1. ಸುದ್ದಿಗಳು

48 ಗಂಟೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ -ರೆಡ್ ಅಲರ್ಟ್

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮುಂದಿನ 48 ಗಂಟೆಗಳ ಕಾಲ ಬೀದರ್, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಕ್ಟೋಬರ್ 14ಮತ್ತು 15ರಂದು ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಲಕ್ಷಣಗಳಿದ್ದು, ಎಚ್ಚರಿಕೆಯಿಂದ ಇರುವಂತೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.  ಜಿಲ್ಲೆಯಲ್ಲಿ ಐದು ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಬೀಳುವ ಸಂಭವ ಇದೆ. ಗರಿಷ್ಠ ಉಷ್ಣಾಂಶ 24 ರಿಂದ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ರಿಂದ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪ್ರತಿ ಗಂಟೆಗೆ 3 ರಿಂದ 7 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ

ಇಲಾಖೆಯ ಮುನ್ಸೂಚನೆಯಂತೆಯೇ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಬಿರುಸು ಪಡೆದುಕೊಂಡು ತಡರಾತ್ರಿಯವರೆಗೂ ಸುರಿಯಿತು. ರಾತ್ರಿ 8ಕ್ಕೆ ನಗರದಲ್ಲಿ 26 ಮಿಲಿ ಮೀಟರ್‌ ಮಳೆ ದಾಖಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆಯಿಂದ ತತ್ತರಿಸಿರುವ ಜಿಲ್ಲೆಯ ಜನತೆಗೆ ಇನ್ನೂ ಎರಡು ದಿನ ಭಾರಿ ಮಳೆ ಬೀಳುವ ಮುನ್ಸೂಚನೆಯಿಂದಾಗಿ ಆತಂಕ ಸೃಷ್ಟಿಯಾಗಿದೆ. ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕಂದಾಯ ಇಲಾಖೆ, ವಿಪತ್ತು ನಿರ್ವಹಣಾ ಶಾಖೆ, ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಸೂಚನೆ ನೀಡಿದೆ.

ಬುಧವಾರ ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆಯಾಗುತ್ತಲೇ ಇದೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ನಗರದ ರಸ್ತೆಗಳಲ್ಲಿ ಕಾಲುವೆಗಳಂತೆ ಭಾಸವಾದವು.

ಕಲಬುರಗಿ ಜಿಲ್ಲೆಯ ಪೂಜಾ ಕಾಲೋನಿಯಲ್ಲಿ ಮಳೆ ನೀರು ನದಿಯಂತೆ ಹರಿಯುತ್ತಿರುವುದು.

ಜಿಲ್ಲೆಯಲ್ಲಿ ವ್ಯಾಪಕ ಮಳೆ:ಜಲಾಶಯಗಳಿಂದ ನದಿಗೆ ನೀರು ಬಿಡುಗಡೆ

ಜಿಲ್ಲೆಯಾದ್ಯಂತ ಮಂಗಳವಾರ ತಡರಾತ್ರಿ ವ್ಯಾಪಕ ಮಳೆ ಸುರಿದ ಪರಿಣಾಮ ಜಿಲ್ಲೆಯ ಬಹುತೇಕ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿರುವುದರಿಂದ ನದಿಗೆ ನೀರು ಹರಿ ಬಿಡಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತರ ಜಗನ್ನಾಥ ಹಾಲಿಂಗೆ ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 8 ಗಂಟೆಗೆ ಗಂಡೋರಿನಾಲಾ ಜಲಾಶಯಕ್ಕೆ ಒಳಹರಿವು 35000 ಕ್ಯುಸೆಕ್ ನೀರು ಇದ್ದು, 30000 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಆಳಂದ ತಾಲೂಕಿನ ಅಮರ್ಜಾ ಜಲಾಶಯಕ್ಕೆ ಒಳಹರಿವು 15000 ಕ್ಯುಸೆಕ್ ನೀರು ಇದ್ದು, 13000 ಕ್ಯುಸೆಕ್ ನೀರನ್ನು ಬಿಡಲಾಗಿದೆ.ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ಒಳಹರಿವು 70000 ಕ್ಯುಸೆಕ್ ನೀರು ಇದ್ದು, ಅಷ್ಟೆ ಪ್ರಮಾಣದ ನೀರನ್ನು ಭೀಮಾ ನದಿಗೆ ಬಿಡಲಾಗಿದೆ. ಬೆಣ್ಣೆತೋರಾ ಜಲಾಶಯಕ್ಕೆ ಒಳಹರಿವು 80510 ಕ್ಯುಸೆಕ್ ಇದ್ದು, 59350 ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ.ಲೋವರ್ ಮುಲ್ಲಾಮಾರಿ ಜಲಾಶಯಕ್ಕೆ 38500 ಕ್ಯುಸೆಕ್ ನೀರು ಒಳಹರಿವಿದ್ದು,57000 ಕ್ಯುಸೆಕ್ ನೀರು ಹೊರಬಿಡಲಾಗಿದೆ.ಚಿಂಚೋಳಿ ತಾಲೂಕಿನ ಚಂದ್ರಮಪಳ್ಳಿ ಜಲಾಶಯದ ಒಳ ಹರಿವು 6395 ಕ್ಯುಸೆಕ್ ಇದ್ದರೆ, ಹೊರ ಹರಿವು 6125 ಕ್ಯುಸೆಕ್ ಇದೆ.ಅಪ್ಪರ ಮುಲ್ಲಾಮಾರಿ ಜಲಾಶಯದಲ್ಲಿ 13020 ಕ್ಯುಸೆಕ್ ನೀರು ಒಳ ಹರಿವಿದ್ದು, ಅಷ್ಟೆ ಪ್ರಮಾಣದ ನೀರು ಹೊರ ಬಿಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ 3-4 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ನದಿ ಪಾತ್ರದ ಜನರು ನದಿ ಕಡೆಗೆ ಹೋಗಬಾರದು. ತಮ್ಮ ಜಾನುವಾರಗಳನ್ನು ಸಹ ನದಿ ದಂಡೆಗೆ‌ ಬಿಡದಂತೆ ಹಾಗೂ ತುಂಬಾ ಎಚ್ಚರಿಕೆಯಿಂದಿರುವಂತೆ ಜಗನ್ನಾಥ ಹಾಲಿಂಗೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ..

Published On: 14 October 2020, 04:11 PM English Summary: Heavy rain alert next 48 hours in kalyana karnataka districts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.