ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವುದರ ಜತೆಗೆ ಉತ್ತಮ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ದಕ್ಷತೆಯಿಂದ ಹಾಗೂ ಚುರುಕಾಗಿ ಕೆಲಸ ಮಾಡಬೇಕು ಎಂದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಸೂಚನೆ ನೀಡಿದರು.
ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬೆಳಗಾವಿ ವಿಭಾಗದ ವ್ಯಾಪ್ತಿಯ ಜಿಲ್ಲಾಧಿಕಾರಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಂದಾಯ ಇಲಾಖೆಯ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಇವೆಲ್ಲವುಗಳ ಜತೆಗೆ ಕಂದಾಯ ಇಲಾಖೆಯ ಕೆಲಸಗಳು ಕುಂಠಿತಗೊಳ್ಳಬಾರದು ಎಂದು ಹೇಳಿದರು.
ಜನಪರ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಅದರಲ್ಲೂ ಕಂದಾಯ ಇಲಾಖೆಯ ಪಾತ್ರ ಮಹತ್ವದ್ದು. ಆದ್ದರಿಂದ ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡಲು ಸರಕಾರಕ್ಕೆ ಸಹಕರಿಸಬೇಕು ಎಂದರು. ಪ್ರತಿ ತಿಂಗಳು ಕಂದಾಯ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಲಾಗುವುದು. ಆದ್ದರಿಂದ ಉತ್ತಮ ಆಡಳಿತ ನೀಡುವ ದಿಸೆಯಲ್ಲಿ ಎಲ್ಲರೂ ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಕಳೆದ ಸಾಲಿನ ಹಾಗೂ ಅದಕ್ಕಿಂತಲೂ ಮುಂಚಿನ ಸಾಲಿಗೆ ಸಂಬಂಧಿಸಿದಂತೆ ಕೋವಿಡ್, ಬರ ಸೇರಿದಂತೆ ವಿವಿಧ ಪ್ರಕೃತಿ ವಿಕೋಪ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿರುವ ಅನುದಾನ ಬಳಕೆಗೆ ಕಾಲಮಿತಿ ನಿಗದಿಪಡಿಸಲಾಗುವುದು. ಅದಾದ ಬಳಿಕ ಹಿಂದಕ್ಜೆ ಪಡೆಯಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಮ್ಯೂಟೇಶನ್ ನೋಟಿಸ್ ಅವಧಿಯ ಪ್ರಕ್ರಿಯೆ ಸರಳಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಅವರು, ಒಟ್ಟಾರೆ ಪ್ರಕ್ರಿಯೆ ಸರಳಗೊಳಿಸಬೇಕು ಎಂದು ಅವರು ತಿಳಿಸಿದರು.
ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರುಗಳು, ಜಿಲ್ಲಾ ನೋಂದಣಾಧಿಕಾರಿಗಳು, ತಹಶೀಲ್ದಾರರು, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
Share your comments