಚಿಹೋಗಿದೆ. . ಕಲಬುರಗಿ -ಸೇಡಂ ಮತ್ತು ಚಿಂಚೋಳಿ -ಬೀದರ್‌ ನಡುವಿನ ರಸ್ತೆ ಸಂಚಾರ ಕಡಿತವಾಗಿದೆ. ಸೇಡಂ ತಾಲೂಕಿನ ಕಾಗಿಣಾ ನದಿಯ ಮಳಖೇಡ ಬಳಿಯ ಸೇತುವೆ ಮುಳುಗಿದೆ.

ಗಡಿನಾಡು ಬೀದರ್‌ನ ಬಹುತೇಕ ತಾಲೂಕುಗಳು ಮಳೆಯಿಂದ ನಲುಗಿವೆ. ನೂರಾರು ಮನೆಗಳು ಕುಸಿದಿವೆ. ಎನಗುಂದಾ-ಚಿಂತಾಕಿ, ಕಮಲನಗರ- ತೋರಣಾ ಮತ್ತು ಬೆಳಕುಣಿ ಸೇತುವೆಗಳು ಮುಳುಗಡೆಯಾಗಿ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ರಾಯಚೂರು ಜಿಲ್ಲೆಯಲ್ಲೂ ಮಳೆ ಜೋರಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗ್ರಾಮೀಣ ಭಾಗಳು ದ್ವೀಪದಂತಾಗಿವೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಕೃಷ್ಣಾ ನದಿಗೆ 1.55 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗಿದೆ. ಯಾದಗಿರಿ ಮತ್ತು ಕಲಬುರಗಿ ನದಿತೀರದ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಬೆಳಗಾವಿಯಲ್ಲೂ ನದಿಗಳ ಒಳಹರಿವು ಹೆಚ್ಚಳವಾಗಿ ತೀರ ಪ್ರದೇಶಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ, ಗದಗ ಜಿಲ್ಲೆಯಲ್ಲೂ ಸತತ ಮಳೆಯಿಂದಾಗಿ ನೂರಾರು ಎಕರೆ ಬೆಳೆ ನಾಶವಾಗಿದ್ದು,. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮಧ್ಯ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ಕಲ್ಯಾಣ ಕರ್ನಾಟಕದ ಬಳ್ಳಾರಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

Published On: 27 September 2020, 09:18 AM English Summary: Heavy rain in north Karnataka lacks of acre crop damage

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.