1. ಸುದ್ದಿಗಳು

ರಾಜ್ಯ ಸರ್ಕಾರದಿಂದ ಸಿಹಿಸುದ್ದಿ: ಮನೆ ಕಟ್ಟಿಕೊಳ್ಳಲು ಬಡವರಿಗೆ ನೀಡುತ್ತಿದ್ದ ಸಬ್ಸಿಡಿ 3ಲಕ್ಷಕ್ಕೆ ಹೆಚ್ಚಳ!

Kalmesh T
Kalmesh T
The subsidy given to the poor to build a house has increased to 3 lakh!

1-

ವಸತಿ ರಹಿತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ವಸತಿ ಯೋಜನೆಯಡಿ ನೀಡುತ್ತಿದ್ದ ಸಬ್ಸಿಡಿ 1 ಲಕ್ಷ 20 ಸಾವಿರದಿಂದ 3 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲಿರುವ ವಸತಿ ರಹಿತ ಬಿಪಿಎಲ್‌ ಕುಟುಂಬಗಳಿಗೆ ನೀಡುವ ಹಲವು ವಸತಿ ಯೋಜನೆಗಳ ಸಬ್ಸಿಡಿಯನ್ನು ದುಪ್ಪಟ್ಟು ಮಾಡಲು ಸರ್ಕಾರ ಮುಂದಾಗಿದೆ. 

ಗ್ರಾಮೀಣ ಭಾಗದವರಿಗೆ 3 ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶಗಳಲ್ಲಿ 4 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತಿದೆ.  ಸದ್ಯ ಗ್ರಾಮೀಣ ಭಾಗದಲ್ಲಿ 1.20 ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶಗಳಲ್ಲಿ 2.70 ಲಕ್ಷ ರೂಪಾಯಿಯನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿತ್ತು.

ಆದರೆ, ಇದೀಗ ಈ ಯೋಜನೆಗಳ ಸಬ್ಸಿಡಿ ಮೊತ್ತ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಬಡವರು ಸ್ವಂತ ಮನೆ ಕಟ್ಟುವ ಕನಸು ನನಸು ಮಾಡಿಕೊಳ್ಳಲು ಸಾಲದ ಸುಳಿಗೆ ಸಿಲುಕಬಾರದು.

ಇದರಿಂದ ಅವರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಮೊತ್ತವನ್ನು ಎಲ್ಲ ವರ್ಗದ ಫಲಾನುಭವಿಗಳಿಗೆ ಸರಿಸಮನಾಗಿ 3 ಲಕ್ಷ ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.

2-

ಕೇಂದ್ರ ಸಚಿವ ಪರ್ಶೋತ್ತಮ್ ರೂಪಾಲಾ ಅವರು ಇಂದು ಕೇರಳದ ತಿರುವನಂತಪುರಂನಲ್ಲಿ 29 ಸಂಚಾರಿ ಪಶುವೈದ್ಯಕೀಯ ಘಟಕಗಳು ಮತ್ತು ಕೇಂದ್ರೀಕೃತ ಕಾಲ್ ಸೆಂಟರ್ ಅನ್ನು ಉದ್ಘಾಟಿಸಲಿದ್ದಾರೆ.

MVUಗಳನ್ನು ಏಕರೂಪದ ಸಹಾಯವಾಣಿ ಸಂಖ್ಯೆ 1962 ನೊಂದಿಗೆ ಕೇಂದ್ರೀಕೃತ ಕಾಲ್ ಸೆಂಟರ್ ಮೂಲಕ ನಿರ್ವಹಿಸಲಾಗುತ್ತದೆ. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್ ರೂಪಾಲಾ ಅವರು, ಕೇರಳದ ಜಾನುವಾರು ರೈತರ ಅನುಕೂಲಕ್ಕಾಗಿ ಇವುಗಳನ್ನು ಉದ್ಘಾಟಿಸಲಿದ್ದಾರೆ. ಈ MVUಗಳನ್ನು ಏಕರೂಪದ ಸಹಾಯವಾಣಿಯನ್ನು ಕೇಂದ್ರೀಕೃತ ಕಾಲ್ ಸೆಂಟರ್ ಮೂಲಕ ನಿರ್ವಹಿಸಲಾಗುತ್ತದೆ.

