ಈ ವಾರದ ಆಯ್ದ ಪ್ರಮುಖ ಸುದ್ದಿಗಳ ವಿವರ ಈ ರೀತಿ ಇದೆ.
ರಾಜ್ಯದ 19 ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿ: ವರದಿ
ಚೀನಾಕ್ಕೆ ಖಡಕ್ ಎಚ್ಚರಿಕೆ ನೀಡಿದ ಅಮೆರಿಕಾ
ಫೆಬ್ರವರಿ 22ಕ್ಕೆ 11.72 ಲಕ್ಷ ಟನ್ ಗೋಧಿ ಇ–ಹರಾಜು: ಗೋಧಿ ಬೆಲೆ ಇಳಿಕೆ
ಪಿ.ಎಂ ಕಿಸಾನ್ 13ನೇ ಕಂತು ಹೋಳಿ ಹಬ್ಬದ ಮೊದಲೇ ಬಿಡುಗಡೆ
ರಾಜ್ಯದ ಅನ್ನದಾತರಿಗೆ ಬಜೆಟ್‌ನಲ್ಲಿ ಬಂಪರ್ ಗಿಫ್ಟ್: ಕಿಸಾನ್ ಕಾರ್ಡ್‌ದಾರರಿಗೆ 10 ಸಾವಿರ ರೂ.
ಅಡಿಕೆಯಲ್ಲಿ ಹಾನಿಕಾರಕ ಅಂಶವಿಲ್ಲ; ಎಂ.ಎಸ್. ರಾಮಯ್ಯ ಇನ್ಸ್‌ಟಿಟ್ಯೂಟ್ ವರದಿ
ರಾಜ್ಯದಲ್ಲಿ ಬರೋಬ್ಬರಿ 19 ಸೇತುವೆಗಳು ದುಸ್ಥಿತಿಯಲ್ಲಿರುವುದು ವರದಿ ಆಗಿದೆ.
ರಾಜ್ಯದಲ್ಲಿ ದುರಸ್ತಿ ಹಾಗೂ ಪುನರ್‌ನಿರ್ಮಾಣ ಆಗಬೇಕಾಗಿರುವ 19 ಸೇತುವೆಗಳನ್ನು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಪಟ್ಟಿ ಮಾಡಿದೆ.
ಹಳೆಯ ಸೇತುವೆಗಳಲ್ಲಿ ಕರಾವಳಿ, ಮಲೆನಾಡಿನ 10 ಸೇತುವೆಗಳು ಹಾಗೂ ಬೆಂಗಳೂರು–ನೆಲಮಂಗಲ ನಡುವಿನ ಪೀಣ್ಯ ಮೇಲ್ಸೇತುವೆಯೂ ಸೇರಿದೆ.
ಕೆಲವು ನಿರ್ದಿಷ್ಟ ಸೇತುವೆಗಳು ಹಳೆಯದಾಗಿದ್ದು, ಅವುಗಳ ಮರು ನಿರ್ಮಾಣ ಮಾಡಬೇಕಿದೆ.
ಅಲ್ಲದೇ ಇನ್ನೂ ಕೆಲವೊಂದು ಸೇತುವೆಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ನಿರ್ದೇಶಿಸಿದೆ.
-------------------
ಅಮೆರಿಕಾದಲ್ಲಿ ಬಲೂನ್‌ನ ಮೂಲಕ ಬೇಹುಗಾರಿಕೆಗೆ ಮುಂದಾಗಿದ್ದ ಚೀನಾಕ್ಕೆ ಅಮೆರಿಕಾ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಅಮೆರಿಕದ ವಾಯುಪ್ರದೇಶದಲ್ಲಿ ಈಚೆಗೆ ಪತ್ತೇದಾರಿ ಬಲೂನ್‌ಗಳು ಕಂಡುಬಂದಿದ್ದವು.
ಅದನ್ನು ಅಮೆರಿಕಾದ ವಾಯುಪಡೆ ಹೊಡೆದುರುಳಿಸಿತ್ತು. ಇದರ ಬೆನ್ನಲ್ಲೇ ಬೇಜವಾಬ್ದಾರಿ ಕೆಲಸವನ್ನು ಮುಂದುವರಿಸ ಬೇಡಿ ಎಂದು ಚೀನಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
ಮ್ಯೂನಿಕ್ ಭದ್ರತಾ ಸಮ್ಮೇಳನದ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಶನಿವಾರ ತಡರಾತ್ರಿ ಸಭೆ ನಡೆಸಿದ್ದು, ಈ ವೇಳೆ ಬೇಹುಗಾರಿಕೆ ಬಲೂ ಕುರಿತು ಅಮೆರಿಕಾ ಎಚ್ಚರಿಸಿದೆ.
