1. ಸುದ್ದಿಗಳು

ರೂಪಾಯಿ 6ಕ್ಕೆ ಏರಿದ ಒಂದು ಮೊಟ್ಟೆ ಬೆಲೆ

ಕಳೆದ ಹದಿನೈದು ದಿನಗಳ ಹಿಂದೆ 60 ರೂಪಾಯಿಗೆ ಡಜನ್ ಇದ್ದ ಕೋಳಿ ಮೊಟ್ಟೆ ದರ ದಿಢೀರನೆ ಏರಿಕೆಯಾಗಿ ಮೊಟ್ಟೆ ಪ್ರಿಯರಿಗೆ ಶಾಕ್ ನೀಡಿದಂತಾಗಿದೆ. ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಡಜನಿಗೆ 72 ರೂಪಾಯಿಯಂತೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ 2017ರ ನವೆಂಬರ್‌ ನಂತರದ ಇದೇ ಮೊದಲ ಬಾರಿಗೆ ದಾಖಲೆಯ ಮಟ್ಟ ತಲುಪಿದೆ.

ಒಂದೆಡೆ ತರಕಾರಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆಲೂಗಡ್ಡೆ, ಈರುಳ್ಳಿ 50 ರ ಗಡಿ ದಾಟಿದ್ದರೆ, ಅವರೆಕಾಯಿ, ಸೌತೆಕಾಯಿ, ಹೀರೇಕಾಯಿ 80ರ ಮೇಲಿದೆ. ಐದು ರೂಪಾಯಿಗೆ ಸಿಗುವ ಮೆಂತೆ, ಕೋತ್ತಂಬರಿ ಪಲ್ಲೆಗಳು ಈಗ 20 ರೂಪಾಯಿಗೆ ಮಾರಾಟವಾಗುತ್ತಿದೆ. ಒಂದು ಕೆಜಿ ಖರೀದಿಸುವ ಗ್ರಾಹಕರು ಈಗ ಅರ್ಧ ಕೆಜಿ ಖರೀದಿ ಮಾಡುವಂತಾಗಿದೆ. ಮೊದಲೇ ಕೊರೋನಾದಿಂದ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಸಾಮಾನ್ಯ ಜನರಿಗೆ ಬೆಲೆ ಏರಿಕೆಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮೊಟ್ಟೆ ದರ ಏರಿಕೆಯಾಗಲು ಕಾರಣ: ಮೊಟ್ಟೆ ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೊಟ್ಟೆ ದರದಲ್ಲಿ ದಾಖಲೆ ಏರಿಕೆ ಕಂಡಿದೆ. ಕೋಳಿ ಸಾಕಾಣಿಕೆದಾರರಿಂದ ಮೊಟ್ಟೆ ಖರೀದಿಸಲು ರಾಷ್ಟ್ರೀಯ ಸಮನ್ವಯ ಸಮಿತಿ ಶುಕ್ರವಾರ ನಿಗದಿಸಿದ ದರ ಇಂತಿದೆ. ಬೆಂಗಳೂರು ವಲಯದಲ್ಲಿ 100 ಮೊಟ್ಟೆಗಳಿಗೆ 545 ರೂಪಾಯಿ, ಮೈಸೂರು ವಲಯದಲ್ಲಿ ಪ್ರತಿ 100 ಮೊಟ್ಟೆಗಳಿಗೆ 547 ರೂಪಾಯಿ ದರ ಇದೆ.