ಇದು ಜಾನುವಾರು ಸಾಕುವವರು / ಪ್ರಾಣಿಗಳ ಮಾಲೀಕರಿಂದ ಕರೆಗಳನ್ನು ಸ್ವೀಕರಿಸುತ್ತದೆ. ಪಶುವೈದ್ಯರು ತುರ್ತು ಪರಿಸ್ಥಿತಿಯ ಆಧಾರದ ಮೇಲೆ ಎಲ್ಲಾ ಪ್ರಕರಣಗಳಿಗೆ ಆದ್ಯತೆ ನೀಡುತ್ತಾರೆ. MVUಗಳು ರೋಗನಿರ್ಣಯದ ಚಿಕಿತ್ಸೆ, ವ್ಯಾಕ್ಸಿನೇಷನ್, ಕೃತಕ ಗರ್ಭಧಾರಣೆ, ಸಣ್ಣ ಶಸ್ತ್ರಚಿಕಿತ್ಸೆ, ಆಡಿಯೋ-ದೃಶ್ಯ ಸಾಧನಗಳು ಮತ್ತು ವಿಸ್ತರಣಾ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ಒದಗಿಸುತ್ತವೆ.

3-

ಅಗ್ರಿ ಟಾಕ್‌ ಶೋ ಏರ್ಪಡಿಸುವ ನಿಟ್ಟಿನಲ್ಲಿ ಆಸ್ತಾ ಸರ್ದಾನ್‌ ಮತ್ತು ಕೃಷಿ ಜಾಗರಣ ಮಾಧ್ಯಮ ನಡುವೆ ನಿನ್ನೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಭಾರತದ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಹಿರಿಯ ವಕೀಲರಾದ ವಿಜಯ್ ಸರ್ದಾನ ಮತ್ತು ಕೃಷಿ ಜಾಗರಣ ರೈತರನ್ನು ಕೇಂದ್ರೀಕರಿಸುವ ಟಾಕ್ ಶೋ ವನ್ನು

ಒಟ್ಟಿಗೆ ಆಯೋಜಿಸುವ ಉದ್ದೇಶದಿಂದ ಕೈ ಜೋಡಿಸಿವೆ. ಈ ಕಾರ್ಯಕ್ರಮವು ಕೃಷಿ ತಜ್ಞರು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಕೃಷಿ ಸಮಸ್ಯೆ ಚರ್ಚಿಸಲು ರೈತರಿಗೆ ವೇದಿಕೆಯಾಗಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ರೈತರು ಮತ್ತು ಕೃಷಿ ವಲಯದಲ್ಲಿ ಕೆಲಸ ಮಾಡುವವರು ತಮ್ಮ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರವನ್ನು ಕಂಡುಕೊಳ್ಳಲು ಕ್ಷೇತ್ರದ ತಜ್ಞರನ್ನು ಸಂಪರ್ಕಿಸಲು ಇದು ಬಹುದೊಡ್ಡ ವೇದಿಕೆ ಆಗಲಿದೆ. 

ಈ ನಿಟ್ಟಿನಲ್ಲಿ ಕೃಷಿ ಜಾಗರಣದ ಪ್ರಧಾನ ಸಂಪಾದಕ ಎಂ.ಸಿ ಡೊಮಿನಿಕ್ ಮತ್ತು  ಆಸ್ತಾ ಸಾರ್ದಾನ್‌ ಅಚೀವರ್ಸ್ ಆಫ್ ರಿಸೋರ್ಸ್ ನಡುವೆ ಬುಧವಾರ ನವದೆಹಲಿಯಲ್ಲಿ ಒಪ್ಪಂದ ಪತ್ರಕ್ಕೆ ಸಹಿಹಾಕಲಾಯಿತು. 