------------------
ದೇಶದಲ್ಲಿ ಗೋಧಿ ಬೆಲೆ ಏರಿಕೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮುಕ್ತ ಮಾರುಕಟ್ಟೆ ಮಾರಾಟ
ಯೋಜನೆಯ ಅಡಿಯಲ್ಲಿ 30 ಲಕ್ಷ ಟನ್‌ಗೋಧಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಇದರ ಭಾಗವಾಗಿ ಭಾರತೀಯ ಆಹಾರ ನಿಗಮವು ಇದೇ ತಿಂಗಳ 22ಕ್ಕೆ 11.72 ಲಕ್ಷ ಟನ್‌ಗೋಧಿಯನ್ನು ಇ–ಹರಾಜು ಮೂಲಕ ಮಾರಾಟ ಮಾಡಲಿದೆ ಎಂದು ಕೇಂದ್ರ ಆಹಾರ ಸಚಿವಾಲಯವು ತಿಳಿಸಿದೆ.
ಗೋಧಿ ಬೆಲೆಯನ್ನು ನಿಯಂತ್ರಿಸುವ ಭಾಗವಾಗಿ ನಿಗಮವು ಮಾರ್ಚ್ ಅಂತ್ಯದವರೆಗೆ ಒಟ್ಟು 25 ಲಕ್ಷ ಟನ್‌ಗೋಧಿಯನ್ನು ಮಾರಾಟ ಮಾಡುಲು ಮುಂದಾಗಿದೆ.
ಆಹಾರ ನಿಗಮವು ಈಗಾಗಲೇ ನಡೆಸಿರುವ ಎರಡು ಸುತ್ತಿನ ಹರಾಜಿನಲ್ಲಿ 12.98ಲಕ್ಷ ಟನ್ ಗೋಧಿ ಮಾರಾಟ ಮಾಡಿದೆ.
ಇದರಿಂದಾಗಿ ಗೋಧಿ ಮತ್ತು ಗೋಧಿ ಹಿಟ್ಟಿನ ರಿಟೇಲ್ ಮಾರಾಟ ದರ ಇಳಿಕೆ ಆಗಿದೆ.
-------------------
ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ 13ನೇ ಕಂತನ್ನು ಹೋಳಿ ಹಬ್ಬದ ಒಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಹಣಕಾಸಿನ ನೆರವು ಬಿಡುಗಡೆಯಾಗುವ ಮೊದಲು ಈ ಯೋಜನೆಯ ಎಲ್ಲಾ ಫಲಾನುಭವಿಗಳು ತಮ್ಮ ಇ-ಕೆವೈಸಿ ನವೀಕರಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ.
ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮಾರ್ಚ್ ವೇಳೆಗೆ ಈ ಕಂತನ್ನು ಬಿಡುಗಡೆ ಮಾಡಲಾಗುತ್ತದೆ.
ಈ ಅಂದಾಜಿನ ಪ್ರಕಾರ ಹೋಳಿ ವೇಳೆಗೆ ಮೊತ್ತ ಜಮೆಯಾಗುವ ನಿರೀಕ್ಷೆಯಿದೆ. ಆದರೆ ಈ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
-------------------
ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ, ಮಹಿಳೆಯರಿಗೆ ಹಾಗೂ ಸಾಮಾನ್ಯ ವರ್ಗದವರಿಗೆ ಹಲವು ಜನಪರ ಯೋಜನೆಗಳನ್ನು ಪರಿಚಯಿಸಿದೆ.
ಇದರಲ್ಲಿ ರೈತಾಪಿ ವರ್ಗಕ್ಕೆ ಸಾಕಷ್ಟು ಅನೂಕೂಲವಾಗುವ ಯೋಜನೆಗಳನ್ನು ಘೋಷಿಸಲಾಗಿದೆ.
ಕಿಸಾನ್‌ಕಾರ್ಡ್‌ನ ಮೂಲಕ ರೈತರಿಗೆ 10,000 ಸಾವಿರ ಸಹಾಯಧನ ನೀಡುವುದಾಗಿ ಸಿಎಂ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ ಅಡಿಯಲ್ಲಿ 10,000 ಸಾವಿರ ಸಹಾಯಧನ ಲಭ್ಯವಾಗಲಿದ್ದು, ತುರ್ತು ಸಂದರ್ಭದಲ್ಲಿ ರೈತರು ಬೀಜ, ಗೊಬ್ಬರ ಖರೀದಿ ಮಾಡಬಹುದಾಗಿದೆ.
ಅಲ್ಲದೇ ರೈತರ ಭೂಮಿಯನ್ನು ಹಸಿರನ್ನಾಗಿಸುವ ಉದ್ದೇಶದಿಂದ ಕೃಷಿ ಹೊಂಡವನ್ನು ನಿರ್ಮಿಸಲು ಉತ್ತೇಜನ ನೀಡುವ ಸಲುವಾಗಿ ಜಲನಿಧಿ ಹೊಸ ಯೋಜನೆಯನ್ನು ಪರಿಚಯಿಸಲಾಗಿದೆ.
-------------------
ಅಡಿಕೆ ಬೆಳೆಗಾರರಿಗೆ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ನೀಡಿರುವ ವರದಿ ತುಸು ನಿರಾಳತೆ ನೀಡಿದೆ.
ಔಷಧೀಯ ಗುಣವಿರುವ ಅಡಿಕೆ ಹಾನಿಕಾರಕ ಎಂಬ ವದಂತಿಗಳು ಹೆಚ್ಚಾದ ಬೆನ್ನಲ್ಲೇ ಅಡಿಕೆ ಬೆಳೆಗಾರರು ಇನ್ನಿಲ್ಲದ ಸಂಕಷ್ಟವನ್ನು ಎದುರಿಸಿದ್ದರು.
ಅಡಿಕೆ ಹಾನಿಕಾರಕವಲ್ಲ ಔಷಧೀಯ ಗುಣವಿರುವ ಸಾಂಪ್ರದಾಯಿಕ ಬೆಳೆ ಎಂದು ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಸಂಶೋಧನಾ ವರದಿ ನೀಡಿದ್ದಾರೆ.
ಈ ವರದಿ ಇದೀಗ ಅಡಿಕೆ ಬೆಳೆಗಾರರಲ್ಲಿ ನಿರಾಳತೆ ಮೂಡಿಸಿದೆ. ಈ ವರದಿಯನ್ನು ಶೀಘ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಅಡಿಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
-------------------
7. ಅಮೆರಿಕಾದಲ್ಲಿ ಚೀನಾ ಬಲೂನ್‌ನ ಮೂಲಕ ಗೂಢಚಾರಿಕೆ ಮಾಡಿರುವುದು ವರದಿ ಆಗಿರುವ ಬೆನ್ನಲ್ಲೇ ಭಾರತ ಹಾಗೂ ಜಪಾನ್ ಸೇರಿದಂತೆ ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ಚೀನಾ ತನ್ನ ಗೂಢಚಾರಿಕೆ ಬಲೂನ್‌ಗಳ ಹಾರಾಟ ನಡೆಸಿತ್ತು ಎನ್ನುವ ಆಘಾತಕಾರಿ ಅಂಶ ವರದಿ ಆಗಿದೆ.
ಚೀನಾದ ದಕ್ಷಿಣ ಕರಾವಳಿಗೆ ಹೊಂದಿಕೊಂಡಿರುವ ಹೆನಾನ್‌ಪ್ರಾಂತ್ಯದ ಮೂಲಕ ಈ ಕಣ್ಗಾವಲು ಬಲೂನ್‌ಗಳ ಕಾರ್ಯಾಚರಣೆ ನಡೆಸಲಾಗಿದೆ.
ಜಪಾನ್, ಭಾರತ, ವಿಯೆಟ್ನಾಂ, ತೈವಾನ್ ಹಾಗೂ ಫಿಲಿಪ್ಪೀನ್ಸ್ ದೇಶಗಳ ಮಿಲಿಟರಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಚೀನಾ ಈ ಮಾದರಿಯನ್ನು ಬಳಸಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Share your comments