1. ಸುದ್ದಿಗಳು

ಬೆಲೆ ಕುಸಿತದ ಬೇಸರ: 50 ಮೂಟೆ ಈರುಳ್ಳಿ ಕೆರೆಗೆ ಸುರಿದ ಚಿತ್ರದುರ್ಗ ಜಿಲ್ಲೆ ರೈತ

Basavaraja KG
Basavaraja KG
ಈರುಳ್ಳಿಯನ್ನು ಕೆರೆಗೆ ಸುರಿಯುತ್ತಿರುವ ಚಿತ್ರದುರ್ಗ ಜಿಲ್ಲೆ ಬಾಗೂರು ಗ್ರಾಮದ ರೈತ ಮಾರುತಿ.

ಇಷ್ಟು ದಿನ ಟೊಮೇಟೊ ಬೆಳೆದ ರೈತರು ಸೂಕ್ತ ಹಾಗೂ ನ್ಯಾಯಯುತ ಬೆಲೆ ಸಿಗದೆ ಲೋಡ್ ಗಟ್ಟಲೆ ಟೊಮೇಟೊ ಹಣ್ಣುಗಳನ್ನು ಕಾಲುವೆಗೆ ಇಲ್ಲವೇ ರಸ್ತೆಗೆ ಸುರಿದ ನಿದರ್ಶನಗಳನ್ನು ಸಾಕಷ್ಟು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಈರುಳ್ಳಿ ಬೆಳೆಗಾರ 50 ಮೂಟೆ ಈರುಳ್ಳಿಯನ್ನು ಕೆರೆಗೆ ಸುರಿದ ಘಟನೆ ನಡೆದಿದೆ.

ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಬಾಗೂರು ಗ್ರಾಮದಲ್ಲಿ. ಬಾಗೂರಿನ ಈರುಳ್ಳಿ ಬೆಳೆಗಾರ ಮಾರುತಿ ಎಂಬುವರು ಈರುಳ್ಳಿ ಬೆಲೆ ಕುಸಿತದಿಂದ ಬೇಸರಗೊಂಡು ಈ ಕೃತ್ಯ ಎಸಗಿದ್ದಾರೆ. ಇಷ್ಟು ದಿನ ಅಡುಗೆ ಮನೆಯಲ್ಲಿ ತಮ್ಮನ್ನು ಕತ್ತರಿಸುವ ಮಹಿಳೆಯರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಈಗ ತನ್ನನ್ನು ಬೆಳೆಯುವ ರೈತನ ಕಣ್ಣುಗಳಲ್ಲೂ ನೀರು ತರಿಸುತ್ತಿದೆ.

ಮೂರು ವಾರಗಳಿಂದ ಈಚೆಗೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ತಲುಪಿದೆ. ಕಷ್ಟಪಟ್ಟು ಬೆಳೆದ ರೈತ ಈರುಳ್ಳಿ ಕಿತ್ತು, ಕಟಾವು ಮಾಡಿ ಮಾರುಕಟ್ಟೆಗೆ ಕೊಂಡೊಯ್ದರೆ, ಅವುಗಳನ್ನು ಕಟಾವು ಮಾಡಿದ ಕೃಷಿ ಕಾರ್ಮಿಕರಿಗೆ ನೀಡಲು ಬೇಕಿರುವ ಕೂಲಿಗೆ ಸಾಕಗುವಷ್ಟು ಬೆಲೆ ಕೂಡ ಸಿಗುತ್ತಿಲ್ಲ. ಈ ಬೆಳೆ ಕುಸಿತದಿಂದ ಕಂಗೆಟ್ಟ ಹಲವು ರೈತರು ಈರುಳ್ಳಿ ಕಟಾವು ಮಾಡದೆ ಹೊಲವನ್ನು ಉಳುಮೆ ಮಾಡಿದ್ದಾರೆ. ಈ ನಡುವೆ ಚಿತ್ರದುರ್ಗದ ರೈತ ಮಾರುತಿ ಅವರು 60 ಕೆ.ಜಿ ತೂಕದ 50 ಮೂಟೆ ಈರುಳ್ಳಿಯನ್ನು ತಮ್ಮ ಊರಿನ ಕೆರೆಗೆ ಸುರಿದು ಹೋಗಿದ್ದಾರೆ.