ಒಡಂಬಡಿಕೆ ಒಪ್ಪಂದದ ನಂತರ ಮಾತನಾಡಿದ ಎಂ.ಸಿ ಡೊಮಿನಿಕ್‌ ಅವರು, ವಿಜಯ್ ಸರ್ದಾನ ಅವರು ಭಾರತೀಯ ಕೃಷಿ ವಲಯದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರುವಾಸಿಯಾಗಿದ್ದಾರೆ ಎಂದರು.

ಈ ಚರ್ಚಾ ಕಾರ್ಯಕ್ರಮವು ಮುಂಬರುವ ದಿನಗಳಲ್ಲಿ ಉತ್ತಮ ಯೋಜನೆಯಾಗಿ ಹೊರಹೊಮ್ಮಲಿದೆ. ಏಕೆಂದರೆ ಇದು ಪ್ರಸ್ತುತ ಕೃಷಿ ಕ್ಷೇತ್ರದ ಅಭ್ಯಾಸಗಳನ್ನು ಕ್ರಾಂತಿಗೊಳಿಸುವ ಸಾಮರ್ಥ್ಯ ಹೊಂದಿದೆ. ಕೃಷಿ ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ರೈತರು ಸೇರಿದಂತೆ ಉದ್ಯಮದಲ್ಲಿನ ವಿವಿಧ ಪ್ರಭಾವಿಗಳ ಮಾಹಿತಿಯನ್ನು ಒಂದೇ ಸೂರಿನಡಿ ತರುವುದು ಇದರ ಉದ್ದೇಶವಾಗಿದೆ.

ಅಲ್ಲದೇ ಒಂದು ಭಾಗದಲ್ಲಿ ರೈತರು ಅನುಸರಿಸುವ ಸುಧಾರಣಾ ಕ್ರಮಗಳು, ನೂತನ ಆವಿಷ್ಕಾರಗಳು ಮತ್ತೊಂದು ಭಾಗದ ರೈತರಿಗೆ ಸಹಕಾರವಾಗಲಿದೆ. ಇಂದು ಡಿಜಿಟಲ್‌ ಮಾಧ್ಯಮದ ಪ್ರಭಾವದಿಂದಾಗಿ ಒಂದು ಭಾಗದ ಸುದ್ದಿ ಮತ್ತೊಂದು ಭಾಗಕ್ಕೆ ನೆರವಾಗಲಿದೆ. ಆದರೆ, ಅದನ್ನು ಸಮರ್ಪಕವಾಗಿ ಮುಟ್ಟಿಸುವ ಕೆಲಸವಾಗಬೇಕಿದೆ ಎಂದರು.

4-

ದೇಶದಲ್ಲಿಯೇ 2ನೇ ಅತಿದೊಡ್ಡ ದ್ರಾಕ್ಷಿ ಬೆಳೆಯುವ ರಾಜ್ಯ ಕರ್ನಾಟಕ. ವಾರ್ಷಿಕ ಅಂದಾಜು 5 ಲಕ್ಷ ಟನ್‌ ದ್ರಾಕ್ಷಿಗಳನ್ನ ಬೆಳೆಯಲಾಗುತ್ತದೆ. ಆದರೆ, ಇವುಗಳನ್ನು ಸಂರಕ್ಷಿಸಲು ಸೂಕ್ತವಾದ ಕೋಲ್ಡ್‌ ಸ್ಟೋರೆಜ್‌ ಘಟಕಗಳಿಲ್ಲ. ಇದರಿಂದಾಗಿ ಕರ್ನಾಟಕದ ದ್ರಾಕ್ಷಿ ಮಹಾರಾಷ್ಟ್ರದ ಪಾಲಾಗುತ್ತಿದೆ. ರಾಜ್ಯದ ರೈತರಿಗೆ ಬೇಕಾದ ಪೂರಕವಾದ ವಾತಾವರಣ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಇದರ ಲಾಭವನ್ನು ನೆರೆಯ ರಾಜ್ಯಗಳು ಪಡೆದುಕೊಳ್ಳಲು ಪ್ರಾರಂಭಿಸಿವೆ. ಒಟ್ಟು ಉತ್ಪನ್ನದ ಪೈಕಿ ಶೇ.25ರಷ್ಟು ಮಾತ್ರ ದ್ರಾಕ್ಷಿ ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ಘಟಕಗಳಿವೆ.

ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 20 ಸಾವಿರ ಹೆಕ್ಟೇರ್‌ಗಳಲ್ಲಿ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಅಲ್ಲದೇ ವಾರ್ಷಿಕವಾಗಿ ಅಂದಾಜು 5 ಲಕ್ಷ ಟನ್‌ ದ್ರಾಕ್ಷಿಗಳನ್ನ ಬೆಳೆಯಲಾಗುತ್ತದೆ. 4 ಲಕ್ಷ ಟನ್ ದ್ರಾಕ್ಷಿಗಳ ಪೈಕಿ 1.25 ಲಕ್ಷ ಟನ್ ದ್ರಾಕ್ಷಿಗಳನ್ನು ಬಳಕೆ ಮಾಡಲಾಗುತ್ತದೆ. ಉಳಿದ ದ್ರಾಕ್ಷಿಯನ್ನು ವೈನ್ ತಯಾರಿ ಮಾಡುವುದಕ್ಕೆ ಬಳಸಲಾಗುತ್ತಿದೆ.

ಆದರೆ, ರಾಜ್ಯದಲ್ಲಿ ಕೇವಲ 30 ಸಾವಿರ ಕೆಜಿ ಸಾಮರ್ಥ್ಯ ಇರುವಂತಹ ದ್ರಾಕ್ಷಿ ಸಂಗ್ರಹಣೆ ಮಾಡುವುದಕ್ಕೆ ಮಾತ್ರ ಕೋಲ್ಡ್ ಸ್ಟೋರೇಜ್ ಘಟಕದ ವ್ಯವಸ್ಥೆ ಇದೆ. ರಾಜ್ಯದ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗಳು ದ್ರಾಕ್ಷಿ ಬೆಳೆಗೆ ಅತ್ತ್ಯುತ್ತಮ ವಾತಾವರಣ ಸೃಷ್ಟಿಸುತ್ತದೆ. ರಾಜ್ಯ ಸರ್ಕಾರವು ಒಣದ್ರಾಕ್ಷಿಯಿಂದ ವಾರ್ಷಿಕ 2 ಸಾವಿರ ಕೋಟಿಗೂ ಹೆಚ್ಚು ಆದಾಯ ಗಳಿಸುತ್ತದೆ. ಆದರೆ, ಕೋಲ್ಡ್ ಸ್ಟೋರೇಜ್ ಘಟಕಗಳ ಕೊರತೆ ಇಲ್ಲಿ ಎದುರಾಗಿದ್ದು. ಇದರ ಲಾಭವನ್ನು ಮಹಾರಾಷ್ಟ್ರ ಬಳಕೆ ಮಾಡಿಕೊಳ್ಳುತ್ತಿದೆ.

5-

ಹೊಸ ವರ್ಷದ ಪ್ರಾರಂಭದಲ್ಲೇ ಚಿನ್ನ ಪ್ರಿಯರಿಗೆ ಕಹಿಸುದ್ದಿ ಸಿಕ್ಕಿದೆ. ಚಿನ್ನದ ದರದಲ್ಲಿ ಹೊಸ ವರ್ಷದ ಪ್ರಾರಂಭದಲ್ಲೇ ದರ ಹೆಚ್ಚಳವಾಗಿದೆ. ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 506 ರೂಪಾಯಿ ಹೆಚ್ಚಳವಾಗಿರುವುದು ವರದಿಯಾಗಿದೆ. ಈ ಮೂಲಕ ಒಟ್ಟಾರೆ ಚಿನ್ನದ ದರವು 55,940 ರೂಪಾಯಿ ತಲುಪಿದಂತಾಗಿದೆ. 

