ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಐದು ಪ್ರಮುಖ ಗ್ಯಾರಂಟಿಗಳ ಚಾಲನೆಗೆ ಆದ್ಯತೆ ನೀಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಬಿಪಿಎಲ್ ಕುಟುಂಬದಾರರಿಗೆ 10 ಕೆ.ಜಿ ಉಚಿತ ಅಕ್ಕಿ, ಮಹಿಳೆಯರಿಗೆ ಬಸ್‌ನಲ್ಲಿ
ಉಚಿತ ಪ್ರಯಾಣ ಹಾಗೂ ಮನೆ ಒಡತಿಗೆ ಪ್ರತಿ ತಿಂಗಳು 2,000 ಸಾವಿರ ರೂಪಾಯಿ ನೀಡುವುದು ಸೇರಿದಂತೆ
ಐದು ಗ್ಯಾರಂಟಿಗೆ ಸಂಬಂಧಿಸಿದಂತೆ ಮೊದಲ ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು (Siddaramaiah) ಚುನಾವಣಾ
ಪೂರ್ವದಲ್ಲಿ ನಾವು ನಾಡಿನ ಜನರಿಗೆ 5 ಪ್ರಮುಖ ಗ್ಯಾರೆಂಟಿಗಳನ್ನು ನೀಡಿದ್ದೆವು, ಜನತೆ ನಮ್ಮ ಮೇಲೆ ನಂಬಿಕೆಯಿಟ್ಟು
ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರಿಂದ,
ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ.
ನಮ್ಮ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿಯೇ ಐದೂ ಗ್ಯಾರೆಂಟಿಗಳಿಗೆ ಅನುಮೋದನೆ ನೀಡುವ ವಚನ ನೀಡಿದ್ದೆ,
ಇಂದು ಕೊಟ್ಟ ಮಾತಿನಂತೆ ಪ್ರಥಮ ಸಂಪುಟ ಸಭೆಯಲ್ಲೇ ನಮ್ಮ ಎಲ್ಲಾ
ಗ್ಯಾರೆಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿ ಮತ್ತೊಮ್ಮೆ ನುಡಿದಂತೆ ನಡೆದಿದ್ದೇವೆ.
ಸಮಸ್ತ ಕನ್ನಡಿಗರ ಪ್ರೀತಿ, ನಂಬಿಕೆಗೆ ನಾನು ಆಭಾರಿ.
ಸದೃಢ, ಸಮೃದ್ಧ, ಸೌಹಾರ್ದ ಕರ್ನಾಟಕದ ಮರುನಿರ್ಮಾಣಕ್ಕಾಗಿ ನಾವೆಲ್ಲರೂ ಜೊತೆಗೂಡಿ ಶ್ರಮಿಸೋಣ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೀಡಿದ್ದ ಐದು ಭರವಸೆಗಳು ಏನು
ಕಾಂಗ್ರೆಸ್ ಪಕ್ಷವು ಈ ಬಾರಿಯ ಚುನಾವಣೆ ಪ್ರಣಾಳಿಕೆಯಲ್ಲಿ ಹಲವು ಘೋಷಣೆಗಳನ್ನು ಮಾಡಿದೆ.
ಆದರೆ, ಅದರಲ್ಲಿ ಐದು ಪ್ರಮುಖ ಗ್ಯಾರಂಟಿಗಳು ಹೆಚ್ಚು ಚರ್ಚೆಯಲ್ಲಿದೆ. ಈ ಗ್ಯಾರಂಟಿಗಳು ಸಹ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತೆ ಮಾಡಿದೆ.
ಆ ಐದು ಗ್ಯಾರಂಟಿಗಳು ಈ ರೀತಿ ಇವೆ.
ಗೃಹಲಕ್ಷ್ಮೀ ಯೋಜನೆ: ಈ ಯೋಜನೆಯ ಮೂಲಕ ಕುಟುಂಬ ನಿರ್ವಹಣೆಗೆ ಆರ್ಥಿಕ ಬೆಂಬಲ ನೀಡಲು ಉದ್ದೇಶಿಸಲಾಗಿದ್ದು,
ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ಸಾವಿರ ರೂ. ಸಹಾಯಧನ ಸಿಗಲಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಅನುಮೋದನೆ.
ಯುವನಿಧಿ: ಈ ಯೋಜನೆಯ ಅಡಿಯಲ್ಲಿ ನಿರುದ್ಯೋಗಿಗಳಿಗೆ ಮಾಸಿಕ 3000 ಸಾವಿರ ರೂಪಾಯಿ ಹಾಗೂ ಡಿಪ್ಲೋಮಾ ಪದವೀಧರ
ನಿರುದ್ಯೋಗಿಗಳಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲು ಅನುಮೋದನೆ (ಎರಡು ವರ್ಷಗಳ ವರೆಗೆ) ಈ ಸೌಲಭ್ಯ ಸಿಗಲಿದೆ.
ಗೃಹ ಜ್ಯೋತಿ: ಈ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಸಿಗಲಿದ್ದು, ಈ ಯೋಜನೆಗೂ ತಾತ್ವಿಕ ಅನುಮೋದನೆ ನೀಡಲಾಗಿದೆ.
ಅನ್ನಭಾಗ್ಯ: ಈ ಯೋಜನೆಯ ಅಡಿಯಲ್ಲಿ ರಾಜ್ಯದ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ ಉಚಿತ ಅಕ್ಕಿ ಸಿಗಲಿದ್ದು, ಈ ಯೋಜನೆಗೂ ಅನುಮೋದನೆ ನೀಡಲಿದೆ.
ಷರತ್ತುಗಳು ಬಾಕಿ: ಕಾಂಗ್ರೆಸ್ ಸರ್ಕಾರವು ಈ ಯೋಜನೆಗಳನ್ನು ಜಾರಿಗೆ ಮಾಡುವ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ
ಯೋಜನೆಯ ಸಮರ್ಪಕ ಅನುಷ್ಠಾನದ ದೃಷ್ಟಿಯಿಂದ ಕೆಲವು ನಿರ್ದಿಷ್ಟ ಷರತ್ತುಗಳನ್ನು ವಿಧಿಸುವ ಸಾಧ್ಯತೆಯೂ ಇದೆ.
ಈಗಾಗಲೇ ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಇದು 2022-23ನೇ ಸಾಲಿನ ಪದವೀಧರರಿಗೆ ಅನ್ವಯಿಸಲಾಗುತ್ತದೆ ಎನ್ನಲಾಗಿದೆ.
ಇದೇ ರೀತಿ ವಿವಿಧ ಯೋಜನೆಗಳಿಗೂ ಷರತ್ತುಗಳು ಅನ್ವಯಿಸುವ ಸಾಧ್ಯತೆ ಇದೆ. ಅಲ್ಲದೇ ಎಲ್ಲ ಯೋಜನೆಗಳಿಗೆ ಇದೀಗ ತಾತ್ವಿಕ ಅನುಮೋದನೆಯಷ್ಟೇ ಸಿಕ್ಕಿದೆ.
Pic Credits: Siddaramaiah facebook
Share your comments