ಉಳುಮೆ, ಸಸಿ ಮಡಿ ತಯಾರಿ, ಬೀಜೋಪಚಾರ, ಬಿತ್ತನೆ, ಕಳೆ ನಿರ್ವಹಣೆ, ರೋಗ ತಡೆ, ನಿಯಂತ್ರಣಕ್ಕೆ ಔಷಧ ಸಿಂಪಡಣೆ ಸೇರಿ ಬೆಳೆ ಬಿತ್ತನೆ ಮಾಡುವುದರಿಂದ ಆರಂಭವಾಗಿ ಕಟಾವು ಮಾಡುವವರೆಗೆ ಪ್ರತಿ ಎಕರೆಗೆ 60,000 ರೂ.ಗಳಿಂದ ಲಕ್ಷ ರೂಪಾಯಿವರೆಗೆರೂ ರೈತರು ಖರ್ಚು ಮಾಡಿರುತ್ತಾರೆ. ನಂತರ ಕಟಾವು ಮಾಡಿದ ಈರುಳ್ಳಿಯನ್ನು ಚೀಲ ತುಂಬಿ, ಮಾರುಕಟ್ಟೆಗೆ ಕೊಂಡೊಯ್ಯಲು ವಾಹನದ ಬಾಡಿಗೆ, ಈರುಳ್ಳಿ ಚೀಲಗಳ ಖರೀದಿ, ಚೀಲಕ್ಕೆ ಈರುಳ್ಳಿ ತುಂಬಿಸುವುದು ಹಾಗೂ ಚೀಲಗಳನ್ನು ಹೊತ್ತು ಹಾಕಿ ಲೋಡ್-ಅನ್ ಲೋಡ್ ಮಾಡುವ ಹಮಾಲರಿಗೆ ಪ್ರತಿ ಚೀಲಕ್ಕೆ ನೀಡುವ ಕೂಲಿ ಸೇರಿ ಮತ್ತಷ್ಟು ಹಣ ಹೆಚ್ಚುವರಿಯಾಗಿ ಖರ್ಚಾಗುತ್ತದೆ. ಆದರೆ ಈಗಿರುವ ಬೆಲೆಗೆ ಹೋಲಿಕೆ ಮಾಡಿ ನೋಡಿದರೆ, ರೈತರು ಖರ್ಚು ಮಾಡಿರುವ ಹಣದಲ್ಲಿ ಶೇ.10ರಷ್ಟು ಕೂಡ ಅವರಿಗೆ ವಾಪಸ್ ಸಿಗುವುದಿಲ್ಲ. ಬದಲಿಗೆ ಕಟಾವು ಹಾಗೂ ಸಾಗಣೆ ವೆಚ್ಚ ರೈತರ ಮೈಮೇಲೆ ಬರುತ್ತದೆ.

ಕೆರೆ ಪಾಲಾದ ಈರುಳ್ಳಿ

ಹೊಸದುರ್ಗ ತಾಲೂಕಿನ ಬಾಗೂರು ಗ್ರಾಮದ ರೈತ ಮಾರುತಿ ಅವರು ತಲಾ 60 ಕೆ.ಜಿ. ತೂಕದ 50 ಪ್ಯಾಕೆಟ್ ಈರುಳ್ಳಿಯನ್ನು ತಮ್ಮ ಊರಿನ ಕೆರೆಗೆ ಸುರಿದು ಬಂದಿದ್ದಾರೆ. ಮಾರುತಿ ಅವರ ಕುಟುಂಬ ಸುಮಾರು 40 ವರ್ಷಗಳಿಂದಲೂ ಈರುಳ್ಳಿ ಬೆಳೆಯುತ್ತಿದೆ. ಕಳೆದ ಎರಡು ವರ್ಷ ಒಳ್ಳೆಯ ಬೆಲೆ ಸಿಕ್ಕ ಹಿನ್ನೆಲೆಯಲ್ಲಿ ಉತ್ತಮ ಆದಾಯ ಬಂದಿತ್ತು. ಹೀಗಾಗಿ ಈ ಬಾರಿಯೂ ಉತ್ತಮ ಧಾರಣೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಮಾರುತಿ, ಅತ್ಯಂತ ಜತನದಿಂದ ಈರುಳ್ಳಿ ಬೆಳೆ ಬೆಳೆದಿದ್ದರು. ಎರಡೂವರೆ ಎಕರೆ  ಜಮೀನಿನಲ್ಲಿ ಈರುಳ್ಳಿ ಹಾಕಿದ್ದ ರೈತ ಮಾರುತಿ, ಆ ಬೆಳೆ ನಿರ್ವಹಣೇಗೆ ಇದುವರೆಗೆ 1.50 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆರಂಭದಲ್ಲಿ ಬೆಳೆ ಕೂಡ ಉತ್ತಮವಾಗೇ ಬೆಳವಣಿಗೆ ಹೊಂದಿತ್ತು.