ನವೆಂಬರ್ 2017 ರಲ್ಲೂ ಇದೇ ರೀತಿ ಏರಿಕೆಯಾಗಿತ್ತು:

2017ರ ನವೆಂಬರ್ ತಿಂಗಳಿನ 17ರಿಂದ 22ರವರೆಗೆ ರೈತರಿಂದ ಖರೀದಿಸುವ ಒಂದು ಮೊಟ್ಟೆಯ ದರವು  5.53  ಇತ್ತು. ನೂರಕ್ಕೆ 553) ಆಗಿತ್ತು. ಅದನ್ನು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಗರಿಷ್ಠ  6.50ಕ್ಕೆ ಮಾರಾಟ ಮಾಡಲಾಗಿತ್ತು. ಅದಾದ ನಂತರ, ಇಷ್ಟೊಂದು ಪ್ರಮಾಣದಲ್ಲಿ ಮೊಟ್ಟೆ ದರ ಏರಿಕೆಯಾಗಿರಲಿಲ್ಲ.

ಕಳೆದ ಐದು ತಿಂಗಳ ಹಿಂದೆ ಮೊಟ್ಟೆ ದರವು ಕುಸಿದಿತ್ತು. ಆಗ ಚಿಲ್ಲರೆ  ಮಾರುಕಟ್ಟೆಯಲ್ಲಿ ಡಜನಿಗೆ 50-55 ರೂಪಾಯಿಗೆ ಮಾರಾಟವಾಗುತ್ತಿತ್ತು.  ಆಗ ರೈತರಿಗೆ ಮೊಟ್ಟೆ ಮಾರಾಟದಿಂದ ಅದರ ಉತ್ಪಾದನಾ ವೆಚ್ಚ ಕೂಡ ಸಿಗುತ್ತಿರಲಿಲ್ಲ. ಆಗ ಒಂದಿಷ್ಟು ರೈತರು ಕೋಳಿ ಸಾಕಣೆ ಪ್ರಮಾಣವನ್ನು ಕಡಿಮೆ ಮಾಡಿದ್ದರು. ಅದರ ಪರಿಣಾಮವಾಗಿಯೇ ಮೊಟ್ಟೆ ದರದಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ ಎನ್ನಲಾಗುತ್ತಿದೆ.

 ಚಳಿ ಆರಂಭವಾಗುತ್ತಿದ್ದಂತೆಯೇ ಮೊಟ್ಟೆಗೆ ಬೇಡಿಕೆ ಜಾಸ್ತಿಯಾಗುವುದು ವಾಡಿಕೆ.ಇದರೊಂದಿಗೆ ಕೊರೋನಾ ಸೋಂಕು ಹರಡುತ್ತಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೊಟ್ಟೆ ಸೇವನೆ ಮಾಡಬೇಕೆಂದು ಆರೋಗ್ಯ ತಜ್ಞರು ಹೇಳುತ್ತಿರುತ್ತಾರೆ. ಕೊರೋನಾ ರೋಗ ಬರದಂತೆ ತಡೆಯಲು ಮೊಟ್ಟೆ ಸೇವನೆಯಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಬೇಡಿಕೆ ಹೆಚ್ಚಾಗಿ ಬೆಲೆಯೂ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕೋಳಿ ಸಾಕಾಣಿಕೆಯೂ ದುಬಾರಿ:

ಕೋಳಿಗಳ ಆಹಾರವಾದ ಜೋಳ, ಸೋಯಾ, ಕಡ್ಲೆಕಾಯಿ ಕೇಕ್‌, ಸೂರ್ಯಕಾಂತಿ ಇಂಡಿ, ಅಕ್ಕಿತೌಡು ಇತ್ಯಾದಿಗಳ ದರ ದುಬಾರಿಯಾಗಿದೆ. ಕೂಲಿ ಕಾರ್ಮಿಕರ ಕೊರತೆಯೂ ಎದುರಾಗಿದೆ. ವಿದ್ಯುತ್‌, ನಿರ್ವಹಣೆ ವೆಚ್ಚವೂ ಹೆಚ್ಚಿದೆ. ಹಾಗಾಗಿ ಬೆಲೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಕೋಳಿ ಸಾಕಾಣಿಕೆದಾರರು.

Published On: 02 October 2020, 12:57 PM English Summary: egg price hike

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2023 Krishi Jagran Media Group. All Rights Reserved.