ಇನ್ನು ಜಾಗತಿಕ ಮಾರುಕಟ್ಟೆಗಳಲ್ಲಿಯೂ ಚಿನ್ನದ ಧಾರಣೆ ಹೆಚ್ಚಾಗಿರುವುದು ವರದಿಯಾಗಿದೆ. ಚಿನ್ನದ ದರ ಮಾತ್ರವಲ್ಲದೆ ಬೆಳ್ಳಿಯ ದರದಲ್ಲೂ ಏರಿಕೆ ಆಗಿರುವುದು ವರದಿಯಾಗಿದೆ. ಬೆಳ್ಳಿಯ ದರವು ಪ್ರತಿ ಕೆ.ಜಿ.ಗೆ 1,374 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಬೆಳ್ಳಿ ದರವೂ ಬರೋಬ್ಬರಿ 71,224 ರೂಪಾಯಿಗೆ ತಲುಪಿದೆ ಎಂದು HDFC ಸೆಕ್ಯುರಿಟೀಸ್‌ ವರದಿ ತಿಳಿಸಿದೆ.

6-

ಪ್ರಧಾನ ಮಂತ್ರಿ ಕುಸುಮ್ ಯೋಜನೆಯಡಿ 5 ಲಕ್ಷ ರೈತರಿಗೆ ಉಚಿತ ಸೋಲಾರ್ ಪಂಪ್‌ಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ರಾಜ್ಯದ 5 ಲಕ್ಷ ರೈತರಿಗೆ ಸೋಲಾರ್ ಪಂಪ್‌ಗಳನ್ನು ಒದಗಿಸಲು ಯೋಜಿಸುತ್ತಿದೆ.

ಕೇಂದ್ರ ಸರ್ಕಾರದ ಯೋಜನೆಯಡಿ ಸೋಲಾರ್ ಪಂಪ್‌ಗಳನ್ನು ವಿತರಿಸಲಾಗುವುದು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಫಡ್ನವೀಸ್, ಮಹಾರಾಷ್ಟ್ರ ಸರ್ಕಾರವು ಕೃಷಿ ಪಂಪ್‌ಗಳನ್ನು ಸ್ಥಾಪಿಸಲು ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಲು ಉದ್ದೇಶಿಸಿದೆ ಎಂದು ಹೇಳಿದರು.

ಈ ಕ್ರಮವು ಮಹಾರಾಷ್ಟ್ರದ ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಸೃಷ್ಟಿಗೆ ಉತ್ತೇಜನವನ್ನು ನೀಡುತ್ತದೆ ಎಂದರು. PM-KUSUM ಯೋಜನೆಯು ಭಾರತದಲ್ಲಿನ ರೈತರಿಗೆ ಇಂಧನ ಭದ್ರತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ.

7-

ಶುದ್ಧ ಇಂಧನ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯೊಂದಿಗೆ 19 ಸಾವಿರ ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ "ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ಗೆ"

ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ, ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ಗೆ ಅನುಮೋದನೆ ನೀಡಿದೆ

ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಿಷನ್‌ನ ಆರಂಭಿಕ ಬಜೆಟ್ 19 ಸಾವಿರ ಕೋಟಿ ಆಗಿರುತ್ತದೆ. 2030 ರ ವೇಳೆಗೆ ದೇಶದಲ್ಲಿ ಪ್ರತಿ ವರ್ಷ ಕನಿಷ್ಠ 5 ಮಿಲಿಯನ್ ಮೆಟ್ರಿಕ್ ಟನ್

ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಈ ಮಿಷನ್ ಹೊಂದಿದೆ . ಇದು 2030 ರ ವೇಳೆಗೆ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲು ಮತ್ತು 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಯೋಜಿಸಿದೆ.

8-

ಬೆಂಗಳೂರಿನ ದಾಸರಹಳ್ಳಿಯ MEI ಲೇಔಟ್‌ನ ಆಟದ ಮೈದಾನದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಸ್ವದೇಶಿ ಮೇಳ ಆಯೋಜಿಸಲಾಗಿತ್ತು. ಈ ಸ್ವದೇಶಿ ಮೇಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿ ಮಾತನಾಡಿದರು. “ಸ್ವದೇಶಿ ಜಾಗರಣ ಮಂಚ್ ಸಂಸ್ಥೆಯ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ. ಇದು ಯಾವತ್ತಿಗೂ ಸ್ವದೇಶಿ ಮಂತ್ರವನ್ನೆ ಜಪಿಸುತ್ತದೆ.

ಕಳೆದ ಬಾರಿ ಜಯನಗರದಲ್ಲಿ ಇದೇ ರೀತಿಯ ಮೇಳ ಮಾಡಿದ್ದರು. ಈ ಬಾರಿ ದಾಸರಹಳ್ಳಿಯಲ್ಲಿ ಮಾಡಲಾಗುತ್ತಿದೆ. ಜನರಿಗೆ ಸ್ವದೇಶಿ ಉತ್ಪನ್ನಗಳ ಬಗ್ಗೆ ಜಾಗೃತಿಯನ್ನು ಈ ಸಂಸ್ಥೆ ಮೂಡಿಸುತ್ತಿದೆ' ಎಂದರು. ವಿದೇಶಿ ವ್ಯಾಮೋಹದಲ್ಲಿ ವಿದೇಶಿ ವಸ್ತುಗಳನ್ನು ಖರೀದಿಸಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಹಿರಿಯರು ಬೀಸುವ ಕಲ್ಲು ಬೀಸುತ್ತ ತಮ್ಮ ತವರುಮನೆ ನೆನೆಯುತ್ತ ಹಾಡು ಹೇಳುತ್ತಿದ್ದರು.

ಹಾಡು ಕೇಳಿದರೆ ಕಣ್ಣಲ್ಲಿ ನೀರು ಬರುತ್ತಿತ್ತು. ಆ ಸಮಯದಲ್ಲಿ ಒಣಕೆ ಇತ್ತು. ಅದು ಈಗಿಲ್ಲ. ಎತ್ತುಗಳು ಇದ್ದವು. ರೈತ ಅವುಗಳನ್ನು ಹೂಡುತ್ತ ಹಾಡುಗಳನ್ನು ಹೇಳುತ್ತಿದ್ದ. ಯಾವ ದೇಶಕ್ಕೆ ಅಂತಹ ಸಂಸ್ಕೃತಿ ಇರುತ್ತದೆಯೋ ಆ ದೇಶಕ್ಕೆ ಭವಿಷ್ಯವಿದೆ. ಆಧುನಿಕ ಕಾಲದಲ್ಲಿ ನಮ್ಮ ದೇಶದ ವಸ್ತುಗಳನ್ನು ಉತ್ಪಾದನೆ ಮಾಡಿ, ಜನರಿಗೆ ತಲುಪಿಸುವ ಕೆಲಸವನ್ನು ಸ್ವದೇಶಿ ಜಾಗರಣ ಮಂಚ್ ಮಾಡುತ್ತಿದೆ. ಅವರಿಗೆ ಅಭಿನಂದನೆಗಳು' ಎಂದು ಸಂಸ್ಥೆಯನ್ನು ಪ್ರಶಂಸಿಸಿದರು.

9-

ದೇಶದಲ್ಲಿಯೇ ಮೊದಲ ಬಾರಿಗೆ ರೈತರ, ನೇಕಾರರ,ಮೀನುಗಾರರ, ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ದುಡಿಯುವ ವರ್ಗಗಳಿಗೆ ಹೆಚ್ಚು ಮನ್ನಣೆ ನೀಡಬೇಕೆಂಬುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಆದ್ದರಿಂದ ಈ ಯೋಜನಯೆನ್ನು ರೈತರ ಮಕ್ಕಳಿಗೆಷ್ಟೆ ಅಲ್ಲದೆ ನೇಕಾರರ,ಮೀನುಗಾರರ, ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ ಎಂದರು.

ಸುಮಾರು 11 ಲಕ್ಷ ರೈತರ ಮಕ್ಕಳಿಗೆ, 6 ಲಕ್ಷ ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಲಾಭ ತಲುಪಿದೆ ಎಂದರು.

10-

ದೇಶದಲ್ಲಿ ನಿರುದ್ಯೋಗ ಪ್ರಮಾಣ ಅಗಾಧವಾಗಿದೆ ಎಂದು 2022ರ ಡಿಸೆಂಬರ್ ತಿಂಗಳಲ್ಲಿ ಕೆಲವು ಮಾಧ್ಯಮ ವರದಿ ಮಾಡಿವೆ. ಆದರೆ, ಖಾಸಗಿ ಕಂಪೆನಿ ನಡೆಸಿದ ಈ ಸಮೀಕ್ಷೆಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿರಸ್ಕರಿಸಿದೆ.

ಅನೇಕ ಖಾಸಗಿ ಕಂಪನಿಗಳು ಅಥವಾ ಸಂಸ್ಥೆಗಳು ತಮ್ಮ ಸ್ವಂತ ವಿಧಾನಗಳ ಆಧಾರದ ಮೇಲೆ ಸಮೀಕ್ಷೆಗಳನ್ನು ನಡೆಸುತ್ತವೆ. ಅವುಗಳು ಸಾಮಾನ್ಯವಾಗಿ ವೈಜ್ಞಾನಿಕವಾಗಿರುವುದಿಲ್ಲ ಮತ್ತು ಅಂತಾರಾಷ್ಟ್ರೀಯವಾಗಿ ಸ್ವೀಕಾರಾರ್ಹ ಮಾನದಂಡಗಳನ್ನು ಆಧರಿಸಿರುವುದಿಲ್ಲ.

ಈ ಕಂಪನಿಗಳು ಅಥವಾ ಸಂಸ್ಥೆಗಳು ಬಳಸುವ ವಿಧಾನಗಳು ಸಾಮಾನ್ಯವಾಗಿ ನಿರುದ್ಯೋಗವನ್ನು ಅತಿಯಾಗಿ ತೋರಿಸುವ ವರದಿ ಮಾಡುವ ಕಡೆಗೆ ಪಕ್ಷಪಾತವನ್ನು ಹೊಂದಿರುತ್ತವೆ. "ಉದ್ಯೋಗ-ನಿರುದ್ಯೋಗ"ದ ಬಗ್ಗೆ ಅಧಿಕೃತ ಅಂಕಿಅಂಶಗಳು ಆವರ್ತಕ ಕಾರ್ಮಿಕ ಬಲ ಸಮೀಕ್ಷೆ ಆಧಾರದ ಮೇಲೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದೆ.

ಲಭ್ಯವಿರುವ PLFS ವರದಿಯ ಪ್ರಕಾರ, 2022ರ ಜುಲೈಯಿಂದ ಸೆಪ್ಟೆಂಬರ್ ವರೆಗೆ ಕೆಲಸಗಾರ ಜನಸಂಖ್ಯೆಯ ಅನುಪಾತವು 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗೆ ಉದ್ಯೋಗವು ಶೇಕಡಾ 44.5ರ ಮಟ್ಟದಲ್ಲಿದೆ.

ಇದು 2019ರ ಅದೇ ತ್ರೈಮಾಸಿಕದಲ್ಲಿ ಶೇಕಡಾ 43.4ರಷ್ಟಾಗಿತ್ತು. 2022ರ ಜುಲೈ-ಸೆಪ್ಟೆಂಬರ್ ನಲ್ಲಿ ನಿರುದ್ಯೋಗ ಸಮಸ್ಯೆ ಶೇಕಡಾ 7.2ರಷ್ಟಿದ್ದರೆ, 2019ರ ಜುಲೈ-ಸೆಪ್ಟೆಂಬರ್ ನಲ್ಲಿ ಶೇಕಡಾ 8.3ರಷ್ಟಾಗಿತ್ತು.

ಹೀಗಾಗಿ, ದೇಶದ ಉದ್ಯೋಗ ಮಾರುಕಟ್ಟೆಯು ಕೋರೊನಾ ಸಾಂಕ್ರಾಮಿಕದ ಆರ್ಥಿಕ ಹೊಡೆತದಿಂದ ಚೇತರಿಸಿಕೊಂಡಿದೆ. ಅಲ್ಲದೇ ಕೋವಿಡ್ ಪೂರ್ವ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ

ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು

ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.  

ನಮಸ್ಕಾರ…

Published On: 05 January 2023, 06:31 PM English Summary: Good news from the state government: The subsidy given to the poor to build a house has increased to 3 lakh!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.