ರೋಗಗಳ ಹಾವಳಿ

ಈ ಬಾರಿ ಸುಮಾರು ಒಂದೂವರೆ ತಿಂಗಳ ಕಾಲ ಮೋಡ ಕವಿದ ವಾತಾವರಣ ಇದ್ದ ಕಾರಣ, ನುಲ್ಲೆರೋಗ, ಮಜ್ಜಿಗೆ ರೋಗ ಹಾಗೂ ಕೊಳೆರೋಗ ಬಾಧೆಗಳು ಈರುಳ್ಳಿ ಬೆಳೆಯನ್ನು ಇನ್ನಿಲ್ಲದಂತೆ ಕಾಡಿದವು. ಈ ವೇಳೆ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧ ಸಿಂಪಡಿಸಿ ಬೆಳೆ ಉಳಿಸಿಕೊಂಡಿದ್ದರು. ಕಟಾವಿಗೆ ಬಂದಿದ್ದ ಈರುಳ್ಳಿಯನ್ನು ಕಾರ್ಮಿಕರಿಗೆ ಕೂಲಿ ಕೊಟ್ಟು ಕೀಳಿಸಿದ್ದರು. ಕಿತ್ತಾಗ ಈರುಳ್ಳಿ ಚೆನ್ನಾಗಿಯೇ ಕಾಣಿಸುತ್ತಿತ್ತು. ಈ ಪೈಕಿ 2 ಟ್ರಾಕ್ಟರ್ ಲೋಡ್ ಈರುಳ್ಳಿಯನ್ನು ಮನೆಗೆ ಏರಿಸಿಕೊಂಡು ಬಂದಿದ್ದರು. ಖಾಲಿ ಚೀಲ ತಂದು ಕಾರ್ಮಿಕರ ಸಹಾಯದಿಂದ ಕೋಯ್ಯಿಸಿ 60 ಕೆ.ಜಿ. ತೂಕದ 100 ಪ್ಯಾಕೆಟ್ ಸಿದ್ಧಪಡಿಸಿ, ಬೆಲೆ ಬಂದಾಗ ಮಾರಾಟ ಮಾಡಲು ಕಾಯುತ್ತಿದ್ದರು. ಆದರೆ, ಮಾರಗಳಿಂದ ಪಾತಾಳ ಕಂಡಿದ್ದ ಈರುಳ್ಳಿ ಬೆಲೆ ಮೇಲೆ ಏಳಲೇ ಇಲ್ಲ. ಜೊತೆಗೆ ಚೀಲಕ್ಕೆ ತುಂಬಿದ್ದ ಈರುಳ್ಳಿ ಕೊಳೆಯಲಾರಂಭಿಸಿದ್ದವು.

;

‘ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ಧ ಮಾಡಿ ಇರಿಸಿದ್ದ 100 ಪ್ಯಾಕೆಟ್ ಈರುಳ್ಳಿಯಲ್ಲಿ ಒಂದು ವಾರದ ವೇಳೆಗೆ 50 ಪ್ಯಾಕೆಟ್ ಕೊಳೆತು ನಾರುತ್ತಿತ್ತು. ಗಬ್ಬು ವಾಸನೆ ತಾಳಲಾರದೆ ಮನನೊಂದು ಕೆರೆಯ ಅಂಗಳಕ್ಕೆ ಸುರಿಯುತ್ತಿದ್ದೇನೆ. ಇನ್ನೊಂದು ವಾರಕ್ಕೆ ಮನೆ ಬಳಿ ಇರುವ 50 ಪ್ಯಾಕೆಟ್ ಈರುಳ್ಳಿ ಏನಾಗುತ್ತೋ ಗೊತ್ತಿಲ್ಲ. ಈ ವರ್ಷ ಒಂದು ಪ್ಯಾಕೆಟ್ ಈರುಳ್ಳಿಯನ್ನೂ ಮಾರಾಟ ಮಾಡಿಲ್ಲ’ ಎಂದು ಬೆಳೆಗಾರ ಮಾರುತಿ ಬೇಸರ ವ್ಯಕ್ತಪಡಿಸಿದರು.

‘ಮಾರುಕಟ್ಟೆಯಲ್ಲಿ ಒಂದು ಪಾಕೆಟ್ ಗುಣಮಟ್ಟದ ಈರುಳ್ಳಿಗೆ 300 ರಿಂದ 500 ರೂಪಾಯಿ ವರೆಗೆ ಬೆಲೆ ಸಿಗುತ್ತದೆ. ಈ ದರಕ್ಕೆ ಈರುಳ್ಳಿ ಮಾರಾಟ ಮಾಡಿದರೆ ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣವೂ ಸಿಗುವುದಿಲ್ಲ. ಇಂದಲ್ಲ ನಾಳೆ ಉತ್ತಮ ದರ ಸಿಗಬಹುದು ಎಂದು ಕಾಯುತ್ತಿದ್ದೆ. ಆದರೆ ಬೆಲೆ ಸಿಗಲಿಲ್ಲ’